ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಚಯದ ‘ಸಂಚಿ’

Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

ನಾವು ಬದುಕುತ್ತಿರುವ ಈ ಸಾಮಾಜಿಕ ಪರಿಸರದಲ್ಲಿ ಎಷ್ಟೆಲ್ಲ ಜ್ಞಾನಶಾಖೆಗಳಿವೆ. ಆದರೆ ಅವುಗಳಲ್ಲಿ ದಾಖಲೆಯಾಗಿ ಉಳಿಯುವುದು, ಮುಂದಿನ ಪೀಳಿಗೆಗೂ ದೊರೆಯುವುದು ಕೆಲವೇ ಕೆಲವು. ಸಾಂಸ್ಕೃತಿಕ ದಾಖಲೀಕರಣಕ್ಕಾಗಿಯೇ ಕೆಲವು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆಯಾದರೂ ಅವುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಹರಸಾಹಸದ ಕೆಲಸ. ಸುಲಭ ಬಳಕೆಗೆ ಲಭ್ಯವಿಲ್ಲದ ಕಾರಣಕ್ಕೆ ಅವು ಜನರಿಂದ ದೂರವಾಗಿ ಉಳಿದಿವೆ. ದಾಖಲೆಗಳ ಅತಿಯಾದ ರಕ್ಷಣೆಯೂ ಅವುಗಳು ಜನಮಾನಸದಿಂದ ದೂರವಾಗಿ ಪರೋಕ್ಷವಾಗಿ ನಾಶವಾಗಲು ಕಾರಣವಾಗಬಹುದು.

ಸಾಂಸ್ಕೃತಿಕ ದಾಖಲೆಗಳನ್ನು ರಕ್ಷಿಸುತ್ತೇವೆ ಎಂಬ ಸೋಗಿನಲ್ಲಿ ಅವುಗಳನ್ನು ಕೋಣೆಯಲ್ಲಿ ತುಂಬಿ ಬೀಗ ಹಾಕಿಟ್ಟುಬಿಟ್ಟರೆ ಏನು ಮಾಡಿದಂತಾಯ್ತು? ಅದರ ಬದಲಿಗೆ ಅವುಗಳನ್ನು ಜನರ ನಡುವೆ ಇಟ್ಟರೆ ಜನರೇ ಅದನ್ನು ಉಳಿಸಿಕೊಳ್ಳುತ್ತಾರೆ. ಜನಪದದ ಎಷ್ಟೋ ಕಲೆಗಳು ತಲತಲಾಂತರದಿಂದ ಉಳಿದುಕೊಂಡಿರುವುದು ಹಾಗೆ ತಾನೆ? ಹೀಗೆ ಜನರಿಂದಲೇ ಸಾಂಸ್ಕೃತಿಕ ದಾಖಲೆಗಳನ್ನು ಪಡೆದುಕೊಂಡು ಮರಳಿ ಜನರಿಗೆ ನೀಡುವ ವಿಶಿಷ್ಟ ಪ್ರಯತ್ನದಲ್ಲಿ ತೊಡಗಿಕೊಂಡಿದೆ ‘ಸಂಚಿ ಪ್ರತಿಷ್ಠಾನ’. ಜನಪದ, ಶಾಸ್ತ್ರೀಯ ಹಾಗೂ ಇತರ ಜ್ಞಾನ ಮೂಲಗಳನ್ನು ದಾಖಲಿಸುವುದು  ಮತ್ತು ಈ ರೀತಿಯ ದಾಖಲೀಕರಣದ ಕುರಿತು ಜಾಗೃತವಾಗಿರುವ ಸಮುದಾಯವನ್ನು ರೂಪಿಸುವುದು ಈ ಪ್ರತಿಷ್ಠಾನದ ಮುಖ್ಯ ಉದ್ದೇಶ.

‘ಸಂಚಿ’ಯನ್ನು ಹೊಲಿದಿದ್ದು ನಮ್ಮ ನಡುವಿನ ವಿವಿಧ ಜ್ಞಾನಶಾಖೆಗಳ ಅನನ್ಯತೆಯ ಬಗ್ಗೆ ಪ್ರೀತಿ ಗೌರವದ ಜತೆಗೆ ಅದನ್ನು ಜನರ ಸಹಯೋಗದ ಮೂಲಕವೇ ಉಳಿಸಿಕೊಳ್ಳಬೇಕು ಎಂಬ ಎಚ್ಚರಭರಿತ ಕಾಳಜಿ ಇರುವ ಮೂರು ಸಮಾನ ಮನಸ್ಕರು. ‘ಸಂಚಯ’ದ ಓಂ ಶಿವಪ್ರಕಾಶ್‌, ಚಲನಚಿತ್ರ ನಿರ್ದೇಶಕ ಅಭಯ ಸಿಂಹ ಹಾಗೂ ಪತ್ರಕರ್ತ ಎನ್‌.ಎ.ಎಂ ಇಸ್ಮಾಯಿಲ್‌. ಈ ಮೂವರು 2014ರಲ್ಲಿ ‘ಸಂಚಿ’ಯನ್ನು ಆರಂಭಿಸಿದರು.

‘ನಾವು ಮೂವರು ಬೇರೆ ಬೇರೆ ಕ್ಷೇತ್ರದಲ್ಲಿ ಇದೇ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೆವು. ನಾನು ಮತ್ತು ಇಸ್ಮಾಯಿಲ್‌ ಸೇರಿಕೊಂಡು ಆಗಲೇ ಕೆಲವು ಯಕ್ಷಗಾನಗಳ ದಾಖಲೀಕರಣ ಮಾಡಿದ್ದೆವು. ಓಂ ಶಿವಪ್ರಕಾಶ್‌ ತುಂಬ ಹಿಂದಿನಿಂದ ಸಂಚಯದ ಮೂಲಕ ಅಂತರ್ಜಾಲದ ದಾಖಲೀಕರಣದ ಸಾಧ್ಯತೆಯ ಕುರಿತು ಅಭ್ಯಸಿಸು­ತ್ತಿದ್ದವರು.

ಆಗಾಗ ನಾವೆಲ್ಲ ಸೇರಿ ಸಾಂಸ್ಕೃತಿಕ ದಾಖಲೀಕರಣದ ಅಲಭ್ಯತೆ ಕುರಿತಾಗಿ ಚರ್ಚಿಸುತ್ತಿದ್ದೆವು. ಇದಕ್ಕೆ ನಮ್ಮ ಬಳಿಯಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಪರಿಹಾರದ ದಾರ ಯಾಕೆ ಹುಡುಕಿಕೊಳ್ಳಬಾರದು ಎಂದು ಯೋಚಿಸಿದೆವು. ಆ ಪ್ರಯತ್ನದ ಫಲರೂಪವಾಗಿ ಸಂಚಿ ಹುಟ್ಟಿಕೊಂಡಿತು’ ಎಂದು ಪ್ರತಿಷ್ಠಾನ ಪ್ರಾರಂಭಿಸಲು ಕಾರಣವಾದ ಅಂಶಗಳ ಕುರಿತು ಹೇಳುತ್ತಾರೆ ಅಭಯ ಸಿಂಹ.

‘ಸಂಚಿ’ಯ ಮೂಲಕ ರೂಪುಗೊಂಡ ಎಲ್ಲಾ ದಾಖಲಾತಿಗಳು ಕ್ರಿಯೇಟಿವ್ ಕಾಮನ್ಸ್ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತವಾಗಿರುತ್ತವೆ. ಅವಗಳನ್ನು ಯಾರು ಬೇಕಾದರೂ ಸಂಪೂರ್ಣ ಉಚಿತವಾಗಿ ನೋಡಬಹುದು, ಹಂಚಿಕೊಳ್ಳಬಹುದು, ಬಳಸಿಕೊಳ್ಳಬಹುದು. ‘ಸಂಚಿ’ಯಿಂದ ಪಡೆದುಕೊಂಡ ವಿಷಯಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವಂತಿಲ್ಲ. ವಾಣಿಜ್ಯೇತರ ಉದ್ದೇಶಗಳಿಗೆ ಬಳಸಿಕೊಳ್ಳುವಾಗ ‘ಕ್ರೆಡಿಟ್‌’ ಕೊಡಬೇಕು ಎಂಬುದಷ್ಟೇ ಕರಾರು.

2014ರ ಕೊನೆಯಲ್ಲಿ ನೋಂದಣಿ ಮಾಡಿಕೊಂಡು ‘ಸಂಚಿ ಪ್ರತಿಷ್ಠಾನ’ ಕೆಲಸ ಪ್ರಾರಂಭಿಸಿತು. ಆಡಿಯೊ, ವಿಡಿಯೊ ಮತ್ತು ಅಕ್ಷರ– ಹೀಗೆ ಮೂರು ವಿಧಗಳಲ್ಲಿಯೂ ದಾಖಲೀಕರಣ ಮಾಡುವುದು ಈ ಪ್ರತಿಷ್ಠಾನದ ಕಾರ್ಯಸೂಚಿಯಾಗಿತ್ತು. ಸಿನಿಮಾ ಮಾಧ್ಯಮದಲ್ಲಿ ತೊಡಗಿಕೊಂಡಿರುವ ಅಭಯ ಸಿಂಹ ಅವರ ಬಳಿ ಕ್ಯಾಮೆರಾ ಇತ್ತು. ಓಂ ಶಿವಪ್ರಕಾಶ ಅವರಿಗೆ ಅಂತರ್ಜಾಲ ಮಾಧ್ಯಮದ ಬಳಕೆಯ ಬಗ್ಗೆ ಸಾಕಷ್ಟು ತಿಳಿವಳಿಕೆ ಇತ್ತು. ಅವರು ತುಂಬ ಮುತುವರ್ಜಿಯಿಂದ ‘ಸಂಚಿ’ಗಾಗಿ ಜಾಲತಾಣವನ್ನು ವಿನ್ಯಾಸಗೊಳಿಸಿದರು. ಹೀಗೆ ತಮ್ಮ ಬಳಿ ಇರುವ ಸಾಧನಗಳನ್ನೇ ಬಳಸಿಕೊಂಡು ಸಂಚಿ ಕಾರ್ಯಾರಂಭ ಮಾಡಿತು.
 

ನೀವು ಕೈಜೋಡಿಸಬಹುದು
ಸಂಚಿಯ ಪ್ರಯತ್ನಕ್ಕೆ ಜನರೂ ಕೈಜೋಡಿಸಬಹುದು. ಸಂಚಿಯಲ್ಲಿ ಸುಮಾರು ಅರವತ್ತು ಗಂಟೆಗಳಷ್ಟು ವಿಡಿಯೊ ಇದೆ. ಅವುಗಳಿಗೆ ಸಬ್‌ಟೈಟಲ್‌ ಆಗಬೇಕಾಗಿದೆ. ಈ ಎಲ್ಲ ವಿಡಿಯೊಗಳು ಯೂ ಟ್ಯೂಬ್‌ನಲ್ಲಿ ಲಭ್ಯ ಇರುವುದರಿಂದ ಮನೆಯಲ್ಲಿಯೇ ಕುಳಿತು ಸಬ್‌ಟೈಟಲ್‌ ನೀಡಬಹುದು. ಹಾಗೆಯೇ ಯಾರ ಬಳಿಯಲ್ಲಾದರೂ ಮಹತ್ವದ ಸಾಂಸ್ಕೃತಿ ದಾಖಲೆಗಳಿದ್ದರೆ ‘ಸಂಚಿ’ಯೊಂದಿಗೆ ಹಂಚಿಕೊಳ್ಳಬಹುದು. ದೇಣಿಗೆಯನ್ನೂ ನೀಡಬಹುದು. ಸಂಚಿ ಪ್ರತಿಷ್ಠಾನದ ಚಟುವಟಿಕೆಗಳನ್ನು ನೋಡಲು sanchifoundation.comಗೆ ಭೇಟಿ ನೀಡಬಹುದು.

ದಾಖಲೆಗಳನ್ನು ಮಾಡುವ ಕೆಲಸವನ್ನು ಪ್ರಾರಂಭಿಸುತ್ತಿದ್ದಂತೆಯೇ ಜನರಿಗೆ ಈ ಬಗ್ಗೆ ಅರಿವು ಎಷ್ಟು ಕಡಿಮೆ ಇದೆ, ಇದು ಎಷ್ಟು ದೊಡ್ಡ ಸಮಸ್ಯೆ ಎಂಬ ವಿಷಯವೂ ತಿಳಿಯುತ್ತಾ ಹೋಯಿತು. ಯಾವ ಸಂಸ್ಥೆ–ವ್ಯಕ್ತಿಯ ಬಗ್ಗೆ ದಾಖಲೆಗಳನ್ನು ಹುಡುಕಿಹೊರಟರೂ ಬಹುತೇಕ ನಿರಾಸೆಯೇ ಕಾದಿರುತ್ತಿತ್ತು. ಅಪರೂಪಕ್ಕೆ ದೊರಕಿದ ದಾಖಲೆಗಳೂ ಅಸ್ತವ್ಯಸ್ತವಾಗಿ ಜೀರ್ಣಾವಸ್ಥೆಯಲ್ಲಿರುತ್ತಿದ್ದವು.

‘ಜನರ ಬಳಿ ಎಷ್ಟೋ ಮಹತ್ವದ ದಾಖಲೆಗಳು ಇರುತ್ತವೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ರಕ್ಷಿಸಿಡುವುದಿಲ್ಲ. ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ ಸಂಸ್ಥೆ, ವ್ಯಕ್ತಿಗಳ ಬಗ್ಗೆ ನಮ್ಮಲ್ಲಿ ಸರಿಯಾದ ದಾಖಲೆಗಳೇ ಇಲ್ಲ. ಕನ್ನಡ ನಾಡು–ನುಡಿ ಅಂತೆಲ್ಲ ಮಾತಾಡುವ ನಾವ್ಯಾರೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ರಕ್ಷಿಸಿಟ್ಟುಕೊಂಡಿಲ್ಲ ಎಂಬುದು ದುರಂತ ಅಲ್ಲವೇ?’ ಎಂದು ಪ್ರಶ್ನಿಸುತ್ತಲೇ ಅಭಯ್‌ ದಾಖಲೀಕರಣದ ಅಗತ್ಯದತ್ತಲೂ ಬೊಟ್ಟು ಮಾಡುತ್ತಾರೆ.

ದಾಖಲೀಕರಣದ ಬಗ್ಗೆ ಜನರಲ್ಲಿ ಇದ್ದ ಅರಿವಿನ ಕೊರತೆಯ ಕಾರಣಕ್ಕೇ ಅದರ ಬಗ್ಗೆ ಜನರಿಗೆ ತರಬೇತಿ ನೀಡುವ ಅಗತ್ಯವೂ ಎದ್ದು ಕಾಣತೊಡಗಿತು. ಅದಕ್ಕೂ ‘ಸಂಚಿ’ ಮುಂದಾಯಿತು. ಈ ಉದ್ದೇಶಕ್ಕೆ ಬೆಂಬಲವಾಗಿ ನಿಂತಿದ್ದು ಹೆಗ್ಗೋಡಿನ ‘ನೀನಾಸಮ್‌’.

ಹೆಗ್ಗೋಡಿನಲ್ಲಿ ಕಳೆದ ಎರಡು ವರ್ಷಗಳಿಂದ ‘ನೀನಾಸಮ್‌’ ಸಹಯೋಗದಲ್ಲಿ ವಾರ್ಷಿಕವಾಗಿ ‘ಸಿನಿಮಾ ತಯಾರಿಕಾ ತರಬೇತಿ ಕಾರ್ಯಾಗಾರ’ವನ್ನು ಆಯೋಜಿಸಿಕೊಂಡು ಬಂದಿದೆ. ವಾಣಿಜ್ಯಾತ್ಮಕ ಸಿನಿಮಾ ತಯಾರಿಕೆಯ ಕುರಿತು ತರಬೇತಿ ನೀಡುವುದು ಇದರ ಉದ್ದೇಶವಲ್ಲ. ಸಿನಿಮಾ ಮಾಧ್ಯಮದ ಮೂಲಕ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಹೇಗೆ ದಾಖಲಿಸಬಹುದು ಎಂಬುದರ ಕುರಿತು ಈ ಕಾರ್ಯಾಗಾರದಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ.

ಇದರ ಜತೆಗೆ ‘ಜ್ಞಾನಸರಣಿ’ ಎಂಬ ಯೋಜನೆಯನ್ನೂ ಆರಂಭಿಸಲಾಯಿತು. ನಮ್ಮ ಕಾಲದ ಮಹತ್ವದ ವ್ಯಕ್ತಿಗಳನ್ನು ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ ಸಂದರ್ಶಿಸಿ ಅವುಗಳನ್ನು ಜಾಲತಾಣದ ಮೂಲಕ ಜನರಿಗೆ ತಲುಪಿಸುವ ಯೋಜನೆಯಿದು. ಉಲ್ಲಾಸ ಕಾರಂತ, ನಾಗೇಶ ಹೆಗಡೆ, ಎಸ್.ಶೆಟ್ಟರ್ , ಶೇಖರ್ ದತ್ತಾತ್ರಿ ಅವರಂತಹ ಅನೇಕರನ್ನು ಸಂದರ್ಶಿಸಿ ಇದರಲ್ಲಿ ಪ್ರಕಟಿಸಲಾಗಿದೆ.

ನೀನಾಸಮ್‌ ಬೆಂಬಲ
ನಾಲ್ಕು ಐದು ದಶಕದಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಹೆಗ್ಗೋಡಿನ ‘ನೀನಾಸಮ್‌’ ಸಂಚಿ ಪ್ರತಿಷ್ಠಾನದ ಉದ್ದೇಶವನ್ನು ಅರಿತು ಸಾಕಷ್ಟು ಬೆಂಬಲ ನೀಡಿದೆ. ಅಲ್ಲದೇ ತನ್ನ ಬಳಿ ಇರುವ ಎಲ್ಲ ದಾಖಲೆಗಳನ್ನು ಉಚಿತವಾಗಿ ನೀಡಿದೆ.

‘ಸಂಚಿ’ ಪ್ರತಿಷ್ಠಾನ ‘ನೀನಾಸಮ್‌ ಆರ್ಕೈವ್ಸ್‌’ ಎಂದು ಪ್ರತ್ಯೇಕ ಯೋಜನೆಯನ್ನೇ ರೂಪಿಸಿ  ಹತ್ತೊಂಬತ್ತು ನಾಟಕಗಳ ವಿಡಿಯೊವನ್ನು ಪ್ರಕಟಿಸಿದೆ. ಬಿ.ವಿ. ಕಾರಂತರು ನಿರ್ದೇಶಿಸಿದ ಪುತಿನ ಅವರ ನಾಟಕ ‘ಗೋಕುಲ ನಿರ್ಗಮನ’, ಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ ವಿಶಿಷ್ಟ ರಂಗಪ್ರಯೋಗ ಒಟ್ಟ ಶೋಗೋನ ‘ನೀರಿನ ತಾಣ’, ಕೆ.ವಿ. ಅಕ್ಷರ ನಿರ್ದೇಶಿಸಿದ ಕುವೆಂಪು ಅವರ ‘ಶ್ಮಶಾನ ಕುರುಕ್ಷೇತ್ರ’, ‘ಸಂಗ್ಯಾ ಬಾಳ್ಯಾ’ ಸೇರಿದಂತೆ ನೀನಾಸಮ್‌ನ ಪ್ರಮುಖ ನಾಟಕಗಳು ‘ಸಂಚಿ’ ಜಾಲತಾಣದಲ್ಲಿ ಲಭ್ಯವಿವೆ.

ಹಾಗೆಯೇ ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ ಅವರ ಅಪರೂಪದ ಸಂದರ್ಶನ, ರಂಗಪ್ರಯೋಗದ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವಿಡಿಯೊ ಮಾಲಿಕೆಯೂ ಈ ವಿಭಾಗದಲ್ಲಿದೆ. ಹೀಗೆ ಸುಮಾರು 37 ಗಂಟೆಗಳ ಅವಧಿಯ ವಿಡಿಯೊವನ್ನು ನೀನಾಸಮ್‌ ‘ಸಂಚಿ’ಯ ಉಡಿಗೆ ಹಾಕಿದೆ. ಇದರ ಹೊರತಾಗಿ ‘ಸಂಚಿ’ಯೇ ನೀನಾಸಮ್‌ನ ಇತ್ತೀಚೆಗಿನ ಮೂರು ನಾಟಕಗಳನ್ನು ಚಿತ್ರೀಕರಿಸಿ ದಾಖಲಿಸಿದೆ.

ಹಾಗೆಯೇ ಸುಮಾರು 23 ಗಂಟೆಗಳಷ್ಟು ಅವಧಿಯ ಆಡಿಯೊವನ್ನೂ ನೀಡಿದೆ. ಅದನ್ನು ಸಂಸ್ಕರಿಸಿ ಪ್ರಕಟಿಸುವ ಕೆಲಸ ಪ್ರಗತಿಯಲ್ಲಿದೆ. ಈ ಆಡಿಯೊ ಸಂಗ್ರಹದಲ್ಲಿ ಶಿವರಾಮ ಕಾರಂತರು ಮುದ್ರಿಸಿದ ಯಕ್ಷಗಾನ ಕೃತಿಗಳೂ ಇವೆ.

ಆಡಿಯೊ, ವಿಡಿಯೊಗಳನ್ನಷ್ಟೇ ಅಲ್ಲ, ಕೆಲವು ಮಹತ್ವದ ಪುಸ್ತಕಗಳನ್ನೂ ‘ಸಂಚಿ’ ಪ್ರಕಟಿಸಿದೆ. ಅಪರೂಪದ, ಆದರೆ ಈಗ ಲಭ್ಯವಿಲ್ಲದ ಪುಸ್ತಕಗಳನ್ನು ಪ್ರಕಟಿಸಲು ಪ್ರತ್ಯೇಕ ವಿಭಾಗವೇ ‘ಸಂಚಿ’ಯಲ್ಲಿದೆ.

ಗುಣಮಟ್ಟಕ್ಕೆ ಆದ್ಯತೆ
ಸಂಚಿ ಪ್ರತಿಷ್ಠಾನ ಆಡಿಯೊ ವಿಡಿಯೊ ದಾಖಲೀಕರಣದ ತಾಂತ್ರಿಕ ವಿಭಾಗದ ಜವಾಬ್ದಾರಿಯನ್ನು ಪ್ರಶಾಂತ್‌ ಪಂಡಿತ್‌ ನಿರ್ವಹಿಸುತ್ತಾರೆ. ಸಂಚಿಗೆ ದೊರಕಿದ ಬೇರೆ ಬೇರೆ ಫಾರ್ಮೆಟ್‌ಗಳಲ್ಲಿದ್ದ ವಿಡಿಯೊಗಳನ್ನು ಡಿಜಿಟಲೈಜ್‌ಗೊಳಿಸಿ ಜಾಲತಾಣಕ್ಕೆ ಹಾಕಲಾಗಿದೆ. ‘ಸಂಚಿ’ ಪ್ರತಿಷ್ಠಾನವೇ ಚಿತ್ರೀಕರಿಸಿದ ವಿಡಿಯೊ ದೃಶ್ಯಾವಳಿಗಳಿಗೆ ಕ್ಯಾನನ್‌ 5D ಕ್ಯಾಮೆರಾ ಬಳಸಿಕೊಳ್ಳಲಾಗಿದೆ. ಒಂದೇ ಸಲಕ್ಕೆ ಮೂರು ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ.

ನಾಟಕಗಳನ್ನು ಚಿತ್ರೀಕರಿಸುವಾಗ ಸಿಂಕ್‌ ಸೌಂಡ್‌ ಟೆಕ್ನಾಲಜಿಯ ಮೂಲಕ ಧ್ವನಿಮುದ್ರಿಸಿಕೊಳ್ಳಲಾಗುವುದು. ನಾಟಕ ವೇದಿಕೆಯ ಧ್ವನಿವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಐದರಿಂದ ಆರು ಮೈಕ್‌ಗಳನ್ನು ಅಳವಡಿಸಿ ಧ್ವನಿಯನ್ನು ಪ್ರತ್ಯೇಕವಾಗಿಯೇ ಮುದ್ರಿಸಲಾಗಿದೆ. ನಂತರ ಸಂಕಲನದ ಸಮಯದಲ್ಲಿ ಅದನ್ನು ವಿಡಿಯೊ ಜತೆಗೆ ಸೇರಿಸಲಾಗಿದೆ. ‘ಇದರಿಂದ ನಾಟಕ ನಡೆಯುವ ವೇದಿಕೆಯ ಅಗಲ– ಉದ್ದಗಳು ಪ್ರೇಕ್ಷಕರಿಗೆ ಅನುಭವಕ್ಕೆ ಬರುವಷ್ಟು ಗುಣಮಟ್ಟದ ಆಡಿಯೊ ಪಡೆದುಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಪ್ರಶಾಂತ್‌.

ಹಾಗೆಯೇ ಲೈವ್‌ ಪರ್ಫಾರ್ಮೆನ್ಸ್‌ಗಳನ್ನು ಚಿತ್ರೀಕರಿಸುವಾಗ ಮಧ್ಯದಲ್ಲಿ ಒಂದು ಕ್ಯಾಮೆರಾ ವೈಡ್‌ ಆ್ಯಂಗಲ್‌ನಲ್ಲಿ ವೇದಿಕೆಯನ್ನು ಕವರ್‌ ಮಾಡುತ್ತಿರುತ್ತದೆ. ಹಾಗೆಯೇ ಉಳಿದ ಎರಡು ಕೋನಗಳಿಂದ ವೇದಿಕೆಯ ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ.

‘ಪ್ರದರ್ಶನವನ್ನು ನೋಡುವವರ ಗಮನ ಪ್ರದರ್ಶನದ ಮೇಲಿರಬೇಕೇ ಹೊರತು ಕ್ಯಾಮೆರಾದ ಸರ್ಕಸ್‌ನ ಮೇಲಲ್ಲ’ ಎಂಬ ಎಚ್ಚರ ಅವರಿಗಿದೆ. ಆದ್ದರಿಂದ ಪ್ರೇಕ್ಷಕನ ನೋಟದ ಚಲನೆಗೆ ಅನುಗುಣವಾಗಿ ಸಹಜವಾಗಿ ಚಿತ್ರೀಕರಿಸಲಾಗಿದೆ. ಅಲ್ಲದೇ ಯಾವುದೇ ವಿಶೇಷವಾದ ಬೆಳಕಿನ ವ್ಯವಸ್ಥೆಯನ್ನೂ ಬಳಸಿಕೊಳ್ಳದೇ ಅಲ್ಲಿ ಇರುವ ಬೆಳಕಿನಲ್ಲಿಯೇ ಚಿತ್ರೀಕರಿಸಲಾಗುತ್ತದೆ.

‘ಈ ವಿಡಿಯೊಗಳನ್ನು ನೋಡುತ್ತಿರುವವರಿಗೆ ನಾವೊಂದು ಸಿನಿಮಾವನ್ನೋ, ಧಾರಾವಾಹಿಯನ್ನೋ ನೋಡುತ್ತಿದ್ದೇವೆ ಅನಿಸಬಾರದು. ಬದಲಿಗೆ ಒಂದು ನಾಟಕವನ್ನು ನೇರವಾಗಿ ನೋಡುತ್ತಿದ್ದೇವೆ ಎಂತಲೇ ಅನಿಸಬೇಕು’ ಎಂಬುದು ಇದರ ಉದ್ದೇಶ. ನಂತರ ಅದಕ್ಕೆ ಸಬ್‌ಟೈಟಲ್‌ಗಳನ್ನು ಹಾಕಿ ಯೂಟ್ಯೂಬ್‌ಗೆ ಹಾಕಲಾಗುವುದು.

ಕೇವಲ ನಾಟಕ–ಅಥವಾ ಇನ್ಯಾವುದೇ ಪ್ರದರ್ಶನ ಕಲೆಯನ್ನು ತೋರಿಸುವುದಷ್ಟೇ ಇವರ ಉದ್ದೇಶ ಅಲ್ಲ. ಸಾಮಾನ್ಯ ಪ್ರೇಕ್ಷಕನೊಟ್ಟಿಗೆ ಈ ವಿಷಯದಲ್ಲಿ ಆಳವಾದ ಆಸಕ್ತಿ ಇರುವವರಿಗೂ ಅನುಕೂಲಕರವಾಗುವಂತೆ ಈ ವಿಡಿಯೊಗಳಲ್ಲಿ ಹೈಪರ್‌ ಲಿಂಕ್‌ಗಳನ್ನು ನೀಡಲಾಗಿದೆ. ಅಂದರೆ ಒಂದು ನಾಟಕ ನೋಡುತ್ತಿರುವಾಗ ನಿರ್ದಿಷ್ಟ ದೃಶ್ಯಗಳ ಕುರಿತು ನಿರ್ದೇಶಕರು ಆಡಿರುವ ಮಾತು, ಇನ್ಯಾವುದೇ ವಿವರಗಳನ್ನು ನೋಡಬಹುದಾದ ಹೈಪರ್‌ಲಿಂಕ್‌ಗಳನ್ನೂ ನೀಡಲಾಗಿದೆ.

‘ಸಂಚಿ’ ಚಿತ್ರೀಕರಿಸಿದ ಎಲ್ಲ ವಿಡಿಯೊಗಳು ದೊಡ್ಡ ಪರದೆಯ ಮೇಲೂ ಸ್ಪಷ್ಟವಾಗಿ ನೋಡಬಹುದಾದಷ್ಟು ಒಳ್ಳೆಯ ಗುಣಮಟ್ಟವನ್ನು ಹೊಂದಿದೆ. ‘ಯೂಟ್ಯೂಬ್‌ನಲ್ಲಿ ಹಾಕುವುದಷ್ಟೇ ನಮ್ಮ ಉದ್ದೇಶವಲ್ಲ. ಒಳ್ಳೆಯ ಗುಣಮಟ್ಟದ ದಾಖಲೆಯನ್ನು ಮಾಡಬೇಕು ಎಂಬ ಬದ್ಧತೆಯಿರುವುದರಿಂದ ಸಾಕಷ್ಟು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿರುತ್ತವೆ’ ಎನ್ನುವ ಪ್ರಶಾಂತ್‌ ‘ನಮಗೆ ಇರುವ ಸಮಯ, ಹಣಕಾಸು, ತಂತ್ರಜ್ಞಾನಗಳ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಉತ್ತಮವಾಗಿ ದಾಖಲಿಸಿದ್ದೇವೆ’ ಎಂದು ಹೇಳುತ್ತಾರೆ.

ಜನಬೆಂಬಲವೇ ಸ್ಫೂರ್ತಿ
‘ನಾವು ಸಂಚಿ ಪ್ರತಿಷ್ಠಾನವನ್ನು ಆರಂಭಿಸಿದಾಗ ಕೆಲಸದ ವ್ಯಾಪ್ತಿ ಇಷ್ಟು ವಿಶಾಲವಾಗಿರಬಹುದು ಎಂದುಕೊಂಡಿರಲಿಲ್ಲ. ನಮ್ಮ ಈ ಪ್ರಯತ್ನಕ್ಕೆ ಸಿಕ್ಕ ಜನಬೆಂಬಲವೂ ದೊಡ್ಡದೇ. ಸಾಂಸ್ಕೃತಿಕ ದಾಖಲೀಕರಣದ ಮಹತ್ವ ತಿಳಿದವರು ತುಂಬ ಜನ ಇದ್ದರು. ಆದರೆ ಬೇರೆ ಬೇರೆ ಕಾರಣಗಳಿಗೆ ಅದು ಸಾಧ್ಯವಾಗಿರಲಿಲ್ಲ. ನಾವು ಆ ಕೆಲಸಕ್ಕೆ ಮುಂದಾದಾಗ ಎಲ್ಲರೂ ಮುಕ್ತ ಮನಸ್ಸಿನಿಂದ ಬೆಂಬಲ ನೀಡಿದರು. ಸಾಕಷ್ಟು ಜನರು ಧನಸಹಾಯವನ್ನೂ ಮಾಡಿದರು’ ಎಂದು ಅಭಯ್‌ ಖುಷಿಯಿಂದ ನೆನೆಸಿಕೊಳ್ಳುತ್ತಾರೆ.


ಈಗ ಎಲ್ಲರೂ ಧಾವಂತದ ಜೀವನಕ್ಕೆ ಒಗ್ಗಿಹೋಗಿದ್ದಾರೆ. ಗಂಭೀರ ವಿಷಯಗಳನ್ನು ಕೇಳುವ–ನೋಡುವ ವ್ಯವಧಾನ ಕಳೆದುಕೊಂಡಿದ್ದಾರೆ, ಅದರಲ್ಲಿಯೂ ಅಂತರ್ಜಾಲ ಎನ್ನುವುದು ಗಂಭೀರವಾದ ವಿಷಯಗಳಿಗೆ ಹೇಳಿ ಮಾಡಿಸಿದ ಮಾಧ್ಯಮ ಅಲ್ಲ ಎಂಬೆಲ್ಲ ‘ಜನರಲ್‌ ಸ್ಟೇಟ್‌ಮೆಂಟ್‌’ಗಳನ್ನು ಸಂಚಿ ಸುಳ್ಳಾಗಿಸಿದೆ. ಪ್ರತಿತಿಂಗಳು ಸುಮಾರು ನಾಲ್ಕರಿಂದ ಐದು ಸಾವಿರ ಜನರು ಜಾಲತಾಣಕ್ಕೆ ಭೇಟಿ ನೀಡುತ್ತಿದ್ದಾರೆ.

ಜನಬೆಂಬಲದಿಂದ ಇನ್ನಷ್ಟು ಉತ್ಸಾಹವನ್ನು ಹೆಚ್ಚಿಸಿಕೊಂಡಿರುವ ‘ಸಂಚಿ’ಯ ಮುಂದೆ ಅನೇಕ ಯೋಜನೆಗಳಿವೆ. ನೀನಾಸಮ್‌ ಸಂಸ್ಥೆಯ ದಶಕಗಳ ಕಾಲದ ರಂಗಸಂಗೀತವನ್ನು ದಾಖಲಿಸುವುದು, ಹಾಗೆಯೇ ತಾಳಮದ್ದಲೆ ದಾಖಲೀಕರಣ, ಯಕ್ಷಗಾನ ರಂಗಪ್ರಯೋಗದ ದಾಖಲೀಕರಣ ಹೀಗೆ ಅನೇಕ ಯೋಜನೆಗಳು ಸಂಚಿಯ ಕಣ್ಣ ಮುಂದಿವೆ.

ಇದು ನಮ್ಮ ಕೆಲಸ ಹಾಗಾಗಿ ಎಲ್ಲರೂ ಸೇರಿಕೊಂಡು ಮಾಡುವುದು. ನಂತರ ಎಲ್ಲರೂ ಬಳಸುವುದು ಎಂಬ ಆಶಯದೊಡನೆ ರೂಪುಗೊಂಡಿರುವ ‘ಸಂಚಿ ಪ್ರತಿಷ್ಠಾನ’ ಕನ್ನಡದ ಮಟ್ಟಿಗಂತೂ ಅಪರೂಪದ ಅಷ್ಟೇ ಮಹತ್ವದ ಪ್ರಯತ್ನ.

ಹೂರಣದ ಜೋಡಣೆಯೇ ಮುಖ್ಯ
ಮಿತ ಸಂಪನ್ಮೂಲಗಳಲ್ಲಿಯೇ ಅತ್ಯುತ್ತಮವಾಗಿ ಸಂಚಿ ಪ್ರತಿಷ್ಠಾನದ ಜಾಲತಾಣವನ್ನು ವಿನ್ಯಾಸ ಮಾಡಿದ್ದಾರೆ ಓಂ ಶಿವಪ್ರಕಾಶ್‌. ಸಂಚಿಯನ್ನು ರೂಪಿಸುವಾಗ ಅವರ ಮನಸ್ಸಿನಲ್ಲಿದ್ದ ಆಲೋಚನೆಗಳನ್ನು ವಿವರಿಸುವುದು ಹೀಗೆ.

‘‘ಸಂಚಿ ಜ್ಞಾನಶಾಖೆಗಳ ದಾಖಲೆಗಳ ಸಂಗ್ರಹತಾಣ. ಅವುಗಳನ್ನು ಧ್ವನಿ, ದೃಶ್ಯ ಮತ್ತು ಪಠ್ಯ ಮಾಧ್ಯಮದ ಮೂಲಕ ಜನರಿಗೆ ತಲುಪಿಸಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ. ಇಲ್ಲಿ ನಾವಷ್ಟೇ ಕೆಲಸ ಮಾಡುವುದಲ್ಲ, ಬೇರೆ ಜನರೂ ಸಹ ನಮ್ಮ ಜತೆ ಸೇರಿಕೊಂಡು ಕೆಲಸ ಮಾಡುವಂತಿರಬೇಕು. ಕನ್ನಡ ಕರ್ನಾಟಕದ ಜತೆಗೆ ಬೇರೆ ಯಾವುದೇ ಕಲೆಗಳು ಇನ್ಯಾವುದೇ ದಾಖಲಾಗದಿರುವ  ಜ್ಞಾನಶಾಖೆಗಳನ್ನು ದಾಖಲಿಸುವ ಇಂಗಿತ ಇರುವ ಜನರಿಗೆಲ್ಲ ‘ಸಂಚಿ’ ಒಂದು ವೇದಿಕೆ ಆಗಬೇಕು ಎಂಬ ಆಶಯವೂ ನಮ್ಮದು.

ಯಾವುದೇ ಒಂದು ಆರ್ಕೈವ್ಸ್‌ ತೆಗೆದುಕೊಂಡರೂ ಅಲ್ಲಿ ಹೂರಣವನ್ನು ವ್ಯವಸ್ಥಿತ ಜೋಡಣೆ ಮುಖ್ಯವಾಗುತ್ತದೆ. ಆಗ ಮಾತ್ರ ಜನರಿಗೆ ಸುಲಭವಾಗಿ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ನಾನು ಜಾಲತಾಣವನ್ನು ವಿನ್ಯಾಸಗೊಳಿಸಿದೆ. ನಮ್ಮ ಪ್ರತಿಯೊಂದು ಯೋಜನೆಗಳಿಗೂ ಒಂದೊಂದು ಪುಟವಿದೆ. ಆ ಯೋಜನೆಯ ವಿವರಗಳು, ಅದಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡಿದವರ ವಿವರಗಳು, ಹಾಗೆಯೇ ಸಹಾಯ ಮಾಡಿದ ಸಂಸ್ಥೆಗಳ ವಿವರಗಳೂ ಆ ಪುಟದಲ್ಲಿರುತ್ತವೆ.

ವೈಭವದ ವಿನ್ಯಾಸಕ್ಕಿಂತ ಹೂರಣದ ವ್ಯವಸ್ಥಿತ ಜೋಡಣೆಗೆ ಹೆಚ್ಚು ಮಹತ್ವ ಕೊಟ್ಟಿದ್ದೇವೆ.  ಇಲ್ಲಿನ ಎಲ್ಲ ಹೂರಣವನ್ನೂ ಕ್ರಿಯೇಟಿವ್‌ ಕಾಮನ್ಸ್‌ ಅಡಿಯಲ್ಲಿ ಸಾರ್ವಜನಿಕರಿಗೆ ಮುಕ್ತ ಬಳಕೆಗೆ ಅವಕಾಶ ಕೊಟ್ಟಿದ್ದೇವೆ. ಸಾರ್ವಜನಿಕರು ಬಳಸಿಕೊಳ್ಳಲು, ಹಂಚಿಕೊಳ್ಳಲು ಅವಕಾಶ ಇದ್ದರೂ ಅದರ ಮೂಲಹಕ್ಕು ಅದನ್ನು ರೂಪಿಸಿದವರ ಹೆಸರಿನಲ್ಲಿಯೇ ಇರುತ್ತದೆ.

ನಮ್ಮ ಬಳಿಯಿರುವ ಸಂಗತಿಯನ್ನು ಎಲ್ಲರ ಬಳಿ ಹಂಚಿಕೊಂಡಾಗ ಮಾತ್ರ ಅದು ಉಳಿದುಕೊಳ್ಳುತ್ತದೆ. ಅದನ್ನು ನಾನ್ಯಾಕೆ ಬೇರೆಯವರಿಗೆ ಕೊಡಬೇಕು ಎಂದುಕೊಂಡಾಗ ಅದು ಆ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಜ್ಞಾನಶಾಖೆಗಳ ಈ ಹರಿವಿಗೆ ತೊಡಕಾಗಿರುವ ಈ ತಡೆಯನ್ನು ಮುರಿಯಬೇಕು ಎಂಬ ಉದ್ದೇಶದಿಂದಲೇ ನಾವು ‘ಸಂಚಿ’ ಪ್ರತಿಷ್ಠಾನವನ್ನು ಆರಂಭಿಸಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT