ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಶೋಧಕ ಕಲಬುರ್ಗಿ ಹತ್ಯೆ

Last Updated 30 ಆಗಸ್ಟ್ 2015, 19:52 IST
ಅಕ್ಷರ ಗಾತ್ರ

ಧಾರವಾಡ: ಕನ್ನಡದ ಹಿರಿಯ ಸಾಹಿತಿ, ಸಂಶೋಧಕ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ  ಎಂ.ಎಂ. ಕಲಬುರ್ಗಿ (77) ಅವರನ್ನು ಭಾನುವಾರ ಬೆಳಿಗ್ಗೆ ಇಲ್ಲಿನ ಕಲ್ಯಾಣನಗರದ ಅವರ ನಿವಾಸದಲ್ಲಿ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಹೊಂದಿಕೊಂಡಂತೆಯೇ ಇರುವ ಕಲ್ಯಾಣ ನಗರದ 9ನೇ ಕ್ರಾಸ್‌ನಲ್ಲಿರುವ  ಅವರ ನಿವಾಸ ‘ಸೌಜನ್ಯ’ ದಲ್ಲಿ ಈ ದಾಳಿ ನಡೆದಿದೆ. ವಿದ್ಯಾರ್ಥಿಗಳ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಅವರ ಹಣೆಗೆ ನೇರವಾಗಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಅನಿರೀಕ್ಷಿತ ದಾಳಿಯಿಂದ ಮನೆಯ ಹೊಸ್ತಿಲಲ್ಲಿಯೇ ಕಲಬುರ್ಗಿ ಅವರು ಕುಸಿದುಬಿದ್ದಿದ್ದಾರೆ. ಶಬ್ದ ಕೇಳಿ ಹೊರಗೆ ಬಂದ ಪತ್ನಿ ಉಮಾದೇವಿ ಹಾಗೂ ಪುತ್ರಿ ರೂಪದರ್ಶಿ, ಅಕ್ಕಪಕ್ಕದವರ ನೆರವಿನಿಂದ ಸಪ್ತಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ವೇಳೆಗಾಗಲೇ ಕಲಬುರ್ಗಿ ಅವರು ಮೃತಪಟ್ಟಿದ್ದರು. ನಂತರ ವೈದ್ಯರ ಸೂಚನೆಯಂತೆ ದೇಹವನ್ನು ನಗರದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಸರ್‌ ಬೇಕು: ಬೆಳಿಗ್ಗೆ 8.40ರ ಹೊತ್ತಿಗೆ ಆಪ್ತರೊಡನೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಲಬುರ್ಗಿ ಅವರನ್ನು ಕೇಳಿಕೊಂಡು ವ್ಯಕ್ತಿಯೊಬ್ಬ ಮನೆಗೆ ಬಂದಿದ್ದಾನೆ. ಕಾಲಿಂಗ್‌ ಬೆಲ್‌ ಒತ್ತಿದ ತಕ್ಷಣ ಕಲಬುರ್ಗಿ ಅವರೇ ಬಾಗಿಲು ತೆಗೆದು ಅರೆಕ್ಷಣವೂ ನಿಲ್ಲದೇ ಒಳಗೆ ಹೋಗಿದ್ದಾರೆ.

‘ಫೋನ್‌ನಲ್ಲಿ ಮಾತನಾಡುತ್ತಿದ್ದ ಅವರು ಬಂದವರು ಯಾರು ಎಂದೂ ನೋಡಲಿಲ್ಲ. ಕೆಲ ಕ್ಷಣದ ನಂತರ ಹೊರಗಿನಿಂದ ಮತ್ತೆ ‘ಸರ್‌... ಸರ್‌...’ ಎಂದು ಕರೆದರು. ಅಡುಗೆ ಮನೆಯಿಂದ ನಾನು ಹೊರಗೆ ಬಂದವಳೇ ಯಾರೋ ಕರೆಯುತ್ತಿದ್ದಾರೆ ನೋಡಿ ಎಂದು ಹೇಳಿ ಒಳಗೆ ಹೋದೆ. ಆ ಕ್ಷಣವೇ ಎರಡು ಬಾರಿ ದೊಡ್ಡ ಶಬ್ದ ಕೇಳಿಸಿತು. ತಕ್ಷಣ ಹೊರಗೆ ಬಂದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು’ ಎಂದು ಕಲಬುರ್ಗಿ ಅವರ ಪತ್ನಿ ಉಮಾದೇವಿ ಬಿಕ್ಕಿ ಬಿಕ್ಕಿ ಅಳುತ್ತಾ ಘಟನೆಯನ್ನು ವಿವರಿಸಿದರು.

ಧಾವಿಸಿದ ಶಿಷ್ಯ ಪಡೆ: ಕಲಬುರ್ಗಿ ಅವರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಸಹಪಾಠಿಗಳು, ಅಭಿಮಾನಿಗಳು, ಶಿಷ್ಯಬಳಗ, ಸ್ನೇಹಿತರು ಸೇರಿದಂತೆ ಸಾವಿರಾರು ಮಂದಿ ಸಿವಿಲ್‌ ಆಸ್ಪತ್ರೆಯ ಮುಂದೆ ಜಮಾಯಿಸಿದರು. ‘ಗುರು’ಗಳ ಸಾವಿಗೆ ಮಮ್ಮಲ ಮರುಗಿ ಕಣ್ಣೀರಿಟ್ಟರು. ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ಜನಪ್ರತಿನಿಧಿಗಳು ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದರು. ಮಧ್ಯಾಹ್ನ ಕಿಮ್ಸ್‌ನ ಡಾ.ಗಜಾನನ ನಾಯಕ ನೇತೃತ್ವದ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿತು.

ವ್ಯವಸ್ಥಿತ ದಾಳಿ?: ‘ದುಷ್ಕರ್ಮಿಗಳು ಕಲಬುರ್ಗಿ ಅವರ ಮೇಲೆ ದಾಳಿ ನಡೆಸುವ ಮುನ್ನ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಗುಂಡು ಹಾರಿಸಿರುವ ರೀತಿ ನೋಡಿದರೆ ವೃತ್ತಿಪರ ಹಂತಕರೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನಿಸುತ್ತದೆ. ಭಾನುವಾರ ರಜೆಯ ದಿನ ಹಾಗೂ ಮುಂಜಾನೆ ವೇಳೆ ಜನಸಂಚಾರ ವಿರಳವಾಗಿರುವುದರಿಂದ ದಾಳಿಗೆ ಈ ಅವಧಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ಬಂದಿದ್ದ ಶ್ವಾನದಳ ಅಲ್ಲಿನ ಬಿ.ಇಡಿ ಕಾಲೇಜೊಂದರ ಬಳಿಗೆ ತೆರಳಿ ಅಲ್ಲಿಂದ ರೈಲ್ವೆ ಹಳಿಗುಂಟ ಒಂದಷ್ಟು ದೂರ ಓಡಿ ನಿಂತಿದೆ.

ಡಿಸಿಪಿ ನೇತೃತ್ವದ ತಂಡ:  ಕಲಬುರ್ಗಿ ಅವರ ಹತ್ಯೆಗೆ ದುಷ್ಕರ್ಮಿಗಳು ‘ಪಾಯಿಂಟ್ 38’ ರಿವಾಲ್ವರ್‌ನಿಂದ ಗುಂಡು ಹಾರಿಸಿರುವುದು ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ. ಹಂತಕರ ಪತ್ತೆಗೆ ಎಸಿಪಿ ಎನ್‌.ಆರ್‌. ವಾಸುದೇವ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ರವೀಂದ್ರ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದೆಯೇ ಬೆದರಿಕೆ ಇತ್ತು: ನಾಸ್ತಿಕವಾದಕ್ಕೆ ಸಂಬಂಧಿಸಿ ಸಾಹಿತಿ ಯು.ಆರ್‌. ಅನಂತಮೂರ್ತಿ ಅವರ ಬಾಲ್ಯದ ಘಟನೆಯೊಂದನ್ನು ವಿಚಾರಸಂಕಿರಣವೊಂದರಲ್ಲಿ ಉಲ್ಲೇಖಿಸಿ ಒಂದೂವರೆ ವರ್ಷದ ಹಿಂದೆ ವಿವಾದಕ್ಕೀಡಾಗಿದ್ದ ಕಲಬುರ್ಗಿ, ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಆಗ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿತ್ತು. ಜೀವಬೆದರಿಕೆಯ ಕರೆಗಳೂ ಬಂದಿದ್ದ ಕಾರಣ ತಿಂಗಳು ಕಾಲ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ನಂತರ ಕಲಬುರ್ಗಿ ಅವರ ಮನವಿ ಮೇರೆಗೆ ಭದ್ರತೆ ಹಿಂಪಡೆಯಲಾಗಿತ್ತು.

‘ಕಪ್ಪು ಬಣ್ಣದ ಶರ್ಟ್‌–ಪ್ಯಾಂಟ್‌ ಧರಿಸಿದ್ದ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗುವುದನ್ನು ಮಹಿಳೆಯೊಬ್ಬರು ನೋಡಿದ್ದು, ಅವರಿಂದ ಮಾಹಿತಿ ಪಡೆಯಲಾಗಿದೆ. ಸಮೀಪದ ಬ್ಯಾಂಕ್‌ ಎದುರು ಅಳವಡಿಸಿದ್ದ ಸಿ.ಸಿ.ಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಹಿಂದಿನ ಬೆದರಿಕೆ ಕರೆಗಳು ಸೇರಿದಂತೆ ಆಸ್ತಿ ವ್ಯಾಜ್ಯವೂ ಕೊಲೆಗೆ ಕಾರಣವಾಗಿರಬಹುದು. ಹಾಗಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ಕೈಗೊಳ್ಳಲಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಇಂದು ಅಂತ್ಯಕ್ರಿಯೆ
ಡಾ.ಎಂ.ಎಂ.ಕಲಬುರ್ಗಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಮಧ್ಯಾಹ್ನ 1ಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ರುದ್ರಭೂಮಿಯಲ್ಲಿ ನಡೆಯಲಿದೆ. ಡಾ. ಡಿ.ಸಿ.ಪಾವಟೆ ಅವರ ಸಮಾಧಿ ಪಕ್ಕದಲ್ಲೇ ಕಲಬುರ್ಗಿ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಸೋಮವಾರ ಬೆಳಿಗ್ಗೆ 11ರ ವರೆಗೂ ಕರ್ನಾಟಕ ಕಲಾ ಕಾಲೇಜಿನ ಮೈದಾನದಲ್ಲಿ ಕಲಬುರ್ಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಕಲ್ಯಾಣ ನಗರದಲ್ಲಿರುವ ಸ್ವಗೃಹಕ್ಕೆ ಕೊಂಡೊಯ್ದು ಅಲ್ಲಿಂದ ಕವಿವಿ ರುದ್ರಭೂಮಿವರೆಗೂ ಅಂತಿಮ ಯಾತ್ರೆ ನಡೆಯಲಿದೆ.

ತನಿಖೆಗೆ ಚಿಂತನೆ:  ಹತ್ಯೆ ಪ್ರಕರಣ ಭೇದಿಸಲು ಸಿಐಡಿ ಅಥವಾ ಸಿಬಿಐನಿಂದ ತನಿಖೆ ನಡೆಸುವ  ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT