ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಸಮಿತಿ ರದ್ದು

ವಿಳಂಬ ತಪ್ಪಿಸಲು ಪ್ರಧಾನಿ ಮೋದಿ ಮಹತ್ವದ ನಿರ್ಧಾರ
Last Updated 31 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಕೇಂದ್ರ ಸರ್ಕಾರದಲ್ಲಿ ಪ್ರಮುಖ ನಿರ್ಧಾರ­­ ಕೈಗೊಳ್ಳುತ್ತಿದ್ದ ಸಚಿ­ವರ  ಉನ್ನ­ತಾ­ಧಿಕಾರದ ತಂಡ ಮತ್ತು ಸಚಿವರ ಸಮಿತಿ­­ಗಳನ್ನು (ಇಜಿಒಎಂ ಮತ್ತು ಜಿಒಎಂ) ಪ್ರಧಾನಿ ಮೋದಿ ರದ್ದು ಮಾಡಿದ್ದಾರೆ.ಅದಕ್ಕೆ ಬದಲಾಗಿ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಅವರು ಸಚಿವಾಲಯ ಹಾಗೂ ಆಯಾ ಇಲಾಖೆಗಳಿಗೆ ನೀಡಿದ್ದಾರೆ.

ಉನ್ನತಾಧಿಕಾರದ ಸಚಿವರ ಒಂಬತ್ತು ತಂಡಗಳು ಮತ್ತು ಸಚಿವರ 21 ಸಮಿತಿ­ಗಳನ್ನು ರದ್ದು ಮಾಡ­ಲಾಗಿದೆ ಎಂದು ಪ್ರಧಾನಿ ಕಾರ್ಯಾಲಯದ (ಪಿಎಂಒ) ಹೇಳಿಕೆ ತಿಳಿಸಿದೆ. ಇದು ಸಚಿ­ವಾಲಯ ಮತ್ತು ಇಲಾಖೆಗಳನ್ನು ಸಬಲ­ಗೊಳಿಸು­ವಂತಹ ಮಹತ್ವದ ನಿರ್ಧಾರ. ವಿಳಂಬ ತಪ್ಪಿಸಿ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ­ಯನ್ನು ತ್ವರಿತಗೊಳಿಸುವ ಮತ್ತು ಆಡ­ಳಿತದಲ್ಲಿ ಹೆಚ್ಚಿನ ಉತ್ತರದಾಯಿತ್ವ ತರುವ ಪ್ರಯತ್ನ ಎಂದು ವಿವರಿಸಿದೆ.

ಇಜಿಒಎಂ ಮತ್ತು ಜಿಒಎಂಗಳನ್ನು ರದ್ದು ಮಾಡಿರುವುದ­ರಿಂದ ಅವುಗಳ ಮುಂದೆ ನಿರ್ಧಾರಕ್ಕೆ ಕಾದಿದ್ದ ವಿಷಯಗಳು ಇಲ್ಲವೇ ಕಡತಗಳ ಬಗ್ಗೆ ಆಯಾಯ ಸಚಿವಾಲಯ ಮತ್ತು ಇಲಾಖೆಗಳೇ ಸೂಕ್ತ ತೀರ್ಮಾನ ಕೈ­ಗೊಳ್ಳ­ಲಿವೆ. ನಿರ್ಧಾರ ಕಷ್ಟವಾಗು­ವಂತಹ ಸಂದರ್ಭ­ದಲ್ಲಿ ಸಂಪುಟ ಕಾರ್ಯಾ­ಲಯ ಮತ್ತು ಪ್ರಧಾನಮಂತ್ರಿ ಕಾರ್ಯಾಲಯ­ಗಳು ಮಾರ್ಗದರ್ಶನ ಮಾಡಲಿವೆ ಎಂದು ಹೇಳಿಕೆ ಸ್ಪಷ್ಟಪಡಿಸಿದೆ.

ಇದರಿಂದ ಪ್ರಧಾನಿ ಮೋದಿ ಅವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಬೀಳುವ ಸಾಧ್ಯತೆ ಇದೆ. ಸಂಪುಟದ ಸಹೋದ್ಯೋ­ಗಿ­ಗಳಲ್ಲಿ ಉಂಟಾಗುವ ಭಿನ್ನಾಭಿಪ್ರಾಯ­ಗಳು ಈ ಮೊದಲು ಇಜಿಒಎಂ ಮತ್ತು ಜಿಒಎಂಗಳಲ್ಲಿ ಚರ್ಚೆಗೆ ಬರುತ್ತಿದ್ದವು. ಈಗ ಇದನ್ನು ಪ್ರಧಾನಿ ಅವರೇ ಬಗೆ­ಹರಿಸ­ಬೇಕಾಗಬಹುದು.ಇಂಥ ತಂಡಗಳು ಮೊದಲು ರಚನೆ­ಯಾಗಿದ್ದು ಅಟಲ್‌ ಬಿಹಾರಿ ವಾಜ­ಪೇಯಿ ನೇತೃತ್ವದ ಎನ್‌ಡಿಎ ಮೈತ್ರಿ­ಕೂಟದ ಸರ್ಕಾರದಲ್ಲಿ. ನಂತರ ಮನ­ಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ­ದಲ್ಲಿ ಇಂತಹ ತಂಡಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಯಿತು.

ವಾಜಪೇಯಿ ಮತ್ತು ಮನ­ಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಾರಣ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಮಿತ್ರಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇಜಿಒಎಂ ಮತ್ತು ಜಿಒಎಂಗಳು ಸಹಕಾರಿ ಆಗಿದ್ದವು. ಪ್ರಮುಖ ವಿಷಯಗಳು ಮೊದಲು ಈ ತಂಡಗಳಲ್ಲಿ ಚರ್ಚೆಯಾಗಿ ನಂತರ ಸಂಪುಟದ ಮುಂದೆ ಬರುತ್ತಿತ್ತು.

ಹಿಂದಿನ ಸರ್ಕಾರದಲ್ಲಿ ಬಹುತೇಕ ಉನ್ನತಾಧಿಕಾರದ ಸಚಿವರ ತಂಡಗಳಿಗೆ ಇಲ್ಲವೇ ಸಚಿವರ ಸಮಿತಿಗಳಿಗೆ ಆಗ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ (ಹಾಲಿ ರಾಷ್ಟ್ರಪತಿ), ಪಿ.ಚಿದಂಬರಂ,  ಎ.ಕೆ.ಆಂಟನಿ, ಶರದ್‌ ಪವಾರ್‌ ಅಧ್ಯಕ್ಷ­ರಾಗಿದ್ದರು. ಇಜಿಒಎಂ ಮತ್ತು ಜಿಒಎಂ­ಗಳು ಭ್ರಷ್ಟಾಚಾರ ನಿಗ್ರಹ, ಅಂತರರಾಜ್ಯ ಜಲ ವಿವಾದ, ಪ್ರಕೃತಿ ವಿಕೋಪ ನಿರ್ವಹಣೆ, ಆಡಳಿತಾತ್ಮಕ ಸುಧಾರಣೆ, ಅನಿಲ ಮತ್ತು ದೂರಸಂಪರ್ಕ ಕುರಿತ ದರ ನಿಗದಿ­ಯಂತಹ ಮಹತ್ವ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದವು.

ವಿವೇಚನಾಧಿಕಾರಕ್ಕೆ ಕಡಿವಾಣ
ನವದೆಹಲಿ
: ಇದೇ ವೇಳೆ ಪ್ರಧಾನಿ ಮೋದಿ ಅವರು, ಆಪ್ತ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಸಚಿವರಿಗಿದ್ದ ವಿವೇ­ಚ­ನಾಧಿಕಾರಕ್ಕೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದ್ದಾರೆ.

ಅದರಂತೆ, ಇನ್ನು ಮುಂದೆ ಸಚಿವರ ಆಪ್ತ ಸಿಬ್ಬಂದಿ ನೇಮ­ಕಾತಿಯನ್ನು ಪ್ರಧಾನಿ ನೇತೃತ್ವದ ನೇಮಕಾತಿ ಸಮ­ನ್ವಯ ಸಮಿತಿ (ಎಸಿಸಿ) ವ್ಯಾಪ್ತಿಯಡಿಗೆ ತರಲಾಗಿದೆ. ಈ ಮುಂಚೆ ಆಪ್ತ ಕಾರ್ಯದರ್ಶಿ ನೇಮಕಕ್ಕೆ ಮಾತ್ರ ಎಸಿಸಿ ಅನುಮತಿ ಅಗತ್ಯವಾಗಿತ್ತು. ಉಳಿ­ದೆಲ್ಲಾ ಸಿಬ್ಬಂದಿಯನ್ನು ಸ್ವತಃ ಸಚಿವರೇ ನೇಮಿಸಿಕೊಳ್ಳಲು ಅವಕಾಶವಿತ್ತು. ಇನ್ನು ಮುಂದೆ ಉಪ ಕಾರ್ಯದರ್ಶಿ ದರ್ಜೆಗಿಂತ ಮೇಲಿನ ಆಪ್ತ ಸಿಬ್ಬಂದಿಯ ನೇಮಕಕ್ಕೆ ಎಸಿಸಿ ಒಪ್ಪಿಗೆ ಬೇಕಾಗುತ್ತದೆ. ಸಚಿವರ ಆಪ್ತ ಸಿಬ್ಬಂದಿಯಾಗಿ 10 ವರ್ಷ ಕೆಲಸ ಪೂರೈಸಿದ ವರನ್ನು ಮರುನೇಮಕಾತಿ ಮಾಡಿಕೊಳ್ಳದಂತೆಯೂ ಆದೇಶಿಸಲಾಗಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಬಂಧು ಬಾಂಧವರನ್ನು ಆಪ್ತ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳದಂತೆಯೂ ಸಚಿವರಿಗೆ ನಿರ್ದೇಶನ ನೀಡಿದೆ. ಸ್ವಜನಪಕ್ಷಪಾತ ತಡೆಯುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳ­ಲಾಗಿದೆ. ಕೇಂದ್ರದ ಸಂಪುಟ ದರ್ಜೆ ಸಚಿವರಿಗೆ ಆಪ್ತ ಸಿಬ್ಬಂದಿಯಾಗಿ ಗರಿಷ್ಠ 15 ಜನರನ್ನು ಹಾಗೂ ರಾಜ್ಯ ಸಚಿವರಾಗಿ 13 ಜನರನ್ನು ನೇಮಿಸಿಕೊಳ್ಳಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT