ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲ ಕಲಾ ವಲ್ಲಭೆ ಅಮೃತಾ ಲಹರಿ

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ, ನೃತ್ಯ ಹಾಗೂ ವಾದ್ಯ ಕಲೆಗಳಲ್ಲಿ ಗುರುತಿಸಿಕೊಂಡವಳು ಅಮೃತಾ ವಾಸುದೇವ್. ಓದಿನೊಂದಿಗೆ ಕಲಾ ಪ್ರೀತಿಯ ತೇರನ್ನೂ ಎಳೆಯುತ್ತಿರುವ ಪುಟ್ಟ ಪೋರಿಯ ಮನದ ಲಹರಿ ಇಲ್ಲಿದೆ...

ಐದನೇ ವಯಸ್ಸಿನಲ್ಲಿಯೇ ತನ್ನ ಅಜ್ಜನ ಜೊತೆ ಕುಳಿತು ಪುಟ್ಟ ಪುಟ್ಟ ಬೆರಳುಗಳಿಂದ ಸಿತಾರ್‌ ತಂತಿ ಮೀಟುವುದನ್ನು ಕಲಿತ ಹುಡುಗಿ,  ಜೊತೆ–ಜೊತೆಗೇ ಅಜ್ಜಿಯೊಂದಿಗೆ ಕರ್ನಾಟಕ ಸಂಗೀತಕ್ಕೂ ದನಿಗೂಡಿಸುವುದನ್ನು ಕಲಿತಳು. ಅಮ್ಮನೊಂದಿಗೆ ಹೆಜ್ಜೆ ಹಾಕುತ್ತ ಭರತನಾಟ್ಯದ ಸಂಘ ಬೆಳೆಸಿಕೊಂಡಳು.

ಸಂಗೀತ ಮನೆತನದಲ್ಲಿ ಹುಟ್ಟಿ ಬೆಳೆದ ಮಂಗಳೂರು ಮೂಲದ ಅಮೃತಾ ವಾಸುದೇವ್‌ಗೆ ಸಂಗೀತ, ನೃತ್ಯ, ವಾದ್ಯಗಳ ಜೊತೆಗೆ ರಕ್ತಗತವಾದ ನಂಟಸ್ಥಿಕೆ. ಬೊಂಬೆಯೊಂದಿಗೆ ಆಡುವ ವಯಸ್ಸಿನಲ್ಲಿ ಸಿತಾರ್, ನೃತ್ಯ ಹಾಗೂ ಗಾಯನದಲ್ಲಿ ತೊಡಗಿಕೊಂಡ ಅಮೃತಾ, ಅದಕ್ಕಾಗಿ ಪಡೆದುಕೊಂಡ ಪ್ರಶಸ್ತಿ–ಪುರಸ್ಕಾರಗಳು ಅನೇಕ.

ಅಜ್ಜ ಅನಂತ ಸತ್ಯ ಸಂಜೀವ ಸಿತಾರ್ ವಾದಕ. ಅಜ್ಜ ಸಿತಾರ್ ಹಿಡಿದು ಕುಳಿತರೆ ಈ ಪುಟ್ಟ ಪೋರಿ ಅವರ ಮುಂದೆ ಕುಳಿತು ಅವರ ಬೆರಳು, ಕಣ್ಣುಗಳ ಮೇಳವನ್ನು ನೋಡುತ್ತ ಮೈಮರೆಯುತ್ತಿದ್ದಳು. ಇದನ್ನು ಗಮನಿಸಿದ ಅನಂತ ಸತ್ಯ ಅವರು ಐದನೇ ವಯಸ್ಸಿಗೇ ಅಮೃತಾಳಿಗೆ ಸಿತಾರ ವಾದನದ ಪಾಠ ಆರಂಭಿಸಿದರು. ಇತ್ತ ಅಜ್ಜಿ ಗಿರಿಜಾ ಶಂಕರ್ ಜೊತೆಗೆ ಕುಳಿತು ಕರ್ನಾಟಕಿ ಸಂಗೀತದ ರಾಗಗಳ ಕಡೆಗೂ ಒಲವು ತೋರಿಸಿದ ಅಮೃತಾ, ಅಮ್ಮನೊಂದಿಗೆ (ಗುರು ಶಾರದಾ ಮಣಿ ಶೇಖರ್ ಅವರ ಮಾರ್ಗದರ್ಶನದಲ್ಲಿ) ಭರತನಾಟ್ಯದ ತಾಳಕ್ಕೂ ಸೈ ಎಂದಳು.

ಪ್ರೀತಿ ಇದ್ದಲ್ಲಿ ಕಷ್ಟ ಇರದು
ಕೆಎಲ್‌ಇ ಸೊಸೈಟಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಮೃತಾ ಹಾಡು, ನೃತ್ಯ ಹಾಗೂ ವಾದ್ಯಕ್ಕೆ ಹೇಗೆ ಸಮಯ ಹೊಂದಿಸುತ್ತಾಳೆ. ಇವೆಲ್ಲವುಗಳ ನಡುವೆ ಅವಳು ಶಾಲೆಯಲ್ಲಿ ಉತ್ತಮ ಅಂಕ ತೆಗೆಯುವುದಾದರೂ ಹೇಗೆ, ಇದೆಲ್ಲ ಕಷ್ಟ ಆಗುವುದಿಲ್ಲವೇ?

‘ಇಲ್ಲ, ಪ್ರೀತಿ ಇದ್ದಲ್ಲಿ ಕಷ್ಟ ಎನ್ನುವ ಪದವೇ ಇಲ್ಲ. ನನಗೆ ಎಲ್ಲವೂ ಇಷ್ಟ. ಅಜ್ಜ ವಾದ್ಯ ನುಡಿಸುವುದನ್ನು ನೋಡುತ್ತ ವಾದ್ಯದ ಮೇಲೆ ಪ್ರೀತಿ ಬಂತು, ಅಜ್ಜಿ ಹಾಡುವುದನ್ನು ಕೇಳುತ್ತ ಸಂಗೀತದ ಮೇಲೆ ಒಲವು ಮೂಡಿತು. ಅಮ್ಮ ಹೆಜ್ಜೆ ಹಾಕುವುದನ್ನು ನೋಡಿ ಭರತನಾಟ್ಯ ಕಲಿಯಬೇಕು ಎನಿಸಿತು... ಇದೆಲ್ಲದರೊಂದಿಗೆ ಶಾಲೆಯ ಓದು, ಅಭ್ಯಾಸ, ಪರೀಕ್ಷೆ... ಅದೂ ಬೇಕೇ ಬೇಕು. ಎಲ್ಲಕ್ಕೂ ಅದರದೇ ಆದ ಸಮಯ ಹೊಂದಿಸಿಟ್ಟುಕೊಂಡಿದ್ದೇನೆ. ಇದಕ್ಕೆಲ್ಲ ಅಮ್ಮನ ಪ್ರೀತಿಯೇ ಪ್ರೇರಣೆ’ ಎನ್ನುತ್ತಾಳೆ ಅಮೃತಾ.

‘ಸಿತಾರ್ ನುಡಿಸುವುದು ಸಾಮಾನ್ಯವೇನೂ ಅಲ್ಲ, ಅದರಲ್ಲೂ ಇಷ್ಟು ಚಿಕ್ಕ ವಯಸ್ಸಿಗೇ ಸಿತಾರ್ ಮೀಟುವುದು ಕಷ್ಟದ ಕೆಲಸ. ಅದು ಹೇಗೊ ಗೊತ್ತಿಲ್ಲ, ಅವಳು ಬಹಳ ಪ್ರೀತಿಯಿಂದ ಇದನ್ನೆಲ್ಲ ಕಲಿತಳು’ ಎನ್ನುತ್ತಾರೆ ತಾಯಿ ರೂಪಾ ವಾಸುದೇವ್.

‘ಭೈರವಿ, ಪುರಿಯಾ ಧನಶ್ರೀ ರಾಗಗಳನ್ನು ಅಮೃತಾ ಬಹಳ ಸೊಗಸಾಗಿ ನುಡಿಸುತ್ತಾಳೆ’ ಎನ್ನುವ ರೂಪಾ, ಸ್ವತಃ ಸಿತಾರ್ ವಾದಕಿಯಾಗಿದ್ದು, ಈ ರಾಗಗಳನ್ನು ಕಲಿಯಲು ತಮಗೆ ಎಷ್ಟೊ ವರ್ಷಗಳ ಕಾಲದ ಪ್ರಯತ್ನ ಬೇಕಾಗಿತ್ತು ಎನ್ನುತ್ತಾರೆ.

‘ಇದೆಲ್ಲದರ ಜೊತೆಗೆ ಅವಳು ಓದಿನಲ್ಲೂ ಮುಂದಿದ್ದಾಳೆ. ಹೆಚ್ಚು ಓದುವುದಿಲ್ಲ, ಆದರೆ ಒಮ್ಮೆ ಪಾಠ ಕೇಳಿದ್ದನ್ನು, ಓದಿದ್ದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವಳಿಗೆ ಇಷ್ಟೊಂದು ಏಕಾಗ್ರತೆ ಸಾಧ್ಯವಾಗಿದ್ದೂ ಕೂಡ ಅವಳ ಸಂಗೀತ–ನೃತ್ಯದ ಕೊಡುಗೆಯೆಂದೇ ನಾವು ಭಾವಿಸಿದ್ದೇವೆ’ ಎನ್ನುತ್ತಾರೆ ರೂಪಾ.

ನೃತ್ಯ–ಸಂಗೀತ–ವಾದ್ಯದ ಘರ್ಷಣೆ
‘ನೃತ್ಯ–ಸಂಗೀತ–ವಾದ್ಯ’ ಒಂದಕ್ಕೊಂದು ಪೂರಕವೇ ಹೊರತು ಒಂದಕ್ಕೊಂದು ಯಾವತ್ತೂ ಅಡ್ಡಿಯನ್ನುಂಟು ಮಾಡದು. ವಾದ್ಯ ನುಡಿಸುವ ಹೊತ್ತು ಕೇವಲ ವಾದ್ಯ ನುಡಿಸುತ್ತೇನೆ, ಸಂಗೀತ ಕಲಿಯುವಾಗ ಸಂಗೀತವಷ್ಟೇ ಮುಖ್ಯ. ಹೀಗಾಗಿ ಒಂದರ ಪರೀದಿ ದಾಟಿ ಮತ್ತೊಂದು ಧುಮುಕುವುದಿಲ್ಲ.

ಇವೆಲ್ಲ ಒಂದೇ ದಾರಿಯಲ್ಲಿ, ಒಂದೇ ದಿಕ್ಕಿನೆಡೆಗೆ ಸಾಗುವ ಕಲಾಪ್ರಕಾರಗಳು. ಇಲ್ಲಿ ಘರ್ಷಣೆಗೆ ಆಸ್ಪದವೇ ಇಲ್ಲ. ವಿರುದ್ಧ ದಿಕ್ಕಿನೆಡೆಗೆ ಸಾಗುವಾಗ ಮಾತ್ರ ಘರ್ಷಣೆಯ ವಿಚಾರ ಬರುತ್ತದೆ ಎನ್ನುತ್ತಾಳೆ ಅಮೃತಾ.

ಗುರು–ಶಿಷ್ಯ ಪರಂಪರೆ
‘ಒಂದಂತೂ ಸತ್ಯ. ಗುರುವಿನ ಜಾಗದಲ್ಲಿ ಗುರುವೇ ಇರಲಿ, ಅಜ್ಜ, ಅಜ್ಜಿ, ಅಮ್ಮನೇ ಇರಲಿ, ಇನ್ನು ಕಲಾ ಪ್ರಕಾರ ನೃತ್ಯ, ಸಂಗೀತ, ವಾದ್ಯ ಯಾವುದೇ ಆಗಲಿ... ಕಲಿಕೆಯಲ್ಲಿ ಒಂದು ತನ್ಮಯತೆ, ಶ್ರದ್ಧೆ, ಭಕ್ತಿ, ಪ್ರೀತಿ ಇರಲೇಬೇಕು’ ಎನ್ನುವುದು ಅಮೃತಾ ಕಂಡುಕೊಂಡ ಥಿಯರಿ.
ಸಾಧನೆಯ ಹಾದಿಯಲ್ಲಿ...

ಸಿತಾರ್ ವಾದನದಲ್ಲಿ ಮುಂಬೈನ ಗಂಧರ್ವ ಮಹಾವಿದ್ಯಾಲಯದ ಪ್ರವೇಶಿಕಾ ಪರೀಕ್ಷೆ ಮುಗಿಸಿದ್ದಾಳೆ ಅಮೃತಾ. ಭರತನಾಟ್ಯ ಹಾಗೂ ಕರ್ನಾಟಕಿ ಸಂಗೀತದಲ್ಲಿ ಕರ್ನಾಟಕ ಸರ್ಕಾರದ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ (ಶೇ 91) ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಬೆಂಗಳೂರು, ಮೈಸೂರು, ಮಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆ ಹಲವಾರು ಕಾರ್ಯಕ್ರಮಗಳನ್ನು ನೀಡಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಭಾರತ ಸರ್ಕಾರದ ರಾಷ್ಟ್ರ ಮಟ್ಟದ ಸಿಸಿಆರ್‌ಟಿ ಪರೀಕ್ಷೆಯಲ್ಲಿಯೂ ಸಾಧನೆ ಮಾಡಿ, ಸಿತಾರ್ ಕಲಿಯಲು ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT