ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಿಗೇಕೆ ಹೆಚ್ಚು ವೇತನ?

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರು ನೀಡಿರುವ ಸಂಸದರ ಖರ್ಚುವೆಚ್ಚದ ವಿವರಣೆ ಹಾಗೂ ಅವರ ದುಃಸ್ಥಿತಿ (ಸಂಗತ, ಅ. 7) ಓದಿದವರಿಗೆ ಮರುಕ ಉಂಟಾಗಲೇಬೇಕು. ಪಾಪ, ಸಮಾಜ ಸೇವೆಗೆಂದು ಹೋಗುವವರದ್ದು ಎಂಥ ಪಾಡು! ಎಲ್ಲವನ್ನೂ ನಮ್ಮ ಮುಂದಿರಿಸಿದ ಅವರ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕಲ್ಲವೇ?

ಪತ್ನಿ, ಮಕ್ಕಳನ್ನು ಅಧಿವೇಶನಕ್ಕೆ ಕರೆದೊಯ್ಯಲು, ಅತಿಥಿ ಸೇವೆ ಮಾಡಲು, ಮದುವೆ-ಮುಂಜಿ ಇತ್ಯಾದಿಗಳಿಗೆ ಉಡುಗೊರೆ ಕೊಡಲು ತಗಲುವ ಖರ್ಚನ್ನು  ಅವರನ್ನು ಆರಿಸಿ ಕಳಿಸಿದ ನಾವಲ್ಲದೆ ಯಾರು ಭರಿಸಬೇಕು ಸ್ವಾಮಿ? ಸರ್ಕಾರಿ ಶಾಲಾ ಕಾಲೇಜು ಜನಸಾಮಾನ್ಯರಿಗೆ ಸರಿಯಪ್ಪ. ಅಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸಿದರೆ, ಎಲ್ಲರಿಗಿಂತ ಮೇಲಿರುವ ಸಂಸದರ ಪ್ರತಿಷ್ಠೆ ಏನಾಗಬೇಡ?

ಸಂಸದರಾಗಿ ವೈಯಕ್ತಿಕ ಬದುಕನ್ನೇ ಕಳೆದುಕೊಳ್ಳುವವರಿಗೆ ₹ 3 ಲಕ್ಷ ಮಾಸಿಕ ವೇತನ  ಏನೇನೂ ಸಾಲದು. ದೇಶಕ್ಕೆ ಅನ್ನ ಕೊಡುವ ರೈತ ಆತ್ಮಹತ್ಯೆ ಮಾಡಿಕೊಂಡರೇನು? ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕ ಎರಡು ಹೊತ್ತು ಉಣ್ಣದಿದ್ದರೇನು? ಅವರಿಲ್ಲದಿದ್ದರೂ ಯಾವ ನಷ್ಟವೂ ಇಲ್ಲ. ಆದರೆ ಎಲ್ಲವನ್ನೂ ತ್ಯಜಿಸಿ ಸಂಸದರಾಗಿರುವವರು ಚೆನ್ನಾಗಿ ಬಾಳಿ ಬದುಕ ಬೇಡವೇ? ಹಾಗಾಗಿ ನಂತರವೂ ಅವರಿಗೆ ಪಿಂಚಣಿ ಬೇಕೇ ಬೇಕು. ಇದನ್ನು ನಾವೆಲ್ಲರೂ ಸಮರ್ಥಿಸಲೇಬೇಕು.

ಈ ಹಿಂದೆ ಸಂಸದರಾಗಿದ್ದ, ಪಶ್ಚಿಮ ಬಂಗಾಳದ ನನ್ನ ವೈದ್ಯ ಮಿತ್ರರೊಬ್ಬರು ಅಮಾಯಕರು. ಅವರು ಹೀಗೆಲ್ಲ ಯೋಚಿಸಲೇ ಇಲ್ಲ. ಎಲ್ಲರೂ ವೇತನ ಹೆಚ್ಚು ಮಾಡಿ ಎಂದಾಗ, ಖಂಡಿತ ಬೇಡ ಎಂದದ್ದು ಮಾತ್ರವಲ್ಲದೆ, ಕೊನೆಗೂ ಹೆಚ್ಚಾದಾಗ, ಆ ಹೆಚ್ಚುವರಿಯನ್ನು ತಮ್ಮ ಕ್ಷೇತ್ರದ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನಾಗಿ ನೀಡಿದರು. ಅವರಿಗೆ ಅದು ಸಮಾಜ ಸೇವೆಯಾಗಿರಲಿಲ್ಲ, ಕರ್ತವ್ಯವಾಗಿತ್ತು. ಎಲ್ಲರೂ ಹೀಗಿರಲು ಸಾಧ್ಯವಿಲ್ಲ ಬಿಡಿ. ಆದರೂ ಪ್ರತಾಪ್‌ ಸಿಂಹ ಅವರ ಬಿಚ್ಚು ನುಡಿಗಳನ್ನು ಮೆಚ್ಚಿಕೊಳ್ಳಲೇಬೇಕಾಗುತ್ತದೆ.
-ಡಾ. ಕೆ.ಸುಧಾ,
ಬೆಂಗಳೂರು

***
ಕೇಳಿದ್ದು ತಪ್ಪಲ್ಲ; ಹಕ್ಕು
ಸಿಂಹ ಅವರು ಹೆಚ್ಚಿನ ಸಂಬಳ ಕೇಳಿರುವ ವಿಷಯದ ಬಗ್ಗೆ ಚರ್ಚಿಸುವುದು ಅಥವಾ ಟೀಕಿಸುವಂತಹುದು ಏನೂ ಇಲ್ಲ. ಅವರು ಪ್ರಾಮಾಣಿಕವಾಗಿ ತಮ್ಮ ಭತ್ಯೆಹೆಚ್ಚಿಸಬೇಕೆಂದು ಕೇಳಿದ್ದಾರೆ. ಅದು ಅವರ ಹಕ್ಕು ಕೂಡ. ಒಬ್ಬ ಶಾಸಕ ಅಥವಾ ಸಂಸತ್ ಸದಸ್ಯ ಎಂದಾಕ್ಷಣ ಅವರು ಒಂದು ಕ್ಷೇತ್ರವನ್ನು, ಅಲ್ಲಿಯ ಜನರನ್ನು ಪ್ರತಿನಿಧಿಸುವ ಪ್ರತಿನಿಧಿ. ಅವರು ಪ್ರಾಮಾಣಿಕವಾಗಿ ಇರಬೇಕೆಂದು ಜನ ಬಯಸುವುದು ಸಹಜ. ಹಾಗೆ ಇರಬೇಕೆಂದರೆ ಅವರಿಗೆ ಹಣದ ಕೊರತೆ ಇರಬಾರದು.

ಜನಪ್ರತಿನಿಧಿಯನ್ನು ಜನ ನೋಡುವ ದೃಷ್ಟಿಯೇ ಬೇರೆ. ಅವರಿಗೂ ಸಾಮಾನ್ಯರಂತೆ ಬದುಕು ಇದೆ ಎಂದು ಯಾರೂ ತಿಳಿದುಕೊಳ್ಳುವುದಿಲ್ಲ. ಸಿಂಹ ಅವರು ಹೇಳಿದಂತೆ ಒಬ್ಬ ಜನಪ್ರತಿನಿಧಿ ಕೌಟುಂಬಿಕ ಜೀವನದೊಂದಿಗೆ ದಿನನಿತ್ಯ ಅನೇಕರನ್ನು ವಿವಿಧ ರೀತಿಯಲ್ಲಿ ನಿಭಾಯಿಸಬೇಕಾಗುತ್ತದೆ. ಇದಕ್ಕೆಲ್ಲ ಹಣ ಬೇಕು. ಕ್ಷೇತ್ರದ ಜನ ಹಬ್ಬ, ಹರಿದಿನ, ಸಾರ್ವಜನಿಕ ಉತ್ಸವ, ಸಮಾರಂಭದ ಹೆಸರಿನಲ್ಲಿ  ದೇಣಿಗೆ ಅಥವಾ ಇತರ ರೂಪದಲ್ಲಿ ಸಹಾಯ ಕೋರಿ ಬರುತ್ತಾರೆ. ಯಾರನ್ನೂ ಬರಿಗೈಯಲ್ಲಿ ಕಳುಹಿಸಲು ಸಾಧ್ಯವಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಮೀಸಲಿರುವ ಅನುದಾನದಿಂದ ಇದನ್ನೆಲ್ಲ ಬಯಸುವುದು ಹಾಗೂ ಅವರು ಕೊಡುವುದು ತಪ್ಪು. ಇಂತಹ ಸಂದಿಗ್ಧ ಪರಿಸ್ಥಿತಿ ಬರುವುದರಿಂದಲೇ ರಾಜಕಾರಣಿಯೊಬ್ಬ  ಭ್ರಷ್ಟನಾಗುವುದು.

ಜನರಿಂದ ಚುನಾಯಿತನಾಗುವ ಒಬ್ಬ ಪ್ರತಿನಿಧಿ ಜನಸೇವಕನ ಹೆಸರಿನಲ್ಲಿ ಬಿಟ್ಟಿಯಾಗಿ ಜನಸೇವೆ ಮಾಡಬೇಕೇ? ಅನುದಾನ ಕೊಳ್ಳೆ ಹೊಡೆದು ಜನಸೇವೆಗೆ ಮುಂದಾಗಬೇಕೇ? ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧನದು ದೇಶಸೇವೆ ಎಂದು ಕರೆದರೂ ಆತ ತನ್ನ ಕರ್ತವ್ಯಕ್ಕಾಗಿ ಸಂಬಳ ಪಡೆಯುತ್ತಾನೆ. ಜನಪ್ರತಿನಿಧಿಗಳೂ ಅಷ್ಟೆ, ಜನಸೇವೆ ಹೆಸರಿನಲ್ಲಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕಾದರೆ ತೃಪ್ತಿಕರ ವೇತನ ಅಗತ್ಯ. ಅವಶ್ಯಕತೆಗಿರುವಷ್ಟು ಸಂಬಳ ಕೇಳಿರುವುದರಲ್ಲಿ ಅನ್ಯಥಾ ಭಾವಿಸುವ ಅಥವಾ ಹೀಯಾಳಿಸುವ ಅವಶ್ಯಕತೆಯಿಲ್ಲ.
-ವಸಂತ್ ಕುಮಾರ್ ಕೆ.,
ಸಿದ್ಧಾಪುರ, ಕೊಡಗು ಜಿಲ್ಲೆ

***
ಪಂಡಿತರೆಂದರೆ...

ಪ್ರತಾಪ್‌ ಸಿಂಹ ‘ವೈಯಕ್ತಿಕ ಬದುಕನ್ನೇ ಕಳೆದುಕೊಂಡು ಜನಸೇವೆ ಮಾಡುತ್ತಿದ್ದೇನೆ’ ಎಂಬರ್ಥದ ಮಾತನ್ನಾಡಿದ್ದಾರೆ. ಸಂಸದರಿಗೂ ಇತರರಂತೆ ಕುಟುಂಬ  ಎಂಬುದಿರುತ್ತದೆ. ಸಾರ್ವಜನಿಕ ಜೀವನದ ಜೊತೆ ಆ ಜೀವನವನ್ನೂ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಆದರೆ ಅದನ್ನು ಹೇಳಿಕೊಳ್ಳುವುದು ಎಷ್ಟು ಸರಿ?

ಮದುವೆ-ಮುಂಜಿಗಳಿಗೆ ಹೋಗಿ ಹೂಗುಚ್ಛ ಕೊಡುವುದಕ್ಕೂ ₹ 250-300  ಬೇಕೆಂದು ಹೇಳಿದ್ದಾರೆ. ಬೊಕ್ಕೆ ಕೊಡದೆ ಬರೀ ಹಾರೈಸಿದರೂ ಅವರು  ಕಳೆದುಕೊಳ್ಳುವಂತಹದ್ದೇನೂ ಇಲ್ಲ. ವೋಟು ಹಾಕುವಾಗ ಜನ ಇವರು ಯಾರದ್ದೆಲ್ಲ ಹೆಣಕ್ಕೆ ಹಾರ ಹಾಕಿದ್ದಾರೆ, ಯಾರಿಗೆಲ್ಲ ಕಾಫಿ ಕೊಟ್ಟಿದ್ದಾರೆ ಎಂಬುದನ್ನು ನೋಡುವುದಿಲ್ಲ. ಅಂತಿಮವಾಗಿ ನೋಡುವುದು ಅವರು ಮಾಡಿರುವ ಕೆಲಸವನ್ನಷ್ಟೇ. ‘ದೇವರು ಅಂತಹ ಸ್ಥಾನ ಕೊಟ್ಟರೆ ಖಂಡಿತವಾಗಿಯೂ ಜನ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತಹ ವ್ಯವಸ್ಥೆ ಸೃಷ್ಟಿಸುತ್ತೇನೆ’ ಎಂದಿದ್ದಾರೆ.

ಸ್ವಾಮಿ, ನಿಮ್ಮನ್ನು ಪ್ರಧಾನಮಂತ್ರಿ ಮಾಡಿದರೆ ಮಾತ್ರ ಅಂತಹ ವ್ಯವಸ್ಥೆ ಸೃಷ್ಟಿಸಲು ಸಾಧ್ಯವಾ? ಸಂಸದನಾಗಿ ಸ್ವಲ್ಪ ಸಮಯ ಮೀಸಲಿಟ್ಟು ಕಾಳಜಿ ತೋರಿದರೂ ಅದು ಸಾಧ್ಯವಿದೆ. ಅಷ್ಟಕ್ಕೂ ಸರ್ಕಾರಿ ಶಾಲೆಗೆ ಸೇರಿಸಲೇ ಬಾರದೆನ್ನುವಂತಹ ಪರಿಸ್ಥಿತಿಯಂತೂ ಖಂಡಿತ ಇಲ್ಲ. ಯಾಕೆ, ನಮ್ಮಲ್ಲಿ ಯಾರೂ ಸರ್ಕಾರಿ ಶಾಲೆಗೆ ಹೋಗಿ ಎಂಜಿನಿಯರ್, ಡಾಕ್ಟರ್‌ಗಳು ಆಗಲಿಲ್ಲವೇ? ನಮ್ಮ ರಾಜ್ಯದಲ್ಲೇ ಅದೆಷ್ಟೋ ಹಳ್ಳಿಯ ಜನರು ಈಗಲೂ ಅವಲಂಬಿಸಿರುವುದು ಸರ್ಕಾರಿ  ಶಾಲೆಯನ್ನೇ. ನಮ್ಮನ್ನಾಳುವವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಅಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಿ ಜನಸಾಮಾನ್ಯರಿಗೆ ಮಾದರಿಯಾಗಬೇಕು. ಅದು ಬಿಟ್ಟು ಜನಪ್ರತಿನಿಧಿಗಳಾದ ಇವರೇ ಸರ್ಕಾರಿ ಶಾಲೆಗಳ ಬಗ್ಗೆ ಇಂತಹ ಮಾತುಗಳನ್ನಾಡಿದರೆ ಹೇಗೆ?

ತಮ್ಮನ್ನು ಪ್ರಶ್ನಿಸಿದವರನ್ನು ಬೂತ್‌ಗೆ ಬಂದು ಮತದಾನ ಮಾಡಲು ಸೋಮಾರಿತನ ಪ್ರದರ್ಶಿಸುವ, ಮತದಾನಕ್ಕೆ ಆನ್‌ಲೈನ್‌ ವೋಟಿಂಗ್ ಬೇಕೆಂದು ಪ್ರತಿಪಾದಿಸುತ್ತಾ, ಜನಪ್ರತಿನಿಧಿಗಳಿಗೆ ಬೋಧನೆ ಮಾಡುವ ಫೇಸ್‌ಬುಕ್‌ ಪಂಡಿತರು ಎಂದಿದ್ದಾರೆ. ನರೇಂದ್ರ ಮೋದಿಯವರೇ ಡಿಜಿಟಲೀಕರಣದಲ್ಲಿ ಉತ್ಸಾಹ ತೋರುತ್ತಿರುವಾಗ ಆನ್‌ಲೈನ್‌ ವೋಟಿಂಗ್ ಪ್ರತಿಪಾದಿಸುವುದರಲ್ಲಿ ತಪ್ಪೇನಿದೆ? ಅಲ್ಲದೆ ಹೀಗೆ ಕೇಳಿದ್ದು  ಇಲ್ಲೇ ಊರಲ್ಲಿರುವ ಯುವಕರೆಲ್ಲ. ಎಲ್ಲೋ ಅಮೆರಿಕ, ಯುರೋಪಿನಲ್ಲಿ ಕೆಲಸದಲ್ಲಿರುವ ಭಾರತೀಯರೆಂಬುದು ನೆನಪಿರಲಿ.

ಇವರು ಚುನಾವಣೆಗೆ ನಿಂತಾಗ ಹಳ್ಳಿ ಜನ ಇವರ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿದ್ದು ಇದೇ ಫೇಸ್‌ಬುಕ್ ಪಂಡಿತರ ಮೂಲಕವೇ ಎಂಬುದನ್ನೂ ಮರೆಯದಿರಲಿ. ಪ್ರತಾಪರ ಬಗ್ಗೆ ನನಗೇನೂ ದ್ವೇಷವಿಲ್ಲ. ಮೇಲಾಗಿ ಅವರನ್ನಾರಿಸಿದ ಪಕ್ಷದ ಬೆಂಬಲಿಗನೇ ನಾನು. ತಮ್ಮ ಬರಹಗಳಿಂದ ಲೋಕಕ್ಕೆಲ್ಲ ಬೋಧನೆ ಮಾಡಿದ ಅವರ  ಉದ್ದೇಶಶುದ್ಧಿಯ ಮೇಲೆ ಪ್ರಶ್ನೆಗಳೇಳಬಾರದು ಎಂಬುದಷ್ಟೇ ನನ್ನ ಕಾಳಜಿ.
-ಶಿವಪ್ರಸಾದ್ ಭಟ್ ಟಿ.,
ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT