ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲ ಕಲಾವಲ್ಲಭ ಕಾರ್ತಿಕ್

ಪಂಚರಂಗಿ
Last Updated 20 ಜುಲೈ 2014, 19:30 IST
ಅಕ್ಷರ ಗಾತ್ರ

ಬಾಲನಟನಾಗಿ ಧಾರಾವಾಹಿ, ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್ ಶರ್ಮ ಸದ್ಯ ಗುರುತಿಸಿಕೊಳ್ಳುತ್ತಿರುವುದು ಸಂಗೀತದಿಂದ. ಬಾಲನಟನಾಗಿ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಜನಪ್ರಿಯತೆ ಅವರಿಗೆ ಸಂಗೀತ ನಿರ್ದೇಶನದಿಂದ ದೊರೆತಿದೆಯಂತೆ.

ಚಿಕ್ಕಂದಿನಲ್ಲೇ ಬಣ್ಣದ ಲೋಕ ನೋಡಿದ್ದ ಕಾರ್ತಿಕ್ ಮನಸ್ಸು ಸಂಗೀತದತ್ತ ಆಕರ್ಷಿತಗೊಂಡಿತ್ತು. ದ್ವಿತೀಯ ಪಿಯುಸಿ ಮುಗಿಸಿದವರೇ ಚೆನ್ನೈನಲ್ಲಿರುವ ಎ.ಆರ್.ರೆಹಮಾನ್ ಅವರ ಸಂಗೀತ ಶಾಲೆಯಲ್ಲಿ ಎರಡು ವರ್ಷ ಸಂಗೀತಾಭ್ಯಾಸ ಮಾಡಿದರು. ನಂತರ ಆಡಿಯೊ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರೈಸಿದರು. ಅಲ್ಲಿಂದ ಮುಂಬೈಗೆ ತೆರಳಿ ಒಂದೂವರೆ ವರ್ಷ ಚಲನಚಿತ್ರ ಛಾಯಾಗ್ರಹಣ ಕೋರ್ಸ್ ಕೂಡ ಮುಗಿಸಿದರು. ತಕ್ಕ ಮಟ್ಟಿಗೆ ಹಾಡನ್ನೂ ಹೇಳುತ್ತಾರೆ. ಇಷ್ಟೆಲ್ಲ ಬಲ್ಲ ಈ ಸಕಲಕಲಾವಲ್ಲಭನ ವಯಸ್ಸಿನ್ನೂ 21.

ಆಕಾಶ ದೀಪ, ಚರಣ ದಾಸಿ, ಒಂದೇ ಗೂಡಿನ ಹಕ್ಕಿಗಳು, ಅಕ್ಕ, ಅಗ್ನಿ ಸಾಕ್ಷಿ, ಪರಿಣೀತಾ ಹೀಗೆ ಹಲವು ಜನಪ್ರಿಯ ಧಾರಾವಾಹಿಗಳ ಶೀರ್ಷಿಕೆ ಗೀತೆಗಳಿಗೆ ಕಾರ್ತಿಕ್ ಸಂಗೀತವಿದೆ. ‘ಪುಟ್ಟಗೌರಿ ಮದುವೆ ಧಾರಾವಾಹಿಯ ಶೀರ್ಷಿಕೆ ಸಂಗೀತ ನನ್ನ ಬದುಕಿಗೆ ಟ್ವಿಸ್ಟ್ ನೀಡಿತು. ಅದರಲ್ಲಿ ನಾನು ಕೂಡ ಹಾಡಿದೀನಿ’ ಎನ್ನುತ್ತಾ ತಮ್ಮ ಅದೃಷ್ಟದ ಬಗ್ಗೆ ಮಾತನಾಡುತ್ತಾರೆ ಕಾರ್ತಿಕ್.

ಪುಟ್ಟಗೌರಿ ಮದುವೆ ಸಂಗೀತದಿಂದಾಗಿಯೇ ಅವರಿಗೆ ಚಿತ್ರರಂಗದ ಬಾಗಿಲು ತೆರೆದಿದೆ. ಈಗಷ್ಟೇ ಚಿತ್ರೀಕರಣ ಮುಗಿಸಿರುವ ‘ಬಾನಾಡಿ’ ಎಂಬ ಮಕ್ಕಳ ಚಿತ್ರವೊಂದಕ್ಕೆ ಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ. ‘ಬಿಡುಗಡೆಯಾಗುವ ದೃಷ್ಟಿಯಲ್ಲಿ ನೋಡಿದರೆ ಬಾನಾಡಿ ಅಧಿಕೃತವಾಗಿ ನನ್ನ ಮೊದಲ ಚಿತ್ರ’ ಎನ್ನುವ ಅವರು ಚಿತ್ರಗಳ ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಯೋಚನೆ ಮಾಡಿ ಮುಂದುವರಿಯುತ್ತಾರಂತೆ.

ಕಾರ್ತಿಕ್ ಹಿಂದಿಯಲ್ಲಿ ಹೊಸಬರ ಚಿತ್ರವೊಂದಕ್ಕೆ ಸಂಗೀತ ನೀಡಿದ್ದರೂ ಅದು ಬಿಡುಗಡೆ ಭಾಗ್ಯ ಕಾಣಲಿಲ್ಲ. ಕನ್ನಡದಲ್ಲೂ ಒಂದು ಚಿತ್ರಕ್ಕೆ ಅವಕಾಶ ಸಿಕ್ಕಿತ್ತು. ಕಥೆ ಇಷ್ಟವಾಗದ ಕಾರಣಕ್ಕೆ ಒಪ್ಪಿಕೊಳ್ಳಲಿಲ್ಲವಂತೆ. ‘ನಾನು ದೊಡ್ಡ ಸಂಗೀತ ನಿರ್ದೇಶಕನೇನಲ್ಲ. ಆದರೂ ಕಥೆಗೆ ಮಹತ್ವ ನೀಡುತ್ತೇನೆ. ಈಗಿರುವ ಟ್ರೆಂಡ್‌ನ ಕಮರ್ಷಿಯಲ್ ಸಿನಿಮಾಗಳ ಸಂಗೀತ ನನಗೆ ಒಗ್ಗುವುದಿಲ್ಲ. ನನ್ನ ಸಂಗೀತದಲ್ಲಿ ನನ್ನತನ ಕಾಣಬೇಕು. ನನಗೆ ಸಮಾಧಾನ ಇರಬೇಕು. ಅಂಥ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ. ‘ಬಾನಾಡಿ ನಿರ್ದೇಶಕ ನಾಗರಾಜ ಕೋಟೆ ಅವರು ಕಥೆ ಹೇಳಿದರು. ನನಗೆ ಒಪ್ಪಿಗೆಯೂ ಆಯಿತು. ಹಾಗೆಯೇ ನನ್ನ ಸಂಗೀತವೂ ಅವರಿಗೆ ಹಿಡಿಸಿತು. ಈ ಚಿತ್ರದಲ್ಲಿ ಐದು ಹಾಡುಗಳಿಗೆ ಸ್ವರ ಸಂಯೋಜಿಸಿದ್ದೇನೆ. ನಿರ್ದೇಶಕರ ನಿರೀಕ್ಷೆಯನ್ನು ತಲುಪಿರುವ ನಂಬಿಕೆಯಿದೆ’ ಎಂದು ಕಾರ್ತಿಕ್ ಖುಷಿ ಹಂಚಿಕೊಂಡರು.

ಕಾರ್ತಿಕ್ ತುತ್ತೂರಿ ಚಿತ್ರದಲ್ಲಿ ದತ್ತಣ್ಣ ಅವರ ಮೊಮ್ಮಗನಾಗಿ ಅಭಿನಯಿಸಿದ್ದರು. ಈಗ ದತ್ತಣ್ಣ ಅಭಿನಯಿಸಿರುವ ಬಾನಾಡಿಗೆ ಸಂಗೀತ ನೀಡಿದ್ದಾರೆ. ಈ ಬಗ್ಗೆ ಕೇಳಿದರೆ, ‘‘ದತ್ತು ತಾತ ಯಾವುದನ್ನೂ ವೈಭವೀಕರಿಸುವುದಿಲ್ಲ. ಅವರಿಗೆ ಕೆಲಸ ಹಿಡಿಸಿದರೆ, ‘ಇಷ್ಟ ಆಯ್ತು ಕಣೊ’ ಎಂದಷ್ಟೇ ಹೇಳುತ್ತಾರೆ. ಅದೇ ಅವರು ನೀಡುವ ಸರ್ಟಿಫಿಕೇಟ್‌. ಅದು ನನಗೆ ಬಾನಾಡಿಯಲ್ಲಿ ಸಿಕ್ಕಿತು’’ ಎನ್ನುತ್ತಾರೆ ಅವರು.
‘ಬಾನಾಡಿಯ ಸಂಗೀತ ಅದ್ಭುತವಾಗಿದೆ ಎನ್ನುವುದಿಲ್ಲ. ಆದರೆ ಕೇಳಿದವರು ಟೈಮ್ ವೇಸ್ಟ್ ಆಯ್ತು ಎಂದು ಬೇಸರವಂತೂ ಪಟ್ಟುಕೊಳ್ಳುವುದಿಲ್ಲ ಎನ್ನುವ ವಿಶ್ವಾಸವಿದೆ’ ಎಂದು ಅವರು ತಮ್ಮ ಮೊದಲ ಚಿತ್ರದ ಸಂಗೀತದ ಬಗ್ಗೆ ಹೇಳಿಕೊಳ್ಳುತ್ತಾರೆ.

ವೆಸ್ಟರ್ನ್ ಇಂಡಿಯಾ ಸಿನಿಮಾಟಾಗ್ರಫರ್ಸ್ ಅಸೋಸಿಯೇಷನ್‌ನ ಐಡೆಂಟಿಟಿ ಕಾರ್ಡ್ ಪಡೆದುಕೊಂಡಿರುವ ಕಾರ್ತಿಕ್, ಹಿಂದಿಯ ‘ಓ ಮೈ ಗಾಡ್’ ಚಿತ್ರಕ್ಕೆ ಅಸೋಸಿಯೇಟ್ ಸಿನಿಮಾಟಾಗ್ರಫರ್ ಆಗಿಯೂ ಕೆಲಸ ಮಾಡಿದ್ದಾರೆ. ಆರೇಳು ವರ್ಷಗಳ ನಂತರ ಇತ್ತೀಚೆಗೆ ‘ಕೇಸ್ ನಂ. 18/9’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಟನೆ, ಛಾಯಾಗ್ರಹಣ, ಸಂಗೀತ ಇವುಗಳಲ್ಲಿ ನೀವು ಯಾವುದನ್ನು ವೃತ್ತಿಯಾಗಿ ಆಯ್ದುಕೊಳ್ಳುತ್ತೀರಿ ಎಂದರೆ, ‘ಸಂಗೀತ, ಛಾಯಾಗ್ರಹಣ, ಅಭಿನಯ ಹೀಗೆ ಯಾವುದೇ ಒಂದು ಎಂದು ನಾನು ಬೌಂಡರಿ ಹಾಕಿಕೊಳ್ಳುವವನಲ್ಲ. ನನ್ನಿಂದ ಚೆನ್ನಾಗಿ ನಿರ್ವಹಣೆ ಮಾಡಲು ಸಾಧ್ಯ ಅನ್ನಿಸುವ, ಚಿತ್ರರಂಗಕ್ಕೆ ಸಂಬಂಧಿಸಿದ ಯಾವ ಕೆಲಸವನ್ನಾದರೂ ಮಾಡಲು ಸಿದ್ಧ. ಚಿತ್ರರಂಗವೇ ನನ್ನ ನೆಲೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT