ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೆ ಗೆದ್ದ ಸೀರೆ ಉದ್ಯಮ

Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಭಾಗ್ಯನಗರ ಸೀರೆ... ಬಾಯಿ ಮಾತೇ ಪ್ರಚಾರ ಇದರ ಪ್ರಮುಖ ಹೆಗ್ಗಳಿಕೆ. ಮನೆ ಮನೆಯಲ್ಲಿ ತಯಾರಿಕೆ. ಮಗ್ಗಗಳ ಲಟಪಟ ಸದ್ದೇ ಇಲ್ಲಿನ ಕಾಯಕ ಮಂತ್ರ. ಅಪ್ಪಟ ದೇಸಿ ದಿರಿಸು ಬಯಸುವ ಲಲನೆಯರಿಂದ ಹಿಡಿದು ಹಿರಿವಯಸ್ಸಿನ ಮಹಿಳೆವರೆಗೆ ಬೇಕಾದ ವಿನ್ಯಾಸ, ಶೈಲಿಯಲ್ಲಿ ಮಾತ್ರವಲ್ಲ ಕೈಗೆಟುಕುವ ದರದಲ್ಲಿ ಲಭ್ಯವಿದೆ.

ಹೌದು, ಕೊಪ್ಪಳ ಜಿಲ್ಲೆಯಲ್ಲಿ ಸೀರೆ ತಯಾರಿಕಾ ಉದ್ಯಮ ಸದ್ದಿಲ್ಲದೇ ಗೆದ್ದಿದೆ. ಯಾವುದೇ ಪ್ರಚಾರ, ಮಾರುಕಟ್ಟೆ ತಂತ್ರದ ಹಂಗಿಗೂ ಒಳಗಾಗದೇ ತನ್ನದೇ ಆದ ರೀತಿಯಲ್ಲಿ ಬೇಡಿಕೆ ವಿಸ್ತರಿಸಿಕೊಂಡಿದೆ.  ಕೊಪ್ಪಳಕ್ಕೆ ಅಂಟಿಕೊಂಡೇ ಇರುವ ಭಾಗ್ಯನಗರವು ಸೀರೆ ತಯಾರಿಕೆಗೆ ಪ್ರಧಾನ ಕೇಂದ್ರವಾಗಿದೆ. ಉಳಿದಂತೆ ಕಿನ್ನಾಳ, ಅಳವಂಡಿ, ಕುಷ್ಟಗಿ ತಾಲ್ಲೂಕಿನ ದೋಟಿಹಾಳದಲ್ಲಿ ಸೀರೆ ನೇಯ್ಗೆ ಕೇಂದ್ರಗಳಿವೆ.

ಜಿಲ್ಲೆಯಲ್ಲಿ ಬರಗಾಲ ವ್ಯಾಪಿಸಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ ಎಂಬ ಕೂಗು ಒಂದೆಡೆಯಾದರೆ, ನೇಯುವ ಕೈಗಳಿಗೆ ದಿನವಿಡೀ ಕೆಲಸವಿದೆ. ವಿದ್ಯುತ್‌ ಕೈಕೊಟ್ಟರಷ್ಟೇ ಕೆಲಕಾಲ ವಿಶ್ರಾಂತಿ. ಇಲ್ಲಿ ನೇಯ್ಗೆ ಕಲಿತ ಕೈಗಳು ಸ್ವಂತ ಮಗ್ಗ ಸ್ಥಾಪಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿವೆ.

ಕೊಪ್ಪಳದ ರೈಲು ಹಳಿ ದಾಟಿ ಭಾಗ್ಯನಗರಕ್ಕೆ ಪ್ರವೇಶಿಸಿದರೆ ಸಾಕು. ಜನ, ಜೀವನಶೈಲಿಯೇ ಬೇರೆ. ಇಲ್ಲಿ ಯಾರೂ ಸುಮ್ಮನೆ ಕುಳಿತು ಕಾಲಹರಣ ಮಾಡುವುದಿಲ್ಲ. ಒಂದೋ ಕೂದಲು ಹಿಂಜುವುದು, ಮಗ್ಗದ ನಿರ್ವಹಣೆ, ಕೂಲಿ ಕೆಲಸ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಕೆಲಸದಲ್ಲಿ ಮಗ್ನರಾಗಿತ್ತಾರೆ.

ಕೆಲವರು ಮನೆಯೊಳಗೆ 5ರಿಂದ 10, 12, 50 ಮಗ್ಗಗಳನ್ನು ಹಾಕಿಕೊಂಡವರಿದ್ದಾರೆ. ದೊಡ್ಡ ಪ್ರಮಾಣದ ತಯಾರಕರು ಮನೆಯೊಳಗೇ ಪುಟ್ಟ ಮಳಿಗೆ ಸ್ಥಾಪಿಸಿಕೊಂಡಿದ್ದಾರೆ. ಇಲ್ಲಿ ಅಲ್ಲಲ್ಲಿ ಇಂಥ ಪುಟ್ಟ ಮಳಿಗೆ (ಶೋರೂಂ)ಗಳು ಇವೆ. ವ್ಯಾಪಾರಿಗಳ ಮಧ್ಯೆ ಅನಾರೋಗ್ಯಕರ ಸ್ಪರ್ಧೆಯೂ ಇಲ್ಲ. ರಿಯಾಯಿತಿ ಆಮಿಷ ತೋರಿಸಿ ಗ್ರಾಹಕರನ್ನು ಮರುಳು ಮಾಡುವುದೂ ಇಲ್ಲ.

ಇಲ್ಲಿ ಕಾಟನ್‌ ಸೀರೆಗಳ ಜತೆಗೆ ಆಧುನಿಕ ಕಾಲಮಾನಕ್ಕೆ ಒಪ್ಪುವ ಪ್ರಿಂಟೆಡ್‌ ಸೀರೆಗಳು, ಕಾಟನ್‌ ಸಿಲ್ಕ್‌ ಸೀರೆಗಳು, ಸೆಮಿ ಸಿಲ್ಕ್‌ ಸೀರೆಗಳನ್ನೂ ತಯಾರಿಸಲಾಗುತ್ತದೆ. ಚೂಡಿದಾರ್‌, ಡ್ರೆಸ್‌ ಮಟೀರಿಯಲ್‌ಗಳೂ ಕಡಿಮೆ ದರದಲ್ಲಿ ಸಿಗುತ್ತವೆ. ಸೀರೆಯ ನೇಯ್ಗೆಯಲ್ಲೇ ಬರುವ ಅಲಂಕಾರಿಕ ವಿನ್ಯಾಸಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಪ್ರಿಂಟೆಡ್‌ ವಿನ್ಯಾಸಗಳಿಗೆ ಆಂಧ್ರಪ್ರದೇಶ ಅಥವಾ ಬೇರೆಡೆಗೆ ರವಾನಿಸಿ ವಿನ್ಯಾಸಗೊಳಿಸಿ ತರಿಸಬೇಕಾಗುತ್ತದೆ ಎನ್ನುತ್ತಾರೆ ತಯಾರಕರು. ಇಲ್ಲಿ ಮೂವರು ಸೀರೆ ವಿನ್ಯಾಸಕರೂ  ಇದ್ದಾರೆ.

ನೂಲು ಮತ್ತು ಅದರ ಬಳೆಗಳನ್ನು ಕೊಯಮತ್ತೂರಿನಿಂದ ತರಲಾಗುತ್ತದೆ. ಗದಗ, ಬನಹಟ್ಟಿ, ಲಕ್ಷ್ಮೇಶ್ವರದಲ್ಲಿ ಜಿನ್ನಿಂಗ್‌ಮಿಲ್‌ ಇವೆಯಾದರೂ ಅಲ್ಲಿನ ನೂಲು ಕೊಯಮತ್ತೂರಿನ ಗುಣಮಟ್ಟಕ್ಕೆ ಸಾಟಿ ಇಲ್ಲ. ನೂಲಿಗೆ ನೀಲಿ, ಕೆಂಪು, ಬಿಳಿ, ನೇರಳೆ ಬಣ್ಣಗಳನ್ನು ಇಲ್ಲಿಯೇ ಹಾಕಲಾಗುತ್ತದೆ. ಕೆಲವು ತಿಳಿ ಬಣ್ಣಗಳನ್ನು ಆಂಧ್ರಪ್ರದೇಶದ ಚ್ರಿಲಾ ಎಂಬಲ್ಲಿ ಹಾಕಿಸಿ ತರಲಾಗುತ್ತದೆ. ಡೈಯಿಂಗ್‌ ಪೌಡರನ್ನು ಗುಜರಾತ್‌ನ ಆತುಲ್‌ನಿಂದ ತರಲಾಗುತ್ತದೆ ಎಂದು   ಹಿರಿಯ ನೇಕಾರ ಯಮನಪ್ಪ ಕಬ್ಬೇರ ಹೇಳುತ್ತಾರೆ.

ಒಂದು ನೂಲಿನ ರೋಲ್‌ನಲ್ಲಿ (ಬೀಮ್‌) 115 ಸೀರೆ ತಯಾರಿಸಲಾಗುತ್ತದೆ. ಎರಡು ಮಗ್ಗಗಳನ್ನು ಒಬ್ಬ ಕಾರ್ಮಿಕ ನಿರ್ವಹಿಸಬಲ್ಲ. ಕೆಲಸದ ಆಧಾರದಲ್ಲಿ ಒಂದು ಸೀರೆಗೆ ₹ 40ರಿಂದ ₹ 50 ಕೂಲಿ ಕೊಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಭಾಗ್ಯನಗರ ಸೀರೆ ಎಂದು ಬಾಯಿಮಾತಿನಲ್ಲಿ ಹೇಳಬೇಕೇ ವಿನಾ ಯಾವುದೇ ತಯಾರಕರು ತಮ್ಮ ಉತ್ಪನ್ನದಲ್ಲಿ ಭಾಗ್ಯನಗರ ಹೆಸರು, ವಿಳಾಸವನ್ನು ನಮೂದಿಸುವುದಿಲ್ಲ. ಉದಾಹರಣೆಗೆ ಇಳಕಲ್‌ ಸೀರೆ, ಕಾಂಜೀವರಂ ಸಿಲ್ಕ್‌ ರೀತಿಯಲ್ಲಿ ಭಾಗ್ಯನಗರ ಹೆಸರು ಕೇಳಿಬರುವುದಿಲ್ಲ. ತಮ್ಮ ಉತ್ಪನ್ನವನ್ನು ನೋಡಿದ ಗ್ರಾಹಕರು ಹುಡುಕಿಕೊಂಡೇ ಬರುತ್ತಾರೆ. ನೋಡಿದಾಗಲೇ ಅವರಿಗೆ ಅರಿವಾಗಬೇಕು. ಇದೇ ಇಲ್ಲಿನ ವ್ಯಾಪಾರದ ಗುಟ್ಟು ಎನ್ನುತ್ತಾರೆ ತಯಾರಕರು.

ಟಿವಿ ನಿರೂಪಕರಿಗೂ ಸೀರೆ
ಕೊಪ್ಪಳದ ಮಂದಿಗೆ ಭಾಗ್ಯನಗರ ಸೀರೆ ಎಂದರೆ ಅಷ್ಟಕ್ಕಷ್ಟೇ. ಆದರೆ, ಹೊರಗೆ ಮಾತ್ರ ಭಾರಿ ಗೌರವವಿದೆ. ಶಿಕ್ಷಕಿಯರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತೆಯರಿಗೆ ಸಮವಸ್ತ್ರದ ಸೀರೆಗಳು, ಟಿವಿ ನಿರೂಪಕರ ಸೀರೆಗಳು ಇಲ್ಲಿಂದಲೇ ಸರಬರಾಜು ಆಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿ ತಯಾರಕರು ಹಲವು ಟಿವಿ ನಿರೂಪಕರ, ವಾರ್ತಾ ವಾಚಕರ ಚಿತ್ರಗಳನ್ನು  ಪ್ರದರ್ಶನಕ್ಕಿಟ್ಟಿದ್ದಾರೆ.

ಎಲ್ಲಿಂದ ಬಂದರು?
ಭಾಗ್ಯನಗರ ಮೂಲತಃ ಪುನರ್ವಸತಿ ಗ್ರಾಮ. ತುಂಗಭದ್ರಾ ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆ ಪ್ರದೇಶವಾಗಿದ್ದ ಕಾತರಕಿ ಗ್ರಾಮಸ್ಥರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೂ ಇವರು ರವಿಕೆ ಕಣ ತಯಾರಿಸುತ್ತಿದ್ದರು. ಬಟ್ಟೆ ತಯಾರಿಕೆ ಮತ್ತು ಮಾರಾಟವು ಇವರೆಲ್ಲರ  ಮೂಲ ಕಸುಬು ಆಗಿತ್ತು. ಭಾಗ್ಯನಗರ ಕೊಪ್ಪಳ ರೈಲು ನಿಲ್ದಾಣಕ್ಕೆ ಸಮೀಪವಾಗಿರುವುದರಿಂದ ಆ ವ್ಯಾಪಾರಿಗಳು ಮತ್ತು ಸೀರೆ ತಯಾರಕರನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಹತ್ತಿರದಲ್ಲಿಯೇ ಲಭ್ಯ ಇರುವ ರೈಲು ಸಂಪರ್ಕ   ಈ ಉದ್ಯಮಕ್ಕೆ ಅನುಕೂಲಕರವಾಗಿ ಪರಿಣಮಿಸಿತು ಎಂದು ಕಬ್ಬೇರ ನೆನಪುಗಳನ್ನು ಬಿಚ್ಚಿಟ್ಟರು.

ಜವಳಿ ಇಲಾಖೆ ನೆರವು
ಜವಳಿ ಇಲಾಖೆಯಿಂದ ಸಾಮಾನ್ಯ ವರ್ಗದವರಿಗೆ ಶೇ 50, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 90 ಸಬ್ಸಿಡಿ ದರದಲ್ಲಿ ವಿದ್ಯುತ್‌ ಮಗ್ಗಗಳನ್ನು ನೀಡಲಾಗುತ್ತದೆ. ಹೀಗಾಗಿ ಮಗ್ಗ ಹಾಕಿಕೊಂಡವರ ಸಂಖ್ಯೆ ಹೆಚ್ಚಿದೆ. ಇಲ್ಲಿ ತಯಾರಾದ ಸೀರೆಗಳನ್ನು ಸ್ಥಳೀಯ ದೊಡ್ಡ ತಯಾರಕರೇ ಕೊಳ್ಳುತ್ತಾರೆ. ಆದ್ದರಿಂದ ಮಾರುಕಟ್ಟೆ ಸಮಸ್ಯೆಯೂ ಇಲ್ಲ ಎನ್ನುತ್ತಾರೆ ಸಣ್ಣ  ತಯಾರಕರು. ಆದರೆ, ಸಣ್ಣ ಘಟಕಗಳ ಸ್ಥಾಪನೆಯಿಂದ ದೊಡ್ಡ ಘಟಕಗಳಿಗೆ ಕಾರ್ಮಿಕರ ಸಮಸ್ಯೆ ಎದುರಾಗಿದೆ.

ಸಮಸ್ಯೆಗಳು
ಸೀರೆ ಉದ್ಯಮವನ್ನು ಗೃಹ ಕೈಗಾರಿಕೆ ಅಡಿ ಪರಿಗಣಿಸಲಾಗಿದೆ. ಹೀಗಾಗಿ ಇದಕ್ಕೆ ನಿರಂತರ ವಿದ್ಯುತ್‌ ಪೂರೈಕೆ ಸಿಗುವುದು ಕಷ್ಟ. ಉದ್ಯಮಕ್ಕೆ ಸಿಗಬಹುದಾದ ಇತರ ಸೌಲಭ್ಯಗಳೂ ಸಿಗುತ್ತಿಲ್ಲ ಎಂಬುದು ತಯಾರಕರ ಬೇಸರ. ಮಾರುಕಟ್ಟೆ ವಿಸ್ತರಿಸಬೇಕು. ಇಲ್ಲಿಯೇ ಕಂಪ್ಯೂಟರ್‌ ಆಧಾರಿತ ಸೀರೆ ವಿನ್ಯಾಸ, ತಾಂತ್ರಿಕ ನೆರವು ಸಿಗುವಂತಾಗಬೇಕು. ರಫ್ತು ಅವಕಾಶ ಸಿಗಬೇಕು ಎನ್ನುತ್ತಾರೆ ಜವಳಿ ಪ್ರವರ್ಧನಾಧಿಕಾರಿ ಮಂಜುನಾಥ ಅಮರದ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT