ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಗತಿ: ಸ್ತ್ರೀ ಕೇಂದ್ರಿತ ಧರ್ಮಶಾಸ್ತ್ರ!

Last Updated 20 ಮೇ 2016, 19:41 IST
ಅಕ್ಷರ ಗಾತ್ರ

ಲಿಂಗಾಧಾರಿತ ಬಜೆಟ್ ಬಗ್ಗೆ ನಾವು ಕೇಳಿದ್ದೇವೆ. ಲಿಂಗಾಧಾರಿತ ಧರ್ಮಶಾಸ್ತ್ರದ ಬಗ್ಗೆ ನಮಗೆ ಗೊತ್ತೆ? ಬಹುತೇಕ ಮಂದಿಗೆ ಗೊತ್ತಿಲ್ಲ ಎಂದೇ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಗೋಳಿಕೈ ವಿಶ್ವನಾಥ ಭಟ್ಟರು ಈ ಬಗ್ಗೆ ಸಂಶೋಧನೆ ಮಾಡಿದ್ದಾರೆ.

ನಮ್ಮ ಧರ್ಮ ಶಾಸ್ತ್ರಗಳೆಲ್ಲ ಪುರುಷ ಕೇಂದ್ರಿತ ಅಲ್ಲ ಎನ್ನುವುದನ್ನು ಅವರು ಉದಾಹರಣೆ ಸಹಿತ ನಿರೂಪಿಸಿದ್ದಾರೆ. ತಮ್ಮ ಸಂಶೋಧನೆಯನ್ನು ಒಟ್ಟುಗೂಡಿಸಿ ‘ಸದ್ಗತಿ’ ಎಂಬ ಗ್ರಂಥವನ್ನೂ ರಚಿಸಿದ್ದಾರೆ.

‘ನಾ ಪುತ್ರಸ್ಯ ಗತಿರ್ನಾಸ್ತಿ’ ಎಂಬ ಮಾತೊಂದಿದೆ. ಅಂದರೆ ಗಂಡು ಮಕ್ಕಳು ಇಲ್ಲದಿದ್ದರೆ ಮೋಕ್ಷವಿಲ್ಲ ಎನ್ನುವುದು ಇದರ ಅರ್ಥ. ಇದು ನಿಜವೇ? ಈ ಬಗ್ಗೆ ನಮ್ಮ ಶಾಸ್ತ್ರ, ವೇದ, ಪುರಾಣಗಳು ಏನನ್ನು ಹೇಳುತ್ತವೆ ಎಂದು ಹುಡುಕಿಕೊಂಡು ಹೊರಟ ವಿಶ್ವನಾಥ ಭಟ್ಟರಿಗೆ ಸಿಕ್ಕಿದ್ದು ಹಲವಾರು ಅಪರೂಪದ ಅಂಶಗಳು. ಧರ್ಮಶಾಸ್ತ್ರಗಳು ಎಂದೂ ಪುರುಷ ಪಕ್ಷಪಾತಿಯಲ್ಲ ಎನ್ನುವುದನ್ನು ಅವರು ಈ ಗ್ರಂಥದಲ್ಲಿ ಸಾಧಿಸಿ ತೋರಿಸಿದ್ದಾರೆ.

ಪಾಲಕರು ಸತ್ತ ನಂತರ ಅವರ ಕರ್ಮವನ್ನು ಯಾರು ಮಾಡಬೇಕು ಎಂದು ನಿರ್ಧರಿಸಿರುವುದು ಅತ್ಯಂತ ಲೌಕಿಕ ಕಾರಣಕ್ಕೇ ವಿನಾ ಅದರಲ್ಲಿ ಆಧ್ಯಾತ್ಮಿಕ ಕಾರಣವೇ ಇಲ್ಲ ಎನ್ನುವುದನ್ನು ಅವರು ಸಂಶೋಧಿಸಿದ್ದಾರೆ. ಹಾಗಾದರೆ ‘ನಾ ಪುತ್ರಸ್ಯ ಗತಿರ್ನಾಸ್ತಿ’ ಎಂಬ ನಂಬುಗೆ ಬಂದಿದ್ದು ಹೇಗೆ ಎಂದು ಕೇಳಿದರೆ ಶಾಸ್ತ್ರಕ್ಕಿಂತ ಶಾಸ್ತ್ರಿಯೇ ದೊಡ್ಡವನಾಗಿದ್ದರಿಂದ ಇಂತಹ ನಂಬುಗೆ ಸಮಾಜದಲ್ಲಿ ಬೇರು ಬಿಟ್ಟಿತು ಎಂಬುದು ಅವರ ಖಚಿತ ನಿಲುವು.

ಪುತ್ರ ಇಲ್ಲದೇ ಇದ್ದರೆ ತಂದೆ ತಾಯಿಗಳ ಅಂತ್ಯಕ್ರಿಯೆಯನ್ನು ಹೆಣ್ಣು ಮಕ್ಕಳೇ ಮಾಡಬಹುದು. ಪತ್ನಿ ಮೃತಳಾದರೆ ಪತಿಯೂ, ಪತಿ ಮೃತನಾದರೆ ಪತ್ನಿಯೂ ಅಂತ್ಯಸಂಸ್ಕಾರ ಮಾಡಬಹುದು. ಇದು ಶಾಸ್ತ್ರಬದ್ಧ ಎಂದು ಅವರು ಈ ಕೃತಿಯಲ್ಲಿ ಉದಾಹರಣೆ ಸಹಿತವಾಗಿ ಹೇಳಿದ್ದಾರೆ.

‘ಯಶ್ಚ ಅರ್ಥಹರಹಃ ಸಃ ಪಿಣ್ಡದಾಯಿ’ ಎಂದು ಧರ್ಮಶಾಸ್ತ್ರ ಹೇಳುತ್ತದೆ. ಅಂದರೆ ಆಸ್ತಿಯಲ್ಲಿ ಯಾರು ಪಾಲು ಪಡೆದುಕೊಳ್ಳುತ್ತಾರೋ ಅವರು ಪಿಂಡಪ್ರದಾನಕ್ಕೂ ಹಕ್ಕುದಾರರು’. ಧರ್ಮಶಾಸ್ತ್ರ ನಿಂತ ನೀರಲ್ಲ.

ಅದು ಹರಿಯುವ ನೀರು. ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಮಕ್ಕಳು ಹೆರುವುದಕ್ಕೆ ನಿಯಂತ್ರವೂ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಈಗ ಗಂಡನ ಆಸ್ತಿಗೆ ಪತ್ನಿ ಹಕ್ಕುದಾರಳು. ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಇದೆ.

ಹಾಗಾಗಿ ಅಂತ್ಯಸಂಸ್ಕಾರವನ್ನು ಮಾಡುವ ಹಕ್ಕು ಸಹಜವಾಗಿಯೇ ಹೆಣ್ಣು ಮಕ್ಕಳಿಗೆ ಇದೆ. ಇದು ನಮ್ಮ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡ ನಿಯಮವೇನಲ್ಲ. ‘ಅಪುತ್ರಸ್ಯ ತು ಯಾ ಪುತ್ರೀ ಸಾ ಪಿಣ್ಡ ಪ್ರದಾ ಭವೇತ್’ ಎಂದು ವೀರಮಿತ್ರೋದಯ–ಋಷ್ಯಶೃಂಗ ವಚನ ಹೇಳುತ್ತದೆ. ಇದಲ್ಲದೆ ಧರ್ಮಸಿಂಧು, ನಿರ್ಣಯ ಸಿಂಧು, ಸ್ಮೃತಿಚಂದ್ರಿಕೆ ಮುಂತಾದ ಧರ್ಮಗ್ರಂಥಗಳಲ್ಲಿ ಈ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನೂ ಭಟ್ಟರು ಇಲ್ಲಿ ಸಂಗ್ರಹಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಅಂತ್ಯಸಂಸ್ಕಾರ ಮತ್ತು ಉತ್ತರ ಕ್ರಿಯೆ ಮಾಡಲು ಹಕ್ಕು ಇದೆ ಎನ್ನುವುದಕ್ಕೆ ಅವರು ಗರುಡ ಪುರಾಣ, ಮಹಾಭಾರತ, ರಾಮಾಯಣ, ಭಾಗವತ, ಸೂತ್ರಕಾರರಾದ ಗೌತಮ, ಆಪಸ್ತಂಬ, ಭಾರದ್ವಾಜ, ಬೃಹಸ್ಪತಿ, ಸ್ಮೃತಿಕಾರರಾದ ಯಾಜ್ಞವಲ್ಕ್ಯ, ಮನು ಮುಂತಾದವರ ಮಾತುಗಳನ್ನು ಉದಾಹರಿಸಿದ್ದಾರೆ.

ಅವರೆಲ್ಲ ಈ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ಒಂದೆಡೆ ಸೇರಿಸಿ ಕೇವಲ ಹೆಣ್ಣು ಮಕ್ಕಳು ಇದ್ದವರಿಗೂ ಮೋಕ್ಷ ದೊರಕುತ್ತದೆ ಎನ್ನುವುದನ್ನು ಅವರು ನಿರೂಪಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಉಪನಯನವೇ ಆಗಿರುವುದಿಲ್ಲ. ಅವರು ಹೇಗೆ ಕ್ರಿಯಾಕರ್ಮ ಮಾಡುತ್ತಾರೆ ಎಂಬ ಪ್ರಶ್ನೆಗೂ ಅವರು ಧರ್ಮಶಾಸ್ತ್ರದ ಮೂಲಕವೇ ಉತ್ತರ ನೀಡಿದ್ದಾರೆ. ಶಾಸ್ತ್ರದಲ್ಲಿಯೇ ಹೇಳಿರುವಂತೆ ‘ಸ್ತ್ರೀಣಾಂ ತು ವಿವಾಹ ಏವ ಉಪನಯನಂ’ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ.

ಅಂದರೆ ಸ್ತ್ರೀಯರಿಗೆ ವಿವಾಹವೇ ಉಪನಯನ. ಹಾಗಾಗಿ ಅವರು ಅಂತ್ರಕ್ರಿಯೆ ಮಾಡಬಹುದು. ವಿವಾಹವಾಗದ ಹೆಣ್ಣು ಮಕ್ಕಳು ಕ್ರಿಯಾ ಕರ್ಮ ಮಾಡಬಾರದೇ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ಅವರೂ ಮಾಡಬಹುದು ಎನ್ನುವುದನ್ನು ಹೇಳಲಾಗಿದೆ.

ಮಹಿಳೆಯರಿಗೆ ನೈಸರ್ಗಿಕವಾಗಿ ಹಲವಾರು ತೊಂದರೆಗಳಿವೆ. ಮುಟ್ಟಾದರೆ, ಗರ್ಭಿಣಿ, ಬಾಣಂತಿಯಾಗಿದ್ದರೆ ಏನು ಮಾಡಬೇಕು ಎನ್ನುವುದಕ್ಕೂ ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.

ಶ್ರಾದ್ಧ ಪ್ರಕ್ರಿಯೆಯಲ್ಲಿ ಮಧ್ಯದಲ್ಲಿ ಬರುವ ‘ಉಪವೀತಿ’ ಜನಿವಾರವನ್ನು ಯಥಾರೀತಿ ಇಟ್ಟುಕೊಳ್ಳುವುದು, ‘ನಿವೀತಿ’ ಅಂದರೆ ಜನಿವಾರವನ್ನು ಮಾಲಾಕಾರವಾಗಿ ಹಾಕಿಕೊಳ್ಳುವುದು, ‘ಪ್ರಾಚೀನಾವೀತಿ’ ಅಂದರೆ ಜನಿವಾರವನ್ನು ಎಡಕ್ಕೆ ಹಾಕಿಕೊಳ್ಳುವುದು ಮುಂತಾದ ಕ್ರಿಯೆಗಳು ಬರುತ್ತವೆ. ಅವುಗಳನ್ನು ಮಹಿಳೆಯರು ಹೇಗೆ ಮಾಡುವುದು ಎನ್ನುವುದಕ್ಕೂ ಶಾಸ್ತ್ರಗಳಲ್ಲಿ ಉಪಾಯವಿದೆ.

ಜನಿವಾರ ಇಲ್ಲದೇ ಇದ್ದರೆ ಶ್ರಾದ್ಧ ಕ್ರಿಯೆ ಮಾಡುವ ವ್ಯಕ್ತಿ ಹಾಕಿಕೊಂಡಿರುವ ಉತ್ತರೀಯವನ್ನೇ ಸವ್ಯ ಮತ್ತು ಅಪಸವ್ಯ ಕ್ರಿಯೆಗೆ ಬಳಸಬಹುದು ಎಂದು ನಿರ್ಣಯ ಸಿಂಧು ಹೇಳಿದೆ.

ಧರ್ಮಶಾಸ್ತ್ರಗಳು ಪುರುಷ ಪಕ್ಷಪಾತಿಯಲ್ಲ. ಪುತ್ರನನ್ನು ಪಡೆಯುವುದಕ್ಕೆ ಹಲವಾರು ಕ್ರಮಗಳನ್ನು ಹೇಳಿದ ಹಾಗೆಯೇ ಒಳ್ಳೆಯ ಪುತ್ರಿಯನ್ನು ಪಡೆಯುವುದಕ್ಕೂ ಶಾಸ್ತ್ರ ಗಳಲ್ಲಿ ಹಲವಾರು ವಿಧಾನಗಳನ್ನು ಹೇಳಲಾಗಿದೆ. ‘ಯಾರಿಗೆ ಪಂಡಿತಳಾದ ಮತ್ತು ಪೂರ್ಣಯುಷ್ಯ ಹೊಂದಿದ ಮಗಳು ಬೇಕು ಎಂಬ ಆಸೆ ಇದೆಯೋ ಅವರು ಎಳ್ಳನ್ನು ಬೇಯಿಸಿ ತುಪ್ಪದ ಜೊತೆ ತಿನ್ನಬೇಕು’ ಎಂದೂ ನಮ್ಮ ಶಾಸ್ತ್ರ ಹೇಳಿದೆ.

ಸದ್ಗತಿ ಗ್ರಂಥ ಮಹಿಳೆಯರ ಹಕ್ಕನ್ನು ನಿರೂಪಿಸುವ ಗ್ರಂಥ. ಯಾವುದೋ ಕಾರಣಕ್ಕಾಗಿ ಸಂಪ್ರದಾಯವಾಗಿ ನಡೆದುಕೊಂಡ ಬಂದಿದ್ದನ್ನೇ ನಂಬಿ ಅದೇ ಶಾಸ್ತ್ರ ಎಂದು ಹೇಳುವುದು ಸರಿಯಲ್ಲ. ಶಾಸ್ತ್ರದಲ್ಲಿ ತರತಮ ಏನೂ ಇಲ್ಲ. ಹೆಣ್ಣಾಗಲೀ, ಗಂಡಾಗಲಿ, ಮಕ್ಕಳಿಲ್ಲದೇ ಇರಲಿ ಮೋಕ್ಷಕ್ಕೇನೂ ತೊಂದರೆ ಇಲ್ಲ ಎನ್ನುವುದನ್ನು ಈ ಗ್ರಂಥ ಹೇಳುತ್ತದೆ.

ಮಾಹಿತಿಗೆ: 94836 65748

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT