ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ, ಶಾಸಕರಿಂದ ಮತದಾರರಿಗೆ ಹಣ

ಕಾಂಗ್ರೆಸ್ ವಿರುದ್ಧ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಆರೋಪ
Last Updated 12 ಫೆಬ್ರುವರಿ 2016, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪಚುನಾವಣೆ ನಡೆಯುತ್ತಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಡದ ಕೆಲವು ಸಚಿವರು ಹಾಗೂ ಶಾಸಕರು ಮತದಾರರಿಗೆ ಅಕ್ರಮವಾಗಿ ಹಣ ಹಂಚುತ್ತಿದ್ದಾರೆ’ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಕಾಂಗ್ರೆಸ್‌ ಮುಖಂಡರ ರಹಸ್ಯ ಕಾರ್ಯಾಚರಣೆ ಆರಂಭವಾಗಿದೆ. ನಿನ್ನೆಯವರೆಗೆ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದವರೆಲ್ಲ  ಏಕಾಏಕಿ ಪ್ರತ್ಯಕ್ಷ ಆಗುತ್ತಿದ್ದಾರೆ’ ಎಂದರು.

‘ಪಟೇಲ್‌ ಇನ್‌ ಕ್ಲಬ್‌ ಬಳಿ  ಶಾಸಕರೊಬ್ಬರು  ಅಧಿಕಾರಿಗಳ ಜತೆ ಸೇರಿ ಹಣ ಹಂಚುವುದರಲ್ಲಿ ತೊಡಗಿದ್ದರು.  ಪ್ರಚಾರದ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜು ಅವರನ್ನು ಈ ಕ್ಷೇತ್ರದಲ್ಲಿ ನೋಡಿರಲೇ ಇಲ್ಲ.  ನಾಗೇನಹಳ್ಳಿಯನ್ನು ಬಸವರಾಜು ಅವರಿಗೆ, ಶಾಸಕ ಮುನಿರತ್ನ ಅವರಿಗೆ  ಜೆ.ಸಿ.ನಗರ, ಮೇಯರ್‌ ಮಂಜುನಾಥ ರೆಡ್ಡಿ ಅವರಿಗೆ ಗಂಗಾನಗರ,  ದಿನೇಶ್‌ ಗುಂಡೂರಾವ್‌ ಅವರಿಗೆ ಸಂಜಯನಗರ, ಶಾಸಕ  ಆರ್‌.ವಿ ದೇವರಾಜ್‌  ಅವರಿಗೆ 19ನೇ  ವಾರ್ಡ್‌, ರೋಷನ್‌ ಬೇಗ್‌ ಅವರಿಗೆ  ಮನೋರಾಯನ ಪಾಳ್ಯ ವಾರ್ಡ್‌ನ ಹೊಣೆ ವಹಿಸಲಾಗಿದೆ ಎಂಬ ಮಾಹಿತಿ ಇದೆ’ ಎಂದರು.

‘ಇವರಿಗೆಲ್ಲ ಸಚಿವ ಡಿ.ಕೆ. ಶಿವಕುಮಾರ್‌ ನಾಯಕ. ಬೆಂಗಳೂರಿನ ಚಾಣಾಕ್ಷ ರಾಜಕಾರಣಿ ರಾಮಲಿಂಗಾರೆಡ್ಡಿ ನಡೆದ ದಾರಿಯೇ ತಿಳಿಯುವುದಿಲ್ಲ.  ಅವರ ಹೆಜ್ಜೆ ಗುರುತು ಎಲ್ಲೂ ಹಿಡಿಯಲಾಗದು. ಅವರು ಶಿವಕುಮಾರ್‌ಗೆ ಸಾಥ್‌ ನೀಡುತ್ತಿದ್ದಾರೆ’ ಎಂದರು.

‘ಶಾಸಕರು, ಮಂತ್ರಿಗಳೇ ಇಂತಹ ಚಟುವಟಿಕೆಯಲ್ಲಿ ತೊಡಗಿದರೆ ರಾಜ್ಯ ಹೇಗೆ ಉದ್ಧಾರ ಆಗುತ್ತದೆ? ಈ ಕ್ಷೇತ್ರದ ಜನ ಉತ್ತರ ಕೊಡಬೇಕು’ ಎಂದರು.
‘ಇವಿಷ್ಟು  ಮಂದಿಯ ಮೇಲೆ ಚುನಾವಣಾ ಆಯೋಗ ಹಾಗೂ  ಪೊಲೀಸ್‌ ಇಲಾಖೆ ನಿಗಾ ಇಡಬೇಕು.   ಅವರು ಈ ಕ್ಷೇತ್ರದ ವ್ಯಾಪ್ತಿಯೊಳಗೆ ಒಳಗೆ ಬರದಂತೆ ನೋಡಿಕೊಂಡರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಸರ್ಕಾರವಾಗಲೀ, ಪೊಲೀಸ್‌ ಇಲಾಖೆಯಾಗಲೀ ಚುನಾವಣಾ ಆಯೋಗವಾಗಲೀ ಹೊಣೆಯಿಂದ ನುಣುಚಿಕೊಳ್ಳಬಾರದು. ಶಾಂತಿಯುತ ಚುನಾವಣೆ ಆಗಬೇಕೆಂಬ ದೃಷ್ಟಿಯಿಂದ ಸಂಸದನಾಗಿ ಈ ಮಾತನ್ನು ಹೇಳುತ್ತಿದ್ದೇನೆ’ ಎಂದರು.

‘ಕಾಂಗ್ರೆಸ್‌ನವರಿಗಿಂತ ಬಲವಾದ  ಕಾರ್ಯಕರ್ತರ ತಂಡ ನಮ್ಮಲ್ಲಿದೆ. ಇಂತಹದ್ದು ನಡೆಯುತ್ತದೆ ಎಂದು ಮೊದಲೇ ಊಹಿಸಿದ್ದೆವು. ಇದಕ್ಕೆಲ್ಲ ಮಣಿಯುವ ಪ್ರಶ್ನೆಯೇ  ಇಲ್ಲ. ನಮ್ಮ ಕಾರ್ಯಕರ್ತರು ಎಲ್ಲವನ್ನು ಮನಸ್ಸಿನಲ್ಲೇ ನುಂಗಿ ಕೆಲಸ ಮಾಡಲು ಸಿದ್ಧ. ಆದರೆ, ಅದಕ್ಕೂ  ಒಂದು ಮಿತಿ ಇದೆ’ ಎಂದರು.

‘ನಾವು ಸ್ವಯಂಸೇವಕರನ್ನು  ವಾರ್ಡ್‌ಗಳಲ್ಲಿ ನಿಯೋಜಿಸಿದ್ದೇವೆ. ನಮ್ಮವರು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಕತ್ತಿ ಗುರಾಣಿ ರೈಫಲ್, ಎ.ಕೆ.47 ಹಿಡಿದುಕೊಂಡು ದಾಳಿ ಮಾಡುವುದಿಲ್ಲ. ಕಾನೂನು ರಕ್ಷಣೆ ಆಗದಿದ್ದರೆ ಅನಿವಾರ್ಯವಾಗಿ ಲಕ್ಷ್ಮಣ ರೇಖೆಯನ್ನು ದಾಟಬೇಕಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾದರೆ,  ರಾಜ್ಯ ಸರ್ಕಾರವೇ ಹೊಣೆ’ ಎಂದು ಎಚ್ಚರಿಸಿದರು.

‘27 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಪರಿಗಣಿಸಿ, ಅಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಬೇಕು. ಮತದಾರರು  ಗುರುತಿನಚೀಟಿ ಹೊಂದಿ
ದ್ದರೂ, ಚಹರೆಯನ್ನು  ಏಜೆಂಟರಿಗೆ  ಸರಿಯಾಗಿ ತೋರಿಸುವಂತೆ ಆಯೋಗ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ  ಆಯೋಗಕ್ಕೆ ಪತ್ರ ಬರೆದಿದ್ದೇವೆ’ ಎಂದರು.

‘ಕೆಲವು ಮತಗಟ್ಟೆಗಳಲ್ಲಿ ನಕಲಿ ಮತದಾನ ಮಾಡುವ ಪ್ರಯತ್ನ ನಡೆಯಲಿದೆ. ಕಾಂಗ್ರೆಸ್‌ ಪಕ್ಷವು ಬಲಾಢ್ಯ ವಾಗಿರುವ ಮತಗಟ್ಟೆಯನ್ನು  ಪೂರ್ತಿ ವಶಪಡಿಸಿಕೊಳ್ಳಲು ಆ ಪಕ್ಷದ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್‌  ಪಕ್ಷವು ದುರ್ಬಲವಾಗಿರುವ ಕಡೆ ಮತದಾರರು ಮತಗಟ್ಟೆಗೆ  ಬರದಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ   ಚರ್ಚೆ ಆಗಿದೆ ಎಂಬ ಮಾಹಿತಿ ಬಂದಿದೆ’ ಎಂದರು.

‘ಬ್ಯಾಂಕ್‌ ವ್ಯವಸ್ಥಾಪಕನ ಮನೆಯಲ್ಲಿ ಹಣ’
‘ಮತದಾರರಿಗೆ ಹಣ ಹಂಚುವ ಸಲುವಾಗಿ  ವಿ.ನಾಗೇನಹಳ್ಳಿಯ ಬ್ಯಾಂಕ್‌ ವ್ಯವಸ್ಥಾಪಕರೊಬ್ಬರ ಮನೆಯಲ್ಲಿ ದುಡ್ಡು ತಂದಿಟ್ಟುಕೊಂಡಿದ್ದರು. ಚುನಾವಣಾ ಆಯುಕ್ತರು ದಾಳಿ ನಡೆಸುತ್ತಾರೆ ಎಂಬ ಮಾಹಿತಿ ಸಿಕ್ಕ ಬಳಿಕ  ಕಾರಿನಲ್ಲಿ  ಪಲಾಯನ ಮಾಡಿದ್ದಾರೆ. ಈ ಬಗ್ಗೆ    ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ’  ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದರು. ಕೃತ್ಯದಲ್ಲಿ ಭಾಗಿಯಾದವರ ಹೆಸರನ್ನು ಅವರು ಬಹಿರಂಗಪಡಿಸಲಿಲ್ಲ.

* ನಾಯಕನ ಆದೇಶ ಇಲ್ಲದೇ ತಂಡದ ಸದಸ್ಯರು ಏನೂ ಮಾಡಲಾಗದು.  ಎಲ್ಲಿ ಕ್ಷೇತ್ರ  ರಕ್ಷಣೆ ಮಾಡಬೇಕು, ಯಾರು ಬ್ಯಾಟಿಂಗ್‌ ಮಾಡಬೇಕು, ಯಾರು ಬೌಲಿಂಗ್‌ ಮಾಡಬೇಕು ಎಂಬುದನ್ನು ನಾಯಕನೇ ಸೂಚಿಸುತ್ತಾನೆ
-ಡಿ.ವಿ.ಸದಾನಂದ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT