ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನದ್ಧರಾಗಿ ಸಹಕಾರ ಬೇಡಿ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ವಿಬ್ಗಯೊರ್ ಶಾಲೆಯಲ್ಲಿ ಕಳೆದ ಭಾನುವಾರ ಚಿರತೆ ಪ್ರತ್ಯಕ್ಷವಾದ ಸಂದರ್ಭದ ಘಟನಾವಳಿ ಎಲ್ಲರ ಮನೆ ಮಾತಾಯಿತು. ಅಂತರ್ಜಾಲ, ಫೇಸ್‌ಬುಕ್, ಟ್ವಿಟರ್‌ನಲ್ಲಿಯೂ ಈ ಸುದ್ದಿ ರಾರಾಜಿಸಿತು. ನಾನಾ ಸಲಹೆಗಳ ಸರಮಾಲೆಯ ನಡುವೆಯೇ, ಕಾರ್ಯಾಚರಣೆಯಲ್ಲಿ ಉಂಟಾದ ನೂರೆಂಟು ಲೋಪ ದೋಷಗಳ ಚರ್ಚೆ, ಅವರು ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಎಂಬಂತಹ ನಿರ್ದೇಶನಗಳು ಹಲವರಿಂದ ಬಂದವು.

ಮಾನವ ಪ್ರದೇಶದಲ್ಲಿ ವಿಭಿನ್ನ ವನ್ಯಜೀವಿಗಳಿಂದ ಉಂಟಾಗುವ ಸಂಘರ್ಷಗಳಲ್ಲಿ ಬಹುಶಃ ಚಿರತೆಯಿಂದಲೇ ಅತಿ ಹೆಚ್ಚು ಪ್ರಕರಣಗಳು ಘಟಿಸುತ್ತವೆ. ಇದಕ್ಕೆ  ಕಾರಣಗಳು ಹಲವಾರು. ಮಾನವ ನಿರ್ಮಿತ ಗಡಿ ರೇಖೆಯನ್ನು ವನ್ಯಜೀವಿಗಳು ಮೀರುತ್ತವೆ. ಹೀಗಾಗಿ ಕಾಡು ಪ್ರಾಣಿಗಳೊಂದಿಗಿನ ನಮ್ಮ ಸಂಘರ್ಷವನ್ನು ತಗ್ಗಿಸಬಹುದೇ ಹೊರತು ಸಂಪೂರ್ಣವಾಗಿ ನಿಲ್ಲಿಸಲಾಗದು. ಇದೊಂದು ಅನಿವಾರ್ಯ ಪರಿಸ್ಥಿತಿ.

ನಮ್ಮ ಭೂ ಪ್ರದೇಶದ ಬಹುಪಾಲು ಆಡಳಿತವು ಜಿಲ್ಲಾಡಳಿತದ ವಿವಿಧ ಇಲಾಖೆಗಳ ಮೂಲಕ ನೆರವೇರುತ್ತದೆ. ಅರಣ್ಯ ಇಲಾಖೆಯ ಆಡಳಿತದಡಿ ಬರುವುದು ಶೇ 5ರಿಂದ 10ರಷ್ಟು ಅರಣ್ಯ ಪ್ರದೇಶ ಮಾತ್ರ. ವನ್ಯಜೀವಿಗಳೊಂದಿಗೆ ಸಂಘರ್ಷ ಹೆಚ್ಚಾಗಲು ಮಿಕ್ಕ ಶೇ 90ರಿಂದ 95ರಷ್ಟು ಭೂಮಿಯ ಬಳಕೆಯಲ್ಲಿ ವ್ಯಾಪಕ ಬದಲಾವಣೆ ಆಗಿರುವುದೇ ಕಾರಣ. ಕಾಡು ಪ್ರಾಣಿಗಳಿಂದ ತೊಂದರೆಯಾದಾಗ ಪ್ರತಿ ಬಾರಿಯೂ ನಾವೆಲ್ಲರೂ ಟೀಕಿಸುವುದು ಸಂಘರ್ಷ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಹೊತ್ತ ಅರಣ್ಯ ಇಲಾಖೆಯನ್ನೇ.

ಇಂತಹ ಕಾರ್ಯಾಚರಣೆಗಳನ್ನು ಯಾವಾಗಲೂ ಪೂರ್ವನಿರ್ಧರಿತ ರೀತಿಯಲ್ಲಿ ನಡೆಸಲಾಗದು. ಪ್ರಾಣಿ ಬಂದು ಸೇರಿಕೊಂಡಿರುವ ಸ್ಥಳ, ಸುತ್ತಮುತ್ತಲಿನ ಪ್ರದೇಶ ಎಲ್ಲವೂ ಒಂದೆಡೆಗಿಂತ ಮತ್ತೊಂದೆಡೆಗೆ ಭಿನ್ನವಾಗಿರುತ್ತವೆ. ಸಂಘರ್ಷದ ಪರಿಸ್ಥಿತಿ ನಿಭಾಯಿಸುವಾಗ ಅಗತ್ಯ ಸಂಪನ್ಮೂಲಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಹೊಂದಾಣಿಕೆ ಅತ್ಯಂತ ಮುಖ್ಯವಾದುದು. ಅರಣ್ಯ ಇಲಾಖೆಯಲ್ಲಿ ಈ ಕಾರ್ಯಕ್ಕೆಂದು ಪ್ರತ್ಯೇಕ ಹಣಕಾಸಿನ ವ್ಯವಸ್ಥೆ ಇಲ್ಲ. ಆದ್ದರಿಂದ ಪ್ರತಿ ಬಾರಿಯೂ ಕಾರ್ಯಾಚರಣೆಗೆ ಅಗತ್ಯವಾದ ವಸ್ತುಗಳಿಗಾಗಿ ಪರದಾಡುವ ಪರಿಸ್ಥಿತಿ ಇರುತ್ತದೆ. ಬೋನು, ಏಣಿ, ಬಲೆ, ಪ್ರಾಣಿಗಳನ್ನು ನಿತ್ರಾಣಗೊಳಿಸಲು ಉಪಯೋಗಿಸುವ ಬಂದೂಕು, ಔಷಧಿಗಳ ಲಭ್ಯತೆ ಎಲ್ಲ ಅರಣ್ಯ ಕಚೇರಿಗಳಲ್ಲಿ ಇರುವುದಿಲ್ಲ. ವಾಹನ, ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ರಕ್ಷಣಾ ಉಪಕರಣಗಳು, ನುರಿತ ಪಶು ವೈದ್ಯರು, ಶಾರ್ಪ್ ಶೂಟರ್ಸ್‌ನಂತಹ ಮೂಲಭೂತ ಸಂಪನ್ಮೂಲಗಳಿಲ್ಲದೆ ತೀರಾ ಕನಿಷ್ಠ ಸಾಮಗ್ರಿಗಳನ್ನು ಬಳಸಿ ಯಶಸ್ವಿ ಕಾರ್ಯಾಚರಣೆ ಅಸಾಧ್ಯ. ಸಂಘರ್ಷದ ಪರಿಸ್ಥಿತಿಯಲ್ಲಿ ಸರಿಯಾಗಿ ಅರಿವಳಿಕೆ ನೀಡಬಲ್ಲ ನಿಪುಣ ಪಶು ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಇಂತಹ ವೈದ್ಯರು ಬೆರಳೆಣಿಕೆಯಷ್ಟಿದ್ದಾರೆ.

ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಸಂಘರ್ಷ ನಿರ್ವಹಣೆಯ  ರೂವಾರಿಗಳಾಗಿರುತ್ತವೆ. ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗ ನೀಡಿದರೆ ಅರಣ್ಯ ಇಲಾಖೆಗೆ ಕಾರ್ಯಾಚರಣೆಯ ಹೊರೆ ಅರ್ಧದಷ್ಟು ಕಡಿಮೆಯಾದಂತೆಯೇ ಸರಿ. ಸಾಮಾನ್ಯವಾಗಿ ಚಿರತೆಯ ಇರುವಿಕೆಯ ಸಮಾಚಾರ ಮೊದಲು ತಲುಪುವುದು ಸಮೀಪದ ಪೊಲೀಸ್ ಠಾಣೆಗೆ. ಅವರು ಈ ವಿಷಯ ಹೆಚ್ಚು ಪ್ರಚಾರವಾಗದಂತೆ ನೋಡಿಕೊಂಡರೆ ಮತ್ತು ಸ್ಥಳದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದರೆ ಜನ ಜಮಾಯಿಸುವ ಮೊದಲೇ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಬಹುದು.

ಪ್ರಾಣಿಯನ್ನು ನೋಡುವ ಕುತೂಹಲಕ್ಕೋ ಮೊಬೈಲ್‌ ಫೋನಿನಲ್ಲಿ ಚಿತ್ರ ಸೆರೆಹಿಡಿಯಲೋ ಜನರ ದಂಡು ಪ್ರಾಣಿಯನ್ನು ಸುತ್ತುವರಿಯುವ ಸ್ಥಿತಿ ಅಪಾಯಕ್ಕೆ
ಕಟ್ಟಿಟ್ಟ ಬುತ್ತಿ. ಆದ್ದರಿಂದ ನಿರೀಕ್ಷಿತ ತುರ್ತು ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತುರ್ತು ಸೇವೆಗಳಾದ ಆಂಬುಲೆನ್ಸ್, ಅಗ್ನಿ ಶಾಮಕ ವಾಹನ, 100 ಚದರ ಮೀಟರ್‌ವರೆಗೂ ಜನಮುಕ್ತ ಪ್ರದೇಶವಾಗಿಸುವುದು ಅಗತ್ಯ. ದುರದೃಷ್ಟವಶಾತ್‌, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಗಳಿಂದ ಈ ವಿಷಯಗಳ  ಬಗ್ಗೆ ಆಸಕ್ತಿ ಕಾಣುವುದಿಲ್ಲ. ಸಾಮಾನ್ಯವಾಗಿ ಜನಜಂಗುಳಿ ಇಲ್ಲದೆ ಶಾಂತ ವಾತಾವರಣವಿದ್ದರೆ ಚಿರತೆಗಳು ಕತ್ತಲಾಗುತ್ತಿದ್ದಂತೆಯೇ ಯಾರಿಗೂ ಕಾಣಿಸದೆ, ಯಾರಿಗೂ ತೊಂದರೆ ಕೊಡದೆ ಕಣ್ಮರೆಯಾಗುತ್ತವೆ.

ರಾಜ್ಯದ ವಿವಿಧೆಡೆ ಆನೆ, ಚಿರತೆ, ಕರಡಿ, ಅಪರೂಪಕ್ಕೊಮ್ಮೆ ಹುಲಿ ಮತ್ತು ತೋಳಗಳಿಂದ ಸಂಘರ್ಷದ ಪರಿಸ್ಥಿತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಆದರೆ ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಲ್ಲಿ ಇಂತಹ ಘಟನೆಗಳು ನಡೆದಾಗ ಅವು ಹೆಚ್ಚು ಗಮನ ಸೆಳೆಯುತ್ತವೆ. ಕೆಲವು ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ, ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಇದು ದಿನನಿತ್ಯದ ಸಂಗತಿ.

ಪ್ರತಿ ಜಿಲ್ಲೆಯಲ್ಲೂ ಅಲ್ಲಿಗೆ ಸೂಕ್ತವಾದ ಸಂಘರ್ಷ ನಿಯಂತ್ರಣ ಕಾರ್ಯತಂತ್ರ  ರೂಪಿಸುವುದು ಅಗತ್ಯ. ಜೊತೆಗೆ ಅರಣ್ಯ ಇಲಾಖೆಯಲ್ಲಿ ಇಂತಹ ಕಾರ್ಯಾಚರಣೆಗಾಗಿ ಹಣಕಾಸು ಮೀಸಲು, ಪ್ರತ್ಯೇಕ ವಾಹನ, ಪಶು ವೈದ್ಯರು, ಶಾರ್ಪ್ ಶೂಟರ್ಸ್‌ ಮತ್ತು ಸ್ಥಳೀಯ ಯುವಕರನ್ನು ಒಳಗೊಂಡ ಪ್ರತ್ಯೇಕ  ತಂಡಗಳನ್ನು ರಚಿಸಿ ಅವರಿಗೆ ಸೂಕ್ತ ತರಬೇತಿ ನೀಡಬೇಕಾಗುತ್ತದೆ. ಒಂದು ಪ್ರದೇಶದಲ್ಲಿ ವನ್ಯಜೀವಿ ಇರುವ ಮಾಹಿತಿ ಲಭ್ಯವಾದಾಗ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸುವವರೆಗೂ ಸ್ಥಳೀಯ ಯುವಕರ ತಂಡ ಪರಿಸ್ಥಿತಿ ನಿಯಂತ್ರಿಸುವ ವ್ಯವಸ್ಥೆ ಇರಬೇಕು. ಹೀಗೆ ರಚಿಸುವ ತಂಡಗಳ ಸಂಖ್ಯೆಯನ್ನು ಆ ಜಿಲ್ಲೆಯಲ್ಲಿ ಕಂಡುಬರುವ ವನ್ಯಜೀವಿಗಳ ಪ್ರಮಾಣ, ಹಿಂದಿನ ಕಾರ್ಯಾಚರಣೆಗಳ ಅನುಭವದಿಂದ ತೀರ್ಮಾನಿಸಬಹುದು. ಉದಾಹರಣೆಗೆ, ಮೈಸೂರು, ಚಾಮರಾಜನಗರದ ಗ್ರಾಮಾಂತರ ಪ್ರದೇಶಗಳಲ್ಲಿ ಆನೆಗಳಿರುವುದರಿಂದ ಅಲ್ಲಿ ಸ್ಥಳೀಯ ತಂಡಗಳ ಸಂಖ್ಯೆ ಹೆಚ್ಚಾಗಿದ್ದರೆ ಒಳ್ಳೆಯದು.

ಜನಸಾಮಾನ್ಯರಿಗೆ ಸಂಘರ್ಷದ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳನ್ನು ಮನದಟ್ಟು ಮಾಡುವ ಪ್ರಯತ್ನ ಸತತವಾಗಿ ಜರುಗಬೇಕು. ಇದಕ್ಕಾಗಿ ಗ್ರಾಮಗಳಲ್ಲಿ ನಡೆಯುವ ಎನ್.ಎಸ್.ಎಸ್, ಬಿ.ಎಸ್.ಡಬ್ಲ್ಯು, ಎಂ.ಎಸ್.ಡಬ್ಲ್ಯು ಶಿಬಿರಗಳು ಮತ್ತು ಶಾಲಾ ಕಾಲೇಜುಗಳ ಪ್ರಕೃತಿ ಶಿಬಿರಗಳು ಬಹು ಉಪಯುಕ್ತವಾಗಿರುತ್ತವೆ. ಮಾನವ-ವನ್ಯಜೀವಿ ಸಂಘರ್ಷದ ಕಾರಣಗಳು ಮತ್ತು ಕಾಡುಪ್ರಾಣಿಗಳ ನಡವಳಿಕೆಗಳನ್ನು ಜನರಿಗೆ ಮನದಟ್ಟು ಮಾಡಿಸಬೇಕು. ಕಾಡುಪ್ರಾಣಿ ಕಂಡಾಗ ಅಥವಾ ಎದುರಾದಾಗ ಸಹಕರಿಸಬೇಕಾದ ಬಗೆಯನ್ನು ವಿವರಿಸಬೇಕು. ಇದರಿಂದ ಅಂಥ ಸಂದರ್ಭ ಎದುರಾದಾಗ ಪರಿಸ್ಥಿತಿ ಬಿಗಡಾಯಿಸದಂತೆ ಜನಬೆಂಬಲ ಗಳಿಸಲು ಸಾಧ್ಯವಾಗುತ್ತದೆ. ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಗೂ ಜಾಗೃತಿ ಶಿಬಿರ ನಡೆಸಬೇಕು.

ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವವರೆಗೂ ಪ್ರಾಣಿ ಕಾಣಿಸಿಕೊಂಡಿರುವ ಸ್ಥಳದ ವಿವರವನ್ನು ಬಹಿರಂಗ ಮಾಡದೇ ಇರುವ ಮೂಲಕ ಮಾಧ್ಯಮಗಳು ಅತ್ಯುತ್ತಮ ಸಹಕಾರ ನೀಡಬಹುದು. ಈ ಮಾಹಿತಿ ಬಹಿರಂಗವಾದ ನಂತರವೂ ಜನ ಆ ಸ್ಥಳದಲ್ಲಿ ಜಮಾಯಿಸದಂತೆ, ಕಾರ್ಯಾಚರಣೆಗೆ ಸಹಕರಿಸುವಂತೆ ಮನವಿ ಮಾಡಬಹುದು.

ಇಂತಹ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆ ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವಂತೆ, ತೊಂದರೆಯಾದಾಗ ಮಾತ್ರ ಎಚ್ಚೆತ್ತುಕೊಂಡು ನಂತರ ಮರೆತುಬಿಡುವುದರಿಂದ, ಜನ ಹಾಗೂ ವನ್ಯಜೀವಿ ಇಬ್ಬರಿಗೂ ಸಂಘರ್ಷದ ಪರಿಣಾಮ ಮಾರಕವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT