ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ನಾಡಿನಲ್ಲಿ ಸಿರಿಧಾನ್ಯದ ಸವಿ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

‘…ಖಂಡಿತ ಸಾಧ್ಯವಿಲ್ಲ’ ಎಂಬ ಕೃಷಿ ವಿಜ್ಞಾನಿಗಳ ಮಾತನ್ನು ರೈತರು ಸುಳ್ಳು ಮಾಡಿದ್ದಾರೆ. ಬೇಸಿಗೆ ಭತ್ತಕ್ಕೆ ನೀರಿಲ್ಲದೇ ಗದ್ದೆಗಳನ್ನು ಖಾಲಿ ಬಿಡುವುದರ ಬದಲಿಗೆ, ಅಲ್ಲಿ ಯಶಸ್ವಿ ಯಾಗಿ ಸಿರಿಧಾನ್ಯ ಬೆಳೆದು ‘ಸೈ’ ಅನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಕೆಲವು ರೈತರ ಈ ಪ್ರಯೋಗ, ಬೇಸಿಗೆ ಬವಣೆಗೆ ಹೊಸ ಪರಿಹಾರ ಕೊಡಬಲ್ಲದು.

ಸುಲಭವಾಗಿ ನೀರು ಸಿಗುವಾಗ ನೀರಾವರಿ ಆಶ್ರಯದ ಬೆಳೆ ಬಿಟ್ಟು ಬೇರೆ ಬೆಳೆ ಯಾಕೆ ಎಂದು ಉದಾಸೀನ ಮಾಡುತ್ತಿದ್ದವರಿಗೆ ಈ ಬಾರಿ ಬೇಸಿಗೆ ಬಲವಾದ ಹೊಡೆತ ನೀಡಿದೆ. ಬರಿ ಕಬ್ಬು, ಭತ್ತ ಕಾಣುತ್ತಿದ್ದ ಗದ್ದೆಗಳು ಪಾಳುಬಿದ್ದಂತೆ ಭಾಸವಾಗುತ್ತಿವೆ. ಬೇಸಿಗೆಯಲ್ಲಿ ಕಾವೇರಿ ನೀರು ಸಿಗದೇ ಇರುವುದರಿಂದ, ವರ್ಷಕ್ಕೆರಡು ಬೆಳೆ ಕನಸಾಗಿಯೇ ಉಳಿದಿದೆ. ಮಂಡ್ಯದ ಬಹುತೇಕ ಕಡೆ ಇದಕ್ಕಿಂತ ಬೇರೆ ನೋಟ ಕಾಣದು.

ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಒಂದರ್ಥದಲ್ಲಿ ಇದು ಪರೀಕ್ಷೆಯ ಸಮಯ. ಹೆಚ್ಚೆಚ್ಚು ನೀರು ಬಯಸುವ ಬೆಳೆಗಳನ್ನು ಮಾತ್ರ ನೆಚ್ಚಿಕೊಂಡರೆ ಭವಿಷ್ಯದಲ್ಲಿ ಏನಾದಿತು ಎಂಬುದನ್ನು ಅರಿಯುವ ಕಾಲವೂ ಹೌದು! ಉತ್ತರಕ್ಕಾಗಿ ಎಲ್ಲೆಲ್ಲೋ ನೋಡಬೇಕಿಲ್ಲ. ಕಾವೇರಿ ನದಿಗೆ ಕೃಷ್ಣರಾಜ ಜಲಾಶಯ ಕಟ್ಟುವುದಕ್ಕೂ ಮುನ್ನ ಇಲ್ಲಿ ಅಳವಡಿಸಿಕೊಂಡಿದ್ದ ಕೃಷಿ ವಿಧಾನದತ್ತ ಒಮ್ಮೆ ಹಿಂತಿರುಗಿ ನೋಡಿದರೆ ಸಾಕು. ಆಗೆಲ್ಲ ಬೇಸಿಗೆಯಲ್ಲಿ ಕೆರೆಗಳ ಕೆಳಭಾಗದಲ್ಲಿ ರಾಗಿ, ಹುರುಳಿ ಕೃಷಿ ಇತ್ತು.

ಅಲ್ಲಲ್ಲಿ ಸಿರಿಧಾನ್ಯಗಳನ್ನು ಸಹ ಬೆಳೆಯಲಾಗುತ್ತಿತ್ತು. ಆದರೆ ಈಗ ಜಲಾಶಯದಲ್ಲಿ ನೀರಿಲ್ಲ. ಭತ್ತ– ಕಬ್ಬು ನೆಚ್ಚಿಕೊಂಡವರು ನಿರಾಶೆಯಿಂದ ಕುಳಿತಿರುವಾಗ, ಕೆಲವು ರೈತರು ಹೊಸ ಬೆಳಕಿನತ್ತ ಹೆಜ್ಜೆ ಹಾಕಿದ್ದಾರೆ. ಮಳೆಗಾಲದಲ್ಲಿ ಬೆಳೆದ ಭತ್ತವನ್ನು ಕಟಾವು ಮಾಡಿದ ಬಳಿಕ ಉಳಿದುಕೊಂಡಿದ್ದ ತೇವಾಂಶದಲ್ಲೇ ಸಿರಿಧಾನ್ಯಗಳನ್ನು ಉತ್ತಮವಾಗಿ ಬೆಳೆದಿದ್ದಾರೆ. ಈ ಪದ್ಧತಿಯನ್ನು ಜನಪ್ರಿಯಗೊಳಿಸಿದರೆ, ಕಡಿಮೆ ನೀರಿನಲ್ಲೇ ಖಚಿತ ಆದಾಯ ಪಡೆಯುವ ದಾರಿಯೊಂದನ್ನು ಕಂಡುಕೊಂಡಂತಾಗುತ್ತದೆ.

ಇದೆಲ್ಲ ಆಗಿದ್ದು ಹೀಗೆ: ಕಬ್ಬು ಬೆಳೆಗಾರರ ಆತ್ಮಹತ್ಯೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಂಡ್ಯದಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ‘ಸಹಜ ಸಮೃದ್ಧ’ ಸಂಸ್ಥೆಯು ನಬಾರ್ಡ್ ನೆರವಿನೊಂದಿಗೆ ದೇಸಿ ಬೀಜ ಮೇಳ ಹಮ್ಮಿಕೊಂಡಿತ್ತು. ಸಮಸ್ಯೆಗೆ ಸಿಲುಕಿರುವ ರೈತರಿಗೆ ಸಿಗಬಹುದಾದ ಪರ್ಯಾಯ ಮಾರ್ಗಗಳ ಹುಡುಕಾಟದ ಚರ್ಚೆಯೂ ನಡೆದಿತ್ತು. ನೀರಾವರಿ ಸೌಲಭ್ಯವಿಲ್ಲದೇ ಬೆಳೆಯಬಹುದಾದ ಸಿರಿಧಾನ್ಯಗಳನ್ನು ಪರಿಚಯಿಸಲು ನಿರ್ಧರಿಸಿದಾಗ ಕೆಲ ರೈತರು ಆಸಕ್ತಿ ತೋರಿದ್ದರು.

ಭತ್ತದ ಎರಡು ಬೆಳೆಗೆ ಕಾವೇರಿ ನೀರು ಪಡೆಯುವ ಅದೃಷ್ಟ ಮಂಡ್ಯ ಜಿಲ್ಲೆ ರೈತರದು. ಜೂನ್‌ನಿಂದ ಡಿಸೆಂಬರ್‌ವರೆಗೆ, ಬಳಿಕ ಜನವರಿಯಿಂದ ಮೇ ತಿಂಗಳವರೆಗೆ ನೀರು ಲಭ್ಯ. ಈ ವರ್ಷದ ಜನವರಿ ಅಂತ್ಯದ ಹೊತ್ತಿಗೆ ಮಳೆಗಾಲದ ಭತ್ತ ಕಟಾವು ಆಗಿತ್ತು. ಆದರೆ ಕೆ.ಆರ್.ಎಸ್ ಖಾಲಿಯಾಗಿದ್ದರಿಂದ, ಬೇಸಿಗೆ ಬೆಳೆಗೆ ನೀರು ಸಿಗಲೇ ಇಲ್ಲ. ಗದ್ದೆಗಳೆಲ್ಲ ಖಾಲಿ ಖಾಲಿ. ಅದೇ ಸಮಯದಲ್ಲಿ ಮದ್ದೂರು ತಾಲ್ಲೂಕಿನ ಗೂಳೂರುದೊಡ್ಡಿಯಲ್ಲಿ ನಡೆದ ದೇಸಿ ಭತ್ತದ ಕ್ಷೇತ್ರೋತ್ಸವದ ಸಂದರ್ಭದಲ್ಲಿ ಈ ವಿಷಯ ಚರ್ಚೆಗೆ ಬಂದು, ಒಂದಷ್ಟು ರೈತರು ಸಿರಿಧಾನ್ಯ ಬೆಳೆಯಲು ಮುಂದಾದರು.

‘ಸಿರಿಧಾನ್ಯ ಕೃಷಿ ಉತ್ತೇಜಿಸುವ ನಮ್ಮ ನಿರ್ಧಾರದ ಹಿಂದೆ ಪ್ರಯೋಗ­ವೊಂದನ್ನು ನಡೆಸುವ ಉದ್ದೇಶವೂ ಇತ್ತು. ಅದು– ಬೇಸಿಗೆಯಲ್ಲಿ ಈ ಬೆಳೆ ಬರಬಹುದೇ ಎಂಬುದು. ರೈತರನ್ನು ಸಿರಿಧಾನ್ಯಗಳತ್ತ ಪ್ರೇರೇಪಿಸುವ ಮುನ್ನ ಮಾಹಿತಿ ಪಡೆಯಲು ಮಂಡ್ಯ ಸಮೀಪದ ಕೃಷಿ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿದೆವು. ಅಲ್ಲಿ ಸಿಕ್ಕ ಸಲಹೆ ಮಾತ್ರ ನಮ್ಮನ್ನು ಅಚ್ಚರಿಗೊಳಿಸಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ‘ಸಹಜ ಸಮೃದ್ಧ’ದ ಸಂಯೋಜಕ ಸಿ.ಶಾಂತಕುಮಾರ್.

‘ಬೇಸಿಗೆಯಲ್ಲಿ ಯಾವ ಸಿರಿಧಾನ್ಯವೂ ಚೆನ್ನಾಗಿ ಬೆಳೆಯುವುದಿಲ್ಲ. ಸುಮ್ಮನೆ ಸಮಯ, ಹಣ ಯಾಕೆ ಹಾಳು ಮಾಡಿಕೊಳ್ಳುತ್ತೀರಿ’ ಎಂದು ಅಲ್ಲಿನ ಸಿರಿಧಾನ್ಯ ವಿಭಾಗದ ಮುಖ್ಯಸ್ಥರು ಪ್ರಶ್ನಿಸಿದ್ದರಂತೆ! ಹಾಗಿದ್ದರೂ ‘ಜಮೀನು ಪಾಳು ಬಿಡುವುದಕ್ಕಿಂತ ಎಷ್ಟಾದರೂ ಬೆಳೆದುಕೊಳ್ಳಲಿ’ ಎಂದುಕೊಂಡು ಆಸಕ್ತ ಹತ್ತು ರೈತರಿಗೆ ಬರಗು ಹಾಗೂ ಕೊರಲೆ ಬೀಜ ಕೊಡಲಾಗಿತ್ತು.

ಕೊಯಿಲು ನಡೆದ ಗದ್ದೆಗಳಲ್ಲಿ ತೇವಾಂಶವು ಶಿವರಾತ್ರಿವರೆಗೆ ಉಳಿದುಕೊಂಡಿರುತ್ತದೆ. ಅಷ್ಟು ಹೊತ್ತಿಗೆ ಸಿರಿಧಾನ್ಯ ಮೊಳಕೆಯೊಡೆದಿರುತ್ತದೆ. ಮುಂದಿನ ದಿನಗಳಲ್ಲಿ ತೇವ ಇಲ್ಲದೇ ಹೋದರೂ ಅದರಲ್ಲಿನ ಬರನಿರೋಧಕ ಗುಣದಿಂದ ಎದ್ದು ನಿಲ್ಲುತ್ತದೆ. ಅದರಲ್ಲೂ ಕೊರಲೆಯನ್ನು ವರ್ಷಪೂರ್ತಿ ಬೆಳೆಯಬಹುದು. ಇಲ್ಲಿ ಆಗಿದ್ದೂ ಅದೇ.  ಜನವರಿಯಲ್ಲಿ ಭತ್ತದ ಕಟಾವು ಆದ ಬಳಿಕ ಅದೇ ಗದ್ದೆಗಳಲ್ಲಿ ಸಿರಿಧಾನ್ಯ ಬಿತ್ತನೆ ಮಾಡಲಾಯಿತು.

ಗದ್ದೆಯ ತೇವಾಂಶ ಬಳಸಿಕೊಂಡು ಬೆಳೆ ಈಗ ಹುಲುಸಾಗಿ ಬಂದಿದೆ. ಹೆಚ್ಚಿನ ಗೊಬ್ಬರ ಹಾಕಿಲ್ಲ; ಕೀಟ ಅಥವಾ ರೋಗದ ಬಾಧೆ ಕಂಡಿಲ್ಲ. ‘ಇಂಥ ಹೊಸ ದಾರಿ ಹುಡುಕಲು ರೈತರ ಜತೆ ಕೈಜೋಡಿಸಬೇಕಾದ ಕೃಷಿ ವಿಜ್ಞಾನಿಗಳು ಕಚೇರಿಯಲ್ಲೇ ಕುಳಿತು ರೈತರನ್ನು ದಾರಿ ತಪ್ಪಿಸುತ್ತಾರೆ. ಅತ್ಯುತ್ತಮವಾಗಿ ಬೆಳೆದ ಸಿರಿಧಾನ್ಯವನ್ನು ನೋಡಿದರೆ ತಮ್ಮ ಸಲಹೆಗೆ ತಾವೇ ನಾಚಿಕೆ ಪಡಬೇಕಿತ್ತು’ ಎಂದು ಟೀಕಿಸುತ್ತಾರೆ ಶಾಂತಕುಮಾರ್. ಹಳೇಬೂದನೂರಿನ ಪುಟ್ಟಸ್ವಾಮಿ ಸಿರಿಧಾನ್ಯಗಳ ಬಗ್ಗೆ ಕೇಳಿದ್ದರಷ್ಟೇ. ಈ ವರ್ಷ ಅದರ ಬಿತ್ತನೆ ಮಾಡಿದ್ದಾರೆ.

‘ನಾನು ಹತ್ತು ಗುಂಟೆಯಲ್ಲಿ ಬರಗು ಹಾಕಿದ್ದೆ. ಬರೀ ಬಿತ್ತನೆ ಮಾಡಿದ್ದೊಂದೇ ಕೆಲಸ. ಗೊಬ್ಬರ ಹಾಕಿಲ್ಲ; ನೀರನ್ನೂ ಕೊಟ್ಟಿಲ್ಲ. ಖಂಡಿತವಾಗಿಯೂ ಇದೊಂದು ಅದ್ಭುತ ಬೆಳೆ’ ಎಂದು ಉದ್ಗರಿಸುತ್ತಾರೆ. ಚಿಕ್ಕವಳ್ಳಿ ಗ್ರಾಮದ ತಿಮ್ಮೇಗೌಡರು ಭತ್ತ–ಕಬ್ಬು ಕಟಾವು ಬಳಿಕ ಬರಗು ಬಿತ್ತಿದ್ದಾರೆ. ಅವರ ಅನುಭವವೂ ಅಷ್ಟೇ. ‘ಬೆಳವಣಿಗೆ ಚೆನ್ನಾಗಿದೆ. ಭತ್ತಕ್ಕೆ ಹೋಲಿಸಿದರೆ ಇದು ತೀರಾ ಸುಲಭ’ ಎಂದು ಬಣ್ಣಿಸುತ್ತಾರೆ. ತೆನೆ ಬರುತ್ತಲೇ ಹಕ್ಕಿಗಳ ‘ದಾಳಿ’ ಹೆಚ್ಚಾಗಿದೆಯಂತೆ.

ಆ ಒಂದು ತೊಂದರೆ ಹೊರತುಪಡಿಸಿದರೆ ಸಿರಿಧಾನ್ಯ ಕೃಷಿಯಿಂದ ಖುಷಿಪಟ್ಟವರೇ ಹೆಚ್ಚು. ದೇಸಿ ಭತ್ತ ಸಂರಕ್ಷಕ, ಶಿವಳ್ಳಿಯ ಬೋರೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮಳೆಯಾಶ್ರಯ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಿರಿಧಾನ್ಯ ಬೆಳೆಯಬಲ್ಲವೇ? ಇದು ಗೌಡರ ಕುತೂಹಲ. ಒಂದು ಎಕರೆ ಗದ್ದೆಯಲ್ಲಿ ಭತ್ತ ಕಟಾವು ಆದ ಬಳಿಕ ಸಜ್ಜೆ, ನವಣೆ, ಬರಗು, ಸಾಮೆ, ಊದಲು, ಕೊರಲು, ರಾಗಿ ಹಾಗೂ ಹಾರಕ ಬಿತ್ತಿದ್ದಾರೆ. ಹಾರಕ­ವೊಂದನ್ನು ಹೊರತುಪಡಿಸಿ ಉಳಿದೆಲ್ಲ ಬೆಳೆ ಕಣ್ಣುಕುಕ್ಕುವಂತಿದೆ.

‘ಈ ವರ್ಷ ಬೇಸಿಗೆಯಲ್ಲಿ ನೀರು ಸಿಗದೇ ಹೋಗಿದ್ದರಿಂದ ಸಾವಿರಾರು ಎಕರೆ ಪಾಳುಬಿದ್ದಿದೆ. ಹೀಗೆ ಜಮೀನನ್ನು ಹಾಳು ಮಾಡುವುದಕ್ಕಿಂತ ಸಿರಿಧಾನ್ಯಗಳನ್ನು ಸುಲಭವಾಗಿ ಬೆಳೆದುಕೊಳ್ಳಬಹುದು ಎಂಬ ಅನುಭವ ನಮಗೆ ಸಿಕ್ಕಿದೆ’ ಎನ್ನುತ್ತಾರೆ ಬೋರೇಗೌಡರು. ಸಾಕಷ್ಟು ನೀರು ಸಿಕ್ಕುತ್ತದೆಂದು ಬರೀ ಭತ್ತ ಅಥವಾ ಕಬ್ಬು ಬೆಳೆದವರು ಹೆಚ್ಚು ಲಾಭವನ್ನೇನೂ ಗಳಿಸುತ್ತಿಲ್ಲ. ಅದರದೇ ಆದ ನೂರಾರು ಸಮಸ್ಯೆಗಳು ಆ ರೈತರನ್ನು ಕಾಡುತ್ತಿವೆ.

ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆಯೇನು ಕಡಿಮೆಯೇ? ಆದರೆ ಕತ್ತಲಲ್ಲೂ ಬೆಳಕು ಕಾಣಿಸಿದೆ. ಒಂದೊಮ್ಮೆ ನೀರು ಸಿಗದೇ ಹೋದಾಗ ಸಿರಿಧಾನ್ಯಗಳನ್ನಾದರೂ ಬೆಳೆದುಕೊಳ್ಳಬಹುದೆಂಬ ಹೊಸ ಹಾದಿಯನ್ನು ಮಂಡ್ಯ ಜಿಲ್ಲೆಯ ರೈತರು ಯಾರ ಸಹಾಯವಿಲ್ಲದೆಯೇ ತೋರಿಸಿದ್ದಾರೆ. ಅದು ಉಳಿದ ರೈತರಿಗಷ್ಟೇ ಅಲ್ಲ; ಜಡ್ಡುಗಟ್ಟಿ ಕುಳಿತಿರುವ ಕೃಷಿ ಇಲಾಖೆ, ಸಂಶೋಧನಾ ಸಂಸ್ಥೆಗಳಿಗೂ ಮಾರ್ಗದರ್ಶನ ನೀಡಬಹುದಾದ ಪರಿಹಾರ ಮಾರ್ಗ.

ಬೋರೇಗೌಡ ಅವರ ಸಂಪರ್ಕಕ್ಕೆ: 9986381167

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT