ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ ಹಾದಿಯಲ್ಲಿ ಕೊಹ್ಲಿ

ವ್ಯಕ್ತಿ
Last Updated 9 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಸುನಿಲ್‌ ಗಾವಸ್ಕರ್ ನಿವೃತ್ತಿಯಂಚಿನಲ್ಲಿದ್ದಾಗ ಭಾರತದ ಕ್ರಿಕೆಟ್‌ನಲ್ಲಿ ಶೂನ್ಯ ಭಾವ ಆವರಿಸಿತ್ತು. ಮುಂದೆ ಈ ರೀತಿಯ ಆಟಗಾರರು ಬರುತ್ತಾರೋ ಇಲ್ಲವೋ ಎಂಬ ಚರ್ಚೆ ಶುರುವಾಗಿತ್ತು. ಕೇವಲ ಎರಡೇ ವರ್ಷಗಳಲ್ಲಿ ಸಚಿನ್‌ ತೆಂಡೂಲ್ಕರ್‌ ರೂಪದಲ್ಲಿ ಉತ್ತರ ಲಭಿಸಿತ್ತು. ಸಚಿನ್‌ ವಿದಾಯ ಹೇಳಿದಾಗಲೂ ಇಂಥದ್ದೇ ಭಾವ ಸೃಷ್ಟಿಯಾಗಿತ್ತು.

ಈಚೆಗೆ ಕೊನೆಗೊಂಡ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪೈಪೋಟಿ ನಡೆಸುವಾಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಕೈಯಲ್ಲಿ ‘ಗಾಡ್‌ ರಿಟರ್ನ್ಸ್‌’ (ದೇವರು ಹಿಂತಿರುಗಿದ್ದಾನೆ) ಎಂಬ ಬರಹವಿದ್ದ ಪೋಸ್ಟರ್‌ಗಳಿದ್ದವು. ನಿಸ್ಸಂದೇಹವಾಗಿ ಅದು ವಿರಾಟ್‌ ಕೊಹ್ಲಿ ಅವರನ್ನು ಉದ್ದೇಶಿಸಿತ್ತು. ಸಚಿನ್‌ ವಿದಾಯದ ಕೊರಗಿನಲ್ಲಿದ್ದ ಭಾರತದ ಕ್ರಿಕೆಟಿಗೆ ಲಭಿಸಿದ ಭರವಸೆಯ ಬ್ಯಾಟ್ಸ್‌ಮನ್‌. ‘ಆ್ಯನ್‌ ಅಗ್ರೆಸಿವ್‌ ಲಿಟಲ್ ಮಾಸ್ಟರ್‌’!

27 ವರ್ಷದ ಕೊಹ್ಲಿ ಅವರ ಆಟಕ್ಕೆ ಇಡೀ ವಿಶ್ವ ಕ್ರಿಕೆಟ್‌ ಚಪ್ಪಾಳೆ ತಟ್ಟುತ್ತಿದೆ. ಅದರಲ್ಲೂ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಎದುರು ತೋರಿದ ಅಮೋಘ ಆಟ ಅವರನ್ನು ವಿಶ್ವ ದಿಗ್ಗಜರ ಸಾಲಿನಲ್ಲಿ ನಿಲ್ಲಿಸಿದೆ. 4 ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಟೆಸ್ಟ್‌, ಏಕದಿನ ಹಾಗೂ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಉತ್ತಮ ಸರಾಸರಿ ಕಾಯ್ದುಕೊಂಡಿದ್ದಾರೆ. ಬ್ಯಾಟಿಂಗ್‌ ಶೈಲಿ, ಹೊಡೆತಗಳ ಆಯ್ಕೆ, ಕ್ಷೇತ್ರರಕ್ಷಣೆ, ಸವಾಲು ಬೆನ್ನಟ್ಟುವಾಗ ಅವರ ದೇಹಭಾಷೆಯಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಅವರು ಕ್ರೀಸ್‌ನಲ್ಲಿದ್ದಷ್ಟೂ ಸಮಯ ಅಭಿಮಾನಿಗಳಿಗೆ ಗೆಲುವಿನ ವಿಶ್ವಾಸ. ಇದೇ ವಿಶ್ವಾಸವನ್ನು ತೆಂಡೂಲ್ಕರ್‌ ಮೂಡಿಸಿದ್ದರು.

ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ ಉದ್ಧಟತನ, ಹುಡುಗಾಟಿಕೆ, ಎದುರಾಳಿಯನ್ನು ಹೀಯಾಳಿಸುವ ಮನೋಭಾವದಿಂದ ಕೊಹ್ಲಿ ಟೀಕಾ ಪ್ರಹಾರಕ್ಕೆ ಗುರಿಯಾಗಿದ್ದರು. ಮೈ ತುಂಬಾ ಟ್ಯಾಟೂ ಅಂಟಿಸಿಕೊಂಡು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ನಾಗಪುರದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಲೇಬೇಕು. ಪಂದ್ಯಕ್ಕೂ ಮುನ್ನ ಬೌಂಡರಿ ಗೆರೆ ಬಳಿ ಭಾರತದ ಆಟಗಾರರು ತಾಲೀಮು ನಡೆಸುತ್ತಿದ್ದರು. ಚೆಂಡು ಪದೇಪದೇ ಕ್ಯಾಮೆರಾಗಳಿಗೆ ತಾಗುತ್ತಿತ್ತು. ಕೊಂಚ ದೂರ ಹೋಗಿ ಅಭ್ಯಾಸ ನಡೆಸುವಂತೆ ಛಾಯಾಗ್ರಾಹಕರು ಮನವಿ ಮಾಡಿದರು. ‘ಕ್ಷಮಿಸಿ’ ಎಂದು ಹೇಳಿದ ಸಚಿನ್ ಹಾಗೂ ಸೆಹ್ವಾಗ್‌ ಬೇರೆ ಕಡೆ ಅಭ್ಯಾಸ ಮಾಡಲು ತೆರಳಿದರು.

ಆದರೆ, ಕೊಹ್ಲಿ ಮಾತ್ರ ಅಲ್ಲೇ ಅಭ್ಯಾಸ ಮಾಡುತ್ತಾ ಉದ್ದೇಶಪೂರ್ವಕವಾಗಿ ಕ್ಯಾಮೆರಾಗಳತ್ತ ಚೆಂಡನ್ನು ಬಾರಿಸತೊಡಗಿದರು. ಇದರಿಂದ ಕೊಹ್ಲಿ ಹಾಗೂ ಛಾಯಾಗ್ರಾಹಕರ ನಡುವೆ ಮಾತಿನ ಚಕಮಕಿಯೇ ನಡೆಯಿತು. ಮತ್ತೊಮ್ಮೆ ಪ್ರೇಕ್ಷಕರತ್ತ ಮಧ್ಯದ ಕೈಬೆರಳು ತೋರಿಸಿ ವಿವಾದಕ್ಕೆ ಸಿಲುಕಿದ್ದರು. ಹಿರಿಯ ಆಟಗಾರರನ್ನು ಗೌರವಿಸುವುದಿಲ್ಲ ಎಂಬ ದೂರು ಇತ್ತು.

ನಟಿ ಅನುಷ್ಕಾ ಶರ್ಮಾ ಜೊತೆಗಿನ ಒಡನಾಟದ ಬಳಿಕ ಅಭಿಮಾನಿಗಳಿಂದ ಟೀಕೆಗಳನ್ನೂ ಎದುರಿಸಬೇಕಾಯಿತು. ಆದರೆ, ಕಳೆದ ಎರಡು ವರ್ಷಗಳಲ್ಲಿ ವಿರಾಟ್‌ ಅವರ ವರ್ತನೆಯಲ್ಲಿ ಬದಲಾವಣೆಗಳಾಗಿವೆ. ಪಾಕಿಸ್ತಾನದ ವಿರುದ್ಧ ಅರ್ಧ ಶತಕ ಗಳಿಸಿದಾಗ ಗ್ಯಾಲರಿಯಲ್ಲಿದ್ದ ಸಚಿನ್‌ ಅವರತ್ತ ಬ್ಯಾಟ್‌ ತೋರಿಸಿ ವಂದಿಸಿದ ರೀತಿ, ಅನುಷ್ಕಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪರಿ ಹಾಗೂ ವಿಂಡೀಸ್‌ ಎದುರು ಸೋತಾಗ ಅವರ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಅಭಿನಂದಿಸಿದ ರೀತಿ ಮಾಗಿದ ಆಟದ ಜೊತೆಗೆ ಮನೋಭಾವ ಬದಲಾಗಿರುವುದರ ಸಂಕೇತ.

ವಿರಾಟ್‌ ಮೊದಲ ಬಾರಿ ದೊಡ್ಡ ಸುದ್ದಿಯಾಗಿದ್ದು ತಂದೆ ಸಾವನ್ನಪ್ಪಿದ ದಿನವೇ ಕೋಟ್ಲಾ ಕ್ರೀಡಾಂಗಣಕ್ಕೆ ಬಂದು ದೆಹಲಿ ತಂಡವನ್ನು ಸೋಲಿನಿಂದ ಪಾರು ಮಾಡಿದ ಸಂದರ್ಭದಲ್ಲಿ. ಅಂದು ಕ್ರೀಡಾಂಗಣಕ್ಕೆ ಬಂದಾಗ ಕೆನ್ನೆಯ ಮೇಲೆ ಬಿದ್ದ ಕಣ್ಣೀರ ಹನಿಗಳು ಇನ್ನೂ ಆರಿರಲಿಲ್ಲ. 2006ರ ಡಿಸೆಂಬರ್‌ನ ಚಳಿಗಾಲವದು. ಬೆಳಿಗ್ಗೆ ತಂದೆ ಸಾವನ್ನಪ್ಪಿದ್ದರು. ಮನೆಯಲ್ಲಿಯೇ ಇದ್ದು ವಿಧಿವಿಧಾನ ಪೂರೈಸುವಂತೆ ತಂಡದ ವ್ಯವಸ್ಥಾಪಕರು ಹೇಳಿದ್ದರು. ಆದರೆ, ತಂದೆ ಮುಖ ನೋಡಿ ಬಂದು ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ 90 ರನ್‌ ಗಳಿಸಿದ್ದರು. ಆಟದ ಮೇಲೆ ಕೊಹ್ಲಿ ಅವರಿಗಿರುವ ಬದ್ಧತೆ ಹಾಗೂ ಪ್ರೀತಿಯನ್ನು ಅದು ತೋರಿಸುತ್ತದೆ. ಆಗ ಅವರಿಗೆ 17 ವರ್ಷ.

19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ನಾಯಕರಾಗಿ ಭಾರತ ತಂಡ ಟ್ರೋಫಿ ಗೆಲ್ಲಲು ಕಾರಣರಾಗಿದ್ದ ಇವರಿಗೆ 25ನೇ ವಯಸ್ಸಿನಲ್ಲಿಯೇ ಟೆಸ್ಟ್‌ ತಂಡದ ನಾಯಕರಾಗುವ ಸೌಭಾಗ್ಯ ಒಲಿದುಬಂತು. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾದರು. ಈಗಂತೂ ಟ್ವೆಂಟಿ–20 ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಕಷ್ಟಕರ ಗುರಿ ಬೆನ್ನಟ್ಟುವ ವೇಳೆ ಇಡೀ ವಿಶ್ವ ಕ್ರಿಕೆಟ್‌ ಅಚ್ಚರಿಪಡುವ ರೀತಿಯಲ್ಲಿ ಆಡಿ ಗೆಲುವು ತಂದುಕೊಡುತ್ತಿದ್ದಾರೆ.

ವಿಶ್ವಕಪ್‌ನಲ್ಲಿ ತೋರಿದ ಅಮೋಘ ಆಟದ ಬಳಿಕ ಸಚಿನ್‌ ದಾಖಲೆಗಳನ್ನು ಅಳಿಸಿ ಹಾಕುತ್ತಾರೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಕೊಹ್ಲಿ ಅವರ ಸದ್ಯದ ಫಾರ್ಮ್‌ ಗಮನಿಸಿದರೆ ಅದು ಕಷ್ಟವಲ್ಲ. ಆದರೆ, ಇನ್ನೂ 8 ವರ್ಷ ಇದೇ ಫಾರ್ಮ್‌ನಲ್ಲಿ ಮುಂದುವರಿಯಬೇಕು. ಟೆಸ್ಟ್‌ನಲ್ಲಿ ಮತ್ತಷ್ಟು ಪಳಗಬೇಕು. ಕಪಿಲ್‌ ದೇವ್‌, ಇಯಾನ್‌ ಚಾಪೆಲ್‌ ಸೇರಿದಂತೆ ಕೆಲ ಹಿರಿಯ ಕ್ರಿಕೆಟಿಗರು ಸಚಿನ್‌, ಲಾರಾ, ಪಾಂಟಿಂಗ್‌ ಅವರಿಗಿಂತ ಕೊಹ್ಲಿ ಶ್ರೇಷ್ಠ ಎನ್ನುತ್ತಿದ್ದಾರೆ.

ಇನ್ನು ಕೆಲವರು ಸಚಿನ್‌ ಅವರಿಗಿಂತ ಕೊಹ್ಲಿ ಹೆಚ್ಚು ಹಣ ಗಳಿಸಬಹುದು, ಸಚಿನ್‌ ರೀತಿ ಪ್ರೀತಿ, ಮೌಲ್ಯ, ಗೌರವ, ಅಭಿಮಾನಿಗಳನ್ನು ಸಂಪಾದಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ, ಸ್ವತಃ ತೆಂಡೂಲ್ಕರ್‌ ಹಲವು ಬಾರಿ ಹೇಳಿರುವಂತೆ ಬೇರೆ ಬೇರೆ ಕಾಲಘಟ್ಟದ ಆಟಗಾರರ ನಡುವೆ ಹೋಲಿಕೆ ಮಾಡಬಾರದು. ಡಾನ್‌ ಬ್ರಾಡ್ಮನ್‌ ಆಡಿದ 40ರ ದಶಕದಲ್ಲಿದ್ದ ಕ್ರಿಕೆಟ್‌ ವಾತಾವರಣವೇ ಬೇರೆ. ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ತೆಂಡೂಲ್ಕರ್‌ ಪ್ರವೇಶ ಮಾಡಿದಾಗ ಇದ್ದ ಪರಿಸ್ಥಿತಿಯೇ ಬೇರೆ. ಸಚಿನ್‌ ಎರಡು ದಶಕಗಳ ಕಾಲ ಅಭಿಮಾನಿಗಳ ಅಪಾರ ನಿರೀಕ್ಷೆಯ ಭಾರವನ್ನು ಹೊತ್ತುಕೊಂಡು ಆಡಬೇಕಾಯಿತು. ಅಂಥ ಪರಿಸ್ಥಿತಿ ಈಗ ಇಲ್ಲ. ಹೆಚ್ಚಿನ ನಿಯಮಗಳು ಬ್ಯಾಟ್ಸ್‌ಮನ್‌ ಪರವಾಗಿವೆ. ಐಪಿಎಲ್‌ ಪ್ರವೇಶ ಕ್ರಿಕೆಟ್‌ ಆಟವನ್ನು ಮತ್ತಷ್ಟು ವಾಣಿಜ್ಯೀಕರಣಗೊಳಿಸಿದೆ.

ಈ ಮಾತನ್ನು ಕೊಹ್ಲಿ ಕೂಡ ಒಪ್ಪುತ್ತಾರೆ.  ‘ಹಿಂದಿನ ಆಟಗಾರರಿಗಿದ್ದ ಸವಾಲೇ ಬೇರೆ. ಆ ದಿನಗಳಲ್ಲಿ ಹೆಲ್ಮೆಟ್‌ ಪರಿಕಲ್ಪನೆಯೇ ಇರಲಿಲ್ಲ. ತೊಡೆಗೆ ಧರಿಸುವ ರಕ್ಷಾ ಕವಚವೂ ಇರಲಿಲ್ಲ. ಇಷ್ಟೊಂದು ತಂತ್ರಜ್ಞಾನ, ಸೌಲಭ್ಯ ಇರಲಿಲ್ಲ. ಹೀಗಾಗಿ ಅವರು ಗಳಿಸಿದ ಪ್ರತಿ ರನ್‌, ಪ್ರತಿ ಶತಕವನ್ನೂ ಗೌರವಿಸಬೇಕು’ ಎನ್ನುತ್ತಾರೆ.

ಸಚಿನ್‌ ಬಗ್ಗೆ ಅವರಿಗೆ ವಿಶೇಷ ಗೌರವ. ‘ನಾನು ಕ್ರಿಕೆಟ್‌ ಆಡಲು ಶುರು ಮಾಡಿದ್ದು ಸಚಿನ್ ಅವರಿಂದಾಗಿ. ಈಗ ಅವರ ಮುಂದೆ ಆಡಲು ಖುಷಿಯಾಗುತ್ತಿದೆ’ ಎಂದು ಪಾಕ್‌ ಎದುರಿನ ಪಂದ್ಯದ ಬಳಿಕ ವಿರಾಟ್‌ ನುಡಿದಿದ್ದರು. ಆ ಪಂದ್ಯದ ವೇಳೆ ಸಚಿನ್‌, ಗ್ಯಾಲರಿಯಲ್ಲಿ ತ್ರಿವರ್ಣ ಧ್ವಜ ಬೀಸುತ್ತಾ ಕೊಹ್ಲಿ ಆಟ ಕಣ್ತುಂಬಿಕೊಂಡರು.

ಎಲ್ಲಕ್ಕಿಂತ ಮುಖ್ಯವಾಗಿ ಸಚಿನ್‌ ಹಾಗೂ ಕೊಹ್ಲಿ ಅವರ ಮನೋಭಾವದಲ್ಲಿ ವೈರುಧ್ಯಗಳಿವೆ. ಸಚಿನ್‌ ಶಿಸ್ತಿನ ಸಿಪಾಯಿಯಾಗಿ, ಶಾಂತಮೂರ್ತಿಯಂತೆ, ಯಾವುದೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ ಆಡಿದವರು. ವಿರಾಟ್‌ ಅವರದ್ದು ಆವೇಶಭರಿತ ವ್ಯಕ್ತಿತ್ವ.

ಅದೇನೇ ಇರಲಿ, ಟೆಸ್ಟ್‌ನಲ್ಲಿ ಬ್ರಾಡ್ಮನ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ ಮಿಂಚಿದ ರೀತಿ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವಿರಾಟ್‌ ಅವರ ವೈಭವವನ್ನು ಈಗ ಕಾಣಬಹುದು. ಗುರಿ ಬೆನ್ನಟ್ಟುವಾಗ ಕೊಹ್ಲಿ ಅವರಾಟಕ್ಕೆ ಸಾಟಿಯೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT