ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕ ಪ್ರಾಧ್ಯಾಪಕರಿಗೆ ವಿನಾಯಿತಿ ಇದೆ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ  ಪ್ರಾಧ್ಯಾಪಕರ ವಾರದ ಬೋಧನಾ ಅವಧಿಯನ್ನು 16 ಗಂಟೆಯಿಂದ 22 ಗಂಟೆಗೆ ಏರಿಸಿ, ಕಾಲೇಜು ಶಿಕ್ಷಣ ಇಲಾಖೆ ನವೆಂಬರ್‌ 10ರಂದು ಹೊರಡಿಸಿರುವ ಆದೇಶಕ್ಕೆ ಶಿಕ್ಷಣ ವಲಯದಲ್ಲಿ ತೀವ್ರ ವಿರೋಧ ವ್ಯಕ್ತ­ವಾ­ಗಿದೆ.

ಸಾಧಕ ಬಾಧಕಗಳನ್ನು ಚರ್ಚಿಸದೆ ಅವೈಜ್ಞಾ­ನಿಕವಾಗಿ ಈ ಆದೇಶ ಹೊರಡಿಸಲಾಗಿದೆ. ಇದ­ರಿಂದ ಪ್ರಾಧ್ಯಾಪಕರಿಗೆ ಹೊರೆ­ಯಾಗುತ್ತದೆ. ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳ­ಬೇಕಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬೆಳ­ವ­ಣಿಗೆಗಳ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಬಿ.ಜಿ. ನಂದ-ಕುಮಾರ್‌ ಅವರು ‘ಪ್ರಜಾವಾಣಿ’­ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿ­ಕೊಂಡಿ­ದ್ದಾರೆ.

* ಪದವಿ ಕಾಲೇಜುಗಳ  ಪ್ರಾಧ್ಯಾಪಕರ ವಾರದ ಬೋಧನಾ ಅವಧಿಯನ್ನು 22 ಗಂಟೆಗೆ ನಿಗದಿಪಡಿಸಿ ಹೊರಡಿಸಿರುವ ಅಧಿಸೂಚನೆಯನ್ನು ಹೇಗೆ ಸಮರ್ಥಿಸುತ್ತೀರಿ?
ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) 2006ರಲ್ಲಿ ಪ್ರಾಧ್ಯಾಪಕರ ವೇತನ ಪರಿಷ್ಕರಿಸಿದ ಸಂದರ್ಭದಲ್ಲಿ ಕೆಲವು ಷರತ್ತು­ಗಳನ್ನು ವಿಧಿಸಿತ್ತು. ಅದರ ಪ್ರಕಾರ, ಪ್ರಾಧ್ಯಾಪ­ಕರು ವಾರದಲ್ಲಿ 40 ಗಂಟೆ ಕೆಲಸ ಮಾಡಬೇಕು. ಇದರಲ್ಲಿ 16 ಗಂಟೆ ಬೋಧನೆ, 6 ಗಂಟೆ ಸಂಶೋ­ಧನೆ ಮತ್ತು ಉಳಿದ ಸಮಯ ಆಡಳಿತಾತ್ಮಕ ಕೆಲಸ­ಗಳಲ್ಲಿ ತೊಡಗ­ಬೇಕು.

ಆದರೆ, ನಮ್ಮ ರಾಜ್ಯದ ಬಹಳಷ್ಟು ಕಾಲೇಜು­ಗಳಲ್ಲಿ ಸಂಶೋಧನಾ ಕೇಂದ್ರ­ಗಳಿಲ್ಲ. ಬೋಧಕರು ಸಂಶೋಧನೆ­ಯಲ್ಲೂ ತೊಡಗಿಕೊಂಡಿಲ್ಲ. ಯಾರು ಸಂಶೋಧನೆ ನಡೆಸುತ್ತಾರೋ ಅವರಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಸಂಶೋಧನೆ ನಡೆಸದ ಪ್ರಾಧ್ಯಾಪಕರು ಮಾತ್ರ 22 ಗಂಟೆ ಬೋಧನೆ ಮಾಡಬೇಕು ಎಂದು ಸೂಚಿಸಿ­ದ್ದೇವೆ.

* ಪ್ರಾಧ್ಯಾಪಕರ ಜ್ಞಾನಾರ್ಜನೆಗೆ, ಸಂಶೋಧನೆಗೆ ಇಲಾಖೆಯೇ ಅಡ್ಡಗಾಲು ಹಾಕಿದಂತೆ ಆಗಲಿಲ್ಲವೇ?
ಪ್ರಾಧ್ಯಾಪಕರು ಸಂಶೋಧನೆ ಮಾಡುವುದನ್ನು ನಾವು ಸ್ವಾಗತಿಸು­ತ್ತೇವೆ. ಸಂಶೋಧನೆ ಮಾಡ­ಬೇಡಿ ಎಂದು ಇಲಾಖೆ ಯಾರಿಗೂ ಹೇಳುತ್ತಿಲ್ಲ. ಮಾಡಿ ಅಂತಲೇ ಹೇಳುತ್ತಿದ್ದೇವೆ. ಅಂತಹವರಿಗೆ ಈ ಆದೇಶದಿಂದ ವಿನಾಯಿತಿಯನ್ನೂ ನೀಡ­ಲಾಗಿದೆ.

* ಬೋಧನಾ ಅವಧಿ ವಿಸ್ತರಣೆಯಿಂದ ಪ್ರಾಧ್ಯಾಪಕರಿಗೆ  ಹೊರೆಯಾಗುತ್ತದೆ ಎಂಬ ಮಾತು ಶಿಕ್ಷಣ ವಲಯದಲ್ಲೇ ಕೇಳಿ­ಬಂದಿದೆ­ಯಲ್ಲಾ?
ಹೊಸ ಆದೇಶದಿಂದಾಗಿ ಪ್ರಾಧ್ಯಾಪಕ­ರಿಗೆ ಹೆಚ್ಚಿನ ಹೊರೆಯಾಗದು. ವಾರಕ್ಕೆ 22 ಗಂಟೆ ಅಂದರೆ ಅವರು ಪ್ರತಿ ದಿನ ಮೂರರಿಂದ –ನಾಲ್ಕು ಗಂಟೆ ಅಧ್ಯಾಪನ ಮಾಡಬೇಕಾಗಬಹುದು.

* ಇದೊಂದು ಅವೈಜ್ಞಾನಿಕ ಆದೇಶ ಎಂದು ಸರ್ಕಾರಿ ಮತ್ತು ಅತಿಥಿ ಉಪ­ನ್ಯಾಸಕರು ಜರಿಯುತ್ತಿದ್ದಾರಲ್ಲಾ?
ಯುಜಿಸಿ ನಿಯಮಾವಳಿ ಅಡಿಯಲ್ಲಿ ಮತ್ತು ಸರ್ಕಾ­ರದ ಆದೇಶದ ಪ್ರಕಾರ, ನಾವು ಈ ಸುತ್ತೋಲೆ ಹೊರಡಿಸಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾದುದು ಉನ್ನತ ಶಿಕ್ಷಣ ಸಚಿವರು. ಪರ–ವಿರೋಧಗಳ ಬಗ್ಗೆ ಚರ್ಚೆ ನಡೆ­ಯುತ್ತಿದೆ. ಆದೇಶವನ್ನು ವಾಪಸ್‌ ಪಡೆ­ಯವಂತೆ ಮನವಿಗಳು ಬಂದಿವೆ.

* ಸರ್ಕಾರಿ, ಅನುದಾನಿತ ಕಾಲೇಜು­ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೆಲಸಕ್ಕೆ ಕುತ್ತು ಬರುತ್ತದೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?
ಅತಿಥಿ ಉಪನ್ಯಾಸಕರಿಗೆ ಯಾವುದೇ ತೊಂದರೆ ಆಗಿಲ್ಲ. ನಾವು ಯಾರನ್ನೂ ಕೆಲಸದಿಂದ ತೆಗೆದು ಹಾಕಿಲ್ಲ.

* ಹಣಕಾಸು ಇಲಾಖೆ ಸೂಚನೆ ಮೇರೆಗೆ ಈ ಆದೇಶ ಹೊರಡಿಸ­ಲಾಗಿದೆಯೇ?
ಸಂಶೋಧನೆಗೆ ಮೀಸಲಾಗಿರುವ  ಅವಧಿ­ಯನ್ನು ಬೋಧನಾ ಅವಧಿಗೆ ಸೇರ್ಪಡೆಗೊಳಿಸ­ಬೇಕು ಎಂಬ ನಿಲುವನ್ನು ಹಣಕಾಸು ಇಲಾಖೆ ತೆಗೆದು­ಕೊಂಡಿರುವುದು  ನಿಜ. ಅಂತಿಮವಾಗಿ ಉನ್ನತ ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿದೆ. ಅದನ್ನು ಪಾಲಿಸುವುದಕ್ಕೆ ಕ್ರಮ ತೆಗೆದು­ಕೊಂಡಿದ್ದೇವೆ.

* ಕಾಲೇಜುಗಳಲ್ಲಿ ಸಂಶೋಧನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಇಲಾಖೆ ಕ್ರಮ ಕೈಗೊಳ್ಳಬಹುದಲ್ಲವೇ?
ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರ­ಗಳನ್ನು ತೆರೆಯಲು ಆಯಾ ವಿಶ್ವ­ವಿದ್ಯಾಲಯ­­ ಕ್ರಮ ಕೈ­ಗೊಳ್ಳ­ಬೇಕು. ಇಲಾಖೆ ವ್ಯಾಪ್ತಿಯಲ್ಲಿ ಇದಕ್ಕೆ ಹೆಚ್ಚು ಅವಕಾಶಗಳಿಲ್ಲ. ಯಾವುದೆಲ್ಲ ಮಾಡ­ಬಹುದೋ ಆ ಕೆಲಸವನ್ನು ಮಾಡುತ್ತಿದ್ದೇವೆ. ಪ್ರತಿ ಕಾಲೇಜಿನಲ್ಲೂ  ಸಂಶೋಧನಾ ಕೇಂದ್ರ ತೆರೆಯುವುದು ಸುಲಭದ ಕೆಲಸವಲ್ಲ. ಎಲ್ಲವನ್ನೂ ಒಂದೇ ಸಲ ಮಾಡಲು ಸಾಧ್ಯವೇ? ನಿಜ ಹೇಳ­ಬೇಕೆಂದರೆ ಹಲವು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೊಠಡಿಗಳು, ಶೌಚಾಲಯಗಳು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಅವು­-ಗಳನ್ನು ಒದಗಿಸುವ ಕೆಲಸ ಮೊದಲು ಆಗಬೇಕು.

* ಮುಂದೆ ಏನು ಮಾಡುತ್ತೀರಿ?
ಈ ಆದೇಶ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಆದೇಶ ಹೊರಡಿಸಿ­ರುವುದಕ್ಕೆ ಆಕ್ಷೇಪ­ಗಳು ಬಂದಿವೆ. ಅವುಗಳನ್ನು   ಉನ್ನತ ಶಿಕ್ಷಣ ಖಾತೆ ಸಚಿವರ ಮುಂದೆ ಇಡ­ಲಿದ್ದೇವೆ. ನಿರ್ಧಾರ ಕೈಗೊಳ್ಳ­-ಬೇಕಾದುದು ಅವರೇ.

* ಆದೇಶ ವಾಪಸ್‌ ಪಡೆಯುವ ಸಾಧ್ಯತೆ ಇದೆಯೇ?
ಈ ಬಗ್ಗೆ ನಾನು ಏನೂ ಹೇಳಲಾರೆ. ಸಚಿವರ ಮಟ್ಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳ­ಬೇಕಾಗುತ್ತದೆ. ಈ ವರ್ಷದ ಮಟ್ಟಿಗೆ ಆದೇಶ­ವನ್ನು ಅಮಾನತಿನಲ್ಲಿ ಇಡುವ ಸಾಧ್ಯತೆ ಇದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಹೊರ ಬೀಳಲಿದೆ ಎಂಬ ನಿರೀಕ್ಷೆ ನನ್ನದು.

* ಹಾಗಾದರೆ ಮುಂದಿನ ವರ್ಷದಿಂದ ಈ ಆದೇಶ ಕಡ್ಡಾಯವೇ?
ಅದನ್ನು ಈಗಲೇ ಹೇಳಲಾಗದು. ಕಾದು ನೋಡಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT