ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಹಿಡುವಳಿದಾರರ ಪ್ರಗತಿಬಂಧು

Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸಣ್ಣ ಹಿಡುವಳಿಗಳನ್ನು ಸುಸ್ಥಿರವಾಗಿ ನಿರ್ವಹಿಸಿಕೊಂಡು ಹೋಗುವಲ್ಲಿ ರೈತರಿಗೆ ನೆರವಾಗಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿವೆಯಾದರೂ ರೈತರ ಮೇಲೆ ಇದರ ಪರಿಣಾಮ ಅಷ್ಟಕಷ್ಟೇ. ಅನೇಕ ಅಭಿವೃದ್ಧಿಪರ ಸ್ವಯಂಸೇವಾ ಸಂಸ್ಥೆಗಳು ಸಣ್ಣ ಕೃಷಿಕರ ಸುಸ್ಥಿರತೆಗಾಗಿ ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದು ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿವೆ.

ಇಂತಹ ಕಾರ್ಯಕ್ರಮಗಳಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಪ್ರಾಯೋಜಿತ ‘ಪ್ರಗತಿ ಬಂಧು’ ಕಾರ್ಯಕ್ರಮವೂ ಒಂದು. ಇದರ ಮೂಲಕ ವಿಶಿಷ್ಟವಾದ ಹಿಡುವಳಿ ಯೋಜನೆಯನ್ನು ರೂಪಿಸಲಾಗುತ್ತಿದ್ದು, ಇದು ಆದಾಯ ಏರಿಕೆಯ ಮೂಲಕ ಸಣ್ಣ ರೈತರಿಗೆ ವರದಾನವಾಗಿ ಪರಿಣಮಿಸಿದೆ.

1991ರಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪ್ರಾರಂಭವಾದ ಪ್ರಗತಿ ಬಂಧು ಕಾರ್ಯಕ್ರಮವು ಈವರೆಗೆ ರಾಜ್ಯದ 25 ಜಿಲ್ಲೆಗಳ 3.50 ಲಕ್ಷ ಸಣ್ಣ  ಹಾಗೂ ಅತೀ ಸಣ್ಣ ಕೃಷಿಕರ ಕುಟುಂಬಗಳನ್ನು ನೇರವಾಗಿ ತಲುಪಿದೆ. ಉಳಿತಾಯ ಮಾತ್ರವಲ್ಲದೇ ಕೃಷಿಯಿಂದ ಬಂದ ಆದಾಯದಿಂದ ತಮ್ಮ ಮಕ್ಕಳ ಶಿಕ್ಷಣ ಹಾಗೂ ಮೂಲ ಸೌಕರ್ಯದ ಅವಶ್ಯಕತೆಗಳನ್ನು ಪೂರೈಸಿಕೊಂಡಿದ್ದು, ಗೃಹೋಪಯೋಗಿ ವಸ್ತುಗಳು ಮತ್ತಿತರ ಸೌಲಭ್ಯಗಳನ್ನೂ ಗಳಿಸಿಕೊಂಡಿದ್ದಾರೆ.

ಕಾರ್ಯ ನಿರ್ವಹಣೆ ಹೀಗೆ...
ಸಣ್ಣ ಮತ್ತು ಅತೀ ಸಣ್ಣ ರೈತರ ಒಂದು ಗುಂಪು ಮಾಡಲಾಗುವುದು. ಈ ಗುಂಪುಗಳಲ್ಲಿ 5 ರಿಂದ 8 ಜನ ರೈತರು ಇರುತ್ತಾರೆ. ಸ್ವಸಹಾಯ ಸಂಘವು ಕಾರ್ಯ ನಿರ್ವಹಿಸುವಂತೆ ಇಲ್ಲಿಯೂ ವಾರಕ್ಕೊಮ್ಮೆ ಉಳಿತಾಯದ ಜತೆಯಲ್ಲಿ  ಶ್ರಮ ವಿನಿಮಯ ಮಾಡಲಾಗುವುದು. ಇವುಗಳನ್ನು ‘ಜಂಟಿ ಬಾಧ್ಯತಾ ಗುಂಪು’ ಎಂದು ಕರೆಯಲಾಗುತ್ತದೆ.

ಗ್ರಾಮ ಮಟ್ಟದಲ್ಲಿ 25 ರಿಂದ 30 ಗುಂಪುಗಳು ಸೇರಿದರೆ ಒಂದು ಒಕ್ಕೂಟವಾಗುತ್ತದೆ. ತಮ್ಮ ಬಳಿ ಇರುವ ಕೃಷಿ ಭೂಮಿ ಎಷ್ಟೇ ಸಣ್ಣದಿರಲಿ ಅದರಲ್ಲಿ ಭೌಗೋಳಿಕ ಸಾಧ್ಯತೆಗಳಿಗನುಗುಣವಾಗಿ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ನಿರಂತರ ಆದಾಯ ಗಳಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಡಲಾಗುವುದು.

ಇಲ್ಲಿ ಆದಾಯ ಮೂಲಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಅವುಗಳೆಂದರೆ; ಅಲ್ಪಾವಧಿಯಲ್ಲಿ ಆದಾಯ ತರುವ ಚಟುವಟಿಕೆಗಳಾದ ಹೈನುಗಾರಿಕೆ, ಪುಷ್ಪಕೃಷಿ, ತರಕಾರಿ, ಪಶುಸಂಗೋಪನೆ, ಕೋಳಿ ಸಾಕಾಣಿಕೆ ಇತ್ಯಾದಿ. ಮಧ್ಯಮಾವಧಿ ಆದಾಯ ತರುವ ಚಟುವಟಿಕೆಗಳಾದ ಭತ್ತ ಬೇಸಾಯ, ಬಾಳೆ ಕೃಷಿ, ಜೋಳ, ಧವಸ ಧಾನ್ಯಗಳು ಇತ್ಯಾದಿ ಹಾಗೂ ದೀರ್ಘಾವಧಿಯಲ್ಲಿ ಆದಾಯ ತರುವ ಚಟುವಟಿಕೆಗಳಾದ ಕಬ್ಬು, ಅಡಿಕೆ, ರಬ್ಬರ್, ಕಾಳುಮೆಣಸು, ಮರ ಬೆಳೆಸುವುದು ಇತ್ಯಾದಿ.

ಕೃಷಿ ಮಾತ್ರವಲ್ಲದೇ ಕೃಷಿಗೆ ಪೂರಕ ಹಾಗೂ ಕೃಷಿಯೇತರ ಸ್ವಉದ್ಯೋಗದ ಬಗ್ಗೆಯೂ ಗಮನ ಹರಿಸಲಾಗುತ್ತದೆ. ಇದರಿಂದಾಗಿ ಆದಾಯದ ಮೂಲಗಳು ಹೆಚ್ಚುವುದರ ಜತೆ ಸ್ಥಿರ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಈ ಮೂಲಕ ಆ ಪ್ರಾಕೃತಿಕ ವಿಕೋಪ, ಬೆಲೆ ಏರಿಳಿಕೆ ಮೊದಲಾದ ಸಂದರ್ಭಗಳಲ್ಲಿ ನಷ್ಟದ ಪ್ರಮಾಣ ತಗ್ಗಿಸಲು ಸಾಧ್ಯವಾಗುತ್ತದೆ.

ಯೋಜನೆ ಹಾಕಿಕೊಳ್ಳುವುದು ಹೀಗೆ...
ಮೊದಲಿಗೆ ಕುಟುಂಬದಲ್ಲಿ ಲಭ್ಯವಿರುವ ಸಂಪನ್ಮೂಲಗಳಾದ ಕೃಷಿ ಭೂಮಿ, ನೀರಾವರಿ ಮೊದಲಾದವುಗಳನ್ನು ಪಟ್ಟಿ ಮಾಡಲಾಗುತ್ತದೆ.  ಮನೆಯಲ್ಲಿನ ಆದಾಯ ಗಳಿಸುವ ಹಾಗೂ ಆಶ್ರಿತ ಸದಸ್ಯರ ಕುರಿತಾಗಿ ಮಾಹಿತಿ ಸಂಗ್ರಹಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗುತ್ತದೆ.

ಇದರಲ್ಲಿ ಶಿಕ್ಷಣ, ಧಾರ್ಮಿಕ, ಮೂಲಸೌಕರ್ಯ ಮೊದಲಾದವುಗಳನ್ನು  ಪರಿಗಣಿಸಲಾಗುತ್ತದೆ. ಪಟ್ಟಿಯಲ್ಲಿನ ಕಾರ್ಯಕ್ರಮಗಳನ್ನು ಆದ್ಯತಾನುಸಾರ ವಾರ್ಷಿಕವಾಗಿ ವಿಂಗಡಣೆ ಮಾಡಲಾಗುತ್ತದೆ. ಆದಾಯೋತ್ಪನ್ನ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ಇದರಿಂದಾಗಿ ಎಲ್ಲದಕ್ಕೂ ಸಾಲವನ್ನೇ ಅವಲಂಬಿಸದೆ ಆದಾಯ ಗಳಿಸುವ ಮೂಲಕ ಮುಂದಿನ ವರ್ಷಗಳಲ್ಲಿ ಹೆಚ್ಚಿನ ಕಾರ್ಯಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಮಟ್ಟದ ತಾಂತ್ರಿಕ ವಿಭಾಗದ ಸಿಬ್ಬಂದಿಯ ನೆರವಿನೊಂದಿಗೆ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಕುಳಿತು ಹಿಡುವಳಿ ಯೋಜನೆಯನ್ನು ತಯಾರಿಸುತ್ತಾರೆ. ಪ್ರತೀ ವರ್ಷದ ಕೊನೆಯಲ್ಲಿ ಹಿಂದಿನ ವರ್ಷದ ಸಾಧನೆಯನ್ನು ಅವಲೋಕಿಸಲಾಗುತ್ತದೆ.

ಹಿಡುವಳಿ ಯೋಜನೆಯು ಕುಟುಂಬದ ವಾರ್ಷಿಕ ಆಯವ್ಯಯವನ್ನು ಒಳಗೊಂಡಿರುತ್ತದೆ. ಕುಟುಂಬದ ವಾರ್ಷಿಕ ಆದಾಯ ಹಾಗೂ ಖರ್ಚನ್ನು ಪರಿಗಣಿಸಿ ಕೊರತೆಯಾದ ಮೊತ್ತವನ್ನು ಇತರ ಸಾಲ ಮತ್ತಿತರ ಮೂಲಗಳಿಂದ ಹೊಂದಿಸಲಾಗುತ್ತದೆ. ‌ ಪ್ರತಿಯೊಂದು ಗುಂಪಿನ ವತಿಯಿಂದ ಬ್ಯಾಂಕಿನಲ್ಲಿ ಉಳಿತಾಯ ಖಾತೆಯೊಂದನ್ನು ತೆರೆಯಲಾಗುವುದು. 12 ವಾರಗಳ ನಿರಂತರ ಉಳಿತಾಯದ ಬಳಿಕ ಸದಸ್ಯರ ಉದ್ದೇಶ ಹಾಗೂ ಅರ್ಹತೆಗನುಗುಣವಾಗಿ ಸಾಲ ಒದಗಿಸಲಾಗುತ್ತದೆ.

ಪ್ರಗತಿಬಂಧು ಗುಂಪುಗಳ ವಿಶೇಷತೆಯೆಂದರೆ ಕಡ್ಡಾಯ ವಾರದ ಶ್ರಮ ವಿನಿಮಯ. ಗುಂಪಿನ ಎಲ್ಲಾ ಸದಸ್ಯರೂ ವಾರದ ನಿಗದಿತ ದಿನದಂದು ಒಬ್ಬ ಸದಸ್ಯನ ಮನೆಯಲ್ಲಿ ಶ್ರಮ ವಿನಿಮಯ ಮಾಡುತ್ತಾರೆ. ಈ ಶ್ರಮ ವಿನಿಮಯವು ಕೃಷಿಗೆ ಕೂಲಿಯಾಳುಗಳ ಕೊರತೆಯನ್ನು ನೀಗಿಸುವಲ್ಲಿ ಹಾಗೂ ಹಿಡುವಳಿ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಅನುಕೂಲಕರವಾಗಿದೆ.

ರೈತರಿಗೆ ಇತರ ಉಪಯೋಗ
ಸಣ್ಣ ಕೃಷಿಕರೂ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ  ಪಡೆಯುವ ಉದ್ದೇಶದಿಂದ ಕರ್ನಾಟಕ ಸರಕಾರದ ಕೃಷಿ ಇಲಾಖೆಯ ಸಹಯೋಗದೊಂದಿಗೆ ‘ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರ’ವನ್ನು ರಾಜ್ಯದ 25 ಜಿಲ್ಲೆಗಳ 161 ಹೋಬಳಿಗಳಲ್ಲಿ ಪ್ರಾರಂಭಿಸಲಾಗಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಒತ್ತು ನೀಡುತ್ತಿರುವ ಯೋಜನೆಯು ನಬಾರ್ಡ್ ಸಹಯೋಗದೊಂದಿಗೆ ‌‘ಶ್ರೀ ಪದ್ಧತಿ ಭತ್ತ ಬೇಸಾಯ’ ಎಂಬ ಕಾರ್ಯಕ್ರಮವನ್ನು ಐದು ವರ್ಷಗಳಿಂದ ಅನುಷ್ಠಾನಗೊಳಿಸುತ್ತಿದೆ.

ಅಲ್ಲದೇ ಅವಘಡಗಳ ಸಂದರ್ಭದಲ್ಲಿ ಕುಟುಂಬಕ್ಕೆ ರಕ್ಷಣೆ ನೀಡಲು ವಿಮಾ ಕಂಪೆನಿಗಳ ಸಹಯೋಗದೊಂದಿಗೆ ‘ಸುರಕ್ಷಾ’ ಎಂಬ ಆರೋಗ್ಯ ವಿಮಾ ಕಾರ್ಯಕ್ರಮವನ್ನು ನಡೆಸುತ್ತಿದೆ. ಗ್ರಾಮ ಮಟ್ಟದಲ್ಲಿನ ಒಕ್ಕೂಟಗಳು ವಿವಿಧ ಇಲಾಖೆ ಹಾಗೂ ಪ್ರಗತಿಬಂಧು ಗುಂಪುಗಳ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಯೋಜನೆಯು ಆಯೋಜಿಸುವ ರಾಜ್ಯ ಮಟ್ಟದ ಕೃಷಿ ಮೇಳ, ತಾಲ್ಲೂಕು ಮಟ್ಟದ ಕೃಷಿ ಉತ್ಸವ ಹಾಗೂ ಗ್ರಾಮ ಮಟ್ಟದಲ್ಲಿ ಆಯೋಜಿಸುವ ಕೃಷಿ ವಿಚಾರ ಸಂಕಿರಣಗಳು ಕೃಷಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದರ ಮೂಲಕ ವಿಚಾರ ವಿನಿಮಯ ಹಾಗೂ ಮಾಹಿತಿ ಒದಗಿಸುತ್ತಿವೆ.

ಧರ್ಮಸ್ಥಳದಲ್ಲಿ ಕೇಂದ್ರ ಕಚೇರಿ ಹೊಂದಿರುವ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ 25 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸಕ್ತ ಸಣ್ಣ ರೈತರು ಇವರ ಮಾರ್ಗದರ್ಶನದೊಂದಿಗೆ ಪ್ರಗತಿಬಂಧು ಗುಂಪುಗಳನ್ನು ರಚಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT