ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಉತ್ಪಾದನೆ ಹೆಚ್ಚಳ

ಹೆಚ್ಚುವರಿ ಸಕ್ಕರೆ ಖರೀದಿಸುವಂತೆ ಸರ್ಕಾರಕ್ಕೆ ಐಎಸ್‌ಎಂಎ ಒತ್ತಾಯ
Last Updated 1 ಮೇ 2015, 19:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಸಕ್ಕರೆ ಉತ್ಪಾದನೆಯು ಅಕ್ಟೋಬರ್‌–ಏಪ್ರಿಲ್‌ ಮಾರುಕಟ್ಟೆ ಅವಧಿಯಲ್ಲಿ ಶೇ 14ರಷ್ಟು ಹೆಚ್ಚಾಗಿದ್ದು, 273 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ) ಮಾಹಿತಿ ನೀಡಿದೆ.

ಈ ವರ್ಷ ಒಟ್ಟು 248 ಲಕ್ಷ ಟನ್‌ ಸಕ್ಕರೆ ಬೇಡಿಕೆ ಇದೆ. ಇದಕ್ಕೆ ಅನುಗುಣ ವಾಗಿ ಲೆಕ್ಕಹಾಕಿದರೆ ಈ ಬಾರಿ ಹೆಚ್ಚುವರಿ ಯಾಗಿ 25 ಲಕ್ಷ ಟನ್‌ ಉತ್ಪಾದನೆ ಯಾಗಿದೆ. ಕಳೆದ ವರ್ಷ 243 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಲಾಗಿತ್ತು.

ದೇಶದಲ್ಲಿಯೇ ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಮಹಾರಾಷ್ಟ್ರದಲ್ಲಿ ಈ ಅವಧಿಯಲ್ಲಿ 103.50 ಲಕ್ಷ ಟನ್‌ ಗಳಷ್ಟು ಸಕ್ಕರೆ ಉತ್ಪಾದನೆ ಯಾಗಿದ್ದು, ಸಾರ್ವಕಾಲೀನ ಗರಿಷ್ಠ ಮಟ್ಟ ತಲುಪಿದೆ ಎಂದು ಐಎಸ್‌ಎಂಎ ಪ್ರಕಟಣೆ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ 70 ಲಕ್ಷ ಟನ್‌ಗಳಷ್ಟು, ಕರ್ನಾಟಕದಲ್ಲಿ 47 ಲಕ್ಷ ಟನ್‌, ತಮಿಳುನಾಡಿನಲ್ಲಿ 9 ಲಕ್ಷ ಟನ್‌ ಸಕ್ಕೆರೆ ಉತ್ಪಾದನೆಯಾಗಿದೆ.
ಉತ್ತಾರಾಖಂಡ್‌ನಲ್ಲಿ 3.25 ಲಕ್ಷ ಟನ್‌, ಬಿಹಾರದಲ್ಲಿ 5.23 ಲಕ್ಷ ಟನ್‌ ಹಾಗೂ ಪಂಜಾಬ್‌ನಲ್ಲಿ 5.25 ಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾಗಿದೆ. ಗುಜರಾತ್‌ ಮತ್ತು ತೆಲಂಗಾಣದಲ್ಲಿ ಮಾತ್ರ ಈ ಬಾರಿ ಸಕ್ಕರೆ ಉತ್ಪಾದನೆ ಕುಸಿತ ಕಂಡಿದೆ.

ಪ್ರಸಕ್ತ ಮಾರುಕಟ್ಟೆ ಅವಧಿಯಲ್ಲಿ ಒಟ್ಟಾರೆ ಸಕ್ಕರೆ ಉತ್ಪಾದನೆ 280 ಲಕ್ಷ ಟನ್‌ಗಳಿಗೆ ತಲುಪುವ ಸಾಧ್ಯತೆ ಇದೆ. ಈ ವರ್ಷದ ಅಂತ್ಯಕ್ಕೆ 35 ಲಕ್ಷ ಟನ್‌ಗಳಷ್ಟು ಅಧಿಕ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ಐಎಸ್‌ಎಂಎ ಹೇಳಿದೆ.

ಖರೀದಿಗೆ ಒತ್ತಾಯ: ಸರ್ಕಾರ ಶೀಘ್ರವೇ ಕನಿಷ್ಠ 30 ಲಕ್ಷ ಟನ್‌ ಸಕ್ಕರೆಯನ್ನು ಖರೀದಿ ಮಾಡಬೇಕು. ಇದರಿಂದ ಕಾರ್ಖಾನೆಗಳಿಗೆ ₹ 8 ಸಾವಿರ ಕೋಟಿ ಹಣ ಸಿಗಲಿದೆ. ಈ ಹಣವು  ರೈತರಿಗೆ ಕಬ್ಬು ಬಾಕಿ ನೀಡಲು ನೆರವಾಗುವ ಜತೆಗೆ ಸಕ್ಕರೆ ಬೆಲೆ ಚೇತರಿಕೆಗೂ ದಾರಿ ಮಾಡಿಕೊಡಲಿದೆ ಎಂದು ಐಎಸ್‌ಎಂಎ ಅಧ್ಯಕ್ಷ ವೆಲ್ಯಾನ್‌ ತಿಳಿಸಿದ್ದಾರೆ.

ದೇಶಿ ಕಾರ್ಖಾನೆಗಳಿಗೆ ಬೆಂಬಲ ನೀಡಲು, ಸಕ್ಕರೆ ಆಮದು ಮೇಲಿನ ಸುಂಕವನ್ನು ಶೇ 40ರಷ್ಟು ಹೆಚ್ಚಿಸಿದೆ. ಇಥೆನಾಲ್‌ ಮೇಲಿನ ಸೀಮಾ ಸುಂಕ ವನ್ನೂ ತೆಗೆದುಹಾಕಿದೆ. ಆದರೆ ಇದ ರಿಂದ ದೇಶದಲ್ಲಿ ಕುಸಿದಿರುವ ಸಕ್ಕರೆ ಬೆಲೆಯಲ್ಲಿ ಏರಿಕೆ ಸಾದ್ಯವಿಲ್ಲ. ರೈತರಿಗೆ ಕಬ್ಬು ಬಾಕಿ ₹ 21 ಸಾವಿರ ಕೋಟಿಯನ್ನೂ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಐಎಸ್‌ಎಂಎ ಸರ್ಕಾರಕ್ಕೆ ತಿಳಿಸಿದೆ.

ರಫ್ತು ಇಳಿಕೆ: ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಆಧಿಕ ಪ್ರಮಾಣದಲ್ಲಿ ಸಕ್ಕರೆ ದಾಸ್ತಾನಾಗಿರುವುದರಿಂದ ಬೆಲೆ ಇಳಿಕೆಯಾಗಿದೆ. ಇದರಿಂದ ರಫ್ತ ಸಹ ಕುಸಿದಿದೆ ಎಂದು ವೆಲ್ಯಾನ್‌ ತಿಳಿಸಿದ್ದಾರೆ.

ಸರ್ಕಾರ, ಕೆಂಪು ಸಕ್ಕರೆ ರಫ್ತು ಮಾಡಲು ಉತ್ತೇಜನ ಯೋಜನೆ ಪ್ರಕಟಿಸಿದ್ದರೂ ಸಹ ಎರಡು ತಿಂಗಳಿನಲ್ಲಿ 1.50 ಲಕ್ಷ ಟನ್‌ಗಳಷ್ಟು ಮಾತ್ರ
ರಫ್ತು ಮಾಡಲಾಗಿದೆ.
*
ಅಂಕಿ ಅಂಶ
270 ಲಕ್ಷ ಟನ್‌ ಅಕ್ಟೋಬರ್–ಏಪ್ರಿಲ್‌ ಅವಧಿಗೆ ಸಕ್ಕರೆ ಉತ್ಪಾದನೆ
248 ಲಕ್ಷ ಟನ್‌ ಅಕ್ಟೋಬರ್‌–ಏಪ್ರಿಲ್‌ ಅವಧಿಗೆ ದೇಶದಲ್ಲಿ ಸಕ್ಕರೆ ಬೇಡಿಕೆ 
*
ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ದಲ್ಲಿ ಕಳೆದ ವರ್ಷಕ್ಕಿಂತಲೂ ಅಧಿಕ ಸಕ್ಕರೆ ಉತ್ಪಾದನೆಯಾಗಿದೆ.ಇದರಿಂದ ಒಟ್ಟು ಉತ್ಪಾದನೆ ಏರಿಕೆಯಾಗಿದೆ.
- ವೆಲ್ಯಾನ್‌,
ಐಎಸ್‌ಎಂಎ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT