ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವೇದನೆ ಅಗತ್ಯ

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅತ್ಯಾಚಾರಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವ ನಮ್ಮ ಸಮಾಜ ಅತ್ಯಾಚಾರ ಎಸಗುವ ಅಪರಾಧಿಗಳ ಹಿನ್ನೆಲೆಯನ್ನು, ಗುಣಾವಗುಣಗಳನ್ನು ಮಾತ್ರವೇ ವಿಶ್ಲೇಷಿಸುತ್ತದೆ. ಆದರೆ ಈ ಅಪರಾಧಗಳ ಹಿಂದೆ ಸುಪ್ತವಾಗಿ ಹರಿಯುತ್ತಿರುವ ಸಾಂಸ್ಕೃತಿಕ ಧಾರೆಯನ್ನು ಗಮನಿಸುವುದೇ ಇಲ್ಲ. ಹಾಗಾಗಿಯೇ ನಿರ್ಭಯ, ಸೌಜನ್ಯ, ಮನೋರಮಾ ಮುಂತಾದ ಮಹಿಳೆಯರು ಒಂದು ಸ್ಥಾಪಿತ ಮೌಲ್ಯಗಳ ಸಾಂಸ್ಕೃತಿಕ ವ್ಯವಸ್ಥೆಗೆ ಬಲಿಯಾದರೂ ಅಪರಾಧಿಗಳನ್ನು ವ್ಯಕ್ತಿಗತ ನೆಲೆಯಲ್ಲೇ ಗುರುತಿಸುವ ಯತ್ನ ನಡೆಯುತ್ತದೆ.

ಆಕ್ರಮಣಕ್ಕೊಳಗಾದ ಮಹಿಳೆಯರಲ್ಲಿ ಪುರುಷ ಸಮಾಜದ ಆಕ್ರಮಣಕಾರಿ ಪ್ರವೃತ್ತಿಯನ್ನು ಎದುರಿಸಲಾಗದಂತಹ ಅಸಹಾಯಕತೆ ಅಂತರ್ಗತವಾಗಿದೆ ಎಂಬ ಭಾವನೆ ನಮ್ಮ ಸಮಾಜದಲ್ಲಿ ದಟ್ಟವಾಗಿ ಬೇರೂರಿದೆ. ಹಾಗಾಗಿಯೇ ಕೆಲವೇ ಮಹಿಳೆಯರ ದಿಟ್ಟ ಹೋರಾಟಗಳು ವೀರಗಾಥೆಗಳಂತೆ ವೈಭವೀಕರಿಸಲ್ಪಟ್ಟರೆ ಅವರ ದಿಟ್ಟತನ ಮತ್ತು ಪ್ರತಿರೋಧಗಳನ್ನು ಅಪರೂಪದ ಘಟನೆಗಳಂತೆ ವಿಶ್ಲೇಷಿಸಲಾಗುತ್ತದೆ. ಮತ್ತೊಂದೆಡೆ ಇದೇ ಮಹಿಳೆಯರ ಸಬಲೀಕರಣದ ಅಗತ್ಯ ಮತ್ತು ಅನಿವಾರ್ಯಗಳನ್ನೂ ವೈಭವೀಕರಿಸಲಾಗುತ್ತದೆ.

ಮಹಿಳಾ ಸಬಲೀಕರಣ ಎಂಬ ವ್ಯಾಖ್ಯಾನವೇ ಮಹಿಳೆಯರನ್ನು ಅಬಲೆಯರಂತೆ ಕಾಣುವ ಧೋರಣೆಯ ಪ್ರತೀಕವಾಗಿ ಕಾಣುತ್ತದೆ. ಭಾರತದ ಮಹಿಳೆಯರನ್ನು ಅಬಲೆಯರು ಎಂದು ಕರೆಯುವುದು ಮಹಿಳಾ ಸಮುದಾಯಕ್ಕೆ ಅಪಮಾನ ಮಾಡಿದಂತೆ. ಮಹಿಳೆಯರನ್ನು ಅಬಲೆಯರು ಎಂದು ಕರೆಯುತ್ತಲೇ ಮಹಿಳಾ ಸಮುದಾಯದ ಮೇಲೆ ತಮ್ಮ ನಿರಂತರ ನಿಯಂತ್ರಣ ಮತ್ತು ಆಧಿಪತ್ಯವನ್ನು ಸ್ಥಾಪಿಸಿ ಕಾಪಾಡುವ ಒಂದು ಸಾಂಸ್ಕೃತಿಕ ನೆಲೆಯನ್ನು ಇಲ್ಲಿ ಗುರುತಿಸಬೇಕು. ಈ ನೆಲೆಯ ಮೂಲ ಸೆಲೆ ಈ ದೇಶದ ಪಿತೃಪ್ರಧಾನ ವ್ಯವಸ್ಥೆ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ, ಹೊಣೆಗಾರಿಕೆ ಎಲ್ಲ ಮಹಿಳೆಯರಲ್ಲೂ ಇರುತ್ತದೆ.  ಆದರೆ ದೌರ್ಜನ್ಯ ಎಸಗುವ ಮನಸ್ಸುಗಳು ಈ ಸಕಾರಾತ್ಮಕ ಧೋರಣೆಗಳನ್ನು ಹತ್ತಿಕ್ಕುವುದರಲ್ಲಿ ಸುಲಭವಾಗಿ ಯಶಸ್ವಿಯಾಗುತ್ತವೆ. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯನ್ನು ಇಂತಹುದೇ ಪರಿಸರದಲ್ಲಿ ಬೆಳೆಸಲಾಗುತ್ತದೆ.

ಹೆಣ್ಣು ಹೆಣ್ಣಾಗಿಯೇ ಇದ್ದರೆ ಚೆನ್ನ  ಎನ್ನುವ ಪುರುಷ ಪ್ರಧಾನ ವ್ಯಾಖ್ಯಾನ ಇದಕ್ಕೆ ಸ್ಪಷ್ಟ ನಿದರ್ಶನ. ಹೆಣ್ಣು ದೈಹಿಕವಾಗಿ ಹೆಣ್ಣಾಗಿಯೇ ಇರುತ್ತಾಳೆ. ನೈಸರ್ಗಿಕವಾಗಿ ಹೆಣ್ಣಾಗಿಯೇ ಇರುತ್ತಾಳೆ. ಸಾಂಸ್ಕೃತಿಕ ನೆಲೆಯಲ್ಲಿ ಹೆಣ್ಣಾಗಿಯೇ ಇರುತ್ತಾಳೆ. ಇವುಗಳನ್ನು ಮೀರಿ ಹೆಣ್ಣು ಹೆಣ್ಣಾಗಿಯೇ ಇರಬೇಕು ಎಂದರೇನರ್ಥ. ಅಂದರೆ ಪುರುಷ ಸಮಾಜ ಎಳೆಯುವ ಲಕ್ಷ್ಮಣ ರೇಖೆಯನ್ನು ಮೀರದೆ ಇರಲಿ ಎಂದೇ ಅಲ್ಲವೇ? ಸಹಜವಾಗಿ ಸಬಲೆಯರಾದ ಮಹಿಳೆಯನ್ನು ಅಬಲೆಯರನ್ನಾಗಿ ಮಾಡುವುದು ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಮತ್ತು ಸಾಂಸ್ಕೃತಿಕ ನೆಲೆ. ಹೊರತು ಮಹಿಳೆಯರಲ್ಲಿರುವ ಯಾವುದೇ ಕೊರತೆ ಅಲ್ಲ. ಹಾಗಾಗಿ ಇಂದಿನ ತುರ್ತು ಎಂದರೆ ಮಹಿಳೆಯರ ಸಬಲೀಕರಣವಲ್ಲ, ಪುರುಷ ಸಮಾಜದ ಸಂವೇದೀಕರಣ. ‘ಓ ಮಹಿಳೆಯರೇ ನೀವು ಪೂರ್ವ ಜನ್ಮದಲ್ಲಿ ಯಾವ ಪಾಪ ಕರ್ಮ ಮಾಡಿದ್ದೀರಿ? ಪುರುಷರಲ್ಲಿ ಸಂವೇದನೆಯೇ ಇಲ್ಲದ ಈ ದೇಶದಲ್ಲಿ ನೀವು ಜನಿಸಿದ್ದೀರಿ’ ಎಂದು ಶರಶ್ಚಂದ್ರ ಚಟರ್ಜಿ ಶತಮಾನಗಳ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬೇಕಿದೆ.

ಪುರುಷ ಸಮಾಜದಲ್ಲಿ ಸಂವೇದನೆ ಬೆಳೆಸುವುದು ಬಾಲ್ಯದಿಂದಲೇ ಆರಂಭವಾಗಬೇಕು. ಮಹಿಳೆಯರೂ ತಮ್ಮಂತೆಯೇ  ನಿಸರ್ಗದ ಸೃಷ್ಟಿ. ಮಹಿಳೆಯರ ದೇಹ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಇದೆ. ಮಹಿಳೆಯರಲ್ಲೂ ಒಂದು ಮನಸ್ಸು, ಹೃದಯ, ಸಂವೇದನೆ,  ಭಾವನೆಗಳಿರುತ್ತವೆ, ತಮ್ಮಂತೆಯೇ ಮಹಿಳೆಯರು ತಮ್ಮಿಷ್ಟದಂತೆ ಬದುಕಲು ಅರ್ಹತೆ ಮತ್ತು ಹಕ್ಕು ಪಡೆದಿದ್ದಾರೆ ಎಂಬ ಭಾವನೆಯನ್ನು ಪುರುಷ ಸಮಾಜದಲ್ಲಿ, ಬಾಲ್ಯದಿಂದಲೇ ಕಲಿಸಬೇಕು. ಮಕ್ಕಳಿಗೆ ಸಂಸ್ಕೃತಿ ಕಲಿಸುವುದೆಂದರೆ ಧಾರ್ಮಿಕ ವಿಧಿವಿಧಾನಗಳನ್ನು ಕಲಿಸುವುದೇ ಆಗಿದೆ.  ನೋಡಿ ನಮ್ಮ ಮಗು ಶ್ಲೋಕಗಳನ್ನು ಎಷ್ಟು ಚಂದಾಗಿ ಹಾಡುತ್ತದೆ ಇದನ್ನೇ ಸಂಸ್ಕೃತಿ ಎನ್ನುವುದು ಎಂದು ಎದೆ ತಟ್ಟಿಕೊಳ್ಳುತ್ತೇವೆ. ಅದೇ ಮಗುವಿನ ಮನಸ್ಸಿನಲ್ಲಿ ತನ್ನ ಸೋದರಿ ಪ್ರತಿನಿಧಿಸುವ ಸ್ತ್ರೀ ಸಮುದಾಯದ ಬಗ್ಗೆ ಸಕಾರಾತ್ಮಕವಾದ ಅಭಿವ್ಯಕ್ತಿಯನ್ನು ರೂಪಿಸಲು ಯತ್ನ ನಡೆಯುವುದಿಲ್ಲ.

ವಿಭಜನೆಯ ಮೂಲಕ ಪುರುಷರು ಸಂಸ್ಕೃತಿಯ ಹರಿಕಾರರು, ಮಹಿಳಾ ಸಮುದಾಯ ಸಂಸ್ಕೃತಿಯ ಸಂರಕ್ಷಕರು ಎಂದು ಭಾವಿಸುವ ಸಾಂಪ್ರದಾಯಿಕ ಪುರುಷ ಪ್ರಧಾನ ಸಮಾಜ ತಾನೇ ರೂಪಿಸಿದ ಸಾಂಸ್ಕೃತಿಕ ನಿಯಮಾವಳಿಗಳನ್ನು ಮೀರುವ ಮಹಿಳೆಯರನ್ನು ತುಚ್ಛವಾಗಿ ನೋಡಲಾರಂಭಿಸುತ್ತದೆ. ಈ ಸಾಮಾಜಿಕ ಧೋರಣೆಯೇ ಅತ್ಯಾಚಾರಗಳಿಗೆ ಮೂಲ ಕಾರಣವಾಗಿದೆ. ಸಂಸ್ಕೃತಿಯ ಸಂರಕ್ಷಕರಾಗಿ ಮಹಿಳೆಯರು ಪುರುಷ ಸಮಾಜದ ನಿರ್ಬಂಧಗಳಿಗೊಳಪಟ್ಟು ನಡೆದರೆ ಮಾತ್ರ ದೌರ್ಜನ್ಯ ಮುಕ್ತರಾಗಲು ಸಾಧ್ಯ. ಹಾಗಾಗಿಯೇ ನಿರ್ಭಯ, ಸೌಜನ್ಯ, ಸಾಂಸ್ಕೃತಿಕ ಸಂಕೇತಗಳಾಗಿ ಆಧಿಪತ್ಯ ಸಾಧಿಸುವ ಪುರುಷ ಸಮಾಜಕ್ಕೆ ಅಡಿಪಾಯವಾಗುತ್ತಾರೆ. ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವ ವೀರ ಯೋಧರಿಗೆ ಆದರ್ಶಪ್ರಾಯರಾಗುತ್ತಾರೆ. ಆದರೆ ಮಹಿಳಾ ಸಮುದಾಯದ ಆಶಯಗಳಿಗೆ ತಳಹದಿಯಾಗುವುದಿಲ್ಲ.  ಇಲ್ಲಿರುವುದು ಸಂವೇದನೆಯ ಕೊರತೆ, ಸಬಲೀಕರಣದ ಕೊರತೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT