ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವೇದನಾಶೀಲತೆ ಮೂಡಲಿ

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ಹೆಣ್ಣುಮಕ್ಕಳನ್ನು ಯಾವ ಶಾಲೆಗೆ ಕಳಿಸೋಣ? ಯಾವ ಶಾಲೆ ಸುರಕ್ಷಿತವಾಗಿದೆ ಎಂಬಂಥ ಪ್ರಶ್ನೆ ಇಂದಿನ ಪೋಷಕರದಾಗಿದೆ. ನಮ್ಮ ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆಯ ಕುಸಿತವನ್ನು ಈ ಪ್ರಶ್ನೆ ಧ್ವನಿಸು­ತ್ತದೆ. ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಲ್ಲಿ  ನಾಲ್ಕು ವಿವಿಧ ಶಾಲೆ­ಗಳಲ್ಲಿ ಪುಟ್ಟ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆಗಳು ನಡೆ­ದಿ­ರು­ವುದು ವರದಿಯಾಗಿದೆ. ವಿದ್ಯೆ ಕಲಿಯಬೇಕಾದ ತಾಣ, ಲೈಂಗಿಕ ಆಕ್ರಮಣ­ಗಳ ತಾಣಗಳಾಗುತ್ತಿರುವುದು ಆತಂಕಕಾರಿ.

ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ­ಯೊಂದಿಗೆ ಮಕ್ಕಳ ವಿಶ್ವಾಸದ ಕೊಂಡಿಯನ್ನು ಕಳಚಿಹಾಕುವ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ. ಈ ಎಲ್ಲಾ ಪ್ರಕರಣಗಳು ಖಾಸಗಿ ಶಾಲೆ­ಗಳಲ್ಲಿ ನಡೆದಿವೆ. ಆದರೆ ಈ ಶಾಲೆಗಳ ಮೇಲೆ ಪ್ರಾಥಮಿಕ ಹಾಗೂ ಮಾಧ್ಯ­ಮಿಕ ಶಿಕ್ಷಣ ಇಲಾಖೆಗೆ ನಿಯಂತ್ರಣವಿಲ್ಲ. ಮಕ್ಕಳ ಸುರಕ್ಷತೆಗೆ ಗಮನ ನೀಡದ ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯ­ಮಂತ್ರಿಯವರು ಈಗ ಭರವಸೆ ನೀಡಿದ್ದಾರೆ. ಇಂತಹ ಭರವಸೆಯ ಮಾತು­ಗಳು ಬರೀ ಮಾತುಗಳಾಗಿಯಷ್ಟೇ ಉಳಿಯಬಾರದು.

ಲೈಂಗಿಕ ದೌರ್ಜನ್ಯ ವಿಚಾರ ಕುರಿತಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು, ಪ್ರತಿ­ಭಟ­ನೆ­ಗಳು ನಡೆಯುತ್ತಿದ್ದರೂ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರು­ವುದು ಆಘಾತಕಾರಿ. ಹೀಗಾಗಿ ಅಪರಾಧಿಗಳಲ್ಲಿ ಶಿಕ್ಷಾ ಭಯ ಮೂಡಿಸು­ವುದು ಅತ್ಯಗತ್ಯವಾಗಿ ಆಗಬೇಕಿರುವ ಕೆಲಸ. ಇದಕ್ಕಾಗಿ ಇಂತಹ ಪ್ರಕರಣ­ಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಲು ತ್ವರಿತ ನ್ಯಾಯಾ­ಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಮತ್ತೊಂದು ಭರ­ವಸೆ ನೀಡಿದ್ದಾರೆ.ಈ ಭರವಸೆ ಶೀಘ್ರ ಅನುಷ್ಠಾನಗೊಳ್ಳಲಿ. ಅಲ್ಲದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅನ್ವಯ ದಾಖ­ಲಾ­ಗುವ ಪ್ರಕರಣಗಳನ್ನು ಇನ್ನು ಮುಂದೆ ಎಸಿಪಿ ಮಟ್ಟದ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಇಂತಹ ಪ್ರಕರಣಗಳ ಗಂಭೀರತೆಯ ಬಗ್ಗೆ ಸಮಾಜಕ್ಕೆ ಸಂದೇಶ ರವಾನಿಸಲು ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಮಾಡುವ ಹೊಣೆ ಸರ್ಕಾರದ್ದಾಗಿದೆ.

ಶಾಲೆಗಳಲ್ಲಿ ಮಕ್ಕಳ ಮೇಲೆ ಇಂತಹ ಆಕ್ರಮಣಗಳಾಗದಂತೆ ಮುಂಜಾ­ಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದುದು ಈ ಹೊತ್ತಿನ ಅಗತ್ಯ. ಮಕ್ಕಳ ಸುರ­ಕ್ಷತೆ­ಗಾಗಿ ಈಗಾಗಲೇ ನೀಡಲಾಗಿರುವ ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸದ ಶಾಲೆಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸಬೇಕಾಗುತ್ತದೆ ಎಂಬುದನ್ನು ಶಾಲೆಗಳು ಮನ­ಗಾಣಬೇಕು. ಶಾಲೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಸಂದರ್ಭ­ದಲ್ಲೇ ಅವರ ಪೂರ್ವಾಪರಗಳನ್ನು ತೀವ್ರ ಪರಿಶೀಲನೆ­ಗೊಳ­ಪಡಿಸು­ವುದು ಕಡ್ಡಾಯವಾಗಬೇಕು. ಸಾಮಾಜಿಕ ಕಾರಣಗಳಿಗಾಗಿ ಅನೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಾರದೆಯೂ ಹೋಗಬಹುದು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಎಷ್ಟರ ಮಟ್ಟಿಗೆ ಸಂವೇದನಾಶೀಲವಾಗಿವೆ ಎಂಬುದು ಪ್ರಶ್ನೆ. ಇಂತಹ ಪ್ರಕರಣಗಳನ್ನು ತಡೆಯಲು ಯಾವ ರೀತಿಯ ಕ್ರಮ­ಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದೂ ಮುಖ್ಯ. ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶದ ಕುರಿತಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ಕುಟುಂಬ, ಶಾಲೆ ಹಾಗೂ ಒಟ್ಟು ಸಮಾಜದಲ್ಲಿ ಸಂವೇದನಾಶೀಲತೆ ಮೂಡಿಸಲು ಪ್ರಚಾರಾಂದೋಲನ ನಡೆಯ­ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT