ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ದಿನ ಆಚರಿಸಲು ಆಗ್ರಹ

Last Updated 27 ಜನವರಿ 2015, 11:37 IST
ಅಕ್ಷರ ಗಾತ್ರ


ರಾಮನಗರ:  ಜನವರಿ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸ­ಬೇಕು. ಆ ಮೂಲಕ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಶ್ರಮಸಾರ್ಥಕ­ಗೊಳಿಸಬೇಕು ಎಂದು ಆಗ್ರಹಿಸಿ ಬಹು­ಜನ ಸಮಾಜ ಪಕ್ಷದ (ಬಿಎಸ್‌ಪಿ) ಕಾರ್ಯ­ಕರ್ತರು ನಗರದ ವಿವಿಧ ಬಡಾ­ವಣೆಗಳಲ್ಲಿ ಸೋಮವಾರ ಬೈಕ್ ರ್‍ಯಾಲಿ ನಡೆಸಿದರು.

ದೇಶದ ಸಾಮಾನ್ಯ ಪ್ರಜೆಗೆ ಹಕ್ಕು ಮತ್ತು ಅಧಿಕಾರವನ್ನು ಕೊಟ್ಟಿರುವ ದೇಶದ ಸಂವಿಧಾನವನ್ನು ಸ್ಮರಿಸುವ ಕೆಲಸ ಮೊದಲು ಆಗಬೇಕು ಎಂದು ರ್‍ಯಾಲಿಯಲ್ಲಿ ಭಾಗವಹಿಸಿದ್ದವರು ಒತ್ತಾಯಿಸಿದರು.

ರ್‍ಯಾಲಿಗೆ ಚಾಲನೆ ನೀಡಿ ಮಾತ­ನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯ­ದರ್ಶಿ ಎಂ.ಕೃಷ್ಣಮೂರ್ತಿ ಮಾತನಾಡಿ, ‘66 ವರ್ಷಗಳಿಂದ ದೇಶವನ್ನು ಆಳಿದ ಎಲ್ಲಾ ಸರ್ಕಾರಗಳು  ಸಂವಿಧಾನವನ್ನು ಸಮಗ್ರವಾಗಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿವೆ. ಜನವರಿ 26ರನ್ನು ಸಂವಿಧಾನ ದಿನವನ್ನಾಗಿ ಆಚರಿಸದೆ ಗಣರಾಜ್ಯೋತ್ಸವವನ್ನಾಗಿ ಆಚರಣೆ ಮಾಡುವ ಮೂಲಕ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪರಿಶ್ರಮವನ್ನು ಮರೆಮಾಚಲಯ ಯತ್ನಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

1947ರ ಆಗಸ್ಟ್‌ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಆಗ ಬ್ರಿಟಿಷರು ಭಾರತ ಬಿಟ್ಟು ತೊಲಗಿದರು. ಅದರಿಂದ ಇಲ್ಲಿನ ಶ್ರೀಮಂತರು ಮತ್ತು ರಾಜಕಾರಣಿಗಳಿಗೆ ಮಾತ್ರ ಅಧಿಕಾರ ದೊರೆಯಿತು. ಆದರೆ ಶ್ರೀಸಾಮಾನ್ಯನಿಗೆ ಹಕ್ಕು ಮತ್ತು ಗೌರವಯುತವಾಗಿ ಬಾಳುವ ಅಧಿಕಾರವನ್ನು ನೀಡಿದ್ದು ಸಂವಿಧಾನ. ಅದನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಿದ್ಧಪಡಿಸಿದರು. ಅದನ್ನು ಜನವರಿ 26ರಂದು ದೇಶ ಅಳವಡಿಸಿಕೊಂಡಿತು. ಹಾಗಾಗಿ ಈ ದಿನವನ್ನು ಸಂವಿಧಾನ ದಿನ ಎಂದು ಆಚರಿಸಬೇಕೇ ಹೊರತು ಗಣ­ರಾಜ್ಯೋತ್ಸವ ದಿನವೆಂದು ಅಲ್ಲ ಎಂದು ಅವರು ಪ್ರತಿಪಾದಿಸಿದರು.

ಇದುವರೆಗೂ ದೇಶದಲ್ಲಿ ಆಳ್ವಿಕೆ ನಡೆಸಿರುವ ರಾಜಕೀಯ ಪಕ್ಷಗಳು ಸಂವಿಧಾನವನ್ನು ದುರ್ಬಳಕೆ ಮಾಡಿ­ಕೊಂಡು, ಉಳ್ಳವರು, ಶ್ರೀಮಂತರು ಹಾಗೂ ಬಂಡವಾಳಶಾಹಿಗಳ ಪರವಾಗಿ ಕಾನೂನುಗಳನ್ನು ಜಾರಿಗೆ ತರುತ್ತಿವೆ. ಆ ಮೂಲಕ ದಲಿತರು, ಶೋಷಿತರನ್ನು ನಿರ್ಲಕ್ಷಿಸಿವೆ. ಒಂದು ವೇಳೆ ಸಂವಿಧಾನ­ವನ್ನು ಸಮಗ್ರವಾಗಿ ಜಾರಿಗೆ ತಂದರೆ, ದೇಶದಲ್ಲಿರುವ ಅಸಮಾನತೆ, ಅನಕ್ಷರತೆ ಹಾಗೂ ಬಡತನ ನಿರ್ಮೂಲನೆ­ಯಾಗುತ್ತದೆ ಎಂದರು.

ಪ್ರಸ್ತುತ ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಸಂವಿಧಾನದ ಅಡಿಯಲ್ಲಿ ಸಹೋದರತೆ, ಸಮಾನತೆಯನ್ನು ಜಾರಿಗೆ ತರುವ ಬದಲು, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಘಟನೆ ಮಾಡಲು ಹೊರಟಿದೆ. ಭಗವದ್ಗೀತೆ­ಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಿಸುವ ಹುನ್ನಾರ ನಡೆದಿದೆ. ಭಗವದ್ಗೀತೆ ಮೇಲ್ವರ್ಗದವರನ್ನು ಹೊರತು­ಪಡಿಸಿ, ಇತರೆ ವರ್ಗಗಳು ಹಾಗೂ ಧರ್ಮದ ಜನರು ಒಪ್ಪಲು ಸಾಧ್ಯವೇ ಇಲ್ಲ. ದೇಶದ ಎಲ್ಲಾ ಜನರಿಗೆ ಸಮಾನತೆ ಕಲ್ಪಿಸಿರುವ ಸಂವಿಧಾನ ಒಂದೇ ರಾಷ್ಟ್ರೀಯ ಧರ್ಮ ಗ್ರಂಥ­ವಾಗಿದೆ ಎಂದು ಕೃಷ್ಣಮೂರ್ತಿ ಹೇಳಿದರು.

ಇದೇ ವೇಳೆ ಮಾತನಾಡಿದ ವಕೀಲ ಚಾಂದ್ ಪಾಷಾ, `ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾಗಲು ಸಂವಿಧಾನ ಕಾರಣವೇ ಹೊರತು, ಭಗವದ್ಗೀತೆಯಲ್ಲ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಬಹುದು ಎಂದು ಭಗವದ್ಗೀತೆಯಲ್ಲಿ ಎಲ್ಲೂ ಬರೆದಿಲ್ಲ. ಧರ್ಮಗ್ರಂಥಗಳಿಗಿಂತ ಸರ್ವ­ರಿಗೂ ಸಮಾನತೆ ಕಲ್ಪಿಸುವ ಸಂವಿ­ಧಾನವೇ ಪವಿತ್ರ ಗ್ರಂಥವಾಗಿದ್ದು, ಜನವರಿ 26 ಅನ್ನು ಗಣರಾಜ್ಯೋತ್ಸವದ ಬದಲು ಸಂವಿಧಾನ ದಿನವನ್ನಾಗಿ ಆಚರಿಸಬೇಕು ಎಂದು ಆಗ್ರಹಿಸಿದರು.

ರ್‍ಯಾಲಿಯಲ್ಲಿ ಬಿಎಸ್ಪಿ ಮುಖಂಡರಾದ ಮಲ್ಲಿಕಾರ್ಜುನ್‌, ಎಂ.ನಾಗೇಶ್, ಟಿ.ಕೃಷ್ಣಮೂರ್ತಿ, ಗೌರಮ್ಮ ಶಿವಲಿಂಗೇಗೌಡ ಸೇರಿದಂತೆ ಸ್ಟೂಡೆಂಟ್ ಡೆಮಾಕ್ರಟಿಕ್ ಪಾರ್ಟ್‌ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ಹಾಗೂ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT