ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನಿಕೆ ಸರಳತೆಯ ಮೇರು ವ್ಯಕ್ತಿ ಕಲಾಂ

Last Updated 27 ಜುಲೈ 2015, 20:30 IST
ಅಕ್ಷರ ಗಾತ್ರ

ಸರಳತೆ, ಸಜ್ಜನಿಕೆಗೆ ಮತ್ತೊಂದು ಹೆಸರು ಅಬ್ದುಲ್‌ ಕಲಾಂ. ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ವೈಮಾನಿಕ ಅಭಿವೃದ್ಧಿ ಸಂಸ್ಥೆಗಳ (ಎಡಿಎ) ಮಹಾ ನಿರ್ದೇಶಕರಾಗಿದ್ದ ಕಾಲದಲ್ಲಿ 9 ವರ್ಷಗಳ ಕಾಲ ಅವರೊಂದಿಗೆ ಒಡನಾಡುವ ಭಾಗ್ಯ ನನ್ನದಾಗಿತ್ತು.

ತಾವೊಬ್ಬ ಅತಿ ಗಣ್ಯ ವ್ಯಕ್ತಿ ಎಂಬ ಅಹಂ ಅವರಿಗಿರಲಿಲ್ಲ. ಆ ರೀತಿ ವರ್ತಿಸಲೂ ಇಲ್ಲ. ಅವರ ಅಗತ್ಯಗಳೆಲ್ಲ ಸರಳವಾಗಿದ್ದವು. ಅವರು ಓಡಾಡುತ್ತಿದ್ದುದು ಸಾಮಾನ್ಯ ಅಂಬಾಸಿಡರ್‌ ಕಾರಿನಲ್ಲಿ. ಕೆಂಪುದೀಪದ ಕಾರು ಅಥವಾ ಅತಿ ಗಣ್ಯರಿಗೆ ಮೀಸಲಾಗಿದ್ದ ಕಾರುಗಳಿಂದ ಅವರು ದೂರವಾಗಿದ್ದರು. ಕಾರಿನಲ್ಲಿದ್ದ ಹವಾ ನಿಯಂತ್ರಿತ ವ್ಯವಸ್ಥೆಯನ್ನೂ ಅವರು ಬಳಸುತ್ತಿರಲಿಲ್ಲ!

ತಮ್ಮ ವಿಜ್ಞಾನಿ ಸಹೋದ್ಯೋಗಿಗಳ ಸಾಮರ್ಥ್ಯವನ್ನು ಸ್ಪಷ್ಟವಾಗಿ ಅರಿತಿದ್ದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ವಿಜ್ಞಾನಿಗಳ ಪ್ರತಿಭೆಗೆ ಅನುಸಾರವಾಗಿ ಯಾವಾಗಲೂ ಕೆಲಸಗಳನ್ನು ಹಂಚುತ್ತಿದ್ದರು.

ಭಾರತೀಯ ವಿಜ್ಞಾನಿಗಳ ಬಗ್ಗೆ ಅತೀವ ವಿಶ್ವಾಸವನ್ನು ಹೊಂದಿದ್ದ ಕಲಾಂ,  ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎಂಬ ಅಪೇಕ್ಷೆ  ಹೊಂದಿದ್ದರು.

ಅವರದ್ದು ಅತ್ಯಂತ ಸರಳ ಜೀವನ. ಡಿಆರ್‌ಡಿಒ ಕ್ಯಾಂಪಸ್‌ನಲ್ಲಿದ್ದ ಎರಡು ಕೊಠಡಿಗಳ ಹಾಸ್ಟೆಲ್‌ನಲ್ಲಿ ಅವರ ವಾಸ. ಮದ್ದೂರು ವಡೆ, ಇಡ್ಲಿ ಸಾಂಬಾರ್‌, ದೋಸೆ ಅವರ ನೆಚ್ಚಿನ ತಿಂಡಿಯಾಗಿತ್ತು. ಮಜ್ಜಿಗೆ ಅವರ ಅಚ್ಚುಮೆಚ್ಚಿನ ಪಾನೀಯ.

ಚಾಲಕರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಇತರ  ನೌಕರರ ಕಲ್ಯಾಣವನ್ನು ಕಲಾಂ ಬಯಸುತ್ತಿದ್ದರು. ತಮ್ಮ ಸರಳ ನಡೆ ನುಡಿಯಿಂದ ಎಲ್ಲರ ಅಚ್ಚುಮೆಚ್ಚುಗೆಗೆ ಪಾತ್ರರಾಗಿದ್ದ ವೈಜ್ಞಾನಿಕ ಕ್ಷೇತ್ರದ ಮೇಧಾವಿಯ ಅಗಲುವಿಕೆ ವಿಜ್ಞಾನ ಲೋಕಕ್ಕೆ ಆದ ಬಹುದೊಡ್ಡ ನಷ್ಟ.
- ಲೇಖಕ ಎಡಿಎ, ಡಿಆರ್‌ಡಿಒ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT