ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಮುಂಡೆ ದುರ್ಮರಣ

ರಸ್ತೆ ಅಪಘಾತದಲ್ಲಿ ಸಾವು * ಇಂದು ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ
Last Updated 3 ಜೂನ್ 2014, 20:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ, ಮಹಾ­ರಾ­ಷ್ಟ್ರದ ಹಿಂದುಳಿದ ವರ್ಗದ ಜನಪ್ರಿಯ ನಾಯಕ ಗೋಪಿನಾಥ್‌ ಮುಂಡೆ (63) ಅವರು ಮಂಗಳವಾರ ನಸುಕಿನಲ್ಲಿ ಇಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೃದಯಾಘಾತ­ದಿಂದ ಮೃತಪಟ್ಟಿದ್ದಾರೆ.

ಲೋಕಸಭೆ ಚುನಾವಣೆಯ ಪ್ರಚಂಡ ವಿಜಯದ ಸಂಭ್ರಮದ ಗುಂಗಿನಲ್ಲಿರುವ ಬಿಜೆಪಿಗೆ ಅವರ ಅಕಾಲಿಕ ಮರಣ ದೊಡ್ಡ ಆಘಾತ ನೀಡಿದೆ.

ಇದೇ ಮೊದಲ ಬಾರಿ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿ­ದ್ದ ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯ­­ರಿದ್ದಾರೆ. ಒಬ್ಬ ಪುತ್ರಿ ಮಹಾರಾಷ್ಟ್ರ ಭೀಡ್‌್ ಜಿಲ್ಲೆಯ ಪರಳಿ ಕ್ಷೇತ್ರದ ಶಾಸಕಿ.

ಭೀಡ್‌ನಲ್ಲಿ  ಪಕ್ಷದ ವಿಜಯೋತ್ಸವ ಕಾರ್ಯ­ಕ್ರಮ­ದಲ್ಲಿ ಭಾಗವಹಿಸಲು ಹೊರಟಿದ್ದ ಮುಂಡೆ ಅವರು ಇಂದಿರಾ­ಗಾಂಧಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಪೃಥ್ವಿರಾಜ್ ರಸ್ತೆ-–ತುಘಲಕ್‌್ ರಸ್ತೆ ಸೇರುವ ಅರಬಿಂದೊ ವೃತ್ತದಲ್ಲಿ ಇಂಡಿಕಾ ಕಾರೊಂದು ಸಚಿವರಿದ್ದ ಕಾರಿನ ಮಗ್ಗುಲಿಗೆ ಡಿಕ್ಕಿ ಹೊಡೆಯಿತು.

‘6.30ರ ಸುಮಾರಿಗೆ ಅವರನ್ನು ಏಮ್ಸ್‌ಗೆ ದಾಖಲಿಸಲಾಯಿತು. ಆಗ ಅವರ ಉಸಿರಾಟ ಸರಾಗವಾಗಿರಲಿಲ್ಲ. ನಾಡಿಮಿಡಿತ, ಹೃದಯದ ಬಡಿತ ಸ್ಥಗಿತಗೊಂಡಿದ್ದವು. ಪ್ರಾಣ ಉಳಿಸಲು ಸಾಕಷ್ಟು ಹೋರಾ­ಡಿದೆವು. ಆದರೆ ಪ್ರಯೋ­ಜನ­ವಾಗಲಿಲ್ಲ. ಬೆಳಿಗ್ಗೆ  7.20ರ ಹೊತ್ತಿಗೆ ಅವರು ಕೊನೆಯುಸಿ­ರೆಳೆದರು’ ಎಂದು   ಏಮ್ಸ್‌ ವಕ್ತಾರ ಡಾ.ಅಮಿತ್‌ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು.

‘ಅವರು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲು­ತ್ತಿದ್ದರು. ಇದಕ್ಕೆ ಔಷಧವನ್ನೂ ತೆಗೆದುಕೊಳ್ಳುತ್ತಿದ್ದರು. ಕಾರಿನ ಹಿಂಬ­ದಿಯ ಸೀಟಿನಲ್ಲಿ ಕುಳಿತಿದ್ದ ಅವರಿಗೆ ಅಪಘಾತದಲ್ಲಿ ಗಂಭೀರ ಗಾಯಗ­ಳೇನೂ ಆಗಿರಲಿಲ್ಲ’  ಎಂದೂ ಹೇಳಿದರು.

ಕತ್ತಿನ ಮೂಳೆ ಮುರಿತ: ‘ಅಪಘಾತದಿಂದ ಮುಂಡೆ ಅವರ ಕತ್ತಿನ ಮೂಳೆಗಳು ಮುರಿದಿವೆ. ಇದರಿಂದಾಗಿ ಮಿದುಳಿಗೆ ಆಮ್ಲಜನಕ ಹಾಗೂ ರಕ್ತ ಪೂರೈಕೆ ಸ್ಥಗಿತಗೊಂಡಿರಬೇಕು. ಅಲ್ಲದೇ ಅವರ ಪಿತ್ತಕೋಶದಲ್ಲಿ 23 ಕಡೆ ಗಾಯ­ಗಳಾಗಿವೆ. ಪರಿಣಾಮವಾಗಿ ಅವರ ಹೊಟ್ಟೆಯಲ್ಲಿ ಒಂದೂ­ವರೆ ಲೀಟರ್‌ ರಕ್ತ ಸ್ರಾವವಾಗಿತ್ತು’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ.

‘ಅಪಘಾತವಾಗಿದ್ದೇ ತಡ ಸಚಿವರು ತೀವ್ರ ಆಘಾತಕ್ಕೆ ಒಳಗಾದರು. ಇದರಿಂದಾಗಿ ಅವರಿಗೆ ಹೃದಯಾಘಾತವಾ­ಗಿರಬೇಕು’ ಎಂದು ಮುಂಡೆ ಜತೆ ಕಾರಿನಲ್ಲಿದ್ದ ಅವರ  ಕಾರ್ಯದರ್ಶಿ ಎಸ್‌.ನಾಯರ್‌ ಹೇಳಿದ್ದಾರೆ.

‘ಸಚಿವರ ಕಾರಿಗೆ ಡಿಕ್ಕಿ ಹೊಡೆದಿದ್ದು ಇಂಡಿಕಾ ಕಾರು.  ಅಪಘಾತಕ್ಕೂ ಮುನ್ನ ಚಾಲಕ ಸಿಗ್ನಲ್ ತಪ್ಪಿಸಿ ಕಾರು ಚಲಾಯಿಸಿ­ಕೊಂಡು ಬಂದಿದ್ದಾನೆ’ ಎಂದು ಹಿರಿಯ ಪೊಲೀಸರೊಬ್ಬರು ಮಾಹಿತಿ ನೀಡಿದರು.

ಅಂತಿಮ ದರ್ಶನ
ಮಧ್ಯಾಹ್ನ 12.30 ರಿಂದ 1.30ರವರೆಗೆ ಮುಂಡೆ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡ­ಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕರಾದ ಎಲ್‌.ಕೆ.­ಅಡ್ವಾಣಿ ಇತರರು ಅಗ­ಲಿದ ನಾಯಕನಿಗೆ ಅಂತಿಮ ನಮನ  ಸಲ್ಲಿಸಿದರು.

ಅಂತ್ಯಕ್ರಿಯೆ
ಅವರ ಅಂತ್ಯಕ್ರಿಯೆ ಭೀಡ್‌ ಜಿಲ್ಲೆಯ ಸ್ವಗ್ರಾಮ ನಾರ್ಥಾದಲ್ಲಿ ಬುಧವಾರ ನಡೆಯಲಿದೆ.

ಸಂತಾಪ ಸೂಚಕ ಸಭೆ:  ಸಂಜೆ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಮುಂಡೆ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಮುಂಡೆ ಗೌರವಾರ್ಥ ಮಂಗಳವಾರ  ದೆಹಲಿ ಸೇರಿದಂತೆ ರಾಜ್ಯಗಳ ರಾಜಧಾನಿಗಳು  ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು.

ಪಿತ್ತಕೋಶಕ್ಕೆ ಹಾನಿ, ಹೃದಯಾಘಾತ
‘ಅಪಘಾತದಲ್ಲಿ ಅವರ ಪಿತ್ತ­ಕೋಶಕ್ಕೆ ಪೆಟ್ಟಾಗಿದೆ. ಘಟನೆಯಿಂದ ವಿಚಲಿ­ತ­ರಾಗಿ ಅವರು ಹೃದ­ಯಾಘಾತ­ದಿಂದ ಮೃತ­ಪಟ್ಟಿದ್ದಾರೆ’ ಎಂದು ಮರಣೋತ್ತರ ಪರೀ­ಕ್ಷೆಯ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.

‘ಪಿತ್ತಕೋಶಕ್ಕೆ ಹಾನಿಯಾಗಿದ್ದರಿಂದ ದೇಹದೊಳಗೆ ರಕ್ತಸ್ರಾವವಾಗಿದೆ. ನಂತರ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ’ ಎಂದೂ ಏಮ್ಸ್‌ ಮೂಲಗಳು ತಿಳಿಸಿವೆ.

ನೀರು ಕೇಳಿದ್ದರು...
ಪ್ರಜ್ಞಾಶೂನ್ಯರಾಗುವುದಕ್ಕೆ ಮುನ್ನ ಅವರು ಕುಡಿಯಲು ನೀರು ಕೇಳಿ­ದ್ದರು. ಅಲ್ಲದೇ ಕೂಡಲೇ ತಮ್ಮನ್ನು ಆಸ್ಪತ್ರೆಗೆ ಕರೆದೊ­ಯ್ಯುವಂತೆ ಚಾಲಕನಿಗೆ ಸೂಚಿಸಿ­ದ್ದರು.

ತಡಮಾಡದೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಅಷ್ಟರಲ್ಲಾಗಲೇ ಅವರ  ಹೃದಯ ಬಡಿತ ನಿಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT