ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ಜನಪದರ ಬಳಕೆಯಾಗಲಿ

ಕರ್ನಾಟಕ ಜಾನಪದ ವಿ.ವಿ ಘಟಿಕೋತ್ಸವದಲ್ಲಿ ವಿವೇಕ ರೈ ಪ್ರತಿಪಾದನೆ
Last Updated 31 ಮಾರ್ಚ್ 2015, 20:16 IST
ಅಕ್ಷರ ಗಾತ್ರ

ಗೊಟಗೋಡಿ (ಹಾವೇರಿ ಜಿಲ್ಲೆ): ‘ವಿಜ್ಞಾನಿಗಳು ಜನಪದರೊಂದಿಗೆ ಸೇರಿಕೊಂಡು ಸಂಶೋಧನೆ ನಡೆಸಬೇಕು. ಇದಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೋ’ ಕೃತಿ ಮಾದರಿಯಾಗಬೇಕು’ ಎಂದು ಜಾನಪದ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಇಲ್ಲಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಅವರು ಪ್ರಥಮ ಘಟಿಕೋತ್ಸವ ಭಾಷಣ ಮಾಡಿದರು.

‘ಕಸ್ತೂರಿ ರಂಗನ್‌ ವರದಿ ಜಾರಿ, ಅರಣ್ಯ ಸಂಬಂಧಿತ ಯೋಜನೆಗಳಲ್ಲಿ ಅರಣ್ಯ ವಾಸಿಗಳ ಅನುಭವ ಪಡೆದುಕೊಳ್ಳದಿರುವುದೇ ದೊಡ್ಡ ಹಿನ್ನಡೆಯಾಗಿದೆ. ಜಾನಪದವು ಜಾತಿ ಚೌಕಟ್ಟಿನಿಂದ ಹೊರಬಂದು ಎಲ್ಲ ವರ್ಗದ ಅಭಿಮಾನವಾಗಬೇಕು. ನಂಬಿಕೆ– ಆಚರಣೆಯ ಕವಚದೊಳಗೆ ಹುದುಗಿದ ಹಿಂಸೆ– ಮೌಢ್ಯ ನಿವಾರಣೆಗೆ ಅಧ್ಯಯನ ನಡೆಯಲಿ’ ಎಂದರು.

‘ರಾಜ್ಯದಲ್ಲಿ ಕೃಷಿ ಅವಸಾನದ ಅಂಚಿನಲ್ಲಿದೆ. ಜಾನಪದ ಮತ್ತು ಕೃಷಿ ಸಂಬಂಧ ಸಡಿಲಗೊಳ್ಳುತ್ತಿದೆ. ಬೃಹತ್‌ ಕೈಗಾರಿಕೆಗಾಗಿ ಕೃಷಿ ನೆಲಸಮಗೊಳ್ಳುತ್ತಿದ್ದರೆ, ಕೃಷಿಕರು ನಿರ್ಗತಿಕರಾಗುತ್ತಿದ್ದಾರೆ. ಆರ್ಥಿಕ ಅಭಿವೃದ್ಧಿಗೆ ಜಿಡಿಪಿ ನೋಡಿದರೆ ಸಾಲದು, ದೇಸಿ ಜ್ಞಾನ ಬಳಕೆಯಾಗಲಿ’ ಎಂದರು.  ‘ಅನುವಾದದ ಮೂಲ ದೇಸಿ ಜ್ಞಾನ ವಿಸ್ತರಣೆ, ‘ಜನಪದ ರಂಗಾಯಣ’ ಸ್ಥಾಪನೆ, ವಿವಿಧ ಇಲಾಖೆಗಳಲ್ಲಿ ಜನಪದ ಪದವೀಧರರಿಗೆ ಅವಕಾಶ ನೀಡಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

‘ಹೊಸ ವಿಶ್ವವಿದ್ಯಾಲಯಗಳ ನಿರ್ವಹಣೆಯಲ್ಲಿ ಸರ್ಕಾರ ತೋರುತ್ತಿರುವ ಧೋರಣೆ ಮೆಚ್ಚತಕ್ಕುದಲ್ಲ. ಕುಲಪತಿಗಳು ಸರ್ಕಾರಿ

ಗೂಗಲ್‌ನಲ್ಲಿ ಇಲ್ಲದ ಮಾಹಿತಿಯನ್ನು ಹೊಂದಿರುವ ಜನಪದ ಅಜ್ಜಿಯಂದಿರು ಇಂದು ಮರೆಯಾಗುತ್ತಿದ್ದಾರೆ. ಅವರಲ್ಲಿರುವ ಮಾಹಿತಿ ದಾಖಲಿಸುವ ಕೆಲಸ ಆಗಬೇಕು.
ಬಿ.ಎ. ವಿವೇಕ ರೈ

ಕಚೇರಿಗಳಿಗೆ ಅಲೆದಾಡುವ, ಸಣ್ಣ ಕೆಲಸಗಳಿಗೆ ಕಾಯುವ ಸ್ಥಿತಿ ನಿರ್ಮಿಸಬಾರದು. ವಿ.ವಿಗಳ ಸಮಸ್ಯೆಗಳನ್ನು ಇಲಾಖೆಗಳ ಮೂಲಕ ಪರಿಹರಿಸಬೇಕು. ಕುಲಪತಿಯನ್ನು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು’ ಎಂದರು.

ನಾಲ್ವರಿಗೆ ಚಿನ್ನದ ಪದಕ: ಅಧ್ಯಕ್ಷತೆ ವಹಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ಜನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಕ್ಯಾತನಹಳ್ಳಿ ರಾಮಣ್ಣ ಹಾಗೂ ಕಲಾವಿದೆ ಲಕ್ಷ್ಮೀ ಬಾಯಿ ಸಾಬಣ್ಣ ನೀಲಪ್ಪನವರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಒಟ್ಟು17 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮೈಸೂರಿನ ಪಿರಿಯಾಪಟ್ಟಣದ ಸಣ್ಣಯ್ಯ ಜಿ.ಎಸ್‌ (ಎಂ.ಎ), ಗದಗ ಜಿಲ್ಲೆಯ ಕಣಗಿನಹಾಳದ ರಜಿಯಾ ಬೇಗಂ ನದಾಫ (ಎಂ.ಫಿಲ್‌), ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಾವಿತ್ರಿ ಮೋದಿ (ಎಂ.ಎ) ಮತ್ತು ಹಾವೇರಿಯ ಅಭಿನಯಾ ಎಚ್‌ (ಎಂ.ಬಿ.ಎ) ಈ ನಾಲ್ವರಿಗೆ ಚಿನ್ನದ ಪದಕ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT