ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಕ್ಕೆ ಮುಖಾಮುಖಿಯಾಗುವ ಸಾಹಸಪೂರ್ಣ ಪ್ರಯತ್ನ

ಹೊರಳು ಓದು
Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ರಾಣಾ ಆಯೂಬ್ ಅವರು ಬರೆದು, ಸ್ವತಃ ಪ್ರಕಟಿಸಿರುವ ‘ಗುಜರಾತ್ ಫೈಲ್ಸ್: ಅನಾಟಮಿ ಆಫ್ ಎ ಕವರ್ ಅಪ್’ (Gujarat Files: Anatomy of a Cover Up) ಪುಸ್ತಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಈಚೆಗೆ ತೀವ್ರ ಚರ್ಚೆ ನಡೆದಿತ್ತು. ಪರ–ವಿರೋಧಗಳ ತೀವ್ರ ಹಣಾಹಣಿಯು ಮೂಡಿಸಿದ ಕುತೂಹಲದಿಂದ ಈ ಪುಸ್ತಕವನ್ನು ಓದಿದೆ.

ಇದೊಂದು ಪತ್ರಿಕಾ ವರದಿಯ ರೀತಿಯಲ್ಲಿರುವ, ಆದರೆ ಪತ್ರಿಕಾ ವರದಿ ಮಾತ್ರವೇ ಅಲ್ಲದೆ ಲೇಖಕರ ಕಾಳಜಿಯನ್ನೂ ಸ್ಪಷ್ಟವಾಗಿ ಸೂಚಿಸುವಂತಹ ಪುಸ್ತಕ. 2002ರಿಂದ ಆಚೆಗೆ ಗುಜರಾತ್ ರಾಜ್ಯದಲ್ಲಿ ಆದ ನರಮೇಧಗಳನ್ನು ಹಾಗೂ ಅವುಗಳ ತನಿಖೆಯು ನಡೆದ ಬಗೆಯನ್ನು ಕುರಿತು ಆಯಾ ತನಿಖೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಆಡಿದ ಮಾತುಗಳನ್ನು ರಾಣಾ ಆಯೂಬ್ ಅವರು ಈ ಪುಸ್ತಕದಲ್ಲಿ ಯಥಾವತ್ ದಾಖಲಿಸಿದ್ದಾರೆ. ಇವುಗಳನ್ನು ಪ್ರಕಟಿಸಲು ಬಹುತೇಕ ಮಾಧ್ಯಮಗಳು ಹಿಂಜರಿದ ಕಾರಣವಾಗಿ ತಾವೇ ಸ್ವತಃ ಈ ವಿವರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದಾಗಿ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.

ಇಂತಹ ಸ್ಫೋಟಕವೆನಿಸುವ ವಿವರಗಳನ್ನು ಸದಾ ‘ಸ್ಫೋಟ ಸುದ್ದಿ’ಯನ್ನೇ ಪ್ರಕಟಿಸುವ ಮಾಧ್ಯಮಗಳು ಪ್ರಕಟಿಸದೆ ಹಿಂದೆ ಉಳಿದುದರ ಹಿಂದಿರುವ ಕಾರಣಗಳು ಸಹ ಇಂದು ನಾವು ಚರ್ಚಿಸಬೇಕಾದ ವಿಷಯವೇ ಆಗಿದೆ. ಅದರ ಜೊತೆಗೆ ಇಂತಹ ಪುಸ್ತಕದಲ್ಲಿನ ಮಾಹಿತಿಯಿಂದ ಮುಂದೆ ನಮ್ಮ ಸಮಾಜ ಕಟ್ಟುವಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳೇನು ಎಂಬುದನ್ನು ಸಹ ಗಮನಿಸಬೇಕಿದೆ. ಆ ಹಿನ್ನೆಲೆಯಲ್ಲಿ ಈ ಪುಸ್ತಕ ಕುರಿತ ನನ್ನ ಟಿಪ್ಪಣಿಗಳು ಇಲ್ಲಿವೆ.

ರಾಣಾ ಆಯೂಬ್ ಅವರು ‘ತೆಹಲ್ಕಾ’ ಪತ್ರಿಕೆಯ ವರದಿಗಾರ್ತಿ ಆಗಿದ್ದವರು. ನಕ್ಸಲೈಟ್ ಹಾವಳಿಯಿದ್ದ ಪ್ರದೇಶಗಳಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿ ಹಿಂದಿರುಗಿದ ನಂತರ, ಸ್ನೇಹಿತರೊಬ್ಬರು ಎನ್‌ಕೌಂಟರ್ ಹೆಸರಲ್ಲಿ ತೀರಿಕೊಂಡದ್ದು ಅವರನ್ನು ಖಿನ್ನರನ್ನಾಗಿಸಿತು. ಆ ಸಂದರ್ಭದಲ್ಲೇ ಅವರಿಗೆ ಗುಜರಾತ್‌ನ ನರಮೇಧದ ಹಿನ್ನೆಲೆಯಲ್ಲಿ ಕೆಲವರನ್ನು ಸಂದರ್ಶಿಸುವ ಆಲೋಚನೆ ಹೊಳೆಯಿತು. ಅದಕ್ಕಾಗಿ ತಮ್ಮ ಪತ್ರಿಕೆಯ ಸಂಪಾದಕ ಬಳಗದ ಜೊತೆಗೆ ಮಾತಾಡಿ ಒಪ್ಪಿಗೆ ಪಡೆಯುವ ರಾಣಾ ಗುಜರಾತ್‌ಗೆ ಹೋಗುತ್ತಾರೆ. ಆದರೆ ಒಬ್ಬ ಮುಸಲ್ಮಾನ ವ್ಯಕ್ತಿಗೆ ಅಲ್ಲಿದ್ದ ವಾತಾವರಣ ಯಾವುದೇ ಮಾಹಿತಿ ಕೊಡುವುದಿರಲಿ, ಸತ್ಯವನ್ನು ಬಿಚ್ಚಿಡದು ಎನ್ನುವ ಹಿನ್ನೆಲೆಯಲ್ಲಿ ರಾಣಾ ತಮ್ಮ ಹೆಸರನ್ನು ಮೈಥಿಲಿ ತ್ಯಾಗಿ ಎಂದು ಕರೆದುಕೊಳ್ಳುತ್ತಾರೆ.

ತಾನು ಅಮೇರಿಕಾದಿಂದ ಬಂದಿರುವ ಸಿನಿಮಾ ತಯಾರಕಿ ಎಂದು ಹೇಳಿಕೊಂಡು ಗುಜರಾತ್ ರಾಜ್ಯದ ಅನೇಕ ಮುಖ್ಯರನ್ನು ಭೇಟಿಯಾಗುತ್ತಾರೆ. ಈ ಕೆಲಸದಲ್ಲಿ ಈಕೆಯ ಜೊತೆಗೆ ಮೈಕ್ ಎಂಬ ಹೆಸರಿನ ಫ್ರೆಂಚ್ ಮಾಧ್ಯಮ ವಿದ್ಯಾರ್ಥಿ ಸಹ ಜೊತೆಯಾಗುತ್ತಾನೆ. ‘ಅಂಡರ್ ಕವರ್’ ಆಗಿದ್ದುಕೊಂಡು ಅನೇಕರನ್ನು ಭೇಟಿ ಮಾಡುತ್ತಾರೆ. ಅವರು ಭೇಟಿ ಮಾಡಿದ ಅನೇಕ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಜೊತೆಗೆ ಆಡಿದ ಮಾತುಗಳನ್ನು ತಮ್ಮ ಗಡಿಯಾರ ಹಾಗೂ ಡೈರಿಯಲ್ಲಿ ಅಡಗಿಸಿಕೊಂಡಿದ್ದ ಕ್ಯಾಮೆರಾದ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಆ ಮಾತುಗಳ ಅಕ್ಷರರೂಪ ಮತ್ತು ಆಯಾ ಸಂದರ್ಶನ ಪಡೆಯಲು ರಾಣಾ ಆಯೂಬ್ ಹಿಡಿದ ಹಾದಿ ‘ಗುಜರಾತ್ ಫೈಲ್ಸ್’ ಕೃತಿಯಲ್ಲಿ ಅನಾವರಣಗೊಂಡಿದೆ.

ಪುಸ್ತಕದಲ್ಲಿನ ವಿವರಗಳು 2002ರ ಗೋಧ್ರಾ ಪ್ರಕರಣದ ನಂತರ ಗುಜರಾತ್ ರಾಜ್ಯದಲ್ಲಿ ಆದ ಘಟನೆಗಳನ್ನು ಮತ್ತು ಮುಸ್ಲಿಮ್ ವಿರೋಧಿ ನಿಲುವಿನ ಸಹಾಯದಿಂದಲೇ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದುದನ್ನು ದಾಖಲಿಸುತ್ತವೆ. 2002ರಿಂದ 2006ರವರೆಗೆ ನಿರಂತರವಾಗಿ ನಡೆದ ಎನ್‌ಕೌಂಟರ್ ಹೆಸರಿನ ಅನೇಕ ಸಾವುಗಳನ್ನು ಕುರಿತು ಪ್ರಸ್ತಾಪಿಸುತ್ತ– ಆ ಸಂದರ್ಭದಲ್ಲಿ ಆಡಳಿತಾರೂಢ ಮಂತ್ರಿಗಳು, ಆಡಳಿತಯಂತ್ರ ಹಾಗೂ ಪೊಲೀಸರು ಕೈಜೋಡಿಸಿದ್ದನ್ನು, ಕೆಲವೊಮ್ಮೆ ನಿಷ್ಕ್ರಿಯರಾಗಿದ್ದನ್ನು ಮತ್ತು ಕೋಮು ಧ್ರುವೀಕರಣಗೊಂಡ ಬಗೆಯನ್ನು ರಾಜನ್ ಪ್ರಿಯದರ್ಶಿ (2002ರಿಂದ 2007ರವರೆಗೆ ಗುಜರಾತ್‌ ‘ಎಟಿಎಸ್‌’ನ ನಿರ್ದೇಶಕರು), ಜಿ.ಎಲ್. ಸಿಂಘಾಲ್ (2002ರಲ್ಲಿ ಗುಜರಾತ್ ‘ಎಟಿಎಸ್’ ಮುಖ್ಯಸ್ಥರು), ಅಶೋಕ್ ನಾರಾಯಣ್ (2002ರಲ್ಲಿ ಗುಜರಾತಿನ ಗೃಹಕಾರ್ಯದರ್ಶಿ ಆಗಿದ್ದವರು), ಜಿ.ಸಿ. ರಾಯ್ಗರ್ (2002ರಲ್ಲಿ ಗುಜರಾತ್‌ನ ಗುಪ್ತಚರದಳದ ಮುಖ್ಯಸ್ಥರು), ಪಿ.ಸಿ. ಪಾಂಡೆ (2002ರಲ್ಲಿ ಅಹಮದಾಬಾದ್‌ನ ಕಮಿಷನರ್ ಆಫ್ ಪೊಲೀಸ್), ಚಕ್ರವರ್ತಿ (2002ರಲ್ಲಿ ಗುಜರಾತಿನ ಪೊಲೀಸ್ ಮಹಾನಿರ್ದೇಶಕರು), ಗೀತಾ ಜೋಹ್ರಿ (2006ರಲ್ಲಿ ಸೊಹ್ರಾಬುದ್ದೀನ್ ಮತ್ತು ಕೌಸರ್ ಬಾಯ್ ಎನ್‌ಕೌಂಟರ್ ಕುರಿತ ತನಿಖಾಧಿಕಾರಿ) ತರಹದ ಪೊಲೀಸ್ ಅಧಿಕಾರಿಗಳು ಹಾಗೂ ಮಾಯಾ ಕೊಂಡ್ನಾನಿ (ಗುಜರಾತ್ ಸರ್ಕಾರದ ಮಕ್ಕಳ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿದ್ದವರು) ತರಹದ ರಾಜಕೀಯ ನಾಯಕರ ಮಾತಿನಲ್ಲಿಯೇ ಕೃತಿ ವಿವರಗಳನ್ನು ದಾಖಲಿಸುತ್ತದೆ. ಪುಸ್ತಕದಲ್ಲಿರುವ ಹನ್ನೊಂದು ಅಧ್ಯಾಯಗಳಲ್ಲಿ ಈ ಸಂದರ್ಶನಗಳು ಮತ್ತು ಅವುಗಳು ನಡೆದ ಬಗೆಯನ್ನು ವಿವರಿಸುವ ಒಂಬತ್ತು ಅಧ್ಯಾಯಗಳಿವೆ.

ರಾಣಾ ಆಯೂಬ್ ಅವರು ಅತ್ಯಂತ ಅಪಾಯಕರ ಎನಿಸುವ ಸ್ಥಿತಿಯಲ್ಲಿಯೇ ಸಂದರ್ಶನಗಳನ್ನು ನಡೆಸಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಆಕೆ ಸಿಕ್ಕಿಬೀಳಬಹುದಾದ ಸಂದರ್ಭಗಳು ಇದ್ದರೂ ಧೈರ್ಯವಾಗಿ ಮುನ್ನಡೆದಿದ್ದಾರೆ. ಪತ್ರಕರ್ತರ ವೃತ್ತಿ ಎಷ್ಟು ಅಪಾಯಕರವಾದದ್ದು ಎಂಬುದನ್ನು ಸೂಚಿಸುತ್ತಲೇ ಆ ವೃತ್ತಿಯಲ್ಲಿ ಯಾವುದೇ ಒಂದು ಬಣಕ್ಕೆ ಒಲಿದು ಕೆಲಸ ಮಾಡಿದರೆ ಸಮಾಜ ಎದುರಿಸುವ ಸಂಕಟವೇನು ಎಂಬುದನ್ನು ಸಹ ಅವರು ದಾಖಲಿಸಿದ್ದಾರೆ.

ರಾಜನ್ ಪ್ರಿಯದರ್ಶಿ ಮತ್ತು ಸಿಂಘಾಲ್ ತರಹದವರು ಮಾತಾಡುವಾಗ, ದಲಿತ ಹಿನ್ನೆಲೆಯುಳ್ಳ ಅಧಿಕಾರಿಗಳನ್ನ ಮಾತ್ರ ಎನ್‌ಕೌಂಟರ್‌ಗೆ ಹೇಗೆ ಬಳಸಲಾಯಿತು ಎಂಬುದನ್ನು ಹೇಳುತ್ತಾರೆ. ಆ ಮೂಲಕ ನಮ್ಮ ಆಡಳಿತ ಯಂತ್ರದ ಪ್ರಮುಖ ಸ್ಥಾನಗಳಲ್ಲಿರುವ ಮೇಲ್ವರ್ಗದ ಜನ ಹಿಂದುಳಿದ ವರ್ಗದವರನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಾರೆ. ರಾಜನ್ ಪ್ರಿಯದರ್ಶಿಯವರು ಮಾತಾಡುತ್ತಾ, ‘ಒಬ್ಬ ದಲಿತ ಅಧಿಕಾರಿಗಳ ಕೈಯಲ್ಲಿ ಇಂತಹ ಕೊಲೆಗಳನ್ನು ಮಾಡಿಸುವುದು ಸುಲಭ. ಏಕೆಂದರೆ ಆತನಿಗೆ ಸ್ವಯಂ ಮರ್ಯಾದೆ ಇಲ್ಲ, ಯಾವುದೇ ಆದರ್ಶವಿಲ್ಲ. ಹೀಗಾಗಿ ಮೇಲ್ವರ್ಗದಿಂದ ಬಂದಂತಹ ಅಧಿಕಾರಿಗಳು ಸದಾ ಎಲ್ಲರಿಗೂ ಒಳ್ಳೆಯವರಾಗಿ ಉಳಿಯುತ್ತಾರೆ.

ದಲಿತರು ಮಾತ್ರ ಮೇಲಿನವರನ್ನು ಮೆಚ್ಚಿಸಲು ಇಂತಹ ಕೃತ್ಯಗಳನ್ನು ಮಾಡಿ ಮಸಿ ಬಳಿದುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ. ಇದೆಲ್ಲದರ ನಡುವೆ ರಾಜಕಾರಣಿಗಳು ತಮ್ಮ ಕೆಲಸ ಮುಗಿದ ನಂತರ ಅದೇ ಅಧಿಕಾರಿಗಳನ್ನು ಹೇಗೆ ಮೂಲೆಗೆ ತಳ್ಳುತ್ತಾರೆ ಎಂಬುದನ್ನು ಸಹ ಅನೇಕ ಅಧಿಕಾರಿಗಳು ಮಾತನಾಡಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ರಾಜಕಾರಣಿಗಳ ನಿರ್ಧಾರಗಳನ್ನು ವಿರೋಧಿಸುವ ಅಥವಾ ರಾಜಕಾರಣಿಗಳ ವಿರುದ್ಧವೇ ಸಾಕ್ಷಿಗಳನ್ನು ಒದಗಿಸುವ ಅಧಿಕಾರಿಗಳು ಹೇಗೆ ಬಡ್ತಿಯನ್ನು ಕಳೆದುಕೊಂಡು ಮೂಲೆಗುಂಪಾಗುತ್ತಾರೆ ಅಥವಾ ಮಾಡದ ತಪ್ಪನ್ನು ಹೊರಿಸಿ ಅವರನ್ನು ಹೇಗೆ ಕೆಲಸದಿಂದ ತೆಗೆಯಲಾಗುತ್ತದೆ ಎಂಬುದನ್ನು ಸ್ವತಃ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಇಲ್ಲಿರುವ ಪ್ರತಿ ಸಂದರ್ಶನದಲ್ಲಿನ ಮಾತುಗಳು ಇಂದು ಅಧಿಕಾರದಲ್ಲಿ ಇರುವ ಅನೇಕ ರಾಜಕೀಯ ನಾಯಕರನ್ನು ಕುರಿತು ನೇರ ಆರೋಪಗಳನ್ನು ಮಾಡುತ್ತವೆ. ಅವು ಸಾಬೀತಾಗುವುದಕ್ಕೆ ರಾಣಾ ಆಯೂಬ್ ಅವರು ರೆಕಾರ್ಡ್ ಮಾಡಿರುವ ಪ್ರತಿ ಮಾತುಗಳ ವಿಡಿಯೋಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕೃತ ಎಂದು ದೃಢಪಡಿಸುವ ಕೆಲಸ ಆಗಬೇಕಾಗುತ್ತದೆ. ಅದು ಸದ್ಯದ ಪರಿಸ್ಥಿತಿಯಲ್ಲಿ ಆಗುವುದು ಅನುಮಾನ. ಹೀಗಾಗಿ ಈ ಪುಸ್ತಕದಲ್ಲಿರುವ ಬಹುತೇಕ ವಿವರಗಳನ್ನು ಓದಿದ ಜನತೆ ಅಧಿಕಾರಕ್ಕೆ ಬರುವುದಕ್ಕೆ ಮತ್ತು ತಮ್ಮ ವಿರುದ್ಧ ಇರುವವರನ್ನು ಹಣಿಯುವುದಕ್ಕೆ ರಾಜಕಾರಣಿಗಳು ಯಾವೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂದು ನಮ್ಮ ಜನಪ್ರಿಯ ಸಿನಿಮಾಗಳಲ್ಲಿ ತೋರಿಸುವ ವಿವರವನ್ನುಳ್ಳ ಪುಸ್ತಕದ ರೀತಿಯಲ್ಲಿ ಓದುತ್ತಾರೇನೋ ಎನ್ನುವ ಅನುಮಾನ ನನ್ನದು.

ಹಾಗೆಂದು ಇದು ರೋಚಕ ಓದಿಗೆ ಸಿಗುವ ಪುಸ್ತಕವಲ್ಲ. ಇದು ಓದುಗನ ಮನಸ್ಸನ್ನು ಪ್ರತಿ ಸಂದರ್ಶನದ ಮೂಲಕ ಸತ್ಯಗಳ ಎದುರಿಗೆ ನಿಲ್ಲಿಸುವ ಪುಸ್ತಕ. ಇಂತಹದೊಂದು ಪುಸ್ತಕವು ಪ್ರಕಟವಾಗಿದೆ ಎಂಬುದೇ ಕಳೆದೆರಡು ವರ್ಷಗಳಲ್ಲಿ ನಾವು ಕಾಣುತ್ತಿರುವ ವ್ಯವಸ್ಥೆಯಲ್ಲಿ ಅಸಾಧ್ಯವಾದುದೊಂದು ಸಾಧ್ಯವಾಗಿರುವುದಕ್ಕೆ ಸಾಕ್ಷಿ. ಇಂತಹ ಸಾಹಸಕ್ಕೆ ಕೈ ಹಾಕಿ ಯಾರೂ ಪ್ರಕಟಣೆಗೆ ಮುಂದಾಗದ ವಿವರವನ್ನು  ಪ್ರಕಟಿಸಿರುವುದಕ್ಕೆ ರಾಣಾ ಆಯೂಬ್ ಅವರನ್ನು ಮೆಚ್ಚಲೇ ಬೇಕು.

ಈ ಪುಸ್ತಕದಲ್ಲಿನ ವಿವರಗಳು ‘ಸರಿಯಾದ, ರಾಜಕೀಯ ಲೇಪವಿಲ್ಲದ, ಅಧಿಕಾರದಲ್ಲಿರುವವರ ಹಸ್ತಕ್ಷೇಪವಿಲ್ಲದ ತನಿಖೆ’ಗೆ ಒಳಪಡುವಂತಾಗಬೇಕು. ಅಂತಹದೊಂದು ನಿಷ್ಪಕ್ಷಪಾತ ತನಿಖೆ ಆಗುತ್ತದೆ ಎಂಬ ನಂಬಿಕೆಯು ಮರೀಚಿಕೆ ಎನಿಸುವ ಕಾಲದಲ್ಲಿ ನಾವಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT