ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದೇ ಮಲಗಿದ ವೈದ್ಯಕೀಯ ಚರಿತೆ...

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೈಸೂರಿನ ಲಕ್ಷ್ಮೀಪುರದ ಒಂದನೇ ಮುಖ್ಯರಸ್ತೆಯಲ್ಲಿರುವ ಆ ಸುಂದರ ಮನೆಯಲ್ಲಿ ನಾಲ್ಕು ತಲೆಮಾರಿನ ಇತಿಹಾಸ ಸದ್ದಿಲ್ಲದೇ ಮಲಗಿದೆ. ಒಡೆಯರ ಚರಿತ್ರೆ ಮೇಲೆ ಬೆಳಕು ಚೆಲ್ಲುವ ಅಲ್ಲೊಂದಿಲ್ಲೊಂದು ಕಿಟಕಿಗಳು ತೆರೆದುಕೊಂಡಿವೆ.

ಈ ಮನೆ ಅರಮನೆಯ ಅಂದಿನ ಸರ್ಜನ್‌ ಡಾ. ಶಿಡ್ಲಘಟ್ಟ ರಂಗಣ್ಣವರದ್ದು. ನಾಲ್ವಡಿ ಕೃಷ್ಣರಾಜ ಒಡೆಯರ್‌, ಅವರ ಕಿರಿಯ ಸಹೋದರ ಕಂಠೀರವ ನರಸರಾಜ ಒಡೆಯರ್‌ ಹಾಗೂ ಯುವರಾಜರಾಗಿದ್ದ ಜಯಚಾಮರಾಜ ಒಡೆಯರ್ ಮೂವರಿಗೂ ಆಪ್ತವೈದ್ಯರಾಗಿದ್ದ ರಂಗಣ್ಣನವರ ಈ ಮನೆ ಈಗ ಅರಮನೆಯ ವೈದ್ಯಕೀಯ ಚರಿತ್ರೆ ಸಾರುತ್ತಿದೆ.

ರಂಗಣ್ಣವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಶಿಡ್ಲಘಟ್ಟದಲ್ಲಿ. 1860ರಿಂದ 1946ರ ಅವಧಿಯಲ್ಲಿ ಬದುಕಿದ್ದ ಅವರು 23ನೇ ವಯಸ್ಸಿಗೇ ಮದ್ರಾಸ್‌ ಮೆಡಿಕಲ್‌ ಕಾಲೇಜಿನಿಂದ ಎಲ್‌ಎಂಎಸ್‌ (ಲೈಸೆನ್ಸ್‌ ಇನ್‌ ಮೆಡಿಸಿನ್‌ ಅಂಡ್‌ ಸರ್ಜರಿ) ಪದವಿ ಪಡೆದರು. ಆಗಿನ ಎಲ್‌ಎಂಎಸ್‌ ಈಗಿನ ಎಂಎಸ್‌ (ಮಾಸ್ಟರ್‌ ಆಫ್‌ ಸರ್ಜರಿ)ಗೆ ಸಮಾನ.

ಇವರೊಂದಿಗೇ ಮೆಡಿಕಲ್‌ ಪದವಿ ಪಡೆದ ಇನ್ನಿಬ್ಬರು ಪ್ರಮುಖರಿದ್ದಾರೆ; ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ತಾತ ರಂಗಾಚಾರ್‌ (ಅವರು ಮಂಡ್ಯ ಜಿಲ್ಲೆಯ ಮೇಲುಕೋಟೆಯವರು) ಹಾಗೂ ಖ್ಯಾತ ವೈದ್ಯ ಶೇಷಗಿರಿರಾವ್‌. ಇವರೆಲ್ಲ ಮೈಸೂರು ಅರಮನೆಯ ಸರ್ಜನ್‌ ಆಗಿದ್ದರು ಎಂಬುದು ಗಮನಾರ್ಹ.

ನಾಲ್ವಡಿ ಅವರು ಎಲ್ಲೇ ಹೋದರೂ ಅವರೊಂದಿಗೆ ಅಗತ್ಯ ವೈದ್ಯಕೀಯ ಸೌಲಭ್ಯದೊಂದಿಗೆ ರಂಗಣ್ಣ ಇರಲೇಬೇಕಿತ್ತು. 1904ರಲ್ಲಿ ನಾಲ್ವಡಿ ಅವರು ಜಪಾನ್‌ಗೆ ಹೋದಾಗಲೂ ತಮ್ಮೊಂದಿಗೆ ರಂಗಣ್ಣ ಅವರನ್ನೂ ಕರೆದೊಯ್ದಿದ್ದರು. ಆಗ ಜಪಾನ್‌ ದೇಶ ವೈದ್ಯಕೀಯ ಸೌಲಭ್ಯಗಳಲ್ಲಿ ಮುಂಚೂಣಿಯಲ್ಲಿತ್ತು. ಆದರೆ, ಮಹಾರಾಜರ ವಿಶ್ವಾಸ ಮಾತ್ರ ಡಾ.ರಂಗಣ್ಣ ಅವರ ಮೇಲಿತ್ತು.

1925ರಲ್ಲಿ ಕಂಠೀರವ ನರಸರಾಜ ಒಡೆಯರ್‌ ಅವರು ಪ್ಯಾರಿಸ್‌ಗೆ ಹೋದಾಗ ಅವರ ಆರೋಗ್ಯ ಹದಗೆಟ್ಟಿತ್ತು. ಆಗ ಡಾ.ರಂಗಣ್ಣ ಅವರನ್ನು ಸ್ಮರಿಸಿಕೊಂಡ ಒಡೆಯರ್‌, ಪ್ಯಾರಿಸ್‌ನ ಹೋಟೆಲ್‌ ಕ್ಲಾರಿಡ್ಜ್‌ನಿಂದ ಮೈಸೂರಿಗೆ ಪತ್ರ ಬರೆದರು. ಅದರಲ್ಲಿನ ಹಳೆಯ ಇಂಗ್ಲಿಷ್‌ ಪದಗಳ ಓದು ಅಷ್ಟು ಸುಲಭವಲ್ಲ. ಆದರೆ, ಡಾ.ರಂಗಣ್ಣ ಅವರನ್ನು
‘ಮೈ ಡಿಯರ್‌ ಫನ್ನಿ ಫೇಸ್‌’ ಎಂದು ಕರೆದಿರುವ ಸಾಲು ಮಾತ್ರ ಕುತೂಹಲ ಕೆರಳಿಸುತ್ತದೆ. ರಂಗಣ್ಣ ಅವರು ಒಡೆಯರಿಗೆ ಎಷ್ಟು ಸಲುಗೆಯಿಂದ ಇದ್ದರೆಂಬುದಕ್ಕೆ ಈ ಪದ ಪ್ರಯೋಗವೇ ಸಾಕ್ಷಿ.

ಪುಟಾಣಿ ಯುವರಾಜ ಜಯಚಾಮರಾಜ ಒಡೆಯರ್‌ ಅವರ ಆರೋಗ್ಯದ ಹೊಣೆಯನ್ನೂ ರಂಗಣ್ಣ ಹೊತ್ತಿದ್ದರು. ಈಗ ಸರ್ಕಾರಿ ಕಾರು ಇರುವ ಹಾಗೆ; ಅರಮನೆಯಿಂದ ಕುದುರೆ ಗಾಡಿಯನ್ನು ಅವರಿಗೆ ನೀಡಲಾಗಿತ್ತು.

ರಾಜಾ ರವಿವರ್ಮನಿಗೆ ಚಿಕಿತ್ಸೆ
ಅರಮನೆಯಲ್ಲಿ ಚಿತ್ರ ಬಿಡಿಸಲು ಬಂದಿದ್ದ ರಾಜಾ ರವಿವರ್ಮ ಅವರಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿತ್ತು. ಆಗ ರವಿವರ್ಮ ಅವರಿಗೆ ಚಿಕಿತ್ಸೆ ನೀಡಿ ಶೀಘ್ರ ಗುಣಪಡಿಸುತ್ತಾರೆ ರಂಗಣ್ಣ. ಅವರ ‘ಕೈಗುಣ’ ಮೆಚ್ಚಿದ ರವಿವರ್ಮ ಒಂದು ಚಿನ್ನದ ಸಾಲಿಡ್‌ ಪಾಕೆಟ್‌ ವಾಚ್‌, ಅದಕ್ಕೆ ಚಿನ್ನದ ಎರಡು ಚೈನ್‌ ಹಾಗೂ ಚಿನ್ನದ ನಾಯಿಯ ಮೂರ್ತಿ ನೀಡಿದ್ದಾರೆ.

ಆ ದಿನಗಳಲ್ಲೇ ರಂಗಣ್ಣ ಹಾಗೂ ಖ್ಯಾತ ಪತ್ರಕರ್ತ ಎಚ್‌.ವೈ. ಶಾರದಾಪ್ರಸಾದ್‌ ಸ್ನೇಹಿತರಾಗಿದ್ದರು. ರಂಗಣ್ಣ ಅವರ ಮೈಸೂರಿನ ಔಟ್‌ಹೌಸ್‌ನಲ್ಲೇ ಶಾರದಾ ಪ್ರಸಾದ್‌ ಬಾಡಿಗೆಗೆ ಇದ್ದರು. ದೀಪಾವಳಿ, ಗಣೇಶ ಚತುರ್ಥಿಯಂತಹ ಹಬ್ಬಗಳಲ್ಲಿ ಈ ಇಬ್ಬರೂ ಸ್ನೇಹಿತರು ಮನೆಯಲ್ಲೇ ಪಟಾಕಿ ತಯಾರಿಸಿ ಹೊಡೆಯುತ್ತಿದ್ದರಂತೆ. ಆಗ ಬ್ರಿಟಿಷ್‌ ಕಂಪೆನಿ ಮಾರುತ್ತಿದ್ದ ಪಟಾಕಿ ಸಿಡಿಸಲೂ ಅವರು ಒಪ್ಪಲಿಲ್ಲ ಎಂಬುದನ್ನು ರಂಗಣ್ಣ ವಂಶಸ್ಥರು ಸ್ಮರಿಸಿಕೊಳ್ಳುತ್ತಾರೆ. ಅರಮನೆಯಿಂದ ನಡೆಯುತ್ತಿದ್ದ ‘ಸಿವಿಕ್‌ ಹೆಲ್ತ್‌ ಅಂಡ್‌ ಸೋಶಿಯಲ್‌ ಸೆಂಟರ್‌’ನಲ್ಲಿ ರಂಗಣ್ಣ ಸೇವಾ ನಿವೃತ್ತಿ ನಂತರವೂ ದುಡಿದರು. ಹಸು ಹಾಗೂ ಕುದುರೆಗಳಿಗಾಗಿ ಆಗಿನ ಕಾಲದಲ್ಲೇ ಪಿಂಜರಾಪೋಳ್‌ ಕಟ್ಟಿಸಿದ ಕೀರ್ತಿ ಅವರದು.

ಆರೋಗ್ಯ ಕ್ಷೇತ್ರದಲ್ಲಿನ ಅವರ ಸೇವೆ ಪರಿಗಣಿಸಿ ಮಹಾರಾಜರು 1940ರಲ್ಲಿ ‘ರಾಜಸೇವಾಸಕ್ತ’ ಪುರಸ್ಕಾರ ನೀಡಿದ್ದಾರೆ. ಇದರ ಜತೆಗೆ ವಜ್ರಖಚಿತ ಗಂಡಭೇರುಂಡ ಇರುವ ಪದಕ ಹಾರವನ್ನೂ ನೀಡಲಾಗಿದೆ (ಗಂಡಭೇರುಂಡ ಒಡೆಯರ್‌ ಸಂಸ್ಥಾನದ ಲಾಂಛನ). ಅರಸೊತ್ತಿಗೆಯ ಅತಿ ಶ್ರೇಷ್ಠ ಪ್ರಶಸ್ತಿ ಇದಾಗಿತ್ತು.

ರಂಗಣ್ಣ ಅವರ ಪತ್ನಿ ಅಮ್ಮಣ್ಣಿಯಮ್ಮ ಕೂಡ ಆಗಲೇ ಮಹಿಳಾ ಸಬಲೀಕರಣದ ಹಾದಿ ಹಿಡಿದಿದ್ದರು. ಒಡೆಯರ್ ಮೇಲೆ ಒತ್ತಡ ತಂದು 1917ರಲ್ಲಿ ‘ಮಹಿಳಾ ಸಮಜ’ ಕಟ್ಟಿದರು. ಈಗಲೂ ಈ ಸಂಘಟನೆ ಕ್ರಿಯಾಶೀಲವಾಗಿದೆ. ರಂಗಣ್ಣ ಅವರ ಮೂರನೇ ತಲೆಮಾರಿನ ವಂಶಜರಾದ ಸುಲೋಚನಾ ಈ ಸಮಾಜದ ಕಾರ್ಯದರ್ಶಿಯಾಗಿದ್ದಾರೆ.

ರಂಗಣ್ಣ ಅವರ ಪುತ್ರ ಎಸ್‌. ರಾಮಕೃಷ್ಣ ಅವರೂ ಅರಮನೆಯ ಖಜಾಂಚಿ ಆಗಿದ್ದರು. ಇವರ ಮಗ ಎಸ್‌.ಆರ್. ನಾರಾಯಣಸ್ವಾಮಿ ಪಶು ಸಂಗೋಪನಾ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಂಗಣ್ಣ ಅವರ ಹೆಣ್ಣು  ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಈಗ ವಿವಿಧ ದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಮೂಲ ಮನೆಯಲ್ಲಿ ವಾಸವಾಗಿರುವ ಅವರ ಮೊಮ್ಮಗ ನಾರಾಯಣಸ್ವಾಮಿ ಅವರ ಪತ್ನಿ ಸುಲೋಚನಾ ಅಷ್ಟಿಷ್ಟು ಇತಿಹಾಸವನ್ನು ಜತನ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT