ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನದ್ಧ ಸ್ಥಿತಿ ಸೃಷ್ಟಿಯಾಗಲಿ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಮೊದಲ ಎಬೋಲಾ ಪ್ರಕರಣವು ರಾಜಧಾನಿ ದೆಹಲಿ­ಯಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಈ ಕಾಯಿಲೆಯ ವಿರುದ್ಧ ರಾಷ್ಟ್ರದ ಸನ್ನದ್ಧತೆಯ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಲೈಬೀರಿಯಾದಿಂದ ದೆಹಲಿಗೆ ಬಂದಿಳಿದ ಭಾರತೀಯ ಯುವಕನಲ್ಲಿ (26) ಎಬೋಲಾ ರೋಗ­ಲಕ್ಷಣಗಳು ಇರಲಿಲ್ಲ. ಜೊತೆಗೆ ಲೈಬೀರಿಯಾದ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಆತನಿಗೆ ‘ಎಬೋಲಾದಿಂದ ಮುಕ್ತನಾಗಿ­ದ್ದಾನೆ’ ಎಂಬಂಥ ಪ್ರಮಾಣಪತ್ರವನ್ನು ಲೈಬೀರಿಯಾ ಆರೋಗ್ಯ ಸಚಿವಾ­ಲಯ ನೀಡಿತ್ತು.

ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಎಬೋಲಾ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಆತನ ವೀರ್ಯದಲ್ಲಿ ಎಬೋಲಾ ವೈರಸ್ ಪತ್ತೆಯಾಯಿತು. ಈ ಪ್ರಕರಣದಲ್ಲಿ ಸೂಕ್ತ ನಿಗಾ ವಹಿಸಿ ಎಬೋಲಾ ವೈರಸ್ ಪತ್ತೆಹಚ್ಚಿರುವುದು ಸಮಾಧಾನಕರ ಅಂಶ. ವಿಮಾನ ನಿಲ್ದಾಣಗಳಲ್ಲಿನ ನಿಗಾ ವ್ಯವಸ್ಥೆಯ ಬಗ್ಗೆ ಇದು ಭರವಸೆ ಮೂಡಿ­ಸು­ವಂತ­ಹದ್ದು. ಈಗ ಈ ವ್ಯಕ್ತಿಯನ್ನು ದೆಹಲಿ ವಿಮಾನನಿಲ್ದಾಣದ ವಿಶೇಷ ಆರೋಗ್ಯ ಘಟಕದಲ್ಲಿ ಪ್ರತ್ಯೇಕ­ವಾಗಿ ಇರಿಸಲಾಗಿದೆ. ಈವರೆಗೆ ಭಾರತಕ್ಕೆ ಈ ಕಾಯಿಲೆಯ ಬಿಸಿ ತಾಗಿರಲಿಲ್ಲ. ಈಗ ತೀವ್ರ ಎಚ್ಚರಿಕೆ ಕ್ರಮಗಳನ್ನು ತೆಗೆದು­ಕೊಳ್ಳಬೇಕಾದುದು ಅತ್ಯಗತ್ಯ ಎಂಬುದನ್ನು ಈ ಪ್ರಕರಣ ಎತ್ತಿತೋರಿದೆ. 

ಪಶ್ಚಿಮ ಆಫ್ರಿಕಾ ರಾಷ್ಟ್ರಗಳಾದ ಲೈಬೀರಿಯಾ, ಗಿನಿಯಾ, ಸಿಯೆರಾ ಲಿಯೋ­ನ್‌ನಲ್ಲಿ ಎಬೋಲಾ ಸೋಂಕು ತೀವ್ರವಾಗಿದೆ. ಈ ರಾಷ್ಟ್ರಗಳಲ್ಲಿ ಸುಮಾರು 45,000 ಭಾರತೀಯರಿದ್ದಾರೆ. ಹಾಗೆಯೇ ನೈಜೀರಿಯಾ­ದಲ್ಲೂ ಗಣನೀಯ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಈಗ ನೈಜೀರಿಯಾ­ವನ್ನು ‘ಎಬೋಲಾ ಮುಕ್ತ’ ಎಂದು ಘೋಷಿಸಲಾಗಿದೆ. ಆದರೆ ಈ ಕಾಯಿಲೆ ನಿಯಂತ್ರಿಸುವ ಮೊದಲು ಅಲ್ಲಿ  8 ಮಂದಿ ಸತ್ತಿದ್ದರು.

ಎಬೋಲಾ ಇರುವ ರಾಷ್ಟ್ರಗಳಿಂದ ಅನೇಕ ಭಾರತೀಯರು ದೇಶಕ್ಕೆ ಹಿಂದಿರುಗಿದ್ದಾರೆ. ಇನ್ನೂ ಅನೇಕ ಮಂದಿ ಹಿಂದಿರುಗುವವರಿದ್ದಾರೆ. ಈ ರಾಷ್ಟ್ರಗಳ ಮಧ್ಯೆ ಓಡಾಟ ನಡೆಸುವವರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಹಾಗೆಯೇ ಭಾರತದಲ್ಲಿ ಪಶ್ಚಿಮ ಆಫ್ರಿ­ಕಾದ ರಾಷ್ಟ್ರಗಳ ಜನರಿದ್ದಾರೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಈ ಎಲ್ಲಾ ಅಂಶಗಳು, ಮುನ್ನೆಚ್ಚರಿಕೆ ವಿಚಾರದಲ್ಲಿ ನಮ್ಮಲ್ಲಿ ಕಾಳಜಿ ಹೆಚ್ಚಬೇಕಾಗಿರುವ ಅಗತ್ಯವನ್ನು ಪ್ರತಿಪಾದಿಸುತ್ತದೆ.

ಎಬೋಲಾ ವಿರುದ್ಧ ಸೆಣಸುವಂತಹ ಲಸಿಕೆ­ಗಳಿನ್ನೂ ಪ್ರಯೋಗದ ಹಂತದಲ್ಲಿವೆ. ಹೀಗಾಗಿ ಪಶ್ಚಿಮ ಆಫ್ರಿಕಾ ಕಾಯಿಲೆ ಮುಕ್ತವಾಗುವವರೆಗೂ ಭಾರತ ಎಚ್ಚರ ವಹಿಸಬೇಕು. ಇದಕ್ಕಾಗಿ ವಿದೇ­ಶಾಂಗ ವ್ಯವಹಾರ ಸಚಿವಾಲಯ, ನಾಗರಿಕ ವಿಮಾನಯಾನ ಮತ್ತು ವಲಸೆ ಅಧಿ­ಕಾರಿಗಳ ಮಧ್ಯ ಸಮನ್ವಯ ಇರುವುದು ಮುಖ್ಯ. ಸನ್ನದ್ಧತೆ ಹೇಗಿದೆ ಎಂಬು­ದರ ತನಿಖೆಗಾಗಿ ಸಮಿತಿ­ಯೊಂದನ್ನೂ ಕೇಂದ್ರ ಸರ್ಕಾರ ರಚಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂಕಿ ಸಂಖ್ಯೆಗಳ ಪ್ರಕಾರ  ಎಬೋಲಾ­ದಿಂದಾಗಿ 5,177  ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸನ್ನಿವೇಶ­ದಲ್ಲಿ ವಿಮಾನ ನಿಲ್ದಾಣ, ಬಂದರು­ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಕ್ರಮ ಕೈಗೊಳ್ಳು­ವುದು ಅತ್ಯಗತ್ಯ. ದೇಶ­ದೊಳಗೆ ಸೋಂಕು ಹರಡದಂತೆ ನಿಯಂತ್ರಿ­ಸಲು ಇದು ಬೇಕು. ಎಬೋಲಾ ಸೋಂಕು ಪತ್ತೆಗೆ ಪ್ರಯೋಗಾಲಯಗಳು, ರೋಗ ಪತ್ತೆಯಾದಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯಗಳು ಸನ್ನದ್ಧ­ ಸ್ಥಿತಿ­ಯಲ್ಲಿ­ರು­ವುದು ಅವಶ್ಯ. ಇದಕ್ಕಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸಜ್ಜು­ಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT