ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಪಾಲಿಗೆ ಸಮಸ್ಯೆಗಳೇ ಸವಾಲು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರದಕ್ಷಿಣೆ
Last Updated 23 ಏಪ್ರಿಲ್ 2014, 10:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇಲ್ಲಿನ ಲೋಕಸಭೆ ಕ್ಷೇತ್ರದ ಭೌಗೋ­ಳಿಕ ವ್ಯಾಪ್ತಿಯೇ ಸಂಸದರ ಪಾಲಿಗೆ ಸವಾಲು. ಸಂಬಂಧಿಕರು, ಕೊಡು–ಕೊಳ್ಳು, ವ್ಯಾಪಾರ– ವ್ಯವಹಾರ ಹೀಗೆ ಹಲವು ಕಾರಣಕ್ಕೆ ಉಳಿದೆಡೆಯ ಬೆಳವಣಿಗೆ ಇಲ್ಲಿಗೂ ಮುಖ್ಯ. ಅಲ್ಲಿ ಬೀಸಿದ ಮಳೆ ಇಲ್ಲಿಗೆ ಸಂಭ್ರಮ ತಂದರೆ, ಅಲ್ಲಿನ ಬಿಸಿಲು ಇಲ್ಲಿನವರ ನೆತ್ತಿ ಸುಡುವು­ದುಂಟು. ಈ ಹಿನ್ನೆಲೆಯಲ್ಲಿ ಇಡೀ ಲೋಕಸಭೆ ಕ್ಷೇತ್ರದ ಬೇಕುಗಳ ಬಗ್ಗೆ ಬೆಳಕು ಹರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

‘ಎಂದಿನಂತೆ ಈ ವರ್ಷವೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದವರ ಭಾಷಣ ಆಲಿಸಿದೆವು. ಕರಪತ್ರಗಳನ್ನು ಓದಿದೆವು. ಮಾತು­ಗಳನ್ನು ನಂಬಿ ಮತ ಕೂಡ ಚಲಾಯಿಸಿದೆವು. ಕಣ್ಣೆದುರಿಗೆ ನೂರಾರು ಸಮಸ್ಯೆಗಳಿದ್ದರೂ ಬದ­ಲಾವಣೆ ಗಾಳಿ ಬೀಸಲಿದೆ ಎಂಬ ಅದಮ್ಯ ನಿರೀಕ್ಷೆಯಿದೆ. ವರ್ಷಗಳಿಂದ ಬಾಕಿಯಿರುವ ಸಮಸ್ಯೆ ಬಗೆಹರಿಯುವುದೇ ಅಥವಾ ಹೊಸ ಸಮಸ್ಯೆ–ಸಂಕಷ್ಟಗಳು ಹುಟ್ಟಿಕೊಳ್ಳುವವೇ ಗೊತ್ತಿಲ್ಲ’.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಲ್ಲಿ ಒಂದು ಸುತ್ತು ಹಾಕಿದರೆ, ಇಂತಹ ಮಾತುಗಳು ಪದೇ ಪದೇ ಕೇಳಿ ಬರುತ್ತವೆ. ಇಡೀ ಕ್ಷೇತ್ರ ಬಯಲುಸೀಮೆ ಪ್ರದೇಶ. ನೀರಿನ ಸಮಸ್ಯೆ ವ್ಯಾಪಕವಾಗಿದೆ. ಶಾಶ್ವತ ನೀರಾವರಿ ಯೋಜನೆ ಚುನಾವಣೆ ವಿಷಯ ಆಗುತ್ತಲೇ ಬಂದಿದೆ. ಆದರೆ ಗಮನಾರ್ಹ ಸಂಗತಿಯೆಂದರೆ ಇಲ್ಲಿ ನೀರಿನ ಸಮಸ್ಯೆ ಅಷ್ಟೇ ಅಲ್ಲ, ಇತರ ಸಂಕಷ್ಟಗಳೂ ತೀವ್ರವಾಗಿ ಕಾಡುತ್ತಿವೆ.

ಅವ್ಯವಸ್ಥಿತ ಬಸ್‌ ನಿಲ್ದಾಣ, ಅಸಮರ್ಪಕ ತ್ಯಾಜ್ಯ ವಿಲೇವಾರಿ, ಮಲಿನ ಪರಿಸರ, ಶೌಚಾ­ಲಯ ಕೊರತೆ, ವಿಸ್ತರಣೆ ಕಾಣದ ಮುಖ್ಯ­ರಸ್ತೆಗಳು, ಗ್ರಾಮೀಣ ಪ್ರದೇಶದ ಸಮಗ್ರ ಅಭಿ­ವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳನ್ನು ಆಯಾ ಕ್ಷೇತ್ರದ ಜನರು ಎದುರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ವಿವಿಧೆಡೆ ‘ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭದಲ್ಲಿ ಜನರು ತಮ್ಮ ಕ್ಷೇತ್ರದಲ್ಲಿನ ಕುಂದು–ಕೊರತೆಗಳನ್ನು ಒಂದೊಂದಾಗಿ ತೋಡಿ­ಕೊಂಡರು. ಕೆಲವರು ಕೊಳವೆಬಾವಿಗಳು ಬತ್ತು­ತ್ತಿರುವ ವಿಷಯ ತಿಳಿಸಿದರೆ, ವಾರಕ್ಕೊಮ್ಮೆ ನೀರು ಪೂರೈಸುವುದರಿಂದ ನೀರಿಗಾಗಿ ಪರಿತಪಿ­ಸುವಂತಾಗಿದೆ ಎಂದರು.

ಬಸ್‌ ನಿಲ್ದಾಣವೇ ಇಲ್ಲ: ಹೊಸಕೋಟೆಯಲ್ಲಿ ಪ್ರತ್ಯೇಕ ಬಸ್‌ ನಿಲ್ದಾಣ ಇಲ್ಲ, ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಬಸ್‌ ನಿಲ್ದಾಣ­ವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸದ್ಬಳಕೆಯಾಗ­ದಿರುವ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದರು. ಸ್ವಚ್ಛ ಪರಿಸರ ಕಾಯ್ದುಕೊಳ್ಳುವ ಬಗ್ಗೆ ತಿಳಿ ಹೇಳ­ಲಾಗುತ್ತದೆ. ಆದರೂ ಪರಿಸರ ಸಂರಕ್ಷಣೆಗಾಗಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸು­ವು­ದಿಲ್ಲ ಎಂಬ ದೂರುಗಳು ಸಹ ಕೇಳಿ ಬಂದವು.

‘ದೇಶ ಮತ್ತು ರಾಜ್ಯದಲ್ಲಿ ಎಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು ನಡೆದರೂ ಹೊಸಕೋಟೆಯಲ್ಲಿ ಮಾತ್ರ ವಿಶಾಲ ಪ್ರಾಂಗಣದಲ್ಲಿ ಈವರೆಗೆ ಬಸ್‌ ನಿಲ್ದಾಣ ನಿರ್ಮಿಸಿಲ್ಲ. ಬೆಂಗಳೂರಿನ ಭಾಗವಾದ ಹೊಸಕೋಟೆ ಮೂಲಕ ರಾಷ್ಟ್ರೀಯ ಹೆದ್ದಾರಿ ಮತ್ತು ಫ್ಲೈಓವರ್‌ ಹಾದು ಹೋಗುತ್ತದೆ. ಆದರೆ ವರ್ಷಗಳೇ ಕಳೆದರೂ ಇಲ್ಲಿ ಇದುವರೆಗೆ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಿಲ್ಲ ಮತ್ತು ನಿಲ್ದಾಣವನ್ನೂ ಸಹ ನಿರ್ಮಿಸಿಲ್ಲ’ ಎಂದು ಹೊಸಕೋಟೆ ನಿವಾಸಿ ಶಿವಕುಮಾರ್‌ ತಿಳಿಸಿ­ದರು.

ಬಸ್‌ ಶೆಲ್ಟರ್ ವ್ಯವಸ್ಥೆಯೂ ಇರದ ಕಾರಣ ಜನರು ಮಳೆ ಮತ್ತು ಬಿಸಿಲು ಸಹಿಸಿಕೊಂಡೇ ಇಲ್ಲಿ ನಿಲ್ಲುತ್ತಾರೆ. ಅತ್ತ ಫ್ಲೈಓವರ್‌ ಕೆಳಗೆ ಹೋಗಲು ಸಾಧ್ಯವಾಗುವುದಿಲ್ಲ. ಅಲ್ಲಿ ಮನ ಬಂದ ಕಡೆ ಆಟೊರಿಕ್ಷಾ, ಕಾರು ಮತ್ತು ಇತರ ವಾಹನಗಳು ನಿಲುಗಡೆ ಆಗಿರುತ್ತವೆ. ಕೆಲ ಬಾರಿ­ಯಂತೂ ನಮ್ಮ ಕ್ಷೇತ್ರಕ್ಕೆ ಜನಪ್ರತಿನಿಧಿಗಳು ತೀವ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬಂತೆ ಭಾಸವಾಗು­ತ್ತದೆ ಎಂದು ಅವರು ತಿಳಿಸಿದರು.

ಈ ಎಲ್ಲ ಸಮಸ್ಯೆಗಳನ್ನು ನೋಡಿರುವ ಫ್ಲೈ­ಓವರ್‌ ಸುತ್ತಮುತ್ತಲಿನ ಅಂಗಡಿ–ಮುಂಗಟ್ಟು­ಗಳ ಮಾಲೀಕರು ತಾವೇ ಸ್ವತಃ ಬಸ್‌ ಶೆಲ್ಟರ್‌ ನಿರ್ಮಿಸಲು ತೀರ್ಮಾನಿಸಿದ್ದಾರೆ. ‘ಬಸ್ ಪ್ರಯಾ­ಣಿಕ­ರಿಗೆ ಕಾಡುತ್ತಿರುವ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಜನಪ್ರತಿನಿಧಿಗಳಿಗೆ ಹಲ ಬಾರಿ ಮನವಿ­ಪತ್ರ ಸಲ್ಲಿಸಿದ್ದೇವೆ. ಹೀಗಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ನಾವೇ ಹಣ ಹೊಂದಿಸಿಕೊಂಡು ಬಸ್‌ ಶೆಲ್ಟರ್‌ ನಿರ್ಮಿ­ಸಲು ಚಿಂತನೆ ನಡೆಸಿದ್ದೇವೆ’ ಎಂದು ಅವರು ತಿಳಿಸಿದರು.

ನಿಲ್ದಾಣವಿದ್ದರೂ ಬಸ್ ಬರಲ್ಲ: ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯ ವಿಜಯಪುರದಲ್ಲಿ ಇದ­ಕ್ಕಿಂತ ಭಿನ್ನ ಪರಿಸ್ಥಿತಿಯಿದೆ. ‘ನಮ್ಮೂರಿನಲ್ಲಿ ಬಸ್‌ ನಿಲ್ದಾಣವಿದೆ. ಆದರೆ ಪ್ರಯಾಣಿಕರ ಅನು­ಕೂಲಕ್ಕೆ ತಕ್ಕಂತೆ ಸಾಕಷ್ಟು ಸಂಖ್ಯೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿಲ್ಲ. ಬೆಳಿಗ್ಗೆ 7 ರಿಂದ 10 ಗಂಟೆಯವರೆಗಿನ ಅವಧಿಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರ ಪಾಡು ಹೇಳತೀರದು. ಒಂದು ಬಸ್‌ನಲ್ಲಿ ಎರಡು ಬಸ್‌ಗಳಷ್ಟು ಜನರು ತುಂಬಿಕೊಂಡು  ಪ್ರಯಾಣ ಬೆಳೆಸು­ತ್ತಾರೆ’ ಎಂದು ವಿಜಯಪುರದ ನಿವಾಸಿ ಜಯ­ರಾಮ ತಿಳಿಸಿದರು.

‘ಸಕಾಲಕ್ಕೆ ಬಸ್‌ ಸಿಗದೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ನೌಕ­ರರು ಸಹ ಕಚೇರಿಗೆ ಸರಿಯಾದ ಸಮಯಕ್ಕೆ ಕಚೇರಿ ತಲುಪಲು ಸಾಧ್ಯವಾಗದೇ ಪರದಾಡಿ­ದ್ದಾರೆ. ಬಸ್‌ಗಳ ಕೊರತೆ ನೀಗಿಸುವಂತೆ ಒತ್ತಾ­ಯಿಸಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ವ್ಯವ­ಸ್ಥಾಪಕರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ತಿಳಿಸಿದರು.

ಮೂಲಸೌಕರ್ಯ ಕೊರತೆ: ನೆಲಮಂಗಲದಲ್ಲಿ ಒಳಚಂಡಿ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ತ್ಯಾಜ್ಯ ವಿಲೇವಾರಿ ನಿವಾರಣೆಗೆ ಸೂಕ್ತ ರೀತಿಯ ಪರಿಹಾರ ಕಂಡು ಹಿಡಿದಿಲ್ಲ. ಎಲ್ಲಿ ಬೇಕೆಂದರಲ್ಲಿ ತಿಪ್ಪೆಗುಂಡಿ ಮತ್ತು ಮಲಿನ ಪರಿಸರ ಆವರಿಸಿ­ಕೊಂಡಿರುವ ಕಾರಣ ಜನರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಹಲವು ವರ್ಷಗಳಿಂದ ಹಿಂದುಳಿದ ತಾಲ್ಲೂ­ಕೆಂದೇ ಪರಿಗಣಿಸಲಾಗಿದ್ದು, ಅಭಿವೃದ್ಧಿಯ ಲಕ್ಷಣಗಳು ಕಾಣುತ್ತಿಲ್ಲ ಎಂದು ನಿವಾಸಿ ಗಂಗಪ್ಪ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಕಿರಿದಾದ ರಸ್ತೆಗಳು ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಯಿದ್ದರೆ, ಬಾಗೇಪಲ್ಲಿಯಲ್ಲಿ ವಿಷಕಾರಿ ಫ್ಲೋರೈಡ್ ಅಂಶವುಳ್ಳ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಆತಂಕವಿದೆ. ಗೌರಿಬಿದನೂರಿನಲ್ಲಿ ಕಿರಿದಾದ ರಸ್ತೆಗಳು ವಾಹನಗಳ ಸಂಚಾರ ದುಸ್ತರಗೊಳಿ­ಸಿದ್ದರೆ, ಯಲಹಂಕದಲ್ಲೂ ವಾಹನಗಳ ಸಂಚಾರ ಅವ್ಯವಸ್ಥೆ ಬಗ್ಗೆ ಜನರಿಗೆ ಬೇಸರವಿದೆ. ದೊಡ್ಡ­ಬಳ್ಳಾಪುರದಲ್ಲಿ ರೇಷ್ಮೆ ಕಾರ್ಮಿಕರು ಮತ್ತು ನೇಕಾರರು ಸಂಕಷ್ಟ ಅನುಭವಿಸಿದರೆ, ಟಿಪ್ಪು ಸುಲ್ತಾನ್‌ ಜನಿಸಿದ ದೇವನಹಳ್ಳಿ ಐತಿಹಾಸಿಕ ಪ್ರಸಿದ್ಧ ನಗರಿಯಾಗಿ ಅಭಿವೃದ್ಧಿ ಆಗದಿರುವ ಬಗ್ಗೆ ಜನರಲ್ಲಿ ವಿಷಾದವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT