ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಿಲ ಶಿಲ್ಪದ ಕುತೂಹಲ ಕಥನ

ಫ್ಲಾಪ್’
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ದೇವರಾಜ್, ಚಿಕ್ಕಣ್ಣ, ಲಿಂಗಪ್ಪ
ನಿರ್ದೇಶಕ: ಕರಣ್ ಕುಮಾರ್
ತಾರಾಗಣ: ವಿಜೇತ್, ಸಂದೀಪ್, ಅಖಿಲ್, ಸುಕೃತಾ ವಾಗ್ಳೆ, ಪ್ರಣಯ ಮೂರ್ತಿ, ಹರಿಣಿ ಮತ್ತು ಇತರರು

‘ಈ ಚಿತ್ರದ ಪಾತ್ರಗಳು ಕಾಲ್ಪನಿಕ’ ಎಂಬ ಜಾಮೀನು ಪಡೆದುಕೊಂಡೇ ನಿರ್ದೇಶಕ ಕರಣ್ ಕುಮಾರ್ ‘ಫ್ಲಾಪ್’ ಚಿತ್ರ ಆರಂಭಿಸುತ್ತಾರೆ. ಆದರೆ ನೋಡುತ್ತ ಹೋದಂತೆ ಇದೇನೂ ಕಾಲ್ಪನಿಕ ಕಥೆ ಅಲ್ಲ ಎಂಬುದು ಪ್ರೇಕ್ಷಕ­ನಿಗೆ ಗೊತ್ತಾ­ಗುತ್ತದೆ; ಕ್ಲೈಮ್ಯಾಕ್ಸ್‌ನ ನಾಟಕೀಯ ಘಟನೆ­ಯೊಂದನ್ನು ಹೊರತುಪಡಿಸಿ! ಅಷ್ಟಕ್ಕೂ ವಾಸ್ತವ ಘಟನೆಗಳನ್ನೇ ಸಂಪೂ­ರ್ಣ­ವಾಗಿ ಆಧರಿಸಿ ಸಿನಿಮಾ ಮಾಡುವುದು ಕಷ್ಟ ಕಷ್ಟ...

ಯುವಕರಿಗೆ ಸಂದೇಶ ಕೊಡುವ ಸಿನಿಮಾ ಇದು ಎಂದು ಖಂಡಿತವಾಗಿ ಹೇಳಬಹುದು. ಕೆಲಸ ಮಾಡಲು ಇಷ್ಟವಿಲ್ಲದೇ ಅಡ್ಡ ದಾರಿ ಮೂಲಕ ಹಣ ಗಳಿಸುವ ಮೂವರ ಕಥೆಯು ಕೊನೆಗೆ ‘ಫ್ಲಾಪ್’ ಆಗುವುದೇ ಚಿತ್ರಕಥೆ. ಆದರೆ ಹಾಗೆ ಫ್ಲಾಪ್ ಮಾಡಿಸುವುದರಲ್ಲೂ ಕರಣ್‌ ಕುಮಾರ್ ಒಂಚೂರು ಸಂವೇದನೆ ತೋರಿಸಿರುವುದು ಮೆಚ್ಚಬೇಕಾದ ಅಂಶ.

ಹಿಂದೂ, ಮುಸ್ಲಿಮ್ ಹಾಗೂ ಕ್ರೈಸ್ತ ಧರ್ಮದ ಮೂವರು ಪಡ್ಡೆ ಹುಡುಗರ ಪಾತ್ರಗಳನ್ನು ಮುಂದಿಟ್ಟುಕೊಂಡು, ಸಮಾಜ­ದಲ್ಲಿ ನಡೆಯುತ್ತಿರುವ ಮೋಸ– ವಂಚನೆ ಮುಖ­ವಾಡಗಳನ್ನು ಬಯಲು ಮಾಡಲು ನಿರ್ದೇಶಕರು ಯತ್ನಿಸಿ­ದ್ದಾರೆ. ಪಡ್ಡೆಗಳಿದ್ದ ಮೇಲೆ ಲವಲವಿಕೆ, ತುಂಟಾಟ, ಕಾಮಿಡಿ ಇರಬೇಕಾದ್ದೇ. ಆ ಹಾಸ್ಯರಸ ಧಾರಾಳವಾಗಿದೆ. ಅದಕ್ಕೆ ಮುಖ್ಯ ಕಾರಣ ಕರಣ್ ಕುಮಾರ್ ಬರೆದ ಸಂಭಾಷಣೆಗಳು. ಚಿಕ್ಕ– ಚೊಕ್ಕ ಮಾತುಗಳು ಪಂಚಿಂಗ್‌ನಿಂದ ಗಮನ ಸೆಳೆಯುತ್ತವೆ.

ನಾಯಕನೇ ಇಲ್ಲ; ಇರುವ ಮೂವರೂ ಖಳನಾಯಕರು ಎಂ­ಬುದು ಫ್ಲಾಪ್‌ನ ಇನ್ನೊಂದು ವಿಶೇಷ. ಅವರು ಹಾಗೆ ಆಗಲು ಸಮಾಜ ಕಾರಣ ಎಂಬ ‘ಹುಸಿ ಸಿದ್ಧಾಂತ’ವನ್ನು ಮೊದಲು ಮಂಡಿಸಿ, ಬಳಿಕ ‘ಸಮಾಜ ಕಾರಣವಲ್ಲ’ ಎಂಬು­ದನ್ನೂ ಸಾಬೀತುಪಡಿಸಲಾಗಿದೆ. ಕೆಟ್ಟವರು ಒಳ್ಳೆಯರಾಗಲು ಕಾರಣ­ವೊಂದು ಬೇಕಲ್ಲ? ಅದನ್ನು ನಾಟಕೀಯವಾಗಿಸಿ, ಚಪ್ಪಾಳೆ ಗಿಟ್ಟಿಸುವಲ್ಲಿ (ಖಳ)ನಾಯಕರು ಸಫಲರಾಗುತ್ತಾರೆ. ಫ್ಲ್ಯಾಶ್‌­ಬ್ಯಾಕ್‌­ನಲ್ಲಿ ಕಥೆ ಹೇಳುತ್ತ ಹೋಗುವ ಶೈಲಿ ಅಷ್ಟೊಂದು ಪರಿ­ಣಾಮಕಾರಿಯಾಗಿಲ್ಲ. ಆಗಾಗ್ಗೆ ಬರುವ ಹಾಡುಗಳು (ಸಂಗೀತ ಎಲ್.ಎನ್.ಶಾಸ್ತ್ರಿ) ಸಿನಿಮಾದ ಓಟಕ್ಕೆ ಅಡ್ಡಿಯುಂಟು ಮಾಡಲೆಂದೇ ಅಳವಡಿಸಿದಂತಿವೆ. ಮೂವರು ನಾಯಕರ ಪೈಕಿ ವಿಜೇತ್‌ ಅಭಿನಯಕ್ಕೆ ಆದ್ಯತೆ ಸಿಕ್ಕಿದೆ. ನಾಯಕರಿಗೆ ಚಳ್ಳೆಹಣ್ಣು ತಿನ್ನಿಸಿ, ಕೈಕೊಟ್ಟು ಹೋಗುವ ನಾಯಕಿ (ಸುಕೃತಾ ವಾಗ್ಳೆ) ಪಾತ್ರ ಹೀಗೆ ಬಂದು ಹಾಗೆ ಹೋಗುತ್ತದೆ. ಪ್ರಣಯ ಮೂರ್ತಿ, ಹರಿಣಿ ಪಾತ್ರಗಳು ಚಿಕ್ಕದಾದರೂ ಕಥೆಗೆ ಪೂರಕವಾಗಿವೆ.

ನಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನು ಸಿನಿಮಾ ರೂಪ­ದಲ್ಲಿ ಕಟ್ಟಿಕೊಡಲು ಮುಂದಾದ ನಿರ್ದೇಶಕರು ನಿರೂ­ಪಣೆಯಲ್ಲಿ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಜನರ ನಂಬಿಕೆಗ­ಳನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ಡೋಂಗಿ ಬಾಬಾ, ಸ್ವಾಮೀಜಿಗಳ ‘ಪವಾಡ’ಗಳನ್ನು ತಮಾಷೆಯಾಗಿ ತೋರಿಸಲಾಗಿದೆ. ಇದು ಈ ಚಿತ್ರದ ಮಿತಿಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT