ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರಿಂದ ಸ್ವಜನಪಕ್ಷಪಾತ: ಆಕ್ರೋಶ

ಆಂಜನೇಯ ವಿರುದ್ಧ ಸಂತೋಷ ಹೆಗ್ಡೆ, ರಾಮಸ್ವಾಮಿ ಕಿಡಿ
Last Updated 23 ಮೇ 2016, 20:07 IST
ಅಕ್ಷರ ಗಾತ್ರ

ಬೆಂಗಳೂರು:  ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ  ಗೋನಾಳ್‌ ಭೀಮಪ್ಪ ಅವರ ರಕ್ಷಣೆಗೆ ಬದ್ಧ ಎಂಬ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರ ಹೇಳಿಕೆಗೆ ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ ಹೆಗ್ಡೆ ಹಾಗೂ ಭೂಕಬಳಿಕೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರೆಸ್‌ ಕ್ಲಬ್‌ನಲ್ಲಿ ಸೋಮವಾರ ನಡೆದ ಲೇಖಕ ಪ.ಯ. ಗಣೇಶ ಅವರ ‘ಭ್ರಷ್ಟಾಚಾರ ಮುಕ್ತ ಕರ್ನಾಟಕ–ಹೀಗೊಂದು ಕನಸು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಂಬಂಧಿಕರನ್ನು ರಕ್ಷಿಸುತ್ತೇನೆ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಅಧಿಕಾರದಲ್ಲಿ ಇರುವವರಿಗೆ ಯಾರ ಹೆದರಿಕೆಯೂ ಇಲ್ಲ. ಹೀಗಾಗಿ ಇಂತಹ ಮಾತು ಆಡುತ್ತಿದ್ದಾರೆ. ಸಚಿವರು ಈ ಮೂಲಕ ಭ್ರಷ್ಟಾಚಾರವನ್ನು ಪೋಷಿಸುತ್ತಿದ್ದಾರೆ’ ಎಂದು ಸಂತೋಷ ಹೆಗ್ಡೆ ಕಿಡಿಕಾರಿದರು.

‘ಲಾಲು ಪ್ರಸಾದ್‌ ವಿರುದ್ಧ 1996ರಲ್ಲಿ ದೋಷಾರೋಪ ಪಟ್ಟಿ ದಾಖಲಾಯಿತು. ಮೊದಲ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ಪ್ರಕಟವಾದುದು 2013ರಲ್ಲಿ. ಭ್ರಷ್ಟರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದಿಂದ ಸಂವಿಧಾನ ಎಲ್ಲ ಸ್ತಂಭಗಳು ಕುಸಿಯುತ್ತಿವೆ’ ಎಂದರು.

ಎ.ಟಿ. ರಾಮಸ್ವಾಮಿ ಮಾತನಾಡಿ, ‘ಭ್ರಷ್ಟರಿಗೆ ಈ ನೆಲ ಸ್ವರ್ಗವಾಗಿದೆ. ಹಣ ಗೆಲ್ಲುತ್ತಿದೆ. ಗುಣ ಸೋಲುತ್ತಿದೆ. ರಾಜಕಾರಣಿಗಳು ಹಾಗೂ ಮಠಾಧೀಶರು ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ’ ಎಂದರು.

‘ಸತ್ಯ, ಧರ್ಮ ನ್ಯಾಯವನ್ನು ರಕ್ಷಿಸುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಈಗ ಭ್ರಷ್ಟರನ್ನು ರಕ್ಷಿಸುವ ಮಾತನಾಡುತ್ತಿದ್ದಾರೆ. ಇದು ಸ್ವಜನಪಕ್ಷಪಾತ’ ಎಂದರು.

ಜನಸಂಗ್ರಾಮ ಪರಿಷತ್‌ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ‘ಶೇ 2ರಷ್ಟಿರುವ ರಾಜಕಾರಣಿಗಳು, ಆಡಳಿತಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪೆನಿಗಳ ಹಿಡಿತದಲ್ಲಿ ಶೇ 75ರಷ್ಟು ಆಸ್ತಿ ಇದೆ. ಜಾಗತೀಕರಣದಿಂದ ಭ್ರಷ್ಟಾಚಾರಕ್ಕೆ ಇನ್ನಷ್ಟು ಪೋಷಣೆ ಸಿಕ್ಕಿದೆ’ ಎಂದು ಹೇಳಿದರು.

* ದೇಶದಲ್ಲಿ ಈ ಹಿಂದೆ ಈಸ್ಟ್‌ ಇಂಡಿಯಾ ಕಂಪೆನಿ ಇತ್ತು. ಈಗ ಈಟ್‌ ಇಂಡಿಯಾ ಕಂಪೆನಿ ಆಡಳಿತ ನಡೆಸುತ್ತಿದೆ.
-ಎ.ಟಿ. ರಾಮಸ್ವಾಮಿ

* ‘ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ಅವರನ್ನು ರಕ್ಷಿಸುವ ಕುರಿತು ಮಾತನಾಡಿರುವ ಸಚಿವ ಆಂಜನೇಯ ಅವರಿಗೆ ನಾಚಿಕೆಯಾಗಬೇಕು. ಮುಂದಿನ ಪೀಳಿಗೆಗೆ ಅವರು ನೀಡುವ ಸಂದೇಶವಾದರೂ ಏನು?
-ಚಂದ್ರಶೇಖರ ಪಾಟೀಲ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT