ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವೇದನೆ ಹಣತೆಯ ಕತ್ತಲೆ–ಬೆಳಕು

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ‘ಪ್ರಜಾವಾಣಿ’ಯ ದೀಪಾವಳಿ ವಿಶೇಷ ಸಂಚಿಕೆಗಳಿಗೆ ಮಹತ್ವದ ಸ್ಥಾನವಿದೆ. ಈ ಸಂಚಿಕೆಗಳ ಮೂಲಕವೇ ಶ್ರೇಷ್ಠ ಕಥೆಗಾರರು ಮೂಡಿರುವುದು ಹಾಗೂ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ಸಿನಿಮಾಗಳ ವರ್ತಮಾನ ಕುರಿತಂತೆ ಅದು ರೂಪಿಸುತ್ತ ಬಂದಿರುವ ದಾರಿ ಅಮೂಲ್ಯವಾದುದು. ಅನಂತಮೂರ್ತಿ, ತೇಜಸ್ವಿ, ಲಂಕೇಶ್, ಬೆಸಗರಹಳ್ಳಿ ಅವರಂತಹ ಪ್ರಮುಖ ಕಥೆಗಾರರು ಇದೇ ಅಂಗಳದಿಂದ ಬಂದವರು. ಇಂದಿನ ಎಲ್ಲ ಮುಖ್ಯ ಕಥೆಗಾರರೂ ಕೂಡ ಇಲ್ಲೇ ಪಯಣ ಆರಂಭಿಸಿದವರು.

ದೇವನೂರ ಮಹಾದೇವ ಅವರ ‘ಒಡಲಾಳ’ ಕಥೆ ಪ್ರಕಟವಾದದ್ದು ಇದೇ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದಲ್ಲಿ. ಕನ್ನಡ ಸಾಹಿತ್ಯ ಕಥನದ ಪ್ರತಿಭೆಗಳೆಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಇದೇ ವಿಶೇಷಾಂಕದ ಅಂಗಳದಲ್ಲಿ ಬಂದು ಹೋದವರೇ ಆಗಿವೆ. ಹೊಸ ಪ್ರತಿಭೆಗಳ ಜೊತೆಗೆ ಹಿರಿಯ ತಲೆಮಾರಿನ ಬರಹಗಳ ಸೇತುವೆಯನ್ನು ಪ್ರಜಾವಾಣಿಯು ತನ್ನ ವಿಶೇಷಾಂಕಗಳಲ್ಲೂ ಸಾಪ್ತಾಹಿಕಗಳಲ್ಲೂ ಬೆಳೆಸುತ್ತಲೇ ಬಂದಿದೆ. ಅವುಗಳ ಒಂದು ಕೊಂಡಿ ಈ ವರ್ಷದ (2014ರ) ದೀಪಾವಳಿ ಸಂಚಿಕೆ.

ಭಾಗಶಃ ಈ ತನಕ ಕನ್ನಡ ಕಥಾ ಪರಂಪರೆಗೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕಗಳು ನೀಡಿದಷ್ಟು ಕೊಡುಗೆಯನ್ನು ಮತ್ಯಾವ ಸಾಹಿತ್ಯ ಸಂಸ್ಥೆಯೂ ಅಕಾಡೆಮಿಯೂ ವಿಶ್ವವಿದ್ಯಾಲಯವೂ ಅಲ್ಲದೆ ಯಾವುದೇ ಸಾಹಿತ್ಯ ಪಂಥವೂ ಕೂಡ ನೀಡಿಯೇ ಇಲ್ಲ. ಅದರ ಅಂತಹ ಯತ್ನವನ್ನು ಉಳಿದ ಅನೇಕ ಪತ್ರಿಕೆಗಳು ಕೂಡ ಅನುಸರಿಸಿವೆ. ಆಧುನಿಕ ಕನ್ನಡ ಕಾವ್ಯದ ವಿಸ್ತರಣೆಯಲ್ಲೂ ಇದರ ಪಾತ್ರ ದೊಡ್ಡದಿದೆ. ಈ ಸಲದ ವಿಶೇಷಾಂಕದ ವಿಶೇಷ ಲೇಖನ ಮಾಲೆಯಾದ ‘ಭಾಷಾ ಭಾರತಿ’ ಬರಹಗಳು ಗಂಭೀರವಾಗಿವೆ. ಅಗ್ರಹಾರ ಕೃಷ್ಣಮೂರ್ತಿ ಅವರು ತಮ್ಮ ವ್ಯಾಪಕ ಭಾರತೀಯ ಭಾಷೆಗಳ ಸಾಹಿತ್ಯ ಸಂಬಂಧಗಳ ಅರಿವಿನ ಅನುಭವವನ್ನು ಆತ್ಮಕಥನದ ದಾಟಿಯಲ್ಲಿ ಆಳವಾಗಿ ವಿಶ್ಲೇಷಿಸಿದ್ದಾರೆ. ತಮಿಳು ಭಾಷೆಯ ವಿಶಿಷ್ಟ ಲೇಖಕರೂ, ಕನ್ನಡದ ಶ್ರೇಷ್ಠ ಬರಹಗಳ ಅನುವಾದಕರೂ ಆಗಿರುವ ಪಾವಣ್ಣನ್ ಅವರ ಬರಹ ಹಾಗೂ ಇತರ ಭಾಷೆಗಳ ಭಾವಲೋಕವನ್ನು ಆಯಾ ಭಾಷೆಗಳ ಲೇಖಕರು ಸಮರ್ಥವಾಗಿ ಬಿಂಬಿಸಿದ್ದಾರೆ.

ಭಾಷೆ, ಭಾವನೆ, ಸ್ವಭಾವ, ಅಭಿವ್ಯಕ್ತಿಗಳು ಹೇಗೆ ವರ್ತಕ ವರ್ತನೆಗಳಿಗೆ ಈಡಾಗುತ್ತಿವೆ ಎಂಬುದನ್ನು ‘ಭಾಷಾ ಭಾರತಿ’ಯ ಬರಹಗಳು ಧ್ವನಿಸುತ್ತವೆ. ಇವುಗಳ ನಡುವೆ ಬೊಳುವಾರರ ‘ಮಲಾಲಾ ಅಲ್ಲಾ’ ನಾಟಕ ಮಾರ್ಮಿಕವಾಗಿ ಮಾತನಾಡುತ್ತದೆ. ಹೆಣ್ಣಿನ ಅಂತರಾಳವನ್ನು ಈ ಬರಹ ತೆರೆಯುತ್ತದೆ, ಸಮಕಾಲೀನತೆಗೆ ಮಿಡಿಯುತ್ತದೆ. ರಹಮತ್ ತರೀಕೆರೆ ಬರೆದ ‘ತಮಿಳು ಸಂಸ್ಕೃತಿಯ ಅಧಿನಾಯಕಿ ಕಣ್ಣಗಿ’ಯು ಪ್ರವಾಸಿ ಲಹರಿಯಲ್ಲಿ ಗಮನ ಸೆಳೆಯುತ್ತದೆ. ಎಸ್. ದಿವಾಕರ್ ತಮ್ಮ ಯಾವತ್ತಿನ ಶ್ರೇಷ್ಠ ಸಾಹಿತ್ಯದ ನಿಷ್ಠೆಯಲ್ಲಿ ‘ಅರೇಬಿಯನ್ ನೈಟ್ಸ್’ ಬಗ್ಗೆ ಒಳನೋಟಗಳ ಬರಹ ನೀಡಿದ್ದಾರೆ. ‘ಹುಡುಗಿಯರೇಕೆ ಅಲಂಕಾರ ಮಾಡಿಕೊಳ್ಳುತ್ತಾರೆ?’ ನೆಲೆಯ ಬರಹಗಳು ಹೆಣ್ಣಿನ ಒಳಗನ್ನಡಿಯ ಭಾವನೆಗಳನ್ನು ಪ್ರತಿಫಲಿಸಿ ಆಕೆಯ ಅಲಂಕಾರಶಾಸ್ತ್ರವನ್ನು ಪರಿಚಯಿಸುತ್ತವೆ. ಅಲಂಕಾರ ಕೂಡ ಬಿಡುಗಡೆಯ ಒಂದು ಅಭಿವ್ಯಕ್ತಿ ಎಂಬುದು ಈ ಬರಹಗಳ ಹಿಂದಿನ ಭಾವನೆಯಾಗಿದೆ.

ಹೀಗಾಗಿಯೇ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕವು ಸಾಹಿತ್ಯ ಸಂವೇದನೆಯನ್ನು ಸಾಮಾಜಿಕವಾಗಿ ವಿಸ್ತರಿಸುವ ಸಂಚಿಕೆಯಾಗಿದೆ. ಹಿಂದೆ ಅದು ಓದುವ ಮಧ್ಯಮ ವರ್ಗವನ್ನು ರೂಪಿಸುತ್ತಿತ್ತು. ಈಗಲೂ ಅದು ಸೂಕ್ಷ್ಮ ಓದುಗ ವಲಯದ ನಿರ್ಮಾಣದ ಕೊಂಡಿ. ಪ್ರತಿವರ್ಷದ ನಾಡುನುಡಿಯ ತುಡಿತವನ್ನು ನಿರ್ಧರಿಸುವ, ವ್ಯಕ್ತಪಡಿಸುವ ಜವಾಬ್ದಾರಿಯೂ ಅದಕ್ಕಿದೆ. ಆದುದರಿಂದಲೇ ಅದು ಆಯಾ ವರ್ಷದ ಕನ್ನಡದ ಅತ್ಯುತ್ತಮ ಅಭಿವ್ಯಕ್ತಿಯ ಕನ್ನಡಿಯಾಗಿ ಪ್ರತಿಫಲಿಸುವುದು. ಹಾಗಿದ್ದರೂ ಈ ವರ್ಷದ ವಿಶೇಷಾಂಕವನ್ನು ಅವಲೋಕಿಸಿದಾಗ ಗೆದ್ದ ಬರಹಗಳ ಬಗ್ಗೆ, ಆಹ್ವಾನಿತ ಬರಹಗಳ ಕುರಿತು ಹೆಮ್ಮೆಯಿಂದ ಬೀಗಲಿಲ್ಲ. ಜೀವನ ಮೌಲ್ಯಗಳು ಬದಲಾದಂತೆ ಅಭಿವ್ಯಕ್ತಿಗಳು ಬದಲಾಗುತ್ತವೆ, ನಿಜ. ಆದರೆ, ಗತ ಹಾಗು ವರ್ತಮಾನಗಳು ದುಃಖದ ಅರಿವಿಲ್ಲದಿದ್ದರೆ ಯಾವುದೇ ಬರಹವು ಪ್ರತಿಧ್ವನಿಯಾಗದು. ಗೆದ್ದ ಈ ಕಾಲದ ಬರಹಗಾರರು ಹಾಗೂ ವಿಶೇಷಾಂಕದಲ್ಲಿ ಕಾಣಿಸಿಕೊಂಡವರು ತಾವು ಸೋತಿದ್ದೇವೆಂದು ಭಾವಿಸಿದರೆ ಒಳ್ಳೆಯದು.

ಈ ಸಾಲಿನ ಸಂಚಿಕೆಯನ್ನು ಯಾವತ್ತಿನ ಕುತೂಹಲದಂತೆಯೇ ಓದಿದೆ. ಪುಟಪುಟಗಳ ಜಾಹೀರಾತಿನ ಹಾವಳಿಯನ್ನು ಅತ್ತ ತಿರುವಿದೆ. ಚುಟುಕು ಓದುಗರ ಟಿಪ್ಪಣಿಗಳ ಅವಲೋಕಿಸಿದೆ. ತೆಳು ತೆಳು ಭಾವಗಳ ಮೊತ್ತವದು. ಸತತ ನಾಲ್ಕು ಬಾರಿ ಮೊದಲ ಬಹುಮಾನ ಪಡೆದ ನಾನು ಈ ಬಾರಿಯ ಬಹುಮಾನಿತ ಕಥೆಗಳನ್ನೂ ಓದಿದೆ. ಸ್ವಲ್ಪ ಹೊತ್ತಿಗೇ ಆ ಕಥೆಗಳು ಮರೆತು ಹೋಗಿದ್ದವು. ಕವಿತೆಗಳೂ ಹಾಗೆಯೇ ತೇಲಿಹೋಗಿದ್ದವು. ಆಹ್ವಾನಿತ ಕಥೆಗಳ ಪೈಕಿ ನಟರಾಜ ಹುಳಿಯಾರ್ ಅವರ ಕಥೆ ತನ್ನ ಹೊಸ ಪರಿಸರದಿಂದ, ಕಥೆಗಾರನ ಕಾಣ್ಕೆಯಿಂದ ವಿಶೇಷವೆನಿಸಿತು. ಕೇಶವರೆಡ್ಡಿ ಹಂದ್ರಾಳ ಅವರ ಕಥೆಯ ಆಪ್ತಧಾಟಿ, ಮಾಗಿದ ನಿರೂಪಣೆ ಹಿತವೆನಿಸಿತು. ಗೀತಾ ನಾಗಭೂಷಣ ಅವರ ಸಿದ್ಧ ಮಾದರಿಯ ಕಥೆ ಮಾಮೂಲೆನಿಸಿತು. ಹೊಸದಾರಿಯ ಗದ್ಯಪದ್ಯ, ವಿಚಾರ – ವಿನೋದ ಬರಹಗಳು ದೀಪಾವಳಿಯ ವಿಶೇಷಾಂಕದ ಅಂಗಳಕ್ಕೆ ಬರಲು ಯಾವ ತೊಡಕಿದೆ? ಬರಹ ಕೋರಿದ ಕೂಡಲೆ ತೋಚಿದ್ದು ಬರೆದು ಬಿಡಬಹುದೇ? ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶರ ಕವಿತೆಗಳ ಸೆಳೆತ ಇಷ್ಟು ಸುಲಭವಾಗಿ ಸಡಿಲವಾಯಿತೆ ಅಥವಾ ನಾನೇ ಇವೆಲ್ಲ ಜಡ ಎಂದು ಜಡವಾಗಿರುವೆನೇ...

ಈ ಕಾಲದ ಯುವ ಬರಹದಲ್ಲಿ ಎದ್ದು ಕಾಣುವ ಪ್ರತಿಭೆ ಎಂದರೆ ಆ ಕೂಡಲೆ ಯಾವುದನ್ನೇ ಆದರೂ ಆಕರ್ಷಕವಾಗಿ, ನಿಜ ಎನ್ನುವಂತೆ ನಕಲು ಮಾಡುವುದು. ಈ ಸಲದ ವಿಶೇಷಾಂಕದ ಬಹುಮಾನಿತ ಬರಹಗಳು ನನ್ನ ಮನಸಿಗೆ ಹಿಡಿಸಲಿಲ್ಲ. ಅವರ ಅಭಿವ್ಯಕ್ತಿಯ ಮೇಲೆ ಕಾಲದ ವೇಗ ಒತ್ತಡ ಹೇರಿದೆ. ಭಾವನೆಗಳ ಚಿತ್ರಕ ಶಕ್ತಿಯನ್ನು ತುಂಡರಿಸಿದೆ. ರೂಪಕ ವಿವರಗಳನ್ನು ನಿಯಂತ್ರಿಸಿದೆ. ಅಖಂಡ ಮಾನವತ್ವದ ದುಃಖದಿಂದ ಉದಿಸುವ ಬೆಳಕನ್ನು ತಮ್ಮ ಮನೆಯ ಮನದ ಟಾರ್ಚಿಗೆ ತಕ್ಕಂತೆ ಹೊಂದಿಸಿಕೊಂಡು ಮೊಟಕಾಗಿದೆ. ಮಾರುಕಟ್ಟೆಯ ಉತ್ಪನ್ನ ಒಂದನ್ನು ಹೇಗೆ ಆ ಕ್ಷಣಕ್ಕೆ ತಕ್ಕಂತೆ ತಯಾರಿಸಬಹುದೊ ಅದರಂತೆಯೇ ಸೃಜನಶೀಲತೆಯೂ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನವನ್ನು ಈ ಬರಹಗಳೂ ಹುಟ್ಟಿಸುತ್ತಿವೆ. ಬರಹಗಳನ್ನು ಕಾಪಾಡುವುದೋ, ಬರಹಗಾರರನ್ನು ಕಾಯುವುದೊ... ಅಭಿವ್ಯಕ್ತಿಯ ನಮ್ಮದೇ ವೇದಿಕೆಗಳನ್ನು ಉಳಿಸಿಕೊಳ್ಳಲಾಗದೆ ಪರಿತಪಿಸುವುದೋ... ಬದಲಾವಣೆಯ ಕೃತಕ ಮಾರುಕಟ್ಟೆಗಳಿಗೆ ಒಗ್ಗಿಕೊಳ್ಳುವುದೊ... ಪ್ರಜಾವಾಣಿಯ ‘ಪ್ರಜಾವಾಣಿ’ ಜಗತ್ತನ್ನು ಸುತ್ತಿಕೊಂಡೇ ಬಂದರೂ ನಮ್ಮ ವಾಣಿಯನ್ನು ಬಿಟ್ಟುಕೊಳ್ಳಲು ಮುಂದಾಗಿಲ್ಲ. ಅದೇ ಸದ್ಯದ ಸುಖ. ಎಚ್ಚರದ ಪಯಣ.

ಪ್ರಜಾವಾಣಿಯ ಬರಹಗಳೆಲ್ಲ ಒಳ್ಳೆಯವು ನಿಜ. ಆದರೆ ಅವು ಒಳ್ಳೆಯ ಸಮಾಜವನ್ನು ರೂಪಿಸಬೇಕು ಕೂಡ. ಈ ನಿಟ್ಟಿನಲ್ಲಿ ಸತತವಾಗಿ ಪ್ರಜಾವಾಣಿಯ ದೀಪಾವಳಿಯ ವಿಶೇಷಾಂಕವು ಗೆದ್ದಂತೆ ಸೋಲುತ್ತಾ, ಸೋತಂತೆ ಗೆಲ್ಲುತ್ತಾ ಕನ್ನಡ ನಾಡು ನುಡಿಯನ್ನು ನಿರೂಪಿಸುತ್ತದೆ. ಸಮಾಜದ ಎಲ್ಲ ದನಿಗಳನ್ನು ಪ್ರಜಾವಾಣಿಯ ವಿಶೇಷ ಸಂಚಿಕೆಗಳು ಸಂಗಮಿಸುತ್ತ ಬಂದಿವೆ. ಈ ಬಾರಿಯೂ ಅದರ ಆ ತತ್ವ ಮುಂದುವರಿದಿದೆ. ಎಲ್ಲ ಸಾಹಿತ್ಯ ಪರಂಪರೆಗಳನ್ನು ಸಮಾನವಾಗಿ ಸಂಯೋಗಿಸುವ ಅದರ ಯತ್ನ ಅಮೂಲ್ಯವಾದುದು. ದೀಪಾವಳಿಯ ವಿಶೇಷಾಂಕವು ಈಗಲೂ ಹೊಸ ಬರಹಗಾರರ ಬಹುದೊಡ್ಡ ವೇದಿಕೆ. ಹಿರಿಯ ಬರಹಗಾರರು ಕೂಡ ಇದರಲ್ಲಿ ಬರೆಯಲು ತವಕಿಸುತ್ತಲೇ ಇರುತ್ತಾರೆ. ಈಗಿನ ಮಕ್ಕಳ ಜೊತೆ ತಾನೇಕೆ ಸ್ಪರ್ಧಿಸಬೇಕು ಎಂದು ಅನೇಕ ಬಾರಿ ನಾನು ಹಿಂಜರಿದದ್ದುಂಟು.

ಗೆಳೆಯರಾದ ಎಸ್. ಗಂಗಾಧರಯ್ಯ ತನ್ನ ಮಗಳು ಸ್ಮಿತಾ ಮಾಕಳ್ಳಿ ಅವರ ಜೊತೆಗೇ ಬಹುಮಾನ ಪಡೆದಿದ್ದರೆ,
ಎಂ.ಎಸ್. ಶೇಖರ್ ತನ್ನ ನಡುಗಾಲದಲ್ಲಿ ಪ್ರಜಾವಾಣಿಯ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವುದು ಅಚ್ಚರಿ ಎನಿಸುತ್ತದೆ.
ಅಂದಹಾಗೆ, ಈ ವರ್ಷದ ಸಂಚಿಕೆಯ ಪುಟ ಪುಟಗಳ ವಿನ್ಯಾಸ ಅಂದವಾಗಿದೆ. ಈ ಸಂಚಿಕೆಯೂ ಸೇರಿದಂತೆ ಈವರೆಗಿನ ಪ್ರಜಾವಾಣಿಯ ವಿಶೇಷಾಂಕಗಳಲ್ಲಿ ಪ್ರಕಟವಾಗಿರುವ ಎಲ್ಲ ಬಗೆಯ ಬರಹಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಗಮನಿಸಿದರೆ ‘ಪ್ರಜಾವಾಣಿ’ ಪತ್ರಿಕೆಗೆ ಇಡೀ ಕನ್ನಡ ಸಾಹಿತ್ಯದ ಎಲ್ಲರೂ ತಲೆಬಾಗಬೇಕಿದೆ. ಪ್ರಜಾವಾಣಿಯ ಈ ಒಂದೊಂದು ವಿಶೇಷಾಂಕವು ಬೆಳಕಿನ ಒಂದೊಂದು ಹಣತೆ. ಈ ಸಾಲು ಸಾಲು ಹಣತೆಗಳು ಹೀಗೇ ಬೆಳಗುತ್ತಿರಲಿ, ಸದಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT