ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಬಳಕೆಗೆ ಸ್ವಯಂಶಿಸ್ತು

ಮೊಬೈಲ್ ನಿಷೇಧ ಸರಿಯೇ
Last Updated 18 ಜುಲೈ 2014, 20:24 IST
ಅಕ್ಷರ ಗಾತ್ರ

ಆಧುನಿಕ ಸಂಪರ್ಕ ಸಾಧನಗಳ ಪೈಕಿ ಮೊಬೈಲ್ ಫೋನಿನಷ್ಟು ನಮ್ಮನ್ನು ಆವರಿಸಿಕೊಂಡ ಮತ್ತೊಂದು ಉಪಕರಣ ಇರಲಿಕ್ಕಿಲ್ಲ. ಎಲ್ಲ  ವಯೋಮಾನದ, ಎಲ್ಲ ವರ್ಗಗಳ ಜನರ ಬದುಕಿನ ಅವಿಭಾಜ್ಯ ಅಂಗ ಆಗಿದೆ ಮೊಬೈಲ್. ಸಂವಹನಕ್ಕೆ ಸುಲಭ ಸೇತುವೆಯಾಗಿರುವ  ಮೊಬೈಲ್‌ ಬಳಕೆಯನ್ನು ಶಾಲಾ ಕಾಲೇಜುಗಳಲ್ಲಿ ನಿಷೇಧಿಸಬೇಕು ಎಂದು ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್‌ ಬಳಕೆಯ ಸಾಧಕ–ಬಾಧಕ ಕುರಿತು ಮನೋವೈದ್ಯ, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಎಲ್ಲ ವಯಸ್ಕರನ್ನು ಅದರಲ್ಲೂ ಮಕ್ಕಳು ಮತ್ತು ಹದಿ­ಹರೆ­ಯ­ದ­ವರನ್ನು ಅಯಸ್ಕಾಂತದಂತೆ ಮೊಬೈಲ್‌­ಗಳು ಆಕರ್ಷಿ­ಸುತ್ತಿವೆ. ಕುಳಿತಿರಲಿ, ಓಡಾ­ಡುತ್ತಿರಲಿ, ಮನೆಯಲ್ಲಿ­ರಲಿ, ಶಾಲಾ ಕಾಲೇಜಿನಲ್ಲಿರಲಿ, ರಸ್ತೆಯಲ್ಲಿ­ರಲಿ, ಅಂಗ­ಡಿ­­ಗಳ­ಲ್ಲಿ­ರಲಿ ಮೊಬೈಲ್‌ ಫೋನನ್ನು ಕಿವಿಗೆ ಅಂಟಿಸಿಕೊಂಡಿ­ರು­­ತ್ತಾರೆ. ಇಲ್ಲವೇ ಮೊಬೈಲ್‌ನಲ್ಲಿ ಗೇಮ್‌್ಸ ಆಡುತ್ತಾರೆ, ಮೆಸೇಜ್‌ ಕಳುಹಿಸಿ, ಅದಕ್ಕೆ ಪ್ರತ್ಯುತ್ತರವನ್ನು ನೋಡು­ತ್ತಿರುತ್ತಾರೆ.

ಈಗ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸೌಲಭ್ಯವೂ ದೊರೆ­ಯು­ವು­ದರಿಂದ ಫೇಸ್‌ಬುಕ್‌ ಇತ್ಯಾದಿ ಸಾಮಾಜಿಕ ಜಾಲ­ತಾಣಗಳೂ ಲಭ್ಯವಾಗಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು, ಅವರೊಂದಿಗೆ ಚಾಟ್‌ ಮಾಡಲು ಬಳಸುತ್ತಾರೆ.

ಇನ್ನು ಲೈಂಗಿಕ ಚಿತ್ರಗಳು–ಚಟುವಟಿಕೆಗಳು, ಬ್ಲೂಫಿಲ್‌್ಮ­ಗಳೂ ಈಗ ಮೊಬೈಲ್‌ನಲ್ಲಿ ನೋಡಲು ಸಿಗುವುದರಿಂದ, ಹರೆ­ಯದ­ವರಿಗೆ ‘ಅಂಗೈಯಲ್ಲೇ ಲೈಂಗಿಕ ಲೋಕದ ವಿಶ್ವರೂಪ ದರ್ಶನ’ವಾಗುತ್ತಿದೆ. ಲೈಂಗಿಕ ಆಸೆ, ಬಯಕೆಗಳ ಅಭಿವ್ಯಕ್ತಿಗೆ ಅನುವು ಮಾಡಿಕೊಡುತ್ತಿದೆ. ಕುಳಿತಲ್ಲಿಯೇ ಲೈಂಗಿಕ ಸ್ವೇಚ್ಛಾ­ಚಾರಕ್ಕೆ ಪ್ರಚೋದನೆ ಸಿಕ್ಕುತ್ತಿದೆ. ಕಾಮಿಗಳು, ವಿಕೃತ ಕಾಮಿ­ಗಳು ಮೊಬೈಲ್‌ ಮುಖಾಂತರ ತಮ್ಮ ಬಲಿಪಶುಗಳನ್ನು ಆಕರ್ಷಿ­ಸಲು ಸಾಧ್ಯವಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾ­ಗು­ತ್ತಿದೆ. ಮಕ್ಕಳು–ಹರೆಯದವರು ಈ ಅಪಾ­ಯ­ಕಾರಿ ಜಾಲ­ದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಆತಂಕ ಹುಟ್ಟಿಸುವಷ್ಟು ಪ್ರಮಾಣದಲ್ಲಿ ಹೆಚ್ಚುತ್ತಿದೆ.

ಮನೋಭಾವ, ಮಾನಸಿಕ ಅತೃಪ್ತಿ, ಮನರಂಜನೆ: ಇಂದು ಬಹುತೇಕ ಕುಟುಂಬಗಳಲ್ಲಿ ತಂದೆ ತಾಯಿ ಮತ್ತು ಒಂದು ಅಥವಾ ಎರಡು ಮಕ್ಕಳಿರುತ್ತವೆ. ವಿಭಕ್ತ ಕುಟುಂಬಗಳೇ ಹೆಚ್ಚು. ಅಪ್ಪ ಅಮ್ಮ ಇಬ್ಬರೂ ಉದ್ಯೋಗ ಮಾಡುತ್ತಾರೆ. ಅವರ ಗಮನವೆಲ್ಲ ಹೆಚ್ಚು ಸಂಪಾದನೆ ಮಾಡುವ ಕಡೆಗೆ.  ಭೋಗಭಾಗ್ಯ ಸುಖವನ್ನು ಇತರರಿಗಿಂತ ಹೆಚ್ಚಾಗಿ ಅನುಭವಿ­ಸು­ವುದರ ಕಡೆಗೇ ಹರಿದಿರುತ್ತದೆ. ಮಕ್ಕಳನ್ನು ಪ್ಲೇಹೋಮ್‌್, ನರ್ಸರಿ ಹಾಗೂ ಶಾಲೆಗಳ ವಶಕ್ಕೆ ಬಿಡುತ್ತಾರೆ. ಮಕ್ಕಳು ಬೇಗ ಬುದ್ಧಿವಂತರಾಗಿ, ಇಂಗ್ಲಿಷ್‌ ಮೀಡಿಯಂನಲ್ಲಿ ಕಲಿತು, ಪರೀಕ್ಷೆ­ಗಳಲ್ಲಿ 80+ ಅಥವಾ 90+  ಅಂಕ ತೆಗೆದು, ಆನಂತರ ಎಂಜಿನಿಯರಿಂಗ್, ವೈದ್ಯಕೀಯ  ಅಥವಾ ಐಎಎಸ್‌ ಮತ್ತಿತರ ಸ್ಪರ್ಧಾತ್ಮಕ ಹಾಗೂ ಹೆಚ್ಚು ಹಣ, ಸ್ಥಾನಮಾನವನ್ನು ತರುವ ಕೋರ್ಸ್‌­ಗಳನ್ನು ಮುಗಿಸಿ, ಪ್ರತಿಷ್ಠಿತ ಕಂಪೆನಿಗಳಲ್ಲಿ ಅಥವಾ ವಿದೇಶಗಳಲ್ಲಿ ನೌಕರಿ ಮಾಡುವಂತಾಗಬೇಕೆಂದು ನಿರೀಕ್ಷಿಸುತ್ತಾರೆ.

ಮಕ್ಕಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ‘ಅಕಾಡೆಮಿಕ್‌’ ಚಟುವಟಿಕೆಗಳಲ್ಲೇ (ತರಗತಿ, ಟ್ಯೂಷನ್‌, ವ್ಯಾಸಂಗ) ನಿರತ­ರಾಗಿರಬೇಕೆಂದು ಆಶಿಸುತ್ತಾರೆ. ಪಠ್ಯೇತರ ಚಟುವಟಿಕೆಗಳಿಗೆ ಕಡಿಮೆ ಆದ್ಯತೆ. ಅವಕಾಶ ಕೊಟ್ಟರೂ ಆ ಚಟುವಟಿಕೆಗಳಲ್ಲಿ ಸ್ಪರ್ಧೆ ಮಾಡಿ, ಬಹುಮಾನ ಪುರಸ್ಕಾರಗಳನ್ನೂ ಪಡೆಯಲು ಒತ್ತಡ ಹಾಕುತ್ತಾರೆ. ಮುಕ್ತವಾಗಿ ತಮ್ಮಿಷ್ಟದಂತೆ ಇರಲು, ತಮ್ಮಿಷ್ಟದ ಚಟುವಟಿಕೆಗಳನ್ನು ಮಾಡಲು ಬಹುತೇಕ ತಂದೆ ತಾಯಿಗಳು ಅವಕಾಶ ನೀಡುವುದಿಲ್ಲ. ಮನೆಯಲ್ಲಿ, ಶಾಲೆ­ಯಲ್ಲಿ ಮಕ್ಕಳು ಸದಾ ಒತ್ತಡದಲ್ಲಿರುತ್ತಾರೆ. ಏನೇ ಮಾಡಲಿ ಉತ್ತಮವಾಗಿ ಮಾಡಬೇಕೆಂಬ ಒತ್ತಾಸೆ­ಯಲ್ಲಿ­ರುತ್ತಾರೆ.

ವಿವೇಚನೆಯ ಸೂತ್ರ
* ಮೊಬೈಲ್‌ ಲಾಗ್‌ಬುಕ್‌ ಇಡಬೇಕು
* ಅದರಲ್ಲಿ ದಿನಬಳಕೆಯ ಸಮಯ ನಮೂದಿಸಬೇಕು
* ಯಾರೊಂದಿಗೆ ಯಾವ ಉದ್ದೇಶಕ್ಕೆ ಮಾತನಾಡಿದ್ದು ಅಂತ ವಿವರಿಸಬೇಕು
* ಪಾಲಕರೂ ಈ ನಿಯಮ ಪಾಲಿಸಿ ಮಕ್ಕಳಿಗೆ ಮಾದರಿ ಆಗಬೇಕು

ಈ ಸ್ಪರ್ಧಾತ್ಮಕ ವಾತಾವರಣದಲ್ಲಿ ಶೇ  20 ರಷ್ಟು ಮಕ್ಕಳು ಉತ್ತಮ ಮಟ್ಟವನ್ನು ತೋರುತ್ತಾರೆ. ಅವರ ಐ.ಕ್ಯೂ., ಕಲಿಯುವ ಪ್ರೇರಣೆ ಚೆನ್ನಾಗಿರುತ್ತದೆ. ಶೇ 20ರಷ್ಟು ಮಂದಿ ‘ನಿಧಾನ ಕಲಿಕೆ’ಯವರು. ಕಡಿಮೆ ಐ.ಕ್ಯೂ. ಮತ್ತು ನಿರ್ದಿಷ್ಟ ಕಲಿಕಾ ನ್ಯೂನತೆಗಳು ಇದಕ್ಕೆ ಕಾರಣ. ಜೊತೆಗೆ ಭಾವನಾತ್ಮಕ ಏರುಪೇರುಗಳು ಇದಕ್ಕೆ ಇಂಬುಕೊಡುತ್ತವೆ. ಉಳಿದ ಶೇ 60 ಮಂದಿ, ತಮ್ಮ ನಿರ್ವಹಣೆಯನ್ನು ಉತ್ತಮಪಡಿಸಿ­ಕೊಳ್ಳ­ಲಾರದೆ, ಎಲ್ಲಿ ತಾವು ನಿಧಾನ ಕಲಿಕೆಯವರಂತೆ ಆಗಿಬಿಡು­ತ್ತೇವೊ ಎಂಬ ಆತಂಕದಲ್ಲೇ ಇರುತ್ತಾರೆ.

‘ಅವನು ಅಷ್ಟು ಚೆನ್ನಾಗಿ ಮಾಡುತ್ತಾನೆ, ನೀನೇಕೆ ಮಾಡು­ವುದಿಲ್ಲ?’, ‘ಅವಳು 80+ ಅಂಕಗಳನ್ನು ಪಡೆದಿದ್ದಾಳೆ. ಸಂಗೀತ­ದಲ್ಲಿ ಬಹುಮಾನ ಪಡೆದಿದ್ದಾಳೆ. ನೀನೇಕೆ ಹೀಗೆ. ನಾವು ನಿನಗೆ ಏನು ಕಡಿಮೆ ಮಾಡಿದ್ದೇವೆ?’ ಎಂದು ಹೋಲಿಸಿ, ಮಕ್ಕಳ ಮನಸ್ಸನ್ನು ನೋಯಿಸುವ ತಂದೆ ತಾಯಿಗಳು ಹೆಚ್ಚಿದ್ದಾರೆ.

‘ನೀವೆಲ್ಲರೂ ಹೈ ಫಸ್‌್ಟ ಕ್ಲಾಸಿನಲ್ಲಿ ಪಾಸಾಗಬೇಕು. ಜಸ್‌್ಟ ಪಾಸ್‌ ಆದರೆ, ಶಾಲೆಗೆ, ನಮಗೆ ಅಪಕೀರ್ತಿ. ಅರ್ಥವಾ­ಯಿತೇ? ಶ್ರಮಪಟ್ಟು ಸ್ಟಡಿಮಾಡಿ’ ಎಂದು ದಿನವೂ ತಲೆಯ ಮೇಲೆ ಕುಟ್ಟುವ ಹೆಡ್‌ ಮಾಸ್ಟರ್‌, ಅಧ್ಯಾಪಕರು ಎಲ್ಲ ಶಾಲೆಗಳಲ್ಲಿ­ದ್ದಾರೆ. ಈ ‘ಒತ್ತಡದಿಂದ’ ಬಚಾವಾಗಲು, ಮೊಬೈಲ್‌ ಲೋಕ­ದೊಳಕ್ಕೆ ಮಕ್ಕಳು ನುಸುಳಿದರೆ ಆಶ್ಚರ್ಯ­ವೇನಿಲ್ಲ.  ‘ಒತ್ತಡ ಜಗತ್ತಿ­ನಿಂದ ಪಾರಾಗಲು’ ಮೊಬೈಲ್‌ ಸುಲಭ ಉಪಾಯವಾಗುತ್ತದೆ!

ಅಕಾಡೆಮಿಕ್‌ ಒತ್ತಡದ ಜೊತೆ ಜೊತೆಗೆ ಆಸೆಗಳು ಮತ್ತು ನಿರಾಸೆಗಳ ಒಳಸುಳಿಗಳಿಗೆ ಮಕ್ಕಳು ಸಿಕ್ಕಿಕೊಳ್ಳುತ್ತಿದ್ದಾರೆ. ಮಾಧ್ಯ ಮಗಳು,  ಇಂದಿನ ಜೀವನಶೈಲಿ ಹಾಗೂ ಸಾಮಾಜಿಕ ಬದಲಾ ವಣೆಗಳಿಂದ ಮಕ್ಕಳ ಮುಂದೆ ಆಸೆ ಮಹದಾಸೆಗಳ ಲೋಕವೇ ತೆರೆದುಕೊಂಡಿದೆ. ವಿವಿಧ ಬಗೆಯ ತಿಂಡಿ ತಿನಿಸು­ಗಳು, ಒಡವೆ ವಸ್ತ್ರಗಳ ಫ್ಯಾಷನ್‌, ಆಟಿಕೆಗಳು, ಮನರಂಜ­ನೆಯ ವಸ್ತು–ಉಪಕರಣಗಳು, ಪ್ರವಾಸ, ಕ್ರೀಡೆಗಳು, ವಾಹನ­ಗಳು. ಕಂಡಿದ್ದನ್ನು ಕೇಳಿದ್ದನ್ನು ಕೊಂಡುಕೊಳ್ಳಬೇಕು. ತನ್ನ ಸಹ­ವಯಸ್ಕರ ಬಳಿ ಇರುವ ಈ ವಸ್ತುಗಳು ತನ್ನಲ್ಲೂ ಇರಬೇಕು ಅಥವಾ ಎಲ್ಲರಿಗಿಂತ ಹೆಚ್ಚು ಅಥವಾ ಇತರರಲ್ಲಿ ಇಲ್ಲದ ವಸ್ತುಗಳು ತನ್ನಲ್ಲಿರಬೇಕು ಎಂದು ಮಕ್ಕಳು ಬಯಸುತ್ತಾರೆ. ಆದರೆ ತಂದೆ ತಾಯಿಗಳಿಗೆ ಎಷ್ಟನ್ನು ಕೊಂಡುಕೊಡುವ ಶಕ್ತಿ ಇದೆ ಎಂದು ಯೋಚಿಸುವುದಿಲ್ಲ. ಹೆಚ್ಚಿನ ಮಕ್ಕಳಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಈ ನಿರಾಶೆ­ಯನ್ನು ಮರೆಯಲು ಮೊಬೈಲ್‌ ಜಗತ್ತು ನೆರವಾಗುತ್ತದೆ.

ಸಣ್ಣ ವಯಸ್ಸಿನ ಮಕ್ಕಳು ಮೊಬೈಲ್‌ ಗೇಮ್‌್ಸ ಆಡಲು ಸಮಯ ವಿನಿಯೋಗಿಸಿದರೆ, ಹರೆ­ಯ­­ದವರು ಅದನ್ನು ಸಂಪರ್ಕ ಸಾಧನವನ್ನಾಗಿ ಬಳ ಸುತ್ತಾರೆ. ಸ್ನೇಹಿತ ರೊಂದಿಗೆ ಹರಟಲು, ಅನುಭವಗಳನ್ನು ಹಂಚಿ­ಕೊಳ್ಳಲು ಉಪಯೋಗಿಸು­ತ್ತಾರೆ. ತಂದೆ ತಾಯಿ ಹಿರಿಯರಿಗೆ ತಿಳಿಯದಂತೆ ಪರಸ್ಪರ ಸಂಪರ್ಕಿಸಲು ಮೊಬೈಲ್‌ ಅವರಿಗೆ ನೆರವಾಗುತ್ತದೆ. ಬೇಸರ–ಏಕತಾನತೆ, ತರ ಗತಿಯ ಯಾಂತ್ರಿಕ ಪರಿಸರದಿಂದ, ಅಧ್ಯಾಪ­ಕರ ತಲೆ ಚಿಟ್ಟುಹಿಡಿಸುವ ಉಪನ್ಯಾಸ–ಉಪದೇಶಗಳಿಂದ ತಪ್ಪಿಸಿಕೊಳ್ಳಲು ಮೊಬೈಲ್‌ ಸಹಾಯ ಮಾಡುತ್ತದೆ.

ಜೊತೆಗೆ ಹರೆಯದಲ್ಲಿ ಬಲವಾಗಿ ಕಾಡುವ, ಕುತೂಹಲವನ್ನು ಮೀಟುವ, ‘ಲವ್‌’, ಪ್ರೀತಿ ಪ್ರೇಮ–ಕಾಮದ ಅಗತ್ಯಗಳನ್ನು ಮೊಬೈಲ್‌ ಪೂರೈಸಬಲ್ಲದು. ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಸದಾ ಸಂಪರ್ಕದಲ್ಲಿರಲು ಹುಡುಗಿ, ತನ್ನ ಗರ್ಲ್‌ಫ್ರೆಂಡ್‌­ನೊಂದಿಗೆ ನಿಕಟ ಸಂಪರ್ಕ ದಲ್ಲಿರಲು ಹುಡುಗನಿಗೆ ಮೊಬೈಲ್‌­ಗಿಂತ ಉಪಯುಕ್ತವಾದ ಸಂಪರ್ಕ ವಾಹಕ ಯಾವುದಿದೆ? ಗಂಟೆಗಟ್ಟಳೆ ಹರಟುತ್ತಾ, ಸಂದೇಶಗಳನ್ನು ಕಳುಹಿಸುತ್ತಾ, ಸ್ವೀಕರಿಸುತ್ತಾ, ತಮ್ಮದೇ ಪ್ರೇಮಲೋಕದಲ್ಲಿರಲು ಮೊಬೈಲ್‌ ನೆರವಾಗುತ್ತದೆ. ಕಾಮಲೋಕವನ್ನು ಇಣುಕಿ ನೋಡಲೂ ಸಹಾಯ ಮಾಡುತ್ತದೆ.

ಮೊಬೈಲ್‌ನ ಆರೋಗ್ಯಕರ ಬಳಕೆ: ಮೊಬೈಲನ್ನು ನಿಷೇಧಿಸಲು ಸಾಧ್ಯವೇ? ಅನೇಕ ಶಾಲಾ ಕಾಲೇಜುಗಳು ನಿಷೇಧಿಸಿವೆ. ಅನೇಕ ಮನೆಗಳಲ್ಲಿ ಅಪ್ಪ ಅಮ್ಮಂದಿರು ನಿಷೇಧಿಸಿದ್ದಾರೆ. ಆದರೆ ಮಕ್ಕಳು ನಿಷೇಧಕ್ಕೆ ಒಪ್ಪಿದ್ದಾರೆಯೇ? ಇಲ್ಲ. ಕದ್ದು ಮುಚ್ಚಿ ಹೇಗೋ ಮೊಬೈಲ್‌ ಸಂಪಾದಿಸಿ, ಉಪಯೋಗಿಸಿಯೇ ತೀರುತ್ತಾರೆ. ತಮ್ಮ ಬಾಯ್‌ಫ್ರೆಂಡ್‌ಗೆ, ಗರ್ಲ್‌ಫ್ರೆಂಡ್‌ಗೆ ಮೊಬೈಲನ್ನು ದಾನ ಮಾಡುವ ‘ಕರ್ಣ’ಂದಿರ ಸಂಖ್ಯೆ ಕಡಿಮೆ ಏನಲ್ಲ. ಹಿರಿಯರ, ಶಿಕ್ಷಕರ, ಪಾಲಕರ ಗಮನಕ್ಕೆ ಬಾರದಂತೆ ಮೊಬೈಲ್‌ ಬಳಕೆಯ ಚತುರತೆ– ಕೌಶಲವನ್ನು ಹರೆಯದ­ವರು ಬೆಳೆಸಿಕೊಂಡಿದ್ದಾರೆ! ಆದ್ದರಿಂದ ‘ಮೊಬೈಲ್‌ ಮೆನೇಸ್‌’ಗೆ ಮೊಬೈಲ್‌ ನಿಷೇಧ ಮದ್ದಲ್ಲ.

ಮೊಬೈಲ್‌ನ ಸದ್ಬಳಕೆ ಬಗ್ಗೆ ಮಕ್ಕಳಿಗೆ ಹೇಳಿ ಕಲಿಸಬೇಕು. ಯಾವಾಗ ಎಷ್ಟು, ಯಾರೊಂದಿಗೆ ಮೊಬೈಲ್‌ ಸಂಪರ್ಕ ಮಾಡಬೇಕು, ಮೊಬೈಲನ್ನು ಮನರಂಜನೆಗೆ ಎಷ್ಟು ಮತ್ತು ಹೇಗೆ ಬಳಸಬೇಕು. ಲೈಂಗಿಕ ಕುತೂಹಲಕ್ಕೆ, ಲೈಂಗಿಕ ಸ್ವೇಚ್ಛಾ­ಚಾರಕ್ಕೆ ಖಂಡಿತ ಮೊಬೈಲ್‌ ನೆರವನ್ನು ಪಡೆಯಬಾರದೆಂಬ ಶಿಸ್ತನ್ನು ಕಲಿಸಬೇಕು. ನಿತ್ಯ ಮೊಬೈಲ್‌ ಲಾಗ್‌ಬುಕ್‌ ಇಡಲು ಹೇಳಬೇಕು. ‘ಎಷ್ಟು ಸಮಯ, ಯಾವ ಉದ್ದೇಶಕ್ಕೆ ಮೊಬೈ­ಲನ್ನು ನಾನು ಬಳಸಿದೆ’ ಎಂದು ಪ್ರತಿ ಮಗು ಬರೆಯಬೇಕು. ಸ್ವನಿಯಂತ್ರಣ, ಸ್ವಶಿಸ್ತು ಪಾಲನೆಗೆ ಮುಂದಾಗುವಂತೆ ಮಾಡ­ಬೇಕು. ಪಾಲಕರು, ಶಿಕ್ಷಕರು, ಹಿರಿಯರು ಈ ಶಿಸ್ತನ್ನು ತಾವು ಪಾಲಿಸಿ ಮಕ್ಕಳಿಗೆ ಮಾದರಿಯಾಗಬೇಕು. ಇಲ್ಲದಿದ್ದರೆ ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಎಂಬಂತಾಗುತ್ತದೆ!

(ಲೇಖಕರು ಮನೋವೈದ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT