ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ನಾಲ್ಕನೇ ಜಯದತ್ತ ಭಾರತದ ಚಿತ್ತ

ಇಂದು ವೆಸ್ಟ್‌ ಇಂಡೀಸ್‌ ವಿರುದ್ಧ ಪೈಪೋಟಿ, ಗೇಲ್‌–ಕೊಹ್ಲಿ ಪ್ರಮುಖ ಆಕರ್ಷಣೆ
Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪರ್ತ್‌: ಏಕದಿನ ಸರಣಿ ಅರ್ಧದಲ್ಲಿಯೇ ರದ್ದಾದ ಕಹಿಘಟನೆ ಉಭಯ ತಂಡಗಳ ಆಟಗಾರರ ಮನದಿಂದ ಮಾಸಿ ಹೋಗಿದೆ. ಹೊಸ ಕನಸು ಹೊಸ ಸವಾಲು ಹೊತ್ತು ವಿಶ್ವಕಪ್‌ ಆಡಲು ಬಂದಿರುವ ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿವೆ.

ಮಹೇಂದ್ರ ಸಿಂಗ್‌ ದೋನಿ ನಾಯಕತ್ವದ ಭಾರತ ತಂಡ ಮೊದಲ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದು ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹಿಂದಿನ ಪಂದ್ಯಗಳಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಯುಎಇ ವಿರುದ್ಧ ಜಯ ಸಾಧಿಸಿತ್ತು. ಈಗ ಸತತ ನಾಲ್ಕನೇ ಗೆಲುವಿನ ಗುರಿ ಹೊಂದಿದ್ದು, ಇದಕ್ಕಾಗಿ ವಾಕಾ ಕ್ರೀಡಾಂಗಣ ವೇದಿಕೆಯಾಗಿದೆ.

ಹಾಲಿ ಚಾಂಪಿಯನ್‌ ಭಾರತ ಆರು ಪಾಯಿಂಟ್ಸ್‌ ಹೊಂದಿದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶ ಬಹುತೇಕ ಖಚಿತವಾಗಿದೆ. ಆದರೆ, ಎದುರಾಳಿ ವಿಂಡೀಸ್‌ ತಂಡಕ್ಕೆ ಈ ಪಂದ್ಯ  ಅಗ್ನಿಪರೀಕ್ಷೆ ಎನಿಸಿದೆ. ಕೆರಿಬಿಯನ್‌ ನಾಡಿನ ಬಳಗ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದೆ. ಈ ತಂಡ ಭಾರತ ಎದುರಿನ ಪಂದ್ಯದ ಬಳಿಕ ಕೊನೆಯ ಲೀಗ್ ಹೋರಾಟದಲ್ಲಿ ಯುಎಇ ಎದುರು ಪೈಪೋಟಿ ನಡೆಸಲಿದೆ. ಆದ್ದರಿಂದ ವಿಂಡೀಸ್‌ಗೆ ಉಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.

ವಿಶ್ವಕಪ್‌ಗೂ ಮೊದಲು ಇಲ್ಲಿಯೇ ನಡೆದ ಟೆಸ್ಟ್‌ ಮತ್ತು ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಕೆಟ್ಟ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿತ್ತು. ಈಗ ವಿಶ್ವಕಪ್‌ನಲ್ಲಿ ಚಾಂಪಿಯನ್‌ ತಂಡಕ್ಕೆ ತಕ್ಕ ಸಾಮರ್ಥ್ಯ ತೋರುತ್ತಿದೆ. ದೋನಿ ಪಡೆ ಹಿಂದಿನ ಪಂದ್ಯದಲ್ಲಿ ದುರ್ಬಲ ಯುಎಇ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತ್ತು. ಸ್ಪಿನ್ನರ್‌ ಆರ್‌. ಅಶ್ವಿನ್‌ ನಾಲ್ಕು ವಿಕೆಟ್‌ ಪಡೆದು ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.  ಇವರು ಮೂರು ಪಂದ್ಯಗಳಿಂದ ಎಂಟು ವಿಕೆಟ್‌ ಪಡೆದಿದ್ದಾರೆ.

ಬ್ಯಾಟಿಂಗ್‌ನಲ್ಲಿ ಬಲಿಷ್ಠ: ಉಪನಾಯಕ ವಿರಾಟ್ ಕೊಹ್ಲಿ, ಶಿಖರ್‌ ಧವನ್‌, ಸುರೇಶ್ ರೈನಾ, ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ ಮತ್ತು ದೋನಿ ಅವರನ್ನು ಒಳಗೊಂಡ ಭಾರತ ತಂಡ ಬ್ಯಾಟಿಂಗ್‌ ವಿಭಾಗದಲ್ಲಿ ಬಲಿಷ್ಠವಾಗಿದೆ.

ಕೊಹ್ಲಿ ಮೂರು ಪಂದ್ಯಗಳಿಂದ ಒಂದು ಶತಕ ಸೇರಿದಂತೆ 186 ರನ್‌ ಗಳಿಸಿದ್ದಾರೆ. ರೋಹಿತ್‌ ಕೂಡಾ ಒಂದು ಸಲ ಶತಕ ಬಾರಿಸಿದ್ದು ಒಟ್ಟು 224 ರನ್‌ ಕಲೆ ಹಾಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ್ದ ಧವನ್‌   ಎದುರಾಳಿ ಬೌಲರ್‌ಗಳಿಗೆ ಸವಾಲೊಡ್ಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ವೇಗಿಗಳಾದ ಮಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಮೋಹಿತ್‌ ಶರ್ಮ ಮತ್ತು ಉಮೇಶ್‌ ಯಾದವ್ ಅವರು ಭಾರತದ ಬೌಲಿಂಗ್‌ ವಿಭಾಗದ ಶಕ್ತಿ ಎನಿಸಿದ್ದಾರೆ. ಜೊತೆಗೆ, ಹಿಂದಿನ ಪಂದ್ಯಗಳಲ್ಲಿ ತೋರಿದ ಚುರುಕಿನ ಫೀಲ್ಡಿಂಗ್‌ ಕೂಡಾ ಮೆಚ್ಚುಗೆಗೆ ಕಾರಣವಾಗಿದೆ. ಆದರೆ, ವಿಂಡೀಸ್‌ ತಂಡ ಯುಎಇಯಷ್ಟು ದುರ್ಬಲವೇನಲ್ಲ.

ಎರಡು ಸಲ ವಿಶ್ವಕಪ್‌ ಗೆದ್ದಿರುವ ವಿಂಡೀಸ್‌ ಬ್ಯಾಟಿಂಗ್‌ನಲ್ಲಿ ಕ್ರಿಸ್‌ ಗೇಲ್‌ ಅವರನ್ನು ನೆಚ್ಚಿಕೊಂಡಿದೆ. ಪಂದ್ಯದ ಫಲಿತಾಂಶವನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಎಡಗೈ ಬ್ಯಾಟ್ಸ್‌ಮನ್‌ ಗೇಲ್‌ ಜಿಂಬಾಬ್ವೆ ವಿರುದ್ಧ ದ್ವಿಶತಕ ಗಳಿಸಿದ್ದರು. ಆದರೆ, ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಮೂರು ರನ್‌ಗೆ ಔಟ್‌ ಆಗಿದ್ದರು. ಆದರೂ ಗೇಲ್‌ ಅವರನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಮರ್ಲಾನ್ ಸ್ಯಾಮುಯೆಲ್ಸ್‌ (4 ಪಂದ್ಯಗಳಿಂದ 192) ಮತ್ತು ಲಿಂಡ್ಲ್‌ ಸಿಮನ್ಸ್‌ (3 ಪಂದ್ಯಗಳಿಂದ 152) ವಿಂಡೀಸ್‌ ತಂಡಕ್ಕೆ ಬ್ಯಾಟಿಂಗ್‌ ವಿಭಾಗದ ಆಧಾರವೆನಿಸಿದ್ದಾರೆ. ಬಲಗೈ ವೇಗಿ ಜೆರೋಮ್ ಟೇಲರ್‌, ರಸೆಲ್‌ ಮತ್ತು ಜಾಸನ್ ಹೋಲ್ಡರ್‌ ಕೂಡಾ ಬೌಲಿಂಗ್‌ ವಿಭಾಗದ ಜವಾಬ್ದಾರಿ ಹೊರಲಿದ್ದಾರೆ. ಗೇಲ್‌ ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲದೇ ಬೌಲಿಂಗ್‌ನಲ್ಲೂ ಗಮನ ಸೆಳೆದಿದ್ದಾರೆ. ಈ ಸಲದ ವಿಶ್ವಕಪ್‌ನಲ್ಲಿ ಅವರು ಐದು ವಿಕೆಟ್‌ ಪಡೆದದ್ದು ಇದಕ್ಕೆ ಸಾಕ್ಷಿ.

ಭಾರತಕ್ಕೆ ಮೇಲುಗೈ: ಐಸಿಸಿ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿರುವ ಭಾರತ ತಂಡ ವಿಂಡೀಸ್‌ ಎದುರು ಉತ್ತಮ ಅಂಕಿಅಂಶದ ದಾಖಲೆ ಹೊಂದಿದೆ.

ವಿಶ್ವಕಪ್‌ನಲ್ಲಿ ಒಟ್ಟು ಏಳು ಸಲ ಮುಖಾಮುಖಿಯಾಗಿದ್ದು, ಭಾರತ ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆದಿವೆ.  1983ರ ವಿಶ್ವಕಪ್‌ನಲ್ಲಿಯೇ ಮೂರು ಸಲ ಪೈಪೋಟಿ ನಡೆಸಿದ್ದವು. ಹಿಂದಿನ ವಿಶ್ವಕಪ್‌ ಟೂರ್ನಿಯ ಪಂದ್ಯ ಚೆನ್ನೈಯಲ್ಲಿ ನಡೆದಿತ್ತು. ಆಗ ದೋನಿ ಪಡೆ 80 ರನ್‌ಗಳ ಗೆಲುವು ಪಡೆದಿತ್ತು.

ಕೊನೆಯ ಪಂದ್ಯ: ಶುಕ್ರವಾರ ಪರ್ತ್‌ನಲ್ಲಿ ನಡೆಯಲಿರುವುದು ಈ ಸಲದ ವಿಶ್ವಕಪ್‌ನ ಕೊನೆಯ ಪಂದ್ಯವಾಗಿದೆ. ಇಲ್ಲಿ ಒಟ್ಟು ಮೂರು ಪಂದ್ಯಗಳು ಆಯೋಜನೆಯಾಗಿದ್ದವು.

ವಾಕಾ ಅಂಗಳದ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲ ಕಾರಿಯಾಗಿದೆ. ಬುಧವಾರ ಆಸ್ಟ್ರೇಲಿಯಾ ತಂಡ ಇದೇ ಅಂಗಳದಲ್ಲಿ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಸಾಧನೆ ಮಾಡಿತ್ತು. ಆಫ್ಘಾನಿಸ್ತಾನದ ಎದುರು 417 ರನ್‌ ಗಳಿಸಿತ್ತು. 

ಆದ್ದರಿಂದ ಭಾರತ ಮತ್ತು ವಿಂಡೀಸ್‌ ನಡುವಿನ ಪಂದ್ಯದಲ್ಲೂ ರನ್‌ ಹೊಳೆ ಹರಿಯುವ ನಿರೀಕ್ಷೆಯಿದೆ. ಅದರಲ್ಲೂ ಗೇಲ್‌ ಮತ್ತು ಕೊಹ್ಲಿ ಮೇಲೆ ಎಲ್ಲರ ಗಮನ ನೆಟ್ಟಿದೆ. ಐಪಿಎಲ್‌ನಲ್ಲಿ ಒಂದೇ ತಂಡ ದಲ್ಲಿ ಆಡುವ ಇವರು ಈಗ ಪರಸ್ಪರ ವಿರೋಧಿಗಳು. ಗೇಲ್‌ ಮೇನಿಯಾ ಮತ್ತು ಕೊಹ್ಲಿ ಅಬ್ಬರ ನೋಡಲು ಕಾಯ್ದಿರುವ ಕ್ರಿಕೆಟ್‌ ಪ್ರೇಮಿಗಳಿಗೆ ಈ ಪಂದ್ಯ ಭರ್ಜರಿ ಮನರಂಜನೆ ನೀಡಲಿದೆ.

ತಂಡಗಳು ಇಂತಿವೆ

ಭಾರತ: 
ಮಹೇಂದ್ರ ಸಿಂಗ್ ದೋನಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್‌, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಉಮೇಶ್‌ ಯಾದವ್‌, ಮೋಹಿತ್‌ ಶರ್ಮ, ಮಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಸ್ಟುವರ್ಟ್‌ ಬಿನ್ನಿ, ಅಂಬಟಿ ರಾಯುಡು ಮತ್ತು ಅಕ್ಷರ್‌ ಪಟೇಲ್‌.


ವೆಸ್ಟ್‌ ಇಂಡೀಸ್‌: ಜಾಸನ್‌ ಹೋಲ್ಡರ್‌ (ನಾಯಕ), ಡ್ವೇನ್‌ ಸ್ಮಿತ್‌, ಕ್ರಿಸ್‌ ಗೇಲ್‌, ಮರ್ಲಾನ್‌ ಸ್ಯಾಮುಯೆಲ್ಸ್‌, ಜೊನಾಥನ್‌ ಕಾರ್ಟರ್‌, ಜಾನ್ಸನ್‌ ಚಾರ್ಲೆಸ್‌, ಡರೆನ್ ಸಮಿ, ದಿನೇಶ್‌ ರಾಮ್ದಿನ್‌, ಆ್ಯಂಡ್ರೆ ರಸೆಲ್‌, ನಿಕಿತ ಮಿಲ್ಲರ್‌, ಸುಲೇಮಾನ್‌ ಬೆನ್‌, ಲೆಂಡ್ಲ್‌ ಸಿಮನ್ಸ್‌, ಶೆಲ್ಡೊನ್‌ ಚಾಟ್ರೆಲ್‌, ಕೆಮರ್‌ ರೋಚ್‌ ಮತ್ತು ಜೆರೋಮ್ ಟೇಲರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT