ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದಲ್ಲೇ ‘ಅಪಘಾತ ವಿಮೆ ಯೋಜನೆ’ ಜಾರಿ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಅಪಘಾತಕ್ಕೀಡಾದವರ ತುರ್ತು ಚಿಕಿತ್ಸೆಗೆ ನೆರವಾಗಲು ಮುಂದಿನ ವಾರದಿಂದ ‘ಅಪಘಾತ ವಿಮೆ ಯೋಜನೆ’ಯನ್ನು ಜಾರಿಗೆ ತರಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ವಿಸ್ತರಣಾ ಯೋಜನೆಯ 2ನೇ ಹಂತದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಹಾಗೂ ಸ್ಪಾಸ್ಟಿಕ್ ಸೊಸೈಟಿ ಆಫ್ ಕರ್ನಾಟಕದ ನೆರವಿನೊಂದಿಗೆ ‘ಶ್ರವಣ ಪರೀಕ್ಷಾ ಕೇಂದ್ರ’ದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

‘ಅಪಘಾತ ವಿಮೆ ಯೋಜನೆ’ಯಡಿ ತುರ್ತು ಚಿಕಿತ್ಸೆಗೆ ನೆರವಾಗುವಂತೆ ₨ 25 ಸಾವಿರ ಚಿಕಿತ್ಸಾ ಮೊತ್ತವನ್ನು ನೀಡಲಾಗುವುದು. ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ 48 ಗಂಟೆಯೊಳಗೆ ಹಣವನ್ನು ಸರ್ಕಾರದ ವತಿಯಿಂದ ಬಿಡುಗಡೆ ಮಾಡಲಾಗುವುದು. ಜತೆಗೆ ಇಂತಹ ರೋಗಿಗಳನ್ನು ತಕ್ಷಣದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವಲ್ಲಿ ಎಲ್ಲಾ ಆಸ್ಪತ್ರೆಗಳೂ ಅಗತ್ಯ ಸಹಕಾರ ನೀಡಬೇಕು’ ಎಂದರು.

‘ಈ ಯೋಜನೆ ಎಲ್ಲರಿಗೂ ಅನ್ವಯವಾಗುತ್ತದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಅಪಘಾತ ಸಂಭವಿಸಲಿ, ಈ ಅಪಘಾತಕ್ಕೆ ಒಳಗಾದವರಲ್ಲಿ ಹೊರ ರಾಜ್ಯದವರೂ ಇರಲಿ. ಅವರಿಗೂ ಅನ್ವಯವಾಗುತ್ತದೆ. ಈ ಮಹತ್ತರ ಯೋಜನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ವಿಶೇಷ ಅನುದಾನವನ್ನು ಘೋಷಿಸಿದ್ದಾರೆ’ ಎಂದು ತಿಳಿಸಿದರು.

ಶ್ರವಣ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ‘ಬೆಂಗಳೂರು ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಎಲ್ಲಾ ವರ್ಗದ ರೋಗಿಗಳೂ ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ವ್ಯವಸ್ಥೆಗಳನ್ನು ಕಲ್ಪಿಸಲು ಬದ್ಧವಾಗಿದೆ’ ಎಂದರು.

‘ವೈದ್ಯ ಸಮೂಹವೂ ತಮ್ಮ ಸೇವಾ ಮನೋಭಾವದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಎಲ್ಲಾ ವೈದ್ಯಕೀಯ ಕಾಲೇಜುಗಳನ್ನು ಅಭಿವೃದ್ಧಿಪಡಿಸುವುದು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಶ್ರವಣ ಪರೀಕ್ಷಾ ಯಂತ್ರಗಳು: ಆಸ್ಪತ್ರೆಯ ಡಾ. ಸಂಜಯ್ ಮಾತನಾಡಿ, ‘ಶ್ರವಣ ಸಮಸ್ಯೆಯುಳ್ಳ ಮಕ್ಕಳಿಗೆ ಚಿಕಿತ್ಸೆ ನೀಡಲು ನೆರವಾಗುವಂತೆ ಸ್ಪಾಸ್ಟಿಕ್ ಸೊಸೈಟಿ ಆಫ್ ಕರ್ನಾಟಕವು ₨ 25 ಲಕ್ಷ ಆರ್ಥಿಕ ನೆರವು ನೀಡಿದೆ. ಈ ಹಣದಲ್ಲಿ ಅತ್ಯಾಧುನಿಕ ಶ್ರವಣ ಪರೀಕ್ಷಾ ಯಂತ್ರಗಳನ್ನು ಅಳವಡಿಸಲಾಗಿದೆ’ ಎಂದರು.

‘ಪರೀಕ್ಷೆಗೆ ನೆರವಾಗುವಂತೆ ಧ್ವನಿ ಮಾಪಕ ಮತ್ತು ಧ್ವನಿ ನಿರೋಧಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಯಂತ್ರಗಳ ಮೂಲಕ ಒಂದು ಮಗುವಿನ ಪರೀಕ್ಷೆ ನಡೆಸಲು ಸುಮಾರು 45 ನಿಮಿಷಗಳ ಸಮಯ ಬೇಕಾಗುತ್ತದೆ. ನಿತ್ಯವೂ 4-5 ಮಕ್ಕಳನ್ನು ಪರೀಕ್ಷಿಸಬಹುದು. ಇಂತಹ ವಿಶೇಷ ಸೌಲಭ್ಯ ಈವರೆಗೆ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲೂ ಕಲ್ಪಿಸಿರಲಿಲ್ಲ’ ಎಂದು ಹೇಳಿದರು.

‘ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಸುಮಾರು 250 ಹಾಸಿಗೆಗಳ ಸೌಲಭ್ಯವಿದ್ದು, ಇನ್ನೂ 100 ಹಾಸಿಗೆಗಳ ಅಗತ್ಯವಿತ್ತು. ಈ ಅಗತ್ಯಕ್ಕೆ ತಕ್ಕಂತೆ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಮಾರು ₨ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಕಟ್ಟಡವು ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT