ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾನ್ವೇಷಣೆಯ ಸಮರ್ಥ ಪ್ರಯೋಗ ‘ಷಾಪುರದ ಸೀನಿಂಗಿ’

ರಂಗಭೂಮಿ
Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಪ್ರೇಕ್ಷಕರನ್ನು ಲವಲವಿಕೆಯಿಂದ ತನ್ನೊಡನೆ ನಿಜಾನುಭವದಲ್ಲಿ ತೇಲಿಸಿಕೊಂಡುಹೋದ ಸಮರ್ಥ ಪ್ರಯೋಗ ‘ಷಾಪುರದ ಸೀನಿಂಗಿ-ಸತ್ಯ’. ಇತ್ತೀಚೆಗೆ ನಗರದ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶಿತವಾದ ಈ ನಾಟಕದ ನಿರ್ದೇಶಕಿ ಅರ್ಚನಾ ಶ್ಯಾಂ. ನಾಟಕವನ್ನು ಅಭಿನಯಿಸಿದವರು ‘ಅಂತರಂಗ’ದ ಕಲಾವಿದರು. ನಾಟಕದ ರಚನೆ ಬಿ.ಸುರೇಶ.

ಉತ್ತರ ಕರ್ನಾಟಕದ ಷಾಪುರದಲ್ಲಿ ನೆಲೆಸಿರುವ ದೇವತಾಸ್ವರೂಪಿ ಸೀನಿಂಗಿಯ ಅಂತರಂಗದ ನಿಜಕಥೆಯನ್ನು ನಾಟಕವು ಎಳೆಎಳೆಯಾಗಿ ಬಿಚ್ಚಿಡುತ್ತದೆ. ಪವಾಡ, ಮಹಿಮೆಗಳ ಹೊರಕವಚದೊಳಗೆ ನಿಗೂಢವಾಗಿ ಅಡಗಿರುವ ರಕ್ತ-ಮಾಂಸಗಳ ಜೀವ-ಧ್ವನಿಯನ್ನು ಮಿಡಿದು ಸತ್ಯದರ್ಶನ ಮಾಡಿಸುವ ಆಶಯ ನಾಟಕದ್ದು.

ತಾವು ಕೇಳಿದಂತೆ ಸೀನಿಂಗಿಯ ಕಥೆಯನ್ನು ಅನಾವರಣಗೊಳಿಸುತ್ತ ಹೋಗುವ ಪವಾಡಪರ ಜೋಗಿಗಳು ಮತ್ತು ಐತಿಹ್ಯದ ಮುಸುಕನ್ನು ಸರಿಸಿ ಸತ್ಯಸಂಗತಿಯನ್ನು ಬಯಲಿಗಿಡಲೆತ್ನಿಸುವ ಕಥೆಗಾರರು, ಹೀಗೆ ಎರಡು ಬಣಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಸಿರಿವಂತರ ಮನೆಯಲ್ಲಿ ಜನಿಸಿದ ಸುಂದರಿ ಸೀನಿಂಗಿಗೆ ಏಳುಜನ ದೊಡ್ಡಪ್ಪಂದಿರು. ಆಕೆಯೋ ಗುಡಿಯ ಮುಕ್ಕಣ್ಣನ ಕಡುಭಕ್ತಳು. ವಯಸ್ಸಿಗೆ ಬಂದ ಇವಳನ್ನು ತಂಗಿ ನರಸಿಯ ಪೆದ್ದು, ಶ್ವಪಚ ಮಗ ಮಾಣಿಕ್ಯನಿಗೆ ಮದುವೆ ಮಾಡಿಕೊಡುವುದೆಂದು ನಿಶ್ಚಯವಾಗುತ್ತದೆ.

ಶಕುನ ಸರಿಯಿಲ್ಲವೆಂದು ಈ ಮದುವೆಗೆ ಒಲ್ಲದ ಸೀನಿಂಗಿಯನ್ನು ಒತ್ತಾಯಪೂರ್ವಕ ಮದುವೆ ಮಾಡಿಕೊಡಲಾಗುತ್ತದೆ. ಅತ್ತೇಮನೆಗೆ ಬಂದೊಡನೆ ಕಡುಬಡತನದ ಗುಡಿಸಿಲನ್ನು ಸೀನಿಂಗಿ, ತಾನು ನಂಬಿದ ದೈವವಿತ್ತ ಭಂಡಾರದ ಸಹಾಯದಿಂದ ದಿವ್ಯಅರಮನೆ ಮಾಡುತ್ತಾಳೆ. ಮುಕ್ಕಣ್ಣನ ಗುಡಿಯಲ್ಲಿರುವುದಕ್ಕೆ ಅತ್ತೆಯ ಒಪ್ಪಿಗೆ ಪಡೆದು ವರ್ಷಕಾಲ ಗಂಡನನ್ನು ದೂರವಿಡುತ್ತಾಳೆ.

ಆದರೆ ಊರಜನರ ಮಾತು ಕೇಳಿ ಮಾಣಿಕ್ಯ, ಹೆಂಡತಿಯ ಸಂಗಬಯಸಿ, ಊರ ಹೊರಗಿನ ಪಾಳುಗುಡಿಯಲ್ಲಿದ್ದ ಅವಳನ್ನು ಕೆಣಕಿ ಮುಕ್ಕಣ್ಣನಿಂದ ಹತನಾಗುತ್ತಾನೆ. ಈ ಎಲ್ಲ ಘಟನೆಗಳಿಂದ ಬೇಸತ್ತ ಸೀನಿಂಗಿ ವೈರಾಗ್ಯಮೂರ್ತಿಯಾಗಿ ಊರಮುಂದಿನ ಗುಡ್ಡವೇರಿ ಆಲದಮರದಡಿ ಕೂತು ಧ್ಯಾನಸ್ಥಳಾಗುತ್ತಾಳೆ. ಮುಂದೆ ಊರಜನರ ಇಷ್ಟಾರ್ಥ ನೆರವೇರಿಸುವ ದೇವತೆಯಾಗಿ, ಕ್ರಮೇಣ ಅವಳ ಮಹಿಮೆ ಹರಡುತ್ತ ಪವಾಡ ಸ್ತ್ರೀಯಾಗುತ್ತಾಳೆಂದು ಜೋಗಿಗಳು ಸೀನಿಂಗಿ ದೇವತೆಯ ದಂತಕಥೆಯನ್ನು ಬಿತ್ತರಿಸುತ್ತಾರೆ.

ಆದರೆ ಸತ್ಯಶೋಧಕ ಕಥೆಗಾರರ ನಿರೂಪಣೆಯೇ ಬೇರೆ. ಸೀನಿಂಗಿ ಆ ಊರಿನ ಯುವಕ ಮುಕ್ಕಣ್ಣನಲ್ಲಿ ಅನುರಕ್ತಳಾಗಿದ್ದು ಇಬ್ಬರೂ ಕದ್ದುಮುಚ್ಚಿ ಪಾಳುಗುಡಿಯಲ್ಲಿ ಸೇರುತ್ತಿರುತ್ತಾರೆ. ಮನೆಯ ಹಿರಿಯರು ಇಚ್ಛಿಸಿದ ನೆಂಟಸ್ತಿಕೆಯ ಮದುವೆಗೆ ಒಲ್ಲದೆ ಅವಳು ಶಕುನ ಸರಿಯಿಲ್ಲವೆಂದು ಮದುವೆ ಮುರಿಯಲೆತ್ನಿಸಿ ವಿಫಲಳಾಗಿ, ವಿಧಿಯಿಲ್ಲದೆ ಪೆದ್ದ ಮಾಣಿಕ್ಯನ ಕೈಲಿ ತಾಳಿ ಬಿಗಿಸಿಕೊಳ್ಳುತ್ತಾಳೆ.

ಅತ್ತೆಯನ್ನು ಒಲಿಸಿಕೊಳ್ಳಲು ಅವಳು ತನ್ನ ತೌರಿನ ಬಂಗಾರವಿತ್ತು ಅವರ ಮನೆಯ ಪರಿಸ್ಥಿತಿ ಸುಧಾರಿಸುತ್ತಾಳೆಯೇ ಹೊರತು ಅವಳಿಗೆ ಯಾವ ಪವಾಡವೂ ಗೊತ್ತಿಲ್ಲ. ಮನೆಯವರನ್ನು ಯಾಮಾರಿಸಿ ಗುಡಿಯಲ್ಲಿ ತನ್ನ ಪ್ರೇಮಿ ಮುಕ್ಕಣ್ಣನೊಡನೆ ಹಾಯಾಗಿದ್ದ ಸಮಯದಲ್ಲಿ ಗಂಡ ಬಂದು ಗುಡಿಯೊಳಗೆ ನುಗ್ಗಿಬಿಟ್ಟಾಗ ತನ್ನ ಗುಟ್ಟು ರಟ್ಟಾಗುತ್ತೆಂದು ಹೆದರಿದ ಅವಳ ಸಹಾಯಕ್ಕೆ ಬರುವವನು ಅವಳ ಪ್ರಿಯಕರ ಮುಕ್ಕಣ್ಣ.

ಮಾಣಿಕ್ಯನನ್ನು ಕೊಂದ ಮುಕ್ಕಣ್ಣ ಹೆದರಿ ತನ್ನ ಮನೆಗೆ ಓಡಿಹೋಗಿ ಅವಿತುಕೊಂಡು, ಆಶ್ರಯ ಬೇಡಿ ಬಂದ ಅವಳನ್ನು ಬಹಿರಂಗವಾಗಿ ಒಪ್ಪಿಕೊಳ್ಳದೆ, ಅವಳ ಸಂಬಂಧವನ್ನು ನಿರಾಕರಿಸುತ್ತಾನೆ. ಆಗ ರೋಸತ್ತ ಸೀನಿಂಗಿ, ಅವಮಾನದಿಂದ ಕೆಟ್ಟು ಪಟ್ಟಣ ಸೇರುತ್ತಾಳೆ. ಅಲ್ಲಿ ಅನಿವಾರ್ಯವಾಗಿ ಹೊಟ್ಟೆಪಾಡಿಗೆ ವೇಶ್ಯೆಯಾಗಿ, ಹಣ ಸಂಪಾದಿಸಿ, ಊರಿಗೆ ಹಿಂತಿರುಗಿ, ತವರಿನವರು ತನಗಾಗಿ ಮಾಡಿದ ಖರ್ಚಿನ ಋಣ ಸಂದಾಯ ಮಾಡಿ, ಅವರ ಬಾಯಿ ಮುಚ್ಚಿಸುತ್ತಾಳೆ. ಇದು ನಿಜವಾಗಿ ನಡೆದ ಕಥೆ. ಈ ರೀತಿಯಲ್ಲಿ ಮೇಲಿನೆರಡು ಕಥೆಗಳ ಸಂಗಮದಲ್ಲಿ ಸೀನಿಂಗಿಯ ಅವತಾರ ದ್ವಂದ್ವ ಬಗೆಯಲ್ಲಿ ಅರಳಿವೆ.

ಒಂದೇಮರದ ಎರಡು ಕೊಂಬೆಗಳಂತೆ ಹಬ್ಬುವ ವಿಭಿನ್ನ ಬಣ್ಣದ ಕಥಾನಕದ ಎರಡುಮುಖಗಳನ್ನು, ಸಮಾನಾಂತರವಾಗಿ ಸ್ಪಷ್ಟದಿಕ್ಕಿನಲ್ಲಿ ನಿರ್ದೇಶಕಿ ಅರ್ಚನಾ ಬಹು ಮಾರ್ಮಿಕವಾಗಿ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಪಾದರಸದಂತೆ ಹೆಜ್ಜೆಯಿಕ್ಕುವ ಗುಂಪುಗಳ ಚಲನೆ, ಕುತೂಹಲವಾಗಿ ಅಂಕಗಳು ಬಿಚ್ಚಿಕೊಳ್ಳುವ ರೀತಿ, ಆಕರ್ಷಕ ಕುಣಿತ, ಹಿನ್ನಲೆಯಲ್ಲಿ ಮೂಡಿಬರುತ್ತಿದ್ದ ಜಾನಪದಧಾಟಿಯ ಲಯಬದ್ಧ ಹಾಡುಗಳ ಪೋಷಣೆ (ಸಂಗೀತ ಸಂಯೋಜನೆ-ವಾಸು ದೀಕ್ಷಿತ್) ಕಣ್ಣಿಗೆ ಹಬ್ಬವನ್ನುಂಟು ಮಾಡುವಂತ್ತಿದ್ದ ವೇಷಭೂಷಣ -ಮುಖದ ಅಲಂಕಾರಿಕೆಗಳು ನಾಟಕವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸಿತು. ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಿದ್ದ ರಂಗಸಜ್ಜಿಕೆ, ರಂಗಪರಿಕರಗಳು ಸೊಗಸಿದ್ದವು.

ಮುಖ್ಯವಾಗಿ ನಾಟಕದಲ್ಲಿ ಎಲ್ಲ ನಟರ ಶ್ರದ್ಧೆ ಮತ್ತು ತನ್ಮಯತೆ, ಸಾಮೂಹಿಕ ಕಾಳಜಿ ಎದ್ದು ತೋರುತ್ತಿತ್ತು. ಸೀನಿಂಗಿಯಾಗಿ ನಂದಿನಿಮೂರ್ತಿ ಭಾವಪೂರ್ಣವಾಗಿ, ಪರಿಣಾಮಕಾರಿಯಾಗಿ ಅಭಿನಯಿಸಿದರು. ಮಾಣಿಕ್ಯನಾಗಿ ಶ್ರೀಹರ್ಷ ಹೊಸ್ಕೆರೆ ಪಾತ್ರವರಿತು ಉತ್ತಮ ಆಂಗಿಕ ಅಭಿನಯದಿಂದ ಗಮನಸೆಳೆದರೆ, ಸೌಮ್ಯಾ ನಾಯಕ್, ಗೀತಾಮಣಿ,     ದೀಪಕ್ ಸುಬ್ರಹ್ಮಣ್ಯ ಹದವಾಗಿ ನಟಿಸಿದರು.

ಕಡೆಯಲ್ಲಿ ಸೀನಿಂಗಿ ದೇವತೆಯಂತೆ ಒಂದು ಕೈಯಲ್ಲಿ ಖಡ್ಗ ಝಳಪಿಸುತ್ತ ಇನ್ನೊಂದು ಕೈಯಲ್ಲಿ ಪಿಸ್ತೂಲ್ ತೋರಿಸುತ್ತ ಎರಡೂ ಕಥೆಗಳ ಮುಖಗಳನ್ನು ಪ್ರತಿಬಿಂಬಿಸಿದ್ದು ಮನೋಜ್ಞವೆನಿಸಿತು. ರೌದ್ರಿಯಾದ ಸೀನಿಂಗಿಯ ಹಿಂದೆ ಬಂದುನಿಂತ ನಾಲ್ಕೆಂಟು ಹೆಣ್ಣುಮಕ್ಕಳು ‘ನಾವು ಸೀನಿಂಗಿಯರು’ ಎಂದು ಒಟ್ಟಾಗಿ ಕೂಗಿಹೇಳುವುದು, ಹೆಣ್ಣುಮಕ್ಕಳ ಅಲಕ್ಷಿತ ಅಭಿಪ್ರಾಯಗಳ ಶೋಷಿತಧ್ವನಿಯನ್ನು ಪ್ರತಿನಿಧಿಸಿದವು.

ನಾಟಕ ಪ್ರದರ್ಶನ ಅಚ್ಚುಕಟ್ಟಾಗಿ ಮನಮುಟ್ಟಿದರೂ, ಕಥೆಯ ಕೆಲವೆಡೆಗಳಲ್ಲಿ ಪ್ರಶ್ನೆಗಳು ಮೂಡಿ ಅನುಮಾನ ಕಾಡಿದವು. ಅಂಥ ಪರಮಸುಂದರಿ,ಊರಿನ ಸಿರಿ, ಸತ್ಯದ ಮಗಳೆಂಬ ಖ್ಯಾತಿವೆತ್ತ ಸೀನಿಂಗಿಯನ್ನು ಅವಳ ದೊಡ್ಡಪ್ಪಂದಿರು, ಕಡುಬಡವಿ ತಂಗಿಯ ಹುಚ್ಚು, ಕೊಳಕು ಮಗನಿಗೆ ಬಲವಂತದಿಂದ ಮದುವೆ ಮಾಡಿಕೊಡುವ ಅನಿವಾರ್ಯತೆ ಯಾದರೂ ಏನಿತ್ತು??! ಹುಟ್ಟಿದಾಗಲೇ ಈ ಮಾತಾಗಿತ್ತೇ, ಅಥವಾ ತೊಟ್ಟಿಲಲ್ಲೇ ತಾಳಿ ಕಟ್ಟಲಾಗಿತ್ತೇ? ಉಹೂಂ...ಯಾವುದೂ ಇಲ್ಲ.! ಮನೆಯಿಂದ ತೊಲಗಿಸುವಷ್ಟು   ಆ ಹಿರಿಯರಿಗೆ ಹೊರೆಯಾಗಿದ್ದಳೇ ಅವಳು? ಅಥವಾ ಅವಳ ಮೇಲೇನಂಥ ದ್ವೇಷ ಅವರಿಗೆ, ಅವಳ ಬಾಳನ್ನು ಹಾಳುಗೆಡವಲು?

ಒತ್ತಾಯದ ಮದುವೆಗೆ ಯಾವ ಬಲವಾದ ಕಾರಣವನ್ನೂ ನಾಟಕದಲ್ಲಿ ತೋರಿಸಿಲ್ಲ. ಕಥೆಯ ಕಾಲಮಾನ ಯಾವುದೆಂಬುದು ಸ್ಪಷ್ಟವಾಗುವುದಿಲ್ಲ. ಕಾರಣ ಸಂಭಾಷಣೆ-ಹಾಡುಗಳಲ್ಲಿ ಇಂಗ್ಲಿಷ್ ಪದಗಳು ನುಸುಳುವ ಕಾಲಘಟ್ಟದಲ್ಲಿ ಪಕ್ಕದೂರಿಗೆ ಗಿಳಿಯ ಮುಖಾಂತರ ಪತ್ರ ಕಳಿಸುವ ಸನ್ನಿವೇಶ ರೂಪಿತವಾಗಿವೆ! ಅಲ್ಲದೆ ಈ ಐತಿಹ್ಯ, ದಂತಕಥೆಗಳು ಜನಜನಿತವಾಗಲು ಸಾಕಷ್ಟು ಕಾಲಾವಧಿ ಬೇಕೆನಿಸುತ್ತದೆ. ವೇಷಭೂಷಣಗಳು ಉತ್ತರಕರ್ನಾಟಕದ ಶೈಲಿಯಲ್ಲಿ ಕಂಡರೂ ಅವರಾಡುವ ಭಾಷೆ ಅದಕ್ಕೆ ಹೊಂದಿಕೆಯಾಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT