ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನ: ಮಣಿದ ಗೀತೆ

Last Updated 28 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತಮಗೆ ನೀಡಿರುವ ಬೃಹತ್ ಹಾಗೂ ಸಾರ್ವ­ಜನಿಕ ವಲಯದ ಕೈಗಾರಿಕಾ ಖಾತೆ ಬಗ್ಗೆ ಅಸಮಾ­ಧಾನ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಅನಂತ್ ಗೀತೆ ಸೇರಿದಂತೆ ಇತರ ಕೆಲವು ಸಚಿವರು ಬುಧವಾರ ಅಧಿಕಾರ ಸ್ವೀಕರಿಸಿ­ದರು.

ವಿದೇಶಾಂಗ ವ್ಯವಹಾರಗಳ ಸಚಿವೆ­ಯಾಗಿ ಸುಷ್ಮಾ ಸ್ವರಾಜ್‌, ನಗರಾಭಿ­ವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಎಂ. ವೆಂಕಯ್ಯನಾಯ್ಡು, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಅನಂತಕುಮಾರ್‌, ಜಲಸಂಪನ್ಮೂಲ ಸಚಿವೆಯಾಗಿ ಉಮಾ ಭಾರತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಮೇನಕಾ ಗಾಂಧಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ ಜಿತೇಂದ್ರ ಸಿಂಗ್ ಅವರು ಅಧಿಕಾರ ವಹಿಸಿ­­ಕೊಂಡರು.

ಬೃಹತ್ ಕೈಗಾರಿಕಾ ಖಾತೆ ನೀಡಿದ್ದರ ಕುರಿತು ಶಿವಸೇನಾದ ಅನಂತ್ ಗೀತೆ ಅವರು ಮಂಗಳವಾರ ಅಸಮಾಧಾನ ವೃಕ್ತಪಡಿಸಿದ್ದರು. ಆದರೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೇರೆ ಖಾತೆ ನೀಡಲಾಗುವುದು ಎನ್ನುವ ಭರವಸೆ ಮೇರೆಗೆ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಶಿವಸೇನಾದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಖಾತೆ ಬದಲಾ­ವಣೆ ಕುರಿತು ಮಾತನಾಡಿ­ರುವುದು ತಮಗೆ ತೃಪ್ತಿ ತಂದಿದೆ.   ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉತ್ತಮ ಖಾತೆ ಸಿಗುವ ಕುರಿತು ಭರವಸೆ ಇದೆ ಎಂದು ಅನಂತ್ ಗೀತೆ ಸುದ್ದಿಗಾರರಿಗೆ ತಿಳಿಸಿದರು.

‘ಈಗ ದೊರೆತಿರುವ ಖಾತೆ ಬಗ್ಗೆ ನನಗೆ ಬೇಸರವಿಲ್ಲ ಆದರೆ, ಶಿವಸೇನೆಗೆ ಬಂದಾಗಿನಿಂದಲೂ ನಾನು ಜನ­ರೊಂದಿಗೇ ಕೆಲಸ ಮಾಡಿದ್ದೇನೆ. ಹಾಗಾಗಿ, ನನಗೆ ಜನರೊಂದಿಗೆ ಒಡನಾಟ ಇರುವ ಮಂತ್ರಿ ಸ್ಥಾನ ದೊರೆ­ಯಬೇಕೆಂಬುದು ಉದ್ಧವ್ ಠಾಕ್ರೆ ಅವರ ಇಂಗಿತ’ ಎಂದು ಅವರು ವಿವರಿಸಿದರು.

ಬಿಜೆಪಿಗೆ ಹಲವು ವರ್ಷಗಳಿಂದ ಬೆಂಬಲ ವ್ಯಕ್ತಪಡಿಸುತ್ತಾ ಬಂದಿರುವ ಶಿವಸೇನಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಪಡೆದಿದೆ. ಎನ್‌ಡಿಎಗೆ ಬೆಂಬಲಿಸಿ, ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದಿರುವ ಪಕ್ಷಗಳ ಪೈಕಿ ಶಿವಸೇನಾ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT