ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣಕಥೆಗಳ ‘ವಿಶ್ವ’ರೂಪ

ವಿಮರ್ಶೆ
Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪತ್ರಕರ್ತ, ಕಥೆಗಾರ, ಕವಿ, ಪ್ರಬಂಧಕಾರ ಮತ್ತು ಅನುವಾದಕ ಎಸ್. ದಿವಾಕರ್ ಇದುವರೆಗೆ ಸುಮಾರು ಮೂವತ್ತು ಕೃತಿಗಳನ್ನು

ರಚಿಸಿದ್ದಾರೆ. ಆದರೆ, ಕಳೆದ ಮೂರ್ನಾಲ್ಕು ದಶಕಗಳಿಂದ ಅವರು ಸಣ್ಣಕಥೆಗಳ ಕ್ಷೇತ್ರದಲ್ಲಿ ಎಷ್ಟು ಕೆಲಸ ಮಾಡಿದ್ದಾರೆಂದರೆ, ‘ಎಸ್. ದಿವಾಕರ್ ಎಂದರೆ ಶಾರ್ಟ್‌ಸ್ಟೋರಿ  ದಿವಾಕರ್’ ಎಂದೇ  ಕನ್ನಡ ಓದುಗರಿಗೆ ಪರಿಚಿತರು. ಇದುವರೆಗೆ ಅವರು ಅನೇಕ ಭಾಷೆಗಳಿಂದ ಕಥೆಗಳನ್ನು ಅನುವಾದಿಸಿದ್ದಾರೆ ಮತ್ತು ಸ್ವತಃ ವಿಶಿಷ್ಟ ಕಥೆಗಳನ್ನು ರಚಿಸಿದ್ದಾರೆ. ಅವರ ಸ್ವಂತ ಕಥೆಗಳ ಸಂಕಲನಗಳೆಂದರೆ, ‘ಇತಿಹಾಸ’ (1979), ಮತ್ತು ‘ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ’ (1988); ಅವರು ಅನುವಾದಿಸಿರುವ ಕತೆಗಳ ಸಂಕಲನಗಳು ಐದು.
***                                              
ಒಂದು ಸಂದರ್ಭದಲ್ಲಿ ದಿವಾಕರ್ ತಮ್ಮ ಕಥೆಗಳ ಸ್ವರೂಪವನ್ನು ಕುರಿತು ಹೀಗೆ ವಿವರಿಸುತ್ತಾರೆ: ‘‘ಕನ್ನಡ ಸಣ್ಣಕಥೆಗಳ ಪರಂಪರೆಯ ಭಾಗವಾಗಿ, ಆದರೆ ಎಲ್ಲರಿಗಿಂತ ಭಿನ್ನವಾಗಿ, ನಾನು ಬರೆಯಲು ಇಚ್ಛಿಸುತ್ತೇನೆ. ನನ್ನ ದೃಷ್ಟಿಯಲ್ಲಿ ಒಂದು ಕಥೆ ಅವಾಸ್ತವವಾಗಿ (fantasy) ಇರುವುದರಿಂದಲೇ ಅದು ವಾಸ್ತವ, ಮತ್ತು ಒಂದು ಕಥೆ ವಾಸ್ತವಾಗಿರುವುದರಿಂದಲೇ ಅದು ಅವಾಸ್ತವ’’. ಪ್ರಾಯಶಃ, ಈ ಹೇಳಿಕೆಯನ್ನು ಹೀಗೆ ವಿವರಿಸಬಹುದೇನೋ!

ವಾಸ್ತವ ಬದುಕಿನ ಕ್ಷುದ್ರ ದೈನಿಕ ವಿವರಗಳಲ್ಲಿಯೇ ಅಡಗಿರುವ ಅವಾಸ್ತವತೆಯನ್ನು, ಎಂದರೆ, ನಮ್ಮ ಗಮನಕ್ಕೆ ಬಾರದ ಮತ್ತು ಗಮನಿಸಿದರೆ ನಮ್ಮನ್ನು ಚಕಿತಗೊಳಿಸುವ ಅಂಶಗಳನ್ನು ಶೋಧಿಸುವುದು; ಮತ್ತು ಸ್ವರೂಪದಲ್ಲಿ ಅವಾಸ್ತವದಂತೆ ಕಂಡರೂ ಅದು ಧ್ವನಿಸುವ ವಾಸ್ತವ ಬದುಕನ್ನು ಚಿತ್ರಿಸುವುದು. ಇವು ದಿವಾಕರ್ ಅವರ ಕಥೆಗಳ ಹಾಗೂ ಅವರು ಅನುವಾದಕ್ಕೆ ಆಯ್ಕೆ ಮಾಡುವ ಕಥೆಗಳ ಮುಖ್ಯ ಲಕ್ಷಣವೆಂದು ಕಾಣುತ್ತದೆ. ಈ ಹೇಳಿಕೆಯನ್ನು ನಿದರ್ಶಿಸಲು ಒಂದೆರಡು ಪ್ರಾತಿನಿಧಿಕ ಕಥೆಗಳನ್ನು ನೋಡಬಹುದು.

ಬಹು ಜನಪ್ರಿಯವಾಗಿರುವ ‘ಕ್ರೌರ್ಯ’ ಎಂಬ ಕಥೆ ಪಾಂಡಿತ್ಯ ಹಾಗೂ ಸಾತ್ವಿಕತೆಯ ಹಿಂದಿರುವ ಭಯಂಕರ ಕ್ರೌರ್ಯವನ್ನು ಬಯಲು ಮಾಡುತ್ತದೆ. ತಿರುಚ್ಚೆಂದರ್ ಶ್ರೀನಿವಾಸ ರಾಘವಾಚಾರ್ಯರು ವಿವಿಯೊಂದರಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತಿಯಾಗಿರುವವರು; ಧರ್ಮನಿಷ್ಠರಾದ ಅವರು ವಿಶಿಷ್ಟಾದ್ವೈತ ಸಿದ್ಧಾಂತದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರು. ಹುಟ್ಟುವಾಗಲೇ ಪೋಲಿಯೋ ಪೀಡಿತಳಾದ ಅಲಮೇಲು ಅವರ ಮಗಳು. ತಮ್ಮ ವಂಶಾಭಿವೃದ್ಧಿಯನ್ನು ಮಾಡುವ ಮಗನಿಗಾಗಿ ಹಂಬಲಿಸುತ್ತಿದ್ದ ಅವರಿಗೆ ಈ ಮಗಳನ್ನು ಕಂಡರೆ ತಿರಸ್ಕಾರ; ಅವರಾಗಲಿ, ಅವರ ಪತ್ನಿ ಕಲ್ಯಾಣಿಯಾಗಲಿ ಎಂದೂ ಮಗಳನ್ನು ಪ್ರೀತಿಸುವುದಿಲ್ಲ.

ತನ್ನ ಕೋಣೆಯನ್ನು ಬಿಟ್ಟು ಹೊರಗೆ ಬರುವುದಕ್ಕೂ ಸ್ವಾತಂತ್ರ್ಯವಿಲ್ಲದ ಅವಳು ಒಂಟಿಯಾಗಿ ಬೆಳೆದು ತನ್ನ ಮೂವತ್ತನೆಯ ವರ್ಷಕ್ಕೇ ಮುದುಕಿಯೆನಿಸಿಕೊಳ್ಳುತ್ತಾಳೆ. ಅಂತಹ ಅಲಮೇಲು, ತನ್ನ 36ನೆಯ ವಯಸ್ಸಿನಲ್ಲಿ, ಒಮ್ಮೆ ಹೇಗೋ ಕುಂಟಿಕೊಂಡು ಮನೆಯಿಂದ ಹೊರಗೆ ಹೋದಾಗ ತನಗೆ ಸಂಬಂಧವಿಲ್ಲದ ಬೀದಿ ಜಗಳದಲ್ಲಿ ಸಿಕ್ಕಿಹಾಕಿಕೊಂಡು, ಯಾರನ್ನೋ ಗುರಿಯಿಟ್ಟು ಎಸೆದ ಚೂರಿ ಅವಳ ಬೆನ್ನಿಗೆ ನಾಟಿ, ರಕ್ತ ಸುರಿಸುತ್ತಾ ಕೆಳಗೆ ಬೀಳುತ್ತಾಳೆ. ಆಂಬ್ಯುಲೆನ್ಸ್ ಬರುವವರೆಗೂ ತಳ್ಳುಗಾಡಿಯಲ್ಲಿ ಉಪ್ಪು ಮಾರುವ, ಕಪ್ಪುಬಣ್ಣದ ಪಳನಿಚಾಮಿ ಎಂಬುವವನು ಅಲಮೇಲುವನ್ನು ತನ್ನೆದೆಗೆ ಒರಗಿಸಿಕೊಳ್ಳುತ್ತಾನೆ.

‘‘ತನ್ನ ಬದುಕಿನ ಕೊನೆಯ ಕ್ಷಣದಲ್ಲಿ  ಅಲಮೇಲುವಿಗೆ ವಿಚಿತ್ರ ಸುಖ ಎನಿಸಿತು... ತನ್ನನ್ನು ಎದೆಗೊರಗಿಸಿಕೊಂಡಿದ್ದವನ ಕಣ್ಣಿನಲ್ಲಿ ಉಕ್ಕಿದ ಕರುಣೆಯನ್ನು ಬೇರೆ ಯಾರಲ್ಲೂ ಅವಳು ಕಂಡಂತಿರಲಿಲ್ಲ’’. ಅಲಮೇಲುವಿನ ಒಂಟಿತನ, ಪ್ರೀತಿಗಾಗಿ ಅವಳ ಹಂಬಲ, ಮತ್ತು ಸಾಂಪ್ರದಾಯಿಕ ಸಮಾಜದಲ್ಲಿರುವ ಹೆಣ್ಣು ಮಕ್ಕಳನ್ನು ಕುರಿತ ತಿರಸ್ಕಾರ, ಇವೆಲ್ಲವನ್ನೂ ತನ್ನ ಕೊರೆಯುವ ವ್ಯಂಗ್ಯದಿಂದ, ಹೃದಯಸ್ಪರ್ಶಿಯಾಗಿ ಈ ಕಥೆ ಕಟ್ಟಿಕೊಡುತ್ತದೆ. 

ಪಾರಂಪರಿಕ ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಹೆಣ್ಣಿನ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಆದರೆ ಸಂಯಮದಿಂದ ಚಿತ್ರಿಸುವ ಇತರ ಕಥೆಗಳೆಂದರೆ, ‘ಫೋಟೋ’, ‘ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ’, ಇತ್ಯಾದಿ. ಅವಾಸ್ತವ ಚೌಕಟ್ಟಿನಲ್ಲಿ ವಾಸ್ತವ ಬದುಕಿನ ಅನುಭವವನ್ನು ಧ್ವನಿಸುವ ಪ್ರಾತಿನಿಧಿಕ ಕಥೆಯೆಂದರೆ ‘ಅಂತರಾಳದಲ್ಲಿ ನಿಂತ ನೀರು’. ಮೃತ್ಯುಂಜಯನೆಂಬ ಮಧ್ಯವಯಸ್ಕ ಒಂದು ಹಳೆಯ ಹೋಟೆಲ್ ರೂಮಿಗೆ ಬರುತ್ತಾನೆ. ಧೂಳು, ಕೊಳಕು ಬೆಡ್‌ಶೀಟುಗಳು, ಅಲ್ಲಲ್ಲಿ ಬಿದ್ದಿರುವ ಕಾಂಡೋಮ್‌ಗಳು, ಮೂಲೆಗಳಲ್ಲಿ ಕಟ್ಟಿರುವ ಜೇಡನಬಲೆಗಳು – ಇವು ತುಂಬಿರುವ ಆ ಕೋಣೆಯ ಗೋಡೆಯ ಮೇಲೆ ಒಂದು ಹಳೆಯ ವರ್ಣಚಿತ್ರವಿದೆ; ಅದರಲ್ಲಿ, ಹರಿಯುತ್ತಿರುವ ನದಿ ಮತ್ತು ಒಂದು ಮೂಲೆಯಲ್ಲಿರುವ ಹುಟ್ಟುದೋಣಿ ಇವೆ.

ಮೃತ್ಯುಂಜಯ ಆ ಚಿತ್ರವನ್ನು ತದೇಕಚಿತ್ತನಾಗಿ ನೋಡುತ್ತಿರುವಂತೆಯೇ ನಿಧಾನವಾಗಿ ತಾನೇ ಆ ಚಿತ್ರವನ್ನು ಪ್ರವೇಶಿಸಿ, ಹುಟ್ಟು ಹಾಕುತ್ತಾ ನದಿಯಲ್ಲಿ ದೂರ ಹೋಗುತ್ತಾನೆ. ಕೊನೆಗೆ ಅವನು ಬಿಟ್ಟು ಬಂದ ಹಳ್ಳಿ ಭಯಂಕರ ಕ್ಷಾಮಕ್ಕೆ ತುತ್ತಾಗಿರುವುದನ್ನು ಕಾಣುತ್ತಾನೆ.  ಅಲ್ಲಿರಲಾಗದೆ, ಮತ್ತೆ ಅದೇ ದೋಣಿಯ ಮೂಲಕ ಮರಳಿ, ಕೋಣೆಗೆ ಪ್ರವೇಶಿಸಿ, ಅಲ್ಲಿ ಮಲಗಿರುವ ನವ ವಿವಾಹಿತೆಯೊಬ್ಬಳ ಮೇಲೆ ಬೀಳುತ್ತಾನೆ. ಅನಂತರ ಗಲಾಟೆಯಾಗಿ, ಪೋಲೀಸರು ಬಂದು ಅವನನ್ನು ಥಳಿಸಿದಾಗ ಅವನು ಆ ಕೋಣೆಯನ್ನು ಬಿಟ್ಟು ನಾಲ್ಕು ದಿನಗಳಾದುವೆಂದು ತಿಳಿಯುತ್ತದೆ.

ಒಂದು ನೆಲೆಯಲ್ಲಿ ಈ ಕಥೆ, ಆ ಕೊಠಡಿಯ ಕೊಳಕು, ಹೊರಪ್ರಪಂಚವನ್ನು ಸುಡುತ್ತಿರುವ ಬಿಸಿಲು, ತಾನು ಪತ್ರಿಕೆಯಲ್ಲಿ ಓದಿದಂತೆ ಆ ಭಾಗದ ಅನೇಕ ಹಳ್ಳಿಗಳನ್ನು ನಾಶಮಾಡುತ್ತಿರುವ ಕ್ಷಾಮ – ಇವೆಲ್ಲವೂ ವಾಸ್ತವ ಬದುಕನ್ನೂ; ಹಾಗೂ ಅಂತಹ ಬದುಕಿನಿಂದ ಓಡಿ ಹೋಗುವ, ತಪ್ಪಿಸಿಕೊಳ್ಳುವ ಮಹದಾಸೆ, ಓಡಿ ಹೋದರೂ ಮತ್ತೆ ಮರಳಲೇ ಬೇಕಾದ ಅನಿವಾರ್ಯತೆ, ಇವೆಲ್ಲವುಗಳಿಂದ ಕೂಡಿದ ಮಿಶ್ರ ಅನುಭವವನ್ನು ಈ ಕಥೆ ಸೃಷ್ಟಿಸುತ್ತದೆ.

ದಿವಾಕರ್ ಅವರ ಅನೇಕ ಕಥೆಗಳು ಸ್ವಾಭಿಮುಖಿಯಾಗಿ, ಕಥನ-ಪ್ರಕ್ರಿಯೆಯ ಬಗ್ಗೆಯೇ ಇವೆ; ‘ಇತಿಹಾಸ’, ‘ದ್ವಂದ್ವ’, ಇತ್ಯಾದಿ. ‘ದ್ವಂದ್ವ’ ನಿರೂಪಣಾ ತಂತ್ರದಲ್ಲಿಯೂ ವಿಶಿಷ್ಟವಾಗಿರುವುದರಿಂದ ಇದನ್ನೇ ಸ್ವಲ್ಪ ವಿವರವಾಗಿ ನೋಡಬಹುದು. ಕಥೆಗಾರನೊಬ್ಬ, ತನ್ನನ್ನೇ ‘ನೀನು’ ಎಂದು ಸಂಬೋಧಿಸುತ್ತಾ (ಆ ಮೂಲಕ ಕಥೆಗಾರನಿಗೆ ಬೇಕಾದ ದೂರವನ್ನು ಕಟ್ಟಿಕೊಳ್ಳುತ್ತಾ), ತಾನು ಬರೆಯುತ್ತಿರುವ ಕಥೆಯನ್ನು ಅಲ್ಲಲ್ಲಿ ಓದುತ್ತಾ, ಅದನ್ನು ಕುರಿತೇ ಮಾತನಾಡುತ್ತಾನೆ.

ಅವನು ಬರೆಯಲು ಹೊರಟಿರುವುದು ತನ್ನನ್ನು ವಿವಾಹವಾದ ಹೊಸತರಲ್ಲಿ ತುಂಬಾ ಪ್ರೀತಿಸುತ್ತಿದ್ದ, ಆದರೆ ಅನಂತರ ತನ್ನನ್ನು ಬಿಟ್ಟು ತವರಿಗೆ ಹೋದ ಹೆಂಡತಿಯ ಬಗ್ಗೆ ಅಥವಾ ತನ್ನ ಸ್ನೇಹಿತ ಶ್ರೀನಿವಾಸ ಮತ್ತು ಅವನ ಹೆಂಡತಿಯ ಬಗ್ಗೆ. ಆದರೆ, ಬರೆಯುವ ಪ್ರಕ್ರಿಯೆಯಲ್ಲಿ ನೆನಪುಗಳು, ಓದಿದ ಕಥೆಗಳು, ಪತ್ರಿಕಾ ಸುದ್ದಿಗಳು, ಸದ್ಯದಲ್ಲಿ ಭೇಟಿಯಾದ ವ್ಯಕ್ತಿಗಳು, ಇವೆಲ್ಲವೂ ಸೇರಿಕೊಂಡು, ಕಥೆ ಪೂರ್ತಿಯಾದಾಗ ಅದು ‘ತಾರಿಣಿ’ ಎಂಬುವವಳ ಕಥೆಯಾಗುತ್ತದೆ; ತನ್ನ ಪತ್ನಿಯೇ ಕಥೆಯಿಂದ ಹೊರಗಿರುತ್ತಾಳೆ.

ಈ ಪ್ರಕ್ರಿಯೆಯನ್ನು, ಭಾಷೆಯ ಮಿತಿಯನ್ನು ನಿರೂಪಕ ಹೀಗೆ ಗುರುತಿಸುತ್ತಾನೆ: ‘‘ಪದಗಳು ನಿನ್ನ ಮನಸ್ಸಿನಲ್ಲಿರುವುದಕ್ಕೆ ಅಭಿವ್ಯಕ್ತಿ ಕೊಡಲು ನಿರಾಕರಿಸುತ್ತಿವೆ... ಕಥೆ ಬರೆಯಬೇಕಾದರೆ ಪದಗಳು ಬೇಕು; ಪದಗಳಿಗೆ ಅಕ್ಷರಗಳು... ಅಕ್ಷರಗಳನ್ನು ಕೂಡಿಕೊಂಡ ಪದ ನೀನು ಅಂದುಕೊಂಡುದನ್ನು ಸೂಚಿಸುತ್ತಿದೆಯೆ? ಭಾಷೆ ನಮ್ಮ ಉದ್ದೇಶಗಳನ್ನು ತಡೆಯುತ್ತದೆ, ತಿರುಚುತ್ತದೆ’’.
***
ದಿವಾಕರ್ ಅವರ ಅನುವಾದಿತ ಕಥೆಗಳೂ ಅವರ ಸದಭಿರುಚಿಯ ಕಾರಣದಿಂದಾಗಿ ಆಶಯ–ಆಕೃತಿ ಎರಡೂ ನೆಲೆಗಳಲ್ಲಿ ವೈವಿಧ್ಯಪೂರ್ಣವಾಗಿವೆ ಮತ್ತು ನಾನಾ ಬಗೆಯ ವಿಚಾರಗಳನ್ನು ಹಾಗೂ ಅನುಭವಗಳನ್ನು ಧ್ವನಿಸುತ್ತವೆ. ‘ಜಗತ್ತಿನ ಅತಿ ಸಣ್ಣ ಕಥೆಗಳು’ ಸಂಕಲನದ ಮುನ್ನುಡಿಯಲ್ಲಿ ಅವರು ಈ ಒಂದು ಸಾಲಿನ ಕಥೆ– When I awoke, the Dinosaur was still there (ನಾನು ಎಚ್ಚೆತ್ತಾಗ ಆ ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು)– ವಿಶ್ವದ ಅತ್ಯುತ್ತಮ ಸಣ್ಣಕಥೆಯೆಂದು ಪರಿಗಣಿಸಲ್ಪಟ್ಟಿದೆಯೆಂದು, ಅದರ ಸಾಧ್ಯ ಭಿನ್ನ ವ್ಯಾಖ್ಯಾನಗಳನ್ನು ಕುರಿತು ಮಹಾ ಪ್ರಬಂಧಗಳು ಬರೆಯಲ್ಪಟ್ಟಿವೆಯೆಂದು ಹೇಳುತ್ತಾರೆ.

ದಿವಾಕರ್ ಅವರ ಐದು ಅನುವಾದಿತ ಕಥಾಸಂಕಲನಗಳಲ್ಲಿ ಅತ್ಯಂತ ವೈವಿಧ್ಯಪೂರ್ಣವಾದುದು ಇತ್ತೀಚೆಗೆ ಪ್ರಕಟಗೊಂಡ ‘ಹಾರಿಕೊಂಡು ಹೋದವನು’. ಈ ಸಂಕಲನದಲ್ಲಿ 29 ದೇಶಗಳ 58 ಕಥೆಗಳ ಅನುವಾದಗಳಿವೆ; ಮತ್ತು, ಗಾತ್ರದಲ್ಲಿ ಎರಡು ವಾಕ್ಯಗಳಿಂದ ಮೂರು ಪುಟಗಳವರೆಗೂ ಇರುವ ಕಥೆಗಳಿವೆ. ಆಕೃತಿಯ ದೃಷ್ಟಿಯಿಂದ, ಇವುಗಳಲ್ಲಿ ಅಲಿಗರಿಗಳು (ಅನ್ಯೋಕ್ತಿ), ವಿಡಂಬನೆಗಳು, ಸ್ವಗತಗಳು, ರೂಪಕಗಳು, ಇತ್ಯಾದಿ ಬಗೆಬಗೆಯ ಕಥೆಗಳಿವೆ; ಆಶಯಗಳಂತೂ ಓದುಗರು ಕಟ್ಟಿಕೊಂಡಷ್ಟು. ಕಥೆಗಳ ಸಂಕ್ಷಿಪ್ತತೆ ಅವನ್ನು ಮಾನವಾನುಭವಗಳ ಚಿರಂತನ ಪ್ರತೀಕಗಳನ್ನಾಗಿಸುತ್ತದೆ.  ಉದಾಹರಣೆಗೆ, ‘ಕನಸು ಮತ್ತು ವಾಸ್ತವ’ ಎಂಬ ಚೀನಾ ದೇಶದ ಕಥೆ ಹೀಗಿದೆ:
‘‘ಒಂದಾನೊಂದು ಕಾಲದಲ್ಲಿ ರೆಕ್ಕೆ ಬಡಿಯುತ್ತ ಅಲ್ಲಲ್ಲಿ ಹಾರಾಡುತ್ತಿರುವ ಒಂದು ಚಿಟ್ಟೆಯಾಗಿರುವಂತೆ ನಾನೊಂದು ಕನಸು ಕಂಡೆ. ಇದ್ದಕ್ಕಿದ್ದಂತೆ ಎಚ್ಚರವಾಯಿತು. ನೋಡಿದರೆ ನಾನು ನಾನಾಗಿಯೇ ಮಲಗಿದ್ದೆ. ಮೊದಲು ನಾನೇ ಒಂದು ಚಿಟ್ಟೆಯಾಗಿರುವಂತೆ ಕನಸು ಕಾಣುತ್ತಿದ್ದೆನೋ ಅಥವಾ ಈಗ ನಾನೇ ಒಬ್ಬ ಮನುಷ್ಯನಾಗಿರುವಂತೆ ಕನಸು ಕಾಣುತ್ತಿರುವ ಚಿಟ್ಟೆಯೋ ನನಗಂತೂ ಗೊತ್ತಿಲ್ಲ’’.
ಈ ನಾಲ್ಕು ಸಾಲುಗಳ ಕಥೆ ಮಾನವಾವಸ್ಥೆಯ ಚಿರಂತನ ಪ್ರತೀಕದಂತೆ ಅನೇಕ ಸಂವಾದಿ ಕಥನಗಳನ್ನು ನೆನಪಿಸುತ್ತದೆ.

‘ಬೃಹದಾರಣ್ಯಕ’ ಉಪನಿಷತ್ತಿನಲ್ಲಿ ಮಾನವನ ಮೂರು ಅವಸ್ಥೆಗಳ ವ್ಯಾಖ್ಯಾನವಿದೆ: ಜಾಗೃತ್, ಸ್ವಪ್ನ ಮತ್ತು ಸುಷುಪ್ತಿ. ಇವುಗಳು ತಮ್ಮಷ್ಟಕ್ಕೆ ತಾವೇ ಮೂರೂ ಸತ್ಯ; ಆದರೆ, ಉಳಿದೆರಡರ ನೆಲೆಯಲ್ಲಿ ಮೂರೂ ಸುಳ್ಳು; ಹಾಗಾದರೆ ‘ಸತ್ಯ’ವೆಂಬುದು ಯಾವುದು?  ಇದೇ ಬಗೆಯ ಚಿಂತನೆಯನ್ನು ಪಂಪನ ‘ಆದಿಪುರಾಣ’ದ ನೀಲಾಂಜನಾ ಪ್ರಸಂಗದಲ್ಲಿಯೂ ನಾವು ಕಾಣುತ್ತೇವೆ.  
ಸಂಕಲನಕ್ಕೆ ಶೀರ್ಷಿಕೆಯನ್ನು ಕೊಟ್ಟಿರುವ ‘ಹಾರಿಕೊಂಡು ಹೋದವನು’ ಎಂಬ ರಷ್ಯನ್ ಕಥೆಯಲ್ಲಿ, ಒಂದು ಬಹುಮಹಡಿ ಕಟ್ಟಡದ ಆರನೆಯ ಮಹಡಿಯಿಂದ ಒಬ್ಬನು ಮತ್ತೊಬ್ಬನನ್ನು ಕಿಟಕಿಯ ಮೂಲಕ ಕೆಳಗೆ ಎಸೆಯುತ್ತಾನೆ.

ಬೀಳುತ್ತಿರುವವನು ಐದನೆಯ ಮಹಡಿಯ ಕಿಟಕಿಯಿಂದ ಓದಿನಲ್ಲಿ ಮಗ್ನನಾಗಿರುವ ವಿದ್ಯಾರ್ಥಿಯೊಬ್ಬನನ್ನು ಕಾಣುತ್ತಾನೆ; ತಾನೂ ಅವನಂತೆ ಜ್ಞಾನಾರ್ಜನೆ ಮಾಡಬೇಕು ಎಂದು ಸಂಕಲ್ಪಿಸುವ ಹೊತ್ತಿಗೆ ಅವನು ನಾಲ್ಕನೆಯ ಮಹಡಿಯ ಕಿಟಕಿಯ ಬಳಿಗೆ ಬರುತ್ತಾನೆ. ಅಲ್ಲಿ, ಕಿಟಕಿಯಿಂದ ಹೊಲಿಗೆ ಯಂತ್ರದ ಮುಂದಿರುವ ಹುಡುಗಿಯೊಬ್ಬಳನ್ನು ನೋಡಿ, ನಿಜವಾದ ಪ್ರೀತಿಯೆಂದರೆ ಇದು ಎಂದುಕೊಳ್ಳುತ್ತಾನೆ. ಮೂರನೆಯ ಮಹಡಿಯ ಕಿಟಕಿ ಬಳಿ ಬಂದಾಗ, ಅಲ್ಲಿಂದ ತಾಯಿ ಮತ್ತು ಮಗುವನ್ನು ನೋಡಿ, ತಾನೂ ವಿವಾಹವಾಗಿ ತನ್ನ ಪತ್ನಿಯ ತಾಯ್ತನವನ್ನು ಕಾಣಬೇಕು ಎಂದುಕೊಳ್ಳುವಷ್ಟರಲ್ಲಿ ಎರಡನೆಯ ಮಹಡಿಯ ಕಿಟಕಿ ಬಳಿ ಬಂದಿರುತ್ತಾನೆ. ಅಲ್ಲಿ, ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಒಬ್ಬನನ್ನು ಕಾಣುತ್ತಾನೆ; ಆದರೆ ಕಾರಣ ಗೊತ್ತಿಲ್ಲ. ಒಂದನೇ ಮಹಡಿಯ ಕಿಟಕಿಯ ಬಳಿ ಬಂದಾಗ, ಒಳಗೆ ತನಗೆ ಪರಿಚಿತರಾದ ವಿವಾಹಿತ ಸ್ತ್ರೀ ಮತ್ತು ತರುಣನೊಬ್ಬನು ವ್ಯಭಿಚಾರದಲ್ಲಿ ತೊಡಗಿರುವುದನ್ನು ಕಾಣುತ್ತಾನೆ.

‘ಪ್ರೇಮ-ತಾಯ್ತನ-ವಿದ್ಯೆ-ಜ್ಞಾನ ಇವೆಲ್ಲವೂ ಕ್ಷಣಿಕ. ಬದುಕು ಅರ್ಥಹೀನ’ ಎಂದು ಭಾವಿಸುವಷ್ಟರಲ್ಲಿ ನೆಲದ ಮೇಲೆ ಬಿದ್ದು ಸಾಯುತ್ತಾನೆ. ಅನೇಕ ಸಂವಾದಿ ಕಥನಗಳನ್ನು ನೆನಪಿಸುವ ಈ ಕಥೆ, ಕೀಟ್ಸ್‌ನ ಈ ಎರಡು ಸಾಲುಗಳನ್ನು ಅದ್ಭುತವಾಗಿ ನಾಟ್ಯೀಕರಿಸುವಂತೆ ತೋರುತ್ತದೆ:  ‘... Then on the shore / Of the wide world I stand alone and think / Till Love and Fame to nothingness do sink’. (‘ಆಗ, ಈ ವಿಶಾಲ ವಿಶ್ವದ ದಂಡೆಯ ಮೇಲೆ ನಾನೊಬ್ಬನೇ ನಿಂತು ಯೋಚಿಸುತ್ತೇನೆ – ಪ್ರೇಮ, ಕೀರ್ತಿ, ಇತ್ಯಾದಿಗಳು ಶೂನ್ಯದಲ್ಲಿ ಸೇರುವ ತನಕ’).

ಈ ಸಂಕಲನದ ಅತಿ ಶ್ರೇಷ್ಠ ಕಥೆಯೆಂದರೆ ಸಾದತ್ ಹಸನ್ ಮಾಂಟೋ ಬರೆದಿರುವ ಎರಡು ಸಾಲುಗಳ ‘ಮಿಷ್ಟೀಕು’: ‘‘ಹೊಟ್ಟೆಯನ್ನು ಬಗೆದು ಸೀಳಿದ ಚೂರಿ ಅದೇ ನೇರ ರೇಖೆಯಲ್ಲಿ ಕೆಳಗಿಳಿದು ಆ ಮನುಷ್ಯನ ಪೈಜಾಮಾದ ಲಾಡಿಯನ್ನು ಕತ್ತರಿಸಿಹಾಕಿತು. ಚೂರಿ ಹಾಕಿದವನು ಒಂದು ಸಲ ಆ ಕಡೆ ನೋಡಿ, ಛೆ ಛೆ... ಎಂಥಾ ಮಿಸ್ಟೀಕಾಗಿಹೋಯಿತು ಎಂದ ವಿಷಾದದಿಂದ’’. ದೇಶವಿಭಜನೆಯ ಕಾಲದಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ಕೋಮುಗಲಭೆಗಳ ಸಂದರ್ಭದಲ್ಲಿ ಒಂದು ಧಾರ್ಮಿಕ ಗುಂಪು ಮತ್ತೊಬ್ಬನ ಧರ್ಮವನ್ನು ತಿಳಿಯಲು ಅನುಸರಿಸುತ್ತಿದ್ದ ಮಾರ್ಗವೆಂದರೆ ಅವನ ಶಿಶ್ನವನ್ನು ಪರೀಕ್ಷಿಸುವುದು.

ಚೂರಿ ಹಾಕಿದವನ ಹೆಸರು-ಧರ್ಮ ಇತ್ಯಾದಿ ಏನನ್ನೂ ಸ್ಪಷ್ಟಪಡಿಸದ ಈ ಕಥೆ ಅಂದಿನ ಕೋಮುಗಲಭೆಗಳ ದುರಂತವನ್ನು ಯಾವುದೇ ದೀರ್ಘ ಕಾದಂಬರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.     ಈ ಬಗೆಯ ಅಸಾಧಾರಣ ಕಥೆಗಳನ್ನು ವಿಶ್ವ ಕಥಾಸಾಹಿತ್ಯದಿಂದ ಹೆಕ್ಕಿ ಕೊಟ್ಟಿರುವ ಹಾಗೂ ಅಂತಹುದೇ ವಿಶಿಷ್ಟ ಕಥೆಗಳನ್ನು ಸ್ವತಃ ರಚಿಸಿರುವ ಎಸ್. ದಿವಾಕರ್ ಅವರು ಅಭಿನಂದನೀಯರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT