ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕಾರ್‌ಗಳ ರಾಜನಾಗುವ ಯತ್ನ?!

ಹೊಸ ಫೋರ್ಡ್‌ ಫಿಗೊ
Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಅಮೆರಿಕದ ಫೋರ್ಡ್‌ ಕಂಪೆನಿಯು 2010ರಲ್ಲಿ ‘ಫಿಗೊ’ ಕಾರನ್ನು ಹೊರಬಿಟ್ಟಾಗ ಅದು ಯಶಸ್ವಿ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಂದಿಗೂ ಇಂದಿಗೂ ಕಾರ್‌ ಕ್ಷೇತ್ರದಲ್ಲಿ ಭಾರತದಲ್ಲಿ ದೊಡ್ಡಣ್ಣನಾಗೇ ಉಳಿದಿರುವ ಮಾರುತಿ ಸುಜುಕಿ, ನಂತರದ ಸ್ಥಾನ ತುಂಬುವ ಟಾಟಾ ಮೋಟಾರ್ಸ್‌ ಸಂಸ್ಥೆ ಫೋರ್ಡ್‌ ಅನ್ನು ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ. ಆದರೆ, ಸದ್ದಿಲ್ಲದೇ ತನ್ನ ಸಣ್ಣ ಕಾರ್‌ ‘ಫಿಗೊ’ ಮೂಲಕ ಫೋರ್ಡ್‌ ಯಶಸ್ಸು ಗಳಿಸಿದ್ದು ಸಾಧಾರಣ ಸಾಧನೆಯೇನಲ್ಲ.

ಫೋರ್ಡ್‌ ‘ಫಿಯೆಸ್ಟಾ’ ಎಂಬ ಹೆಸರಿನ ಕಾರನ್ನು ನೀವೆಲ್ಲಾ ನೋಡಿರಬಹುದು. ಇಲ್ಲವೇ ಖಂಡಿತಾ ಅದರ ಬಗ್ಗೆ ಕೇಳಿಯೇ ಇರುತ್ತೀರ. ‘ಫಿಯೆಸ್ಟಾ’ ಕಾರಿನ ಮುಂಭಾಗ ಹಾಗೂ ಹಿಂಭಾಗವನ್ನು ಬದಲಿಸಿ, ಅದರದೇ ವೇದಿಕೆಯ ಅಡಿ‘ಫಿಗೊ’ ಹೆಸರಿನ ಹೊಸ ಕಾರನ್ನು 2009ರಲ್ಲಿ ವಿನ್ಯಾಸಗೊಳಿಸಿ, 2010ರಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದೇ ತಡ, ಬರೋಬ್ಬರಿ 25 ಸಾವಿರ ಕಾರ್‌ಗಳು ಏಕಕಾಲಕ್ಕೆ ಬುಕ್‌ ಆಗಿದ್ದವು. 2010ರ ಮಾರ್ಚ್‌ನಲ್ಲಿ ‘ಫಿಗೊ’ ಬಿಡುಗಡೆ ಆಗಿತ್ತು.

ಆ ನಂತರ ‘ಫಿಗೊ’ ಎಲ್ಲರ ಕನಸಿನ ಕಾರ್‌ ಆಗಿ ಗಮನ ಸೆಳೆದು ಯಶಸ್ಸನ್ನೂ ಗಳಿಸಿತು. 1200 ಸಿಸಿ ಪೆಟ್ರೋಲ್‌ ಎಂಜಿನ್‌ ಹಾಗೂ 1400 ಸಿಸಿ ಡೀಸೆಲ್‌ ಎಂಜಿನ್‌ ಹೊಂದಿದ್ದ ‘ಫಿಗೊ’ ತಿರುಗಿ ನೋಡಿದ್ದೇ ಇಲ್ಲ. 2012ರ ಜೂನ್‌ನಲ್ಲಿ ಈ ‘ಫಿಗೊ’ಗೆ ಕಾಸ್ಮೆಟಿಕ್‌ (ಬಾಹ್ಯ ಬದಲಾವಣೆ) ಬದಲಾವಣೆ ನೀಡುವ ಮೂಲಕ ಮೇಲ್ದರ್ಜೆಗೆ ಏರಿಸಲಾಯಿತು. ಇದೀಗ ಕೇವಲ ಕಾಸ್ಮೆಟಿಕ್‌ ಬದಲಾವಣೆಯಲ್ಲದೆ ಕಾರಿನ ಆತ್ಮವಾದ ಎಂಜಿನ್‌ ಅನ್ನೂ ಮೇಲ್ದರ್ಜೆಗೇರಿಸಿ, ಅನೇಕ ಬುದ್ಧಿವಂತ ಚಾಲಕಪರ ಅನುಕೂಲಗಳನ್ನೂ ನೀಡಿ ಪೂರ್ಣಪ್ರಮಾಣದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ.

ಈ ಹೊಸ ‘ಫಿಗೊ’ ಅನ್ನು ‘ಟೆಸ್ಟ್‌ಡ್ರೈವ್‌’ ಮಾಡುವ ಅವಕಾಶ ‘ಪ್ರಜಾವಾಣಿ’ಗೆ ಸಿಕ್ಕಿದ್ದು ನವದೆಹಲಿಯಲ್ಲಿ. ನವದೆಹಲಿಯಿಂದ ಆಗ್ರಾಕ್ಕೆ ಹೋಗಿ, ಮರಳಿ ನವದೆಹಲಿಗೆ ಬರುವ ಒಟ್ಟು 426 ಕಿ.ಮೀ ದೂರದ ಪ್ರಯಾಣವನ್ನು ಹೊಸ ಫೋರ್ಡ್‌ ‘ಫಿಗೊ’ದಲ್ಲಿ ಕ್ರಮಿಸಲಾಯಿತು. ಈ ಪ್ರಯಾಣದಲ್ಲಿ ಹೊಸ ‘ಫಿಗೊ’ ಹೊಸತನವನ್ನು ತುಂಬಿಕೊಂಡಿರುವ, ಭರವಸೆಯ ಕಾರ್‌ ಆಗಿ ತನ್ನನ್ನು ತಾನೇ ಸಾಬೀತು ಮಾಡಿಕೊಂಡಿತು.

ಮಾರ್ಗ ವಿಶೇಷ
ಫಿಗೊ ಕಾರ್‌ನಲ್ಲಿ ಆಗ್ರಾಕ್ಕೆ ತಲುಪಿದ ಮಾರ್ಗದ ವಿಶೇಷವೇ ಬೇರೆ ಮಾತು. ಇದು, ನವದೆಹಲಿಯಿಂದ ಆಗ್ರಾ ತಲುಪುವ ಷಟ್ಪಥ ರಾಷ್ಟ್ರೀಯ ಹೆದ್ದಾರಿ. ಇದಕ್ಕೆ ‘ಯಮುನಾ ಎಕ್ಸ್‌ಪ್ರೆಸ್‌ ವೇ’ ಎಂದು ಕರೆಯುತ್ತಾರೆ. ಅತಿ ವೇಗದಲ್ಲಿ ಸಾಗಬಹುದಾದ ರಸ್ತೆಯಿದು. ಈ ಜೋಡಿರಸ್ತೆಯಲ್ಲಿ ಒಂದು ಬದಿಗೆ ಮೂರು ಪಥಗಳಿದ್ದು, ಒಟ್ಟು 165 ಕಿ.ಮೀ ಉದ್ದದ ಈ ರಸ್ತೆಯ ಮೂಲಕ ಆರಂಭ ಹಾಗೂ ಕೊನೆಯಲ್ಲಿ ಇತರೆ ಕೆಲವು ರಸ್ತೆಗಳ ಮೂಲಕ ಆಗ್ರಾ ತಲುಪಬಹುದು. 

ಈ 165 ಕಿ.ಮೀ ಉದ್ದದ ರಸ್ತೆಯಲ್ಲಿ ಇಡೀ ರಸ್ತೆಯೊಳಗೆ ಯಾರೂ ಒಳದಾಟಲು ಆಗದಂತೆ ಬೇಲಿ ಹೆಣೆಯಲಾಗಿದೆ. ಅಕ್ಕಪಕ್ಕದ ಊರುಗಳಿಂದ ಅಥವಾ ಜಮೀನುಗಳಿಂದ ಮನುಷ್ಯರಾಗಲಿ, ಪ್ರಾಣಿಗಳಾಗಲಿ, ವಾಹನಗಳಾಗಲಿ ಮಧ್ಯ ಸೇರಿಕೊಳ್ಳುವಂತಿಲ್ಲ. ಈ ರಸ್ತೆಗೆ ಸಂಚಾರ ಶುಲ್ಕವನ್ನು (ಟೋಲ್‌) ನೀಡಿಯೇ ಒಳಸೇರಬೇಕು. ಅಲ್ಲದೇ, ರಸ್ತೆಯ ಮಧ್ಯಭಾಗದಲ್ಲೂ ಏಕ ಎತ್ತರದ ತಂತಿ ಬೇಲಿ ಹಾಕಲಾಗಿದೆ. ಜೋಡಿ ರಸ್ತೆಯಲ್ಲೂ ಮಧ್ಯದಲ್ಲಿ ರಸ್ತೆಯಿಂದ ರಸ್ತೆಗೆ ಯಾರೂ ದಾಟಲು ಆಗುವುದಿಲ್ಲ. ರಸ್ತೆಯಲ್ಲಿ ವೇಗ ಮಿತಿಯಿದ್ದು, ರಸ್ತೆಯ ಏಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ವೇಗ ದಾಟಿದರೆ ದಂಡ ವಿಧಿಸಲಾಗುತ್ತದೆ! ಅಲ್ಲಲ್ಲಿ ‘ಇಂಟರ್‌ಸೆಪ್ಟರ್‌’ ಪೊಲೀಸ್‌ ವಾಹನಗಳು ವೇಗ ಪತ್ತೆ ಮಾಡುವ ಜತೆಗೆ, ರಸ್ತೆ ನಿಯಮ ಮುರಿಯದಂತೆ ಎಚ್ಚರಿಕೆ ವಹಿಸುತ್ತಿರುತ್ತವೆ. ಈ ರಸ್ತೆಯಲ್ಲಿ ಎಲ್ಲೂ ರಸ್ತೆಡುಬ್ಬಗಳಿಲ್ಲ, ವೇಗ ತಡೆಯುವಂತೆ ಮಾಡಲು ಬ್ಯಾರಿಕೇಡ್‌ಗಳಿಲ್ಲ. ವಾಹನ ಚಾಲನೆ ಮಾಡುವ ನಿಜವಾದ ಅವಕಾಶ ಇಲ್ಲಿಯೇ ಸಿಗುವುದು.

ಫಿಗೊ: ಹೊಸತನವೇನಿದೆ?
ಹೆಸರು ಹಳೆಯದೇ ಆದರೂ, ‘ಫಿಗೊ’ ಅನೇಕ ಹೊಸತನಗಳಿಂದ ಕೂಡಿದೆ. ಇದು ಬಾಹ್ಯ ಹಾಗೂ ಆಂತರಿಕ ವಿನ್ಯಾಸಗಳೆರಡಕ್ಕೂ ಅನ್ವಯಿಸುತ್ತದೆ. ಬಾಹ್ಯ ವಿನ್ಯಾಸ ಹೊಸತನದಿಂದ ಕೂಡಿದೆ. ಏರೋಡೈನಮಿಕ್‌ ನಿಯಮಗಳಿಗೆ ತಕ್ಕಂತೆ ವಿನ್ಯಾಸವಿದೆ. ಗಾಳಿಯನ್ನು ಸೀಳಿ ಮುನ್ನಡೆಯಬಹುದಾದ ವಿನ್ಯಾಸವಿದು. ಚೂಪಾದ ಮೂತಿ ಗಮನಸೆಳೆಯುತ್ತದೆ. ರೇಸಿಂಗ್‌ ಕಾರನ್ನು ಸ್ಮರಿಸುವಂತೆ ಮಾಡುತ್ತದೆ. ಫೋರ್ಡ್‌ ಲೋಗೊ ಗ್ರಿಲ್‌ನ ಮೇಲೆ ಇದ್ದು ಉತ್ತಮವಾಗಿದೆ. ಕ್ರೋಮಿಂಗ್‌ ಇರುವ ಗ್ರಿಲ್‌ ಸಹಾ ಉತ್ತಮವಾಗಿದೆ. ವಿಶಾಲ  ವಿಂಡ್‌ಶೀಲ್ಡ್‌ ಇದ್ದು, ಚಾಲಕನಿಗೆ ರಸ್ತೆಯ ಉತ್ತಮ ನೋಟ ಸಿಗುವಂತೆ ಮಾಡುತ್ತದೆ.

ಹಿಂಭಾಗ ಮಾತ್ರ ಹೆಚ್ಚೂ ಕಡಿಮೆ ಹಳೆಯದರಂತೆಯೇ ಇದೆ. ಅಕ್ಕ ಪಕ್ಕದ ನೋಟವೂ ಬದಲಾಗಿಲ್ಲ. ಈಗಿನ ಟ್ರೆಂಡ್‌ನಂತೆ ಅಕ್ಕ-ಪಕ್ಕದಲ್ಲಿ ಕಪ್ಪು ಬಣ್ಣದ ಫೈಬರ್‌ ರಕ್ಷಕಗಳನ್ನು ನೀಡಬಹುದಿತ್ತು. ಕಾರ್‌ಗೆ ಅದ್ಭುತ ಗಡಸು ನೋಟ ನೀಡುತ್ತಿತ್ತು.

ಒಳಾಂಗಣ ವಿನ್ಯಾಸ ಉತ್ತಮವಾಗಿದೆ. ಪಿಯಾನೋ ಬ್ಲಾಕ್‌ ಬಣ್ಣದ ಡ್ಯಾಶ್‌ ಬೋರ್ಡ್‌ ಇದೆ. ಸೀಟ್‌ಗಳು ವಿಶಾಲವಾಗಿದ್ದು, ತೊಡೆಗೆ ಉತ್ತಮ ಆಸರೆ ನೀಡುತ್ತವೆ. ಸೀಟ್‌ಗಳಿಗೆ ಬಳಸಿರುವ ಬಟ್ಟೆಯೂ ಉತ್ತಮವಾಗಿದೆ. ರೆಸಿನ್‌ ಬಳಸದೇ ಇರುವುದು ಸ್ವಾಗತಾರ್ಹ. ಹೆಡ್‌ರೆಸ್ಟ್ ಸಹಾ ಚೆನ್ನಾಗಿದೆ. ಬಾಟಲ್‌ ಹಾಗೂ ಕಪ್‌ ಹೋಲ್ಡರ್‌ಗಳನ್ನು ಬಾಗಿಲುಗಳಲ್ಲಿ ನೀಡಲಾಗಿದೆ. ಹ್ಯಾಂಡ್‌ಬ್ರೇಕ್‌ ಬಳಿಯೂ ಕೊಡಬೇಕಿತ್ತು. ಸ್ಟೋರೇಜ್‌ ಸ್ಪೇಸ್‌ ಅಷ್ಟೇನೂ ಚೆನ್ನಾಗಿಲ್ಲ. ಡ್ಯಾಶ್‌ ಬೋರ್ಡ್‌ ಮೇಲೆ ಒಂದು ಪೇಪರ್‌ ಅನ್ನೂ ಇಡಲಾಗುವುದಿಲ್ಲ. ಗ್ಲೋವ್ ಬಾಕ್ಸ್‌ ಚಿಕ್ಕದಾಯಿತು. ಸ್ಟೀರಿಂಗ್‌ ಬಳಿ ಸಂಗ್ರಹಕ್ಕೆ ಏನೂ ನೀಡಿಲ್ಲ.

ಹಿಂಭಾಗದ ಸೀಟ್‌ಗಳು ಉತ್ತಮವಾಗಿವೆ. ತೊಡೆಗೆ ಸಪೋರ್ಟ್‌ ನೀಡುವಂತೆ ಕೊಂಚ ದಪ್ಪವಿರಬೇಕಿತ್ತು. ಉತ್ತಮ ಹೆಡ್‌ ಹಾಗೂ ಲೆಗ್‌ ಸ್ಪೇಸ್‌ ಇದ್ದು. 6 ಅಡಿವರೆಗಿನ ವ್ಯಕ್ತಿಗಳು ಆರಾಮಾಗಿ ಕೂರಬಹುದು. ಎದುರಿನ ಸೀಟ್‌ಗಳನ್ನು ಹಿಂದಕ್ಕೆ ತಳ್ಳಿದರೂ, ಹಿಂಬದಿ ಪ್ರಯಾಣಿಕರಿಗೆ ತೊಂದರೆ ಆಗುವುದಿಲ್ಲ. ಹಾಗಾಗಿ 5 ಮಂದಿ ಆರಾಮಾಗಿ ಕೂರಬಹುದು.

ಹೊಸ ಸೌಲಭ್ಯಗಳು
ಹೊಸ ಹೊಸ ಸೌಲಭ್ಯ ಈ ಹೊಸ ಫಿಗೊನ ವಿಶೇಷ. ಉದಾಹರಣೆಗೆ ‘ಮೈ ಕೀ’ ಎನ್ನುವ ಸೌಲಭ್ಯ. ಇದು ಮಡಚಬಹುದಾದ ಕಾರ್‌ನ ಇಗ್ನಿಷನ್‌ ಕೀ. ಇದರ ಮೂಲಕ ಕಾರಿನ ಗರಿಷ್ಠ ವೇಗ, ಕಾರಿನ ಆಡಿಯೊ ಶಬ್ದವನ್ನು ನಿಯಂತ್ರಿಸುವ ಅವಕಾಶವಿದೆ. ಮತ್ತೊಂದು ವಿಶೇಷ, ‘ಮೈ ಫೋರ್ಡ್‌ ಡಾಕ್‌’. ಡ್ಯಾಶ್‌ ಬೋರ್ಡ್‌ ಮೇಲಿರುವ ಇದರಲ್ಲಿ ಮೊಬೈಲ್‌ ಫೋನ್‌ ಅನ್ನು ಚಾಲಕನಿಗೆ ಕಾಣುವಂತೆ ಕೂರಿಸಬಹುದು. ನ್ಯಾವಿಗೇಷನ್‌ ಬಳಸುವವರಿಗೆ ಇದು ಅನುಕೂಲಕಾರಿ. ಆದರೆ ಬಿಗಿ ಹಿಡಿತವಿಲ್ಲ. ಜೋರಾಗಿ ಕಾರ್‌ ಕುಲುಕಿದರೆ ಮೊಬೈಲ್‌ ಕೆಳಗೆ ಬೀಳುವ ಸಾಧ್ಯತೆ ಇದೆ.

ಇದರಲ್ಲಿಯೇ ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳುವ ಅವಕಾಶವೂ ಇದೆ. ಜತೆಗೆ, ‘ಫೋರ್ಡ್‌ ಸಿಂಕ್‌’ ಎನ್ನುವ ಸೌಲಭ್ಯ. ಇದರಲ್ಲಿ ಸ್ಮಾರ್ಟ್‌ ಫೋನ್ ಅನ್ನು ಕಾರಿಗೆ ಸಂಪರ್ಕಿಸಬಹುದು. ಬ್ಲೂಟೂತ್‌ ಅಥವಾ ಮೈಕ್ರೋ ಯುಎಸ್‌ಬಿ ಮೂಲಕ ಸಂಪರ್ಕ ಪಡೆಯುತ್ತದೆ. ಈ ಮೂಲಕ ಮೊಬೈಲ್‌ನಲ್ಲಿನ ಹಾಡುಗಳನ್ನು ಪ್ಲೇ ಮಾಡಬಹುದು. ಜತೆಗೆ, ಕರೆ ಮಾಡಬಹುದು. ಆದರೆ, ಬ್ಲೂಟೂತ್ ಮೂಲಕ ನಮ್ಮ ಮೊಬೈಲ್‌ ಅನ್ನು ಸಂಪರ್ಕಿಸಲು ಆಗಲೇ ಇಲ್ಲ. ಮೊಬೈಲ್‌ ಫೋನ್‌ನಲ್ಲೂ ಕಾರ್‌ ಬ್ಲೂಟೂತ್‌ ಹೆಸರು ಕಾಣಲಿಲ್ಲ.

ಕಾರ್‌ನ ಸೆಂಟರ್‌ ಕನ್ಸೋಲ್‌ ಚೆನ್ನಾಗಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಎರಡೂ ಅವತರಣಿಕೆಗಳನ್ನು ಓಡಿಸಿದೆವು. ಡೀಸೆಲ್‌
ಅವತರಣಿಕೆ ಫಿಗೊ ಟೈಟಾನಿಯಂ ಪ್ಲಸ್. ಪೆಟ್ರೋಲ್‌ನದು ಫಿಗೊ ಟೈಟಾನಿಯಂ. ಟೈಟಾನಿಯಂ ಪ್ಲಸ್‌ನಲ್ಲಿ ಡ್ಯಾಶ್ ಬೋರ್ಡ್‌ನ ಸೆಂಟರ್‌ ಕನ್ಸೋಲ್‌ ಉತ್ತಮವಾಗಿದೆ. ಮಧ್ಯದಲ್ಲಿ ಏಕ ವರ್ಣದ ಎಲ್‌ಸಿಡಿ ಪರದೆಯಿದೆ. ಇದನ್ನು ಟಾಪ್‌ ಎಂಡ್‌ನಲ್ಲಾದರೂ ಬಣ್ಣದ ಪರದೆ ನೀಡಬೇಕಿತ್ತು. ಕನ್ಸೋಲ್‌ನಲ್ಲಿ ಸಿಡಿ, ಆಡಿಯೊ, ರೇಡಿಯೊ, ಫೋನ್, ಮೆನು ಇತ್ಯಾದಿ ಸೌಲಭ್ಯಗಳ ಬಟನ್‌ ಇದೆ. ಶಬ್ದ ನಿಯಂತ್ರಣಕ್ಕೆ ತಿರುಗುವ ಬಟನ್‌ ಇದೆ. ಎಫ್‌ಎಂ ರೇಡಿಯೊ ಬದಲಿಸಲು 10 ನಂಬರ್‌ಗಳ ವಿವಿಧ ಸ್ಟೇಷನ್‌ಗಳ ಬಟನ್‌ಗಳಿವೆ. ಟೈಟಾನಿಯಂ ಅವತರಣಿಕೆಯಲ್ಲಿ ಹೆಚ್ಚೂ ಕಡಿಮೆ ಇವೆಲ್ಲಾ ಇದ್ದರೂ ಪರದೆ ತೀರಾ ಚಿಕ್ಕದು.

ಎಂಜಿನ್‌ ಪರೀಕ್ಷೆ
ಸಾಮಾನ್ಯವಾಗಿ ಕಾರ್‌ನ ಎಂಜಿನ್‌ ಕಾರ್ಯಕ್ಷಮತೆ ಪರೀಕ್ಷೆಗೆ ಅನುಸರಿಸುವ ಮಾನದಂಡಗಳನ್ನೇ ಅನುಸರಿಸಲಾಯಿತು. ಈ ಹೊಸ ಫಿಗೊದಲ್ಲಿ ಪೆಟ್ರೋಲ್‌ ಎಂಜಿನ್‌ನಲ್ಲಿ 1.5 ಲೀಟರ್‌ (ನಾವು ಓಡಿಸಿದ್ದು) ಹಾಗೂ ಡೀಸೆಲ್‌ನಲ್ಲಿ 1.5 ಲೀಟರ್‌ ಎಂಜಿನ್‌ ಇದೆ. ಪೆಟ್ರೋಲ್‌ ಎಂಜಿನ್‌ನಲ್ಲಿ 88 ಪಿಎಸ್‌ ಹಾಗೂ 112 ಎನ್‌ಎಂ ಶಕ್ತಿಯಿದೆ. ಡೀಸೆಲ್‌ ಎಂಜಿನ್‌ನಲ್ಲಿ 100 ಪಿಎಸ್‌ ಹಾಗೂ 215 ಎನ್‌ಎಂ ಶಕ್ತಿಯಿದೆ. ಡೀಸೆಲ್‌ ಎಂಜಿನ್‌ ಗರಿಷ್ಠ 190 ಕಿ.ಮೀ ವೇಗ ಮುಟ್ಟಿತು. ಪೆಟ್ರೋಲ್‌ ಎಂಜಿನ್‌ ಗರಿಷ್ಠ 160 ಕಿ.ಮೀ ವೇಗ ತಲುಪಿತು. ಎಂಜಿನ್‌ ಶಕ್ತಿ ಕಳೆದುಕೊಂಡಂತೆ ಎಲ್ಲೂ ಕಾಣಲಿಲ್ಲ. ಡೀಸೆಲ್‌ ಎಂಜಿನ್‌ ಪೆಟ್ರೋಲ್‌ ಎಂಜಿನ್‌ಗೂ ಉತ್ತಮವಾಗಿದೆ.

ಸೊನ್ನೆಯಿಂದ 100 ಕಿ.ಮೀ  ವೇಗ ತಲುಪಲು ಎರಡೂ ಕಾರ್‌ಗಳು ಸುಮಾರು 15 ಸೆಕೆಂಡ್‌ ಕಾಲ ತೆಗೆದುಕೊಂಡವು. ಆದರೆ 100ರ ನಂತರ ವೇಗವನ್ನು ಕೆಲವೇ ಸೆಕೆಂಡ್‌ಗಳಲ್ಲಿ ಮುಟ್ಟುವ ಶಕ್ತಿ ಇದ್ದು, ಹೆದ್ದಾರಿ ಚಾಲನೆಗೆ ಇದು ಹೇಳಿ ಮಾಡಿಸಿದಂತಿದೆ.

ಪೆಟ್ರೋಲ್‌ ಎಂಜಿನ್‌ ಕಾರ್‌ನಲ್ಲಿ ಆಟೊಮ್ಯಾಟಿಕ್‌ 6 ಸ್ಪೀಡ್‌ ಸೌಲಭ್ಯ ನೀಡಲಾಗಿದೆ. ಜತೆಗೆ ‘ಸ್ಪೋರ್ಟ್ಸ್‌’ ಎಂಬ ಸೌಲಭ್ಯವೂ ಇದೆ. ಇದನ್ನು ಬಳಸಿದರೆ ಕಾರು ಮತ್ತಷ್ಟು ವೇಗದಿಂದ ಮುನ್ನುಗ್ಗುತ್ತದೆ. ಆಟೋ ಟ್ರಾನ್ಸ್‌ಮಿಷನ್‌ ಇದ್ದು, ವೇಗ ಬದಲಿಸಲು ಮ್ಯಾನ್ಯುಯಲ್‌ ಅವಕಾಶವಿದೆ. ಅಂದರೆ, ಗಿಯರ್‌ ಲಿವರ್‌ನಲ್ಲೇ ಪ್ಲಸ್‌ ಹಾಗೂ ಮೈನಸ್‌ ಬಟನ್‌ಗಳಿವೆ. ಅವನ್ನು ಒತ್ತಿದರೆ ಗಿಯರ್‌ ಬದಲಾಗುತ್ತದೆ. ಕೇವಲ ಬ್ರೇಕ್‌ ಹಾಗೂ ಆಕ್ಸಿಲರೇಟರ್‌ ಇರುವ ಕಾರ್‌, ಚಾಲನೆಯಲ್ಲಿ ಮುದ ನೀಡುತ್ತದೆ. ಪೆಟ್ರೋಲ್‌ ಎಂಜಿನ್‌ನಲ್ಲಿ 1.2 ಲೀಟರ್‌ ಅವಕಾಶವನ್ನೂ ನೀಡಲಾಗಿದೆ.

ಅದರಲ್ಲಿ ಮ್ಯಾನ್ಯುಯಲ್‌ ಟ್ರಾನ್ಸ್‌ಮಿಷನ್‌ ಇದೆ. ಈ ಹಿಂದಿನ ಫಿಗೊ ಎಂಜಿನ್‌ಗಳಲ್ಲಿ ಪೆಟ್ರೋಲ್‌ ಎಂಜಿನ್‌ 1196 ಸಿಸಿ, ಡೀಸೆಲ್‌ ಎಂಜಿನ್‌ 1399 ಸಿಸಿ ಸಾಮರ್ಥ್ಯ ಈಗ ಅದು 1500 ಸಿಸಿಗೆ ಏರಿರುವುದು ವಿಶೇಷ. ಪೆಟ್ರೋಲ್‌ ಎಂಜಿನ್‌ನಲ್ಲಿ 1200 ಸಿಸಿಯ ಒಂದು ಅವತರಣಿಕೆಯನ್ನು ಉಳಿಸಿಕೊಳ್ಳಲಾಗಿದೆ.

ಸುರಕ್ಷೆ ಪರೀಕ್ಷೆ
ಕಾರಿನ ವೇಗ ಪರೀಕ್ಷೆ ಮಾಡಲಾಯಿತು. 100 ಕಿ.ಮೀ ವೇಗದಿಂದ ಸೊನ್ನೆಗೆ ತರುವ ಪರೀಕ್ಷೆ ಇದು. ಕೇವಲ 2.5 ಸೆಕೆಂಡ್‌ಗಳಲ್ಲಿ ಈ ಸಾಧನೆ ಮಾಡಿತು. ಸಂಪೂರ್ಣ ಸೊನ್ನೆಗೆ ನಿಲ್ಲುವ ಕಾರ್‌ನ ಸಾಮರ್ಥ್ಯ ಚೆನ್ನಾಗಿತ್ತು. ಟೈಟಾನಿಯಂ ಪ್ಲಸ್‌ನಲ್ಲಿ ಎಬಿಎಸ್‌ (ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ) ಇರುವುದು ಅನುಕೂಲಕಾರಿ. ಆದರೂ, ಬ್ರೇಕ್‌ ಹಾಕಿದಾಗ ಕೊಂಚ ಎಡಕ್ಕೆ ಕಾರ್‌ ಎಳೆಯಿತು. ಇದು ಆಗಬಾರದು. ಎಲ್ಲ ಅವತರಣಿಕೆಗಳಲ್ಲೂ ಎಬಿಎಸ್‌ ಇಲ್ಲ. ಇದನ್ನು ಸ್ಟ್ಯಾಂಡರ್ಡ್‌ ಮಾಡಬೇಕು.

ಮೈಲೇಜ್‌ ಉತ್ತಮ
ಮೈಲೇಜ್‌ ಉತ್ತಮವಾಗಿ ಕೊಟ್ಟಿತು. ಪೆಟ್ರೋಲ್‌ ಎಂಜಿನ್‌ ಕಾರ್‌ (1.5 ಲೀಟರ್‌) ಸರಾಸರಿ 15 ಕಿ.ಮೀ ಮೈಲೇಜ್‌ ನೀಡಿತು. (ಕಂಪೆನಿ ಹೇಳುವುದು 17 ಕಿ.ಮೀ). ಡೀಸೆಲ್‌ ಎಂಜಿನ್‌ ಕಾರ್‌ 22 ಕಿ.ಮೀ ಮೈಲೇಜ್‌ ನೀಡಿತು (ಕಂಪೆನಿ ಹೇಳುವುದು 25.87 ಕಿ.ಮೀ).

ಪೆಟ್ರೋಲ್‌ ಎಂಜಿನ್‌ (1.2 ಲೀಟರ್‌) ಬೇಸ್‌ ಅವತರಣಿಕೆಯು 4.29 ಲಕ್ಷದಿಂದ ಟೈಟಾನಿಯಂ ಪ್ಲಸ್‌ 6.40 ಲಕ್ಷ ರೂಪಾಯಿ ಇದೆ. ಡೀಸೆಲ್ ಎಂಜಿನ್‌ ಬೇಸ್‌ ಅವತರಣಿಕೆಯು 5.29 ಲಕ್ಷದಿಂದ ಟೈಟಾನಿಯಂ ಪ್ಲಸ್‌ 7.40 ಲಕ್ಷ ರೂಪಾಯಿ ಇದೆ. ಪೆಟ್ರೋಲ್‌ ಆಟೋಮ್ಯಾಟಿಕ್‌ (1.5 ಲೀಟರ್‌) ಅವತರಣಿಕೆಯು (ಟೈಟಾನಿಯಂ ಅವತರಣಿಕೆ ಮಾತ್ರ) 6.91 ಲಕ್ಷ ರೂಪಾಯಿ ಇದೆ. ಎಂಟ್ರಿ ಲೆವೆಲ್‌ ಕಾರ್‌ ಇದಾದ ಕಾರಣ, ಬೆಲೆ ಕೊಂಚ ಹೆಚ್ಚಾಯಿತು. ಈಗೇನಿದ್ದರೂ ಕಡಿಮೆ ಬೆಲೆಗೆ ಹೆಚ್ಚು ಸೌಲಭ್ಯ ಕೊಡಬೇಕಾದ ಕಾಲ. ಇದಕ್ಕೆ ಉತ್ತಮ ಉದಾಹರಣೆ ರೆನೊದ ಹೊಸ ‘ಕ್ವಿಡ್‌’.

ಕೇವಲ 2.56 ಲಕ್ಷದಿಂದ 4 ಲಕ್ಷ ರೂಪಾಯಿಗೆ ಎಸ್‌ಯುವಿಯಲ್ಲಿ ಇರಬಹುದಾದ ಕಾರನ್ನು ಸಣ್ಣ ಕಾರ್‌ನಲ್ಲೇ ನೀಡಿ ಅಚ್ಚರಿ ಮೂಡಿಸಿದೆ. ಅಂತೆಯೇ ಹೊಸ ‘ಫಿಗೊ’ ಸಹಾ ಬೆಲೆಗೆ ತಕ್ಕಂತೆ ಮತ್ತಷ್ಟು ಸೌಲಭ್ಯಗಳನ್ನು ನೀಡಬೇಕಿತ್ತು. ಉದಾಹರಣೆಗೆ ಬಣ್ಣದ ಪರದೆ. ಕಾರ್‌ನ ಉತ್ತಮ ಕಾರ್ಯಕ್ಷಮತೆ, ಸುರಕ್ಷೆ ಹಾಗೂ ಮೈಲೇಜ್‌ನಿಂದ ಹಣಕ್ಕೆ ತಕ್ಕ ಮೌಲ್ಯ ಇದೆ ಎಂದು ಕರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT