ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ ನಿರ್ಲಕ್ಷ್ಯ: ಪ್ರಣವ್‌ ಕಳವಳ

ಮೈಸೂರು ವಿಶ್ವವಿದ್ಯಾನಿಲಯ ಶತಮಾನೋತ್ಸವ ಉದ್ಘಾಟನೆ ಸಮಾರಂಭದಲ್ಲಿ ರಾಷ್ಟ್ರಪತಿ
Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಮೈಸೂರು: ದೇಶದ ವಿಶ್ವವಿದ್ಯಾನಿಲ ಯಗಳಲ್ಲಿ ಕುಸಿಯುತ್ತಿರುವ ಶಿಕ್ಷಣ ಗುಣಮಟ್ಟ, ಉತ್ತಮ ಪ್ರಾಧ್ಯಾಪಕರ ಕೊರತೆ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮೈಸೂರು ವಿ.ವಿ ಶತಮಾನೋತ್ಸವ ಕಾರ್ಯಕ್ರ ಮವನ್ನು ಸೋಮವಾರ ಉದ್ಘಾಟಿಸಿದ ಅವರು ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರ ಸಮೂಹ ಉದ್ದೇಶಿಸಿ ಮಾತನಾಡಿದರು.

16 ನಿಮಿಷಗಳ ಭಾಷಣದ ಆರಂಭ ದಲ್ಲಿ ಮೈಸೂರು ವಿ.ವಿ ಸ್ಥಾಪನೆಗೆ ಕಾರಣ ರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದ ಪ್ರಣವ್‌, ಬಳಿಕ ದೇಶದ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಿದರು.

ದೇಶದ ಜನಸಂಖ್ಯೆಯ ಮೂರನೇ ಎರಡರಷ್ಟು 35 ವರ್ಷ ವಯಸ್ಸಿಗಿಂತ ಕೆಳಗಿನವರು. ಹಾಗಾಗಿ, ವಿಶ್ವದಲ್ಲೇ ಮುಂಚೂಣಿಯಲ್ಲಿ ನಿಲ್ಲುವ ತಾಕತ್ತು ಭಾರತಕ್ಕಿದೆ. ಆದರೆ, ಅದನ್ನು ಕಾರ್ಯ ರೂಪಕ್ಕಿಳಿಸಲು ವಿಶ್ವದರ್ಜೆಯ ಶಿಕ್ಷಣ ವ್ಯವಸ್ಥೆ ನಿರ್ಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಆವಿಷ್ಕಾರಕ್ಕೆ ಒತ್ತು ನೀಡಿ: ಸಂಶೋಧನಾ ಚಟುವಟಿಕೆಗಳನ್ನು ಕಡ್ಡಾಯವಾಗಿ ಕೈಗೆತ್ತಿ ಕೊಳ್ಳಲು ವಿ.ವಿಗಳು ಮುಂದಾಗಬೇಕು. ದೇಶ ಎದುರಿಸುತ್ತಿರುವ ಅದೆಷ್ಟೊ ಸಮಸ್ಯೆಗಳ ಪರಿಹಾರಕ್ಕೆ ಸಂಶೋ ಧನೆಗಳು ಸಹಕಾರಿಯಾಗಲಿವೆ. ಅಂಥ ಕ್ಷೇತ್ರಗಳನ್ನು ಗುರುತಿಸಿ ಸಂಶೋಧ ನೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.

‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿ.ವಿಗಳು ಮುಂದಾಗಬೇಕು. ಆವಿಷ್ಕಾರಕ್ಕೆ ಒತ್ತು ನೀಡಬೇಕಿದೆ. ಇದರಿಂದಾಗಿ ವಿದ್ಯಾರ್ಥಿ ಗಳಲ್ಲಿ ಹೊಸ ವಿಚಾರಗಳ ಬಗ್ಗೆ ಆಸಕ್ತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಮೈಸೂರು ವಿ.ವಿ ಕೂಡ ಈ ಪ್ರದೇಶದಲ್ಲಿ ‘ಆವಿಷ್ಕಾರ ಆಂದೋಲನ’ದ ಮುಂಚೂಣಿ ವಹಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾದ ವಿ. ಶ್ರೀನಿವಾಸಪ್ರಸಾದ್‌, ಆರ್‌.ವಿ. ದೇಶಪಾಂಡೆ, ಕುಲಪತಿ ಪ್ರೊ.ಕೆ. ಎಸ್‌. ರಂಗಪ್ಪ ಹಾಗೂ ಕುಲಸಚಿವ ಪ್ರೊ.ಸಿ. ಬಸವರಾಜು ಇದ್ದರು.

ಶಂಕುಸ್ಥಾಪನೆ: ರಾಜ್ಯದ ಮೊದಲ ವಿಶ್ವವಿ ದ್ಯಾನಿಲಯ ಎಂಬ ಹೆಗ್ಗಳಿಕೆ ಹೊಂದಿ ರುವ ಮೈಸೂರು ವಿ.ವಿಗೆ ಸೋಮವಾರ 100ನೇ ಹುಟ್ಟುಹಬ್ಬದ ಸಂಭ್ರಮ.

ಶತಮಾನೋತ್ಸವಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ಪ್ರಣವ್‌ ಅವರು, ಮಾನಸಗಂಗೋತ್ರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕುವೆಂಪು ಪ್ರತಿಮೆ, ಶತಮಾನೋತ್ಸವ ದ್ವಾರ, ಶತಮಾ ನೋತ್ಸವ ಗಡಿಯಾರ ಗೋಪುರ, ಬಯಲು ರಂಗಮಂದಿರವನ್ನು ಉದ್ಘಾಟಿ ಸಿದರು. ಅಲ್ಲದೆ, ಇಂಟರ್‌್ಆ್ಯಕ್ಟಿವ್‌ ಮ್ಯೂಸಿಯಂ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಸಬರಮತಿ ಆಶ್ರಮದ ಮಾದರಿ ಹಾಗೂ ಅಂತರರಾಷ್ಟ್ರೀಯ ವಿದ್ಯಾರ್ಥಿ ಗಳ ಹಾಸ್ಟೆಲ್‌ನ ಶಂಕುಸ್ಥಾಪನೆಯನ್ನು ರಿಮೋಟ್‌ ಮೂಲಕ ನೆರವೇರಿಸಿದರು.

ನಂತರ ವಿ.ವಿ ವಿಶ್ರಾಂತ ಕುಲಪತಿ ಗಳಾದ ದೇ. ಜವರೇಗೌಡ, ಪ್ರೊ.ಸೆಲ್ವಿ ದಾಸ್‌, ಪ್ರೊ.ಎಂ. ಮಾದಯ್ಯ, ಪ್ರೊ.ಎಸ್‌. ಎನ್‌. ಹೆಗ್ಡೆ, ಪ್ರೊ.ಜೆ. ಶಶಿಧರಪ್ರಸಾದ್‌, ಪ್ರೊ.ವಿ.ಜಿ. ತಳವಾರ ಹಾಗೂ ಹಾಲಿ ಕುಲಪತಿ ರಂಗಪ್ಪ ಅವರನ್ನು ಸನ್ಮಾನಿ ಸಿದರು.

ದೇಶದ ಹೆಸರಲ್ಲಿ ವಿಶೇಷ ಪೂಜೆ
ಮಧ್ಯಾಹ್ನ 1.50ಕ್ಕೆ ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಸ್ವಾಗತಿಸಿದರು.

ಬಳಿಕ ಆಡಳಿತ ತರಬೇತಿ ಸಂಸ್ಥೆ ಅತಿಥಿಗೃಹಕ್ಕೆ ತೆರಳಿ 15 ನಿಮಿಷ ವಿಶ್ರಾಂತಿ ಪಡೆದರು. ನಂತರ ಬಿಳಿ ಪಂಚೆ ಹಾಗೂ ರೇಷ್ಮೆ ಶಲ್ಯ ಹೊದ್ದು ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೇಶದ ಹೆಸರಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ತೀರ್ಥ ಸ್ವೀಕರಿಸಿದರು. ಗರ್ಭಗುಡಿಯನ್ನು ಒಂದು ಸುತ್ತು ಹಾಕಿ ದೇವಿಗೆ ನಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT