ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣವಲ್ಲದ ಸಣ್ಣ ಸಂಗತಿಗಳು...

ಒಡಲಾಳ
Last Updated 6 ಮೇ 2015, 19:30 IST
ಅಕ್ಷರ ಗಾತ್ರ

ಬೀದಿಮಕ್ಕಳೊಂದಿಗೆ ಆಡಿ ಬಟ್ಟೆಯೆಲ್ಲಾ ಗಲೀಜು ಮಾಡಿಕೊಂಡು ಬರುತ್ತಿದ್ದ ಅಣ್ಣನ ಮಗಳಿಗೆ ದುಬಾರಿ ಆಟಿಕೆಗಳನ್ನು ಕೊಡಿಸಿ ಅವಳನ್ನು ನನ್ನ ದಾರಿಗೆ ತಂದುಕೊಂಡೆ ಎಂದು ಬೀಗಿದೆ. ಆದರೆ ಸಂಜೆ ಆಫೀಸಿನಿಂದ ಬಂದು ನೋಡಿದರೆ ನನ್ನ ದುಬಾರಿ ಆಟಿಕೆಗಳು ಕೈಕಾಲು ಮುರಿದುಕೊಂಡು ಅನಾಥವಾಗಿ ಬಿದ್ದಿದ್ದವು,ಅವಳು ಮಕ್ಕಳೊಂದಿಗೆ ಖುಷಿಯಿಂದ ಮಣ್ಣಾಟ ಆಡುವಲ್ಲಿ ತಲ್ಲೀನಳಾಗಿದ್ದಳು...

ಹೌದಲ್ವ!,
 ಬದುಕಿನುದ್ದಕ್ಕೂ ಕೇವಲ ದೊಡ್ಡ ದೊಡ್ಡ  ಬಯಕೆಗಳ ಹಿಂದೋಡುವ ನಾವುಗಳು ನಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಬಹುದಾದ, ತುಟಿಯಂಚಿನಲಿ ಮುಗುಳ್ನಗೆ ಚಿಮ್ಮಿಸಬಹುದಾದ ಅತಿಸಣ್ಣವಾದರೂ ಅಪರೂಪವಾದ ಸಂಗತಿಗಳಿಂದ ವಂಚಿತರಾಗುತ್ತಿರುವುದು ಪ್ರಸ್ತುತದ ಸತ್ಯ ವಿಚಾರ.

ಮೊದಲ ಮಳೆಯಲ್ಲಿ ಮನಸಾರೆ ನೆನೆಯುವುದು, ಗೆಳತಿ ಅರ್ಧ ತಿಂದುಕೊಟ್ಟ ಚಾಕಲೇಟನ್ನು ಮೆಲ್ಲುವುದು, ಗೆಳೆಯನ ಅರ್ಥವಾಗದ ಜೋಕಿಗೆ ಬಿದ್ದು ಬಿದ್ದು ನಗುವುದು, ಪರೀಕ್ಷೆಯ ರಿಸಲ್ಟ್ ಶೀಟಿನಲ್ಲಿ ಕೆಳಗಿನಿಂದ ಹೆಸರು ಹುಡುಕುವುದು. ಇವೆಲ್ಲವೂ ಎಲ್ಲರ ಬದುಕಿನಲ್ಲಿ ಜರುಗಬಹುದಾದ ಮಾಮೂಲಿ ಘಟನೆಗಳಾದರೂ ನಮ್ಮ ಸಂತೋಷಕ್ಕೆ ಮೂಲ ಕಾರಣವಾಗುವ ವಿಶೇಷ ಸನ್ನಿವೇಶಗಳಾಗಿವೆ.

ಮಣ್ಣಿನಲ್ಲಿ ಆಡಿದರೆ ಇನ್ಫೆಕ್ಷನ್, ಮಳೆಯಲಿ ನೆನೆದರೆ ನೆಗಡಿ, ಗೆಳೆಯರೊಂದಿಗೆ ಸೇರಿದರೆ ಸಂಸ್ಕೃತಿ ನಾಶ, ನಕ್ಕರೂ ಇಂಗ್ಲಿಷ್‌ನಲ್ಲಿಯೇ ನಗಬೇಕಾದ ಪರಿಸ್ಥಿತಿ .ಇವು ನಾವು ನಮ್ಮ ಮಕ್ಕಳನ್ನು ಬೆಳೆಸುತ್ತಿರುವ ರೀತಿ. ಅವರನ್ನು ಮುಂದೆಂದೋ ಡಾಕ್ಟರ್, ಎಂಜಿನಿಯರ್ ಮಾಡುವ ಭರದಲ್ಲಿ ಅವರು ಮನುಷ್ಯರೊಂದಿಗೆ ಬೆರೆತು ಮನುಷ್ಯರಾಗುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆ.

ಇನ್ನು ನಮ್ಮ, ಅಂದರೆ ದೊಡ್ಡವರ ವಿಚಾರ ಅದಕ್ಕಿಂತಲೂ ಭಿನ್ನವೇನಲ್ಲ. ಸಮಯದ ಹಿಂದೋಡುವ ಜವಾಬ್ದಾರಿಯೊಂದನ್ನು ನಾವು ಹೆಗಲೇರಿಸಿಕೊಂಡಿದ್ದೇವೆ. ಯಾವುದೋ ಗುರಿಯ ಬೆನ್ನಟ್ಟುವ ಭರದಲ್ಲಿ ಇನ್ನಷ್ಟು ಯಾಂತ್ರಿಕರಾಗಿ ಉಸಿರಾಡಲು ಕೂಡ ಸಮಯ ಹೊಂದಿಸಿಕೊಳ್ಳಬೇಕಾದ ಜರೂರಿಯಲ್ಲಿದ್ದೇವೆ.

ನಾವು ನಗುವುದು ನಗೆ ಕೂಟದಲ್ಲಿ ಅಥವಾ ಟಿ.ವಿಯಲ್ಲಿ ಬರುವ ಕಾಮಿಡಿ ನೋಡಿ.  ಸೂರ್ಯಾಸ್ತ, ಸೋನೆ ಮಳೆ, ರಸ್ತೆ ಬದಿಯ ಟೀ, ಅರಳಿ ಕಟ್ಟೆಯ ಮೇಲಿನ ಹರಟೆ, ಇವೆಲ್ಲವೂ ಮರೆಯಾಗಿ ನಾವು ಮತ್ತಷ್ಟು ದುಡಿಯುವ ನೆಪದಲ್ಲಿ ಬದುಕುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದೇವೆ. ನಮ್ಮನ್ನು ಸಂತೋಷ ಪಡಿಸುವ ಸಣ್ಣ ಸಂಗತಿಗಳನ್ನು ಹತ್ತಿಕ್ಕಿ ಆ ಮೂಲಕ ಸೂರ್ಯನ ಕುದುರೆಯನ್ನು ಹಿಂಬಾಲಿಸುತ್ತಿದ್ದೇವೆ.

ಬದುಕನ್ನು ಕಟ್ಟಿಕೊಳ್ಳುವ ಭರದಲ್ಲಿ ಮನುಷ್ಯ ಸಂಬಂಧಗಳ ಪೊರೆ ತೆಳುವಾಗುತ್ತಿದೆ, ನಗು ಬಂದಾಗ ನಗದೆ, ಅಳುವನ್ನು ತೋರಿಸಿಕೊಳ್ಳದೆ ನಮಗೆ ನಾವೇ ವಂಚಿಸಿಕೊಳ್ಳುತ್ತಿದ್ದೇವೆ. ದೊಡ್ಡ ಬಯಕೆಗಳ, ಗುರಿಗಳ ನಡುವೆ ನಮ್ಮನ್ನು ಇತರರೊಂದಿಗೆ ಬೆಸೆಯುವ, ನಮ್ಮೊಳಗೆ ಇಣುಕಿ ನೋಡಲು, ನಕ್ಕು ಹಗುರಾಗುವಂತಹ ಸಣ್ಣ ಸಣ್ಣ ಸಂಗತಿಗಳಿಗೆ ಹತ್ತಿರವಾದರೆ ದೊಡ್ಡ ಗುರಿಗಳೂ ಈಡೇರುವುದರಲ್ಲಿ ಯಾವ ಸಂಶಯವೂ ಇಲ್ಲ. ಸಣ್ಣ ಸಂಗತಿಗಳು ನಿಜಕ್ಕೂ ಅಪರಿಮಿತ ಖುಷಿಯ ಖಜಾನೆಯೇ ಸೈ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT