ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬರಮತಿ ದಡದಲ್ಲಿ ‘ಶಕ್ತಿಶಾರದೆ’ಯ ಮೇಳ

Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಮೇಲಾಗಸದಲ್ಲಿ ಹುಣ್ಣಿಮೆಯ ನಗುವ ಚಂದಿರ. ಹಿಂದೆ ಸಬರಮತಿಯ ಝಳ, ಝಳ ನಿನಾದ. ಎದುರಿದ್ದ ಬಯಲು ರಂಗಮಂದಿರದಲ್ಲಿ ಕುಚಿಪುಡಿ ನೃತ್ಯಗಾತಿಯರ ಗೆಜ್ಜೆಯ ಗುನುಗು. ದರ್ಪಣಾ ಅಕಾಡೆಮಿಯ ಆ ಬಯಲು ರಂಗಮಂದಿರದ ಮುಂದೆ ಕೂತಿದ್ದ ಇನ್ನೂರಕ್ಕೂ ಹೆಚ್ಚು ಪ್ರೇಕ್ಷಕರ ಪೈಕಿ ಒಬ್ಬ ಕೂಡ ತುಟಿ ಪಿಟಕ್ ಎನ್ನುವ ಸ್ಥಿತಿಯಲ್ಲಿ ಇರಲಿಲ್ಲ.

ಆ ಪರಿಯ ಸೊಬಗು, ನೃತ್ಯಸಂಭ್ರಮದ ನಡುವೆ ಎಲ್ಲರೂ ಮುಳುಗಿ ಹೋಗಿದ್ದರು. ಪಕ್ಕದಲ್ಲಿಯೇ ‘ಶಕ್ತಿಶಾರದೆ!’ ಒಂದು ಕ್ಷಣ ಇಂದ್ರನ ಅರಮನೆಗೆ ಕಿಚ್ಚು ಹಚ್ಚುವ ಆಸೆ ಹುಟ್ಟಿತು!

ಅಹಮದಾಬಾದ್‌ಗೆ ಹೋಗಲು ಏಪ್ರಿಲ್ 19, 2011 ಬೆಳಿಗ್ಗೆ ನವದೆಹಲಿಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದಾಗ ‘ಶಕ್ತಿಶಾರದೆ’ಯ ಮೇಳದಲ್ಲಿ ಒಂದಾಗುವ ಕಲ್ಪನೆಯೇ ಇರಲಿಲ್ಲ. ಅಣ್ಣಾ ಹಜಾರೆ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕೂತು ಹಲವು ದಿನಗಳಾಗಿದ್ದವು. ದೇಶದೆಲ್ಲೆಡೆ ಭ್ರಷ್ಟಾಚಾರ ವಿರೋಧಿ ‘ಅಣ್ಣಾ ಅಲೆ’ ಪ್ರತಿಧ್ವನಿಸುತ್ತಿತ್ತು.

ಜನಲೋಕಪಾಲ್ ಆಂದೋಲನಕ್ಕೆ ನಮ್ಮವರೇ ಆದ ನ್ಯಾಯಮೂರ್ತಿ ಸಂತೋಷ ಹೆಗಡೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್ ಮತ್ತು ಸ್ವಾಮಿ ಅಗ್ನಿವೇಶ್ ಮುಂತಾದ ದಿಗ್ಗಜರು ಒಕ್ಕೊರಲಿನ ದನಿಯೆತ್ತಿದ್ದರು.

ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಅಲುಗಾಡಲು ಆರಂಭಿಸಿಯಾಗಿತ್ತು. ಸುಮಾರು ನಾಲ್ಕು ದಿನಗಳ ಕಾಲ ಬಹಳ ಹತ್ತಿರದಿಂದ ‘ಅಣ್ಣಾ ಅಲೆ’ಯ ಬಿರುಸನ್ನು ಕಂಡಿದ್ದವ ಆ ದಿನ ಕಾರ್ಯ ನಿಮಿತ್ತ ಅಹಮದಾಬಾದ್‌ಗೆ ಹೊರಟಿದ್ದೆ.

ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್‌ಗೆ ಕಾಯುತ್ತಿದ್ದಾಗ ಇದ್ದಕ್ಕಿದ್ದಂತೆ ಅಗ್ನಿವೇಶ್ ಪ್ರತ್ಯಕ್ಷರಾದರು, ಮಾತ್ರವಲ್ಲ ನನ್ನ ಪಕ್ಕದಲ್ಲಿಯೇ ಬಂದು ಕೂತರು. ಉಭಯಕುಶಲೋಪರಿ ನಡುವೆ ಮಾತು ಅಣ್ಣಾ ಸತ್ಯಾಗ್ರಹದತ್ತ ಹೊರಳಿತು. ಅವರು ಅಹಮದಾಬಾದ್‌ನಲ್ಲಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಲು ಹೊರಟಿದ್ದರು.

ಸಾರ್ವಜನಿಕ ಸಭೆಗಿಂತ ಮೊದಲು ಅಗ್ನಿವೇಶ್ ದರ್ಪಣಾ ಅಕಾಡೆಮಿಗೆ ಭೇಟಿ ನೀಡುವ ಕಾರ್ಯಕ್ರಮವೂ ಇತ್ತು. ಪುರುಸೊತ್ತಿದ್ದರೆ ನೀವೇಕೆ ನನ್ನ ಜೊತೆ ದರ್ಪಣಾ ಅಕಾಡೆಮಿಗೆ ಬಂದು ಸ್ಥಳೀಯ ಮುಖಂಡರಾದ ಮಲ್ಲಿಕಾ ಸಾರಾಭಾಯ್, ಮುಕುಲ್ ಸಿನ್ಹಾ ಮುಂತಾದವರ ಜೊತೆಯಲ್ಲಿನ ಸಭೆಯಲ್ಲಿ ಭಾಗವಹಿಸಬಾರದು? ಎಂಬ ಅವರ ಆತ್ಮೀಯ ಆಹ್ವಾನಕ್ಕೆ ಇಲ್ಲ ಎನ್ನಲಾಗಲಿಲ್ಲ.

ಅಹಮದಾಬಾದ್‌ನ ವಿಮಾನ ನಿಲ್ದಾಣದಿಂದ ಅವರದೇ ವಾಹನದಲ್ಲಿ ಕೂತು, ನಾವು ದರ್ಪಣಾ ಅಕಾಡೆಮಿ ತಲುಪಿದಾಗ ಬೆಳಗಿನ ಹತ್ತೂವರೆ.
ಸಬರಮತಿ ದಡದ ಉಸ್ಮಾನ್‌ಪುರದಲ್ಲಿರುವ ದರ್ಪಣಾ ಅಕಾಡೆಮಿ ಹಲವು ದೃಷ್ಟಿಯಲ್ಲಿ ‘ಶಾರದೆ’ಯ ಶಕ್ತಿಕೇಂದ್ರ. ಗುಜರಾತ್‌ನ ಔದ್ಯಮಿಕ ಲೋಕದ ಅಜಾನುಬಾಹು ಕುಟುಂಬ ಸಾರಾಭಾಯ್ ವಂಶ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಕುಟುಂಬ ಬಾಹ್ಯಾಕಾಶ ವಿಜ್ಞಾನಕ್ಕೆ ನೀಡಿದ ಮಹಾನ್ ಕೊಡುಗೆ ವಿಕ್ರಮ್ ಸಾರಾಭಾಯ್. ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹನಾಗಿ ಹೊರಹೊಮ್ಮಿದ ವಿಕ್ರಮ್ ಅವರ ಪತ್ನಿ ಮೃಣಾಲಿನಿ ಸಾರಾಭಾಯ್, ಭಾರತೀಯ ನೃತ್ಯಲೋಕದ ಅಪೂರ್ವ ಸಂಪತ್ತು.

ಅವರಿಬ್ಬರ ಪುತ್ರಿ ಮಲ್ಲಿಕಾ ಸಾರಾಭಾಯ್. ಶ್ರೇಷ್ಠ ನೃತ್ಯಗಾತಿ, ನಟಿ, ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಪರಿಸರವಾದಿ ಮತ್ತು ರಾಜಕಾರಣಿ! ಅವರ ಸಹೋದರ ಕಾರ್ತಿಕೇಯ ಸಾರಾಭಾಯ್ ಖ್ಯಾತ ಪರಿಸರ ವಿಜ್ಞಾನಿ. ಈ ನಾಲ್ವರ ಮಡಿಲಲ್ಲಿ ಆರು ‘ಪದ್ಮ ಪ್ರಶಸ್ತಿ’ಗಳು! ಶಾರದೆ ಮತ್ತು ಲಕ್ಷ್ಮಿ ಇಬ್ಬರೂ ಜೊತೆಯಾಗಿ ಕಾಲು ಮುರಿದುಕೊಂಡು ನೆಲೆ ನಿಂತ ಮನೆಯದು.

ವಿಕ್ರಮ್ ಮತ್ತು ಮೃಣಾಲಿನಿ ಸಾರಾಭಾಯ್ ಜೋಡಿ 1949ರಲ್ಲಿ ಆರಂಭ ಮಾಡಿದ ದರ್ಪಣಾ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಭಾರತೀಯ ಕಲಾಲೋಕಕ್ಕೆ ನೀಡಿದ ಕೊಡುಗೆ ಅಪಾರ. ಆರಂಭದಲ್ಲಿ ಭರತನಾಟ್ಯ ನಂತರ ಕುಚಿಪುಡಿ ನೃತ್ಯ ಕೇಂದ್ರವಾಗಿದ್ದ ಅಕಾಡೆಮಿ ಈಗ ನೃತ್ಯ, ನಾಟಕ ಮತ್ತು ಗೊಂಬೆಯಾಟಗಳ ಗುರುಕುಲ.

ಇಂತಹ ಸಮೃದ್ಧ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದು ನಿಂತ ಮಲ್ಲಿಕಾ ಸೌಂದರ್ಯ, ಕಲೆ, ಸಂಸ್ಕೃತಿ, ಆಧುನಿಕ ಮನೋಭಾವದ ಅಪೂರ್ವ ಸಂಗಮ. ಗೆಜ್ಜೆಯ ಸದ್ದಿನ ನಡುವೆಯೇ ಜನ್ಮ ತಾಳಿದ ಮಲ್ಲಿಕಾ ಕಾಲೇಜು ವಿದ್ಯಾರ್ಥಿಯಾಗಿದ್ದ ದಿನದಿಂದಲೂ ಮುಕ್ತವಾಗಿಯೇ ಜೀವನ ಸಾಗಿಸಿದ ಚೆಲುವೆ. ಮಿನಿ ಸ್ಕರ್ಟ್ ಧರಿಸಿ, ಬೈಕ್ ಓಡಿಸುತ್ತಾ ಅಹಮದಾಬಾದ್‌ನ ರಸ್ತೆಗಳಿಗೆ ‘ಬೆಂಕಿ’ ಹಾಕಿದ ಯುವತಿ.

ಹದಿನೈದರ ಹರೆಯದಲ್ಲಿಯೇ ಕಲಾತ್ಮಕ ಸಿನೆಮಾದ ನಾಯಕಿಯಾಗಿ ಬಣ್ಣದ ಲೋಕ ಪ್ರವೇಶಿಸಿದ್ದ ಅಸಾಮಾನ್ಯ ಪ್ರತಿಭೆ. ಪೀಟರ್ ಬ್ರೂಕ್ ಅವರ ‘ಮಹಾಭಾರತ’ ನಾಟಕದ ದ್ರೌಪದಿಯಾಗಿ ಜನಪ್ರಿಯತೆಯ ತುತ್ತ ತುದಿಗೇರಿದ ಮಲ್ಲಿಕಾ ಮ್ಯಾನೇಜ್‌ಮೆಂಟ್ ಪದವೀಧರೆ,

ಡಾಕ್ಟರೇಟ್ ಪಡೆದ ಪ್ರತಿಭೆ. ಬಿಪಿನ್ ಷಾ ಜೊತೆಗಿನ ಏಳು ವರ್ಷದ ದಾಂಪತ್ಯ ಜೀವನದಲ್ಲಿ ರೇವಂತ ಮತ್ತು ಅನಹಿತ ತಾಯಿಯಾದ ಮಲ್ಲಿಕಾ ವೈಯಕ್ತಿಕವಾಗಿ ಆನಂತರ ಒಂಟಿ ಜೀವಿ. ನಂತರ ಕಲೆ, ನೃತ್ಯ, ಸಾಮಾಜಿಕ ಮತ್ತು ರಾಜಕೀಯ ಚಳವಳಿಯೇ ಬದುಕು.

ಅಮ್ಮನ ಇಳಿ ವಯಸ್ಸಿನಲ್ಲಿ ದರ್ಪಣಾ ಅಕಾಡೆಮಿಯ ಪೂರ್ಣ ಜವಾಬ್ದಾರಿ ಹೊತ್ತ ಮಲ್ಲಿಕಾ ದೇಶ-ವಿದೇಶಗಳಲ್ಲಿ ಸಾಮಾಜಿಕ ನೆಲೆಯಲ್ಲಿ ಹಲವು ಏಕಾಂಕ ನೃತ್ಯ ಸಂಯೋಜಿಸಿ, ಪ್ರದರ್ಶಿಸಿ ಖ್ಯಾತಿಯ ಉತ್ತುಂಗಕ್ಕೇರಿದವರು. ಜಾಗತಿಕ ನೆಲೆಯಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಅದ್ಭುತ ಕಲಾವಿದೆ. ಕಲೆಯ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಬಗ್ಗೆ ಅಪಾರ ನಂಬಿಕೆಯಿಟ್ಟುಕೊಂಡಿರುವ ಮಹಿಳಾ ಪರ ನಿಲುವು ಅಭಿನಂದನೀಯ.

ಮಲ್ಲಿಕಾ ರಚಿಸಿ ಅಭಿನಯಿಸಿದ ‘ಶಕ್ತಿ’ ಮತ್ತು ‘ಮೀರಾ’ ಜಗದ್ವಿಖ್ಯಾತವಾದ ಏಕಾಂಕಗಳು. ದೂರದರ್ಶನಕ್ಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಕೊಟ್ಟಿರುವ ಮಲ್ಲಿಕಾ ಟೈಮ್ಸ್  ಆಫ್ ಇಂಡಿಯ, ಡಿಎನ್ಎ ಮತ್ತು ದಿ ವೀಕ್ ನಿಯತಕಾಲಿಕಗಳ ಅಂಕಣಗಾರ್ತಿ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಿತಾಮಹ ಲಾಲ್‌ಕೃಷ್ಣ ಅಡ್ವಾಣಿ ಅವರ ವಿರುದ್ಧ ಗಾಂಧಿನಗರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಂದರ್ಭದಲ್ಲಿ, ‘ಇದು ರಾಜಕೀಯ ಸತ್ಯಾಗ್ರಹ. ಜೀವ ವಿರೋಧಿ ರಾಜಕೀಯದ ವಿರುದ್ಧ ಹೋರಾಟ’ ಎಂದಿದ್ದರು.

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನದಿಂದ ಅವರ ವಿರುದ್ಧ ದನಿಯೆತ್ತುತ್ತಲೇ ಬಂದಿರುವ ಮಲ್ಲಿಕಾ ಮತ್ತು ಮೋದಿ ವಿರೋಧಿ ಮುಕುಲ್ ಸಿನ್ಹಾ ಆತ್ಮೀಯ ಗೆಳೆಯರು.

ಮುಕುಲ್ ಅಹಮದಾಬಾದ್ ಮೂಲದ ಪ್ರಖ್ಯಾತ ವಕೀಲ, ಸಾಮಾಜಿಕ ಚಳವಳಿಗಾರ, ಲೇಖಕ ಮತ್ತು ಕಾರ್ಮಿಕ ಮುಖಂಡ. 2002ರ ಗುಜರಾತ್ ಗಲಭೆಯ ಸಂತ್ರಸ್ತರ ಪರ ನಿಂತು ವಕಾಲತ್ತು ಮಾಡಿದ ಅಪ್ಪಟ ಸಮಾಜವಾದಿ. ಇವರೊಂದಿಗೆ ಗಾಂಧಿಯ ನೆಲದಲ್ಲಿ ಮೋದಿ ಅವರನ್ನು ವಿರೋಧಿಸುವ ಒಂದು ದೊಡ್ಡ ಗುಂಪೇ ಇದೆ.

ಅಗ್ನಿವೇಶ್ ಜೊತೆ ನಾನು ದರ್ಪಣಾ ಅಕಾಡೆಮಿ ಪ್ರವೇಶಿಸುವ ಮೊದಲೇ ಸಭೆಗೆ ಸಕಲ ತಯಾರಿ ಆಗಿ ಹೋಗಿತ್ತು. ದರ್ಪಣಾ ಆವರಣದಲ್ಲಿ ಮಲ್ಲಿಕಾ, ಮುಕುಲ್‌ಗೆ ನನ್ನನ್ನು ಪರಿಚಯ ಮಾಡಿಕೊಟ್ಟ ಅಗ್ನಿವೇಶ್ ಸಭೆ ಆರಂಭಿಸಿಯೇ ಬಿಟ್ಟರು.

ಅಣ್ಣಾ ನಿಲುವನ್ನು ಸಭೆಯಲ್ಲಿ ನೆರೆದಿದ್ದವರಿಗೆ ಸ್ಪಷ್ಟ ಪಡಿಸಿದ ಅಗ್ನಿವೇಶ್ ಸಾಮಾಜಿಕ ಕಳಕಳಿ ಇರುವ ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧ ಹೇಗೆ ಮತ್ತು ಏಕೆ ಕೈಜೋಡಿಸಬೇಕು ಎಂದು ವಿವರವಾಗಿ ಮಾತನಾಡಿದರು. ಸಭೆ ಮುಗಿದ ನಂತರ ಮುಕುಲ್ ಮತ್ತು ಉಳಿದ ಮುಖಂಡರ ಜೊತೆ ಅಗ್ನಿವೇಶ್ ಸಾರ್ವಜನಿಕ ಸಭೆಗೆ ತೆರಳಿದರು. ನಾನು ದರ್ಪಣಾದಲ್ಲಿಯೇ ಮಲ್ಲಿಕಾ ದಿದಿ ಜೊತೆ ಉಳಿದುಕೊಂಡೆ.

ಪೂರ್ವಾಪರಗಳ ನಂತದ ದಿದಿ, ಈವತ್ತು ರಾತ್ರಿ ನಮ್ಮಲ್ಲಿ ಒಂದು ನೃತ್ಯ ಕಾರ್ಯಕ್ರಮ ಇದೆ. ನೀವೇಕೆ ಅದಕ್ಕೆ ಬರಬಾರದು? ಎಂಬ ಆತ್ಮೀಯ ಆಮಂತ್ರಣ ನೀಡಿದರು. ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದಲ್ಲಿ ನಾನು ಶಿವ ವಿಶ್ವನಾಥನ್ ಅವರನ್ನು ಭೇಟಿ ಮಾಡಬೇಕು. ಸಂಜೆ ವಾಪಸು ಬರುತ್ತೇನೆ. ಆದರೆ, ನನ್ನದೊಂದು ಬೇಡಿಕೆ ಇದೆ ಎಂದೆ. ಏನು?

ಭಾರತದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಭವಿಷ್ಯದ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇನೆ. ಅದಕ್ಕೆ ನಿಮ್ಮದೊಂದು ಪ್ರತ್ಯೇಕ ಸಂದರ್ಶನ ಬೇಕು ಎಂಬ ಬೇಡಿಕೆಯಿಟ್ಟೆ.

ನಾಡಿದ್ದು ಬೆಳಿಗ್ಗೆಯೇ ರೇವಂತನ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ಹೊರಟಿದ್ದೇನೆ. ನಾಳೆ ಮಧ್ಯಾಹ್ನ ನಿಮಗೋಸ್ಕರ ಒಂದು ಗಂಟೆ ಬಿಡುವು ಮಾಡಿಕೊಳ್ಳಲು ಅಡ್ಡಿಯಿಲ್ಲ. ಆದರೆ, ನಿಮಗೆ ಬಿಡುವು ಇದೆಯೇ? ಎಂದರು. ಖಂಡಿತ ಎಂದ ನಾನು ಗಾಂಧಿನಗರದತ್ತ ಹೊರಟೆ.
ಸಂಜೆ ಹೋಟೆಲ್‌ಗೆ ಹೋಗಿ ಬ್ಯಾಗ್ ಇಟ್ಟು, ಆರೂವರೆ ಹೊತ್ತಿಗೆ ದರ್ಪಣಾ ಅಕಾಡೆಮಿ ಆವರಣದೊಳಗೆ ಕಾಲಿಟ್ಟೆ. ಹಬ್ಬದ ವಾತಾವರಣ.

ಎಂಬತ್ತೈದು ದಾಟಿದ್ದರೂ ಜೀವಂತಿಕೆಯ ಸಂಕೇತವಾಗಿದ್ದ ಅಮ್ಮ ಮೃಣಾಲಿನಿ. ಐವ್ವತ್ತೈದರ ಹರೆಯದಲ್ಲೂ ಪುಟಿಯುತ್ತಿದ್ದ ಮಗಳು ಮಲ್ಲಿಕಾ. ಹೆಜ್ಜೆಗಳು-ಗೆಜ್ಜೆಗಳ ನಿನಾದದಲ್ಲಿ ಜಗವ ಮರೆಯುವ ಪ್ರೇಕ್ಷಕ ವೃಂದ. ಸ್ವರ್ಗವೇ ಧರೆಗಿಳಿದ ಅನುಭವ.

ರಾತ್ರಿ ಹನ್ನೊಂದರ ಹೊತ್ತಿಗೆ ಕಾರ್ಯಕ್ರಮ ಮುಗಿದಾಗ ಈ ಅಮ್ಮ-ಮಕ್ಕಳು ಭಾರತೀಯ ಸಾಂಸ್ಕೃತಿಕ ಲೋಕಕ್ಕೆ ಅವರನ್ನೇ ಸಂಪೂರ್ಣವಾಗಿ ಧಾರೆಯೆರೆದುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಯಿತು. ಅದೊಂದು ಮಾಯಾಲೋಕ! ತಾಯಿ-ಮಗಳು ಮಾಯಾಂಗನೆಯರು!

ಮರುದಿನ ಮಧ್ಯಾಹ್ನ ಮೂರು ಗಂಟೆಗೆ ಮತ್ತೆ ದರ್ಪಣಾ ಆವರಣದೊಳಗೆ ಕಾಲಿಟ್ಟೆ. ಅಲ್ಲಿನ ಕೆಫೆಟೆರಿಯಾದಲ್ಲಿ ಮಲ್ಲಿಕಾ ಮುಖಾಮುಖಿಯಾದರು. ಮಣ್ಣಿನ ಕುಡಿಕೆಯಲ್ಲಿ ಪ್ರತ್ಯಕ್ಷವಾದ ಚಹಾ ಕುಡಿಯುತ್ತಾ, ‘ಗುಜರಾತ್ ಮಾದರಿ ಅಭಿವೃದ್ಧಿ’ಯ ಮೂಲಕ ನಮ್ಮ ಮಾತುಕತೆ ಆರಂಭವಾಯಿತು. ಗುಜರಾತ್ ಮಾದರಿ ಅಭಿವೃದ್ಧಿ ಎನ್ನುವುದು ಸುಳ್ಳಿನ ಕಂತೆ.

ಅಭಿವೃದ್ಧಿ ಎನ್ನುವುದು ಕೇವಲ ಮೇಲ್ವರ್ಗದ ಮತ್ತು ಉದ್ಯಮಿಗಳ ಪಾಲಿಗೆ ಸೀಮಿತವಾದರೆ ಅದರಿಂದ ಸಾಮಾಜಿಕವಾಗಿ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಗುಜರಾತ್‌ನಲ್ಲಿ ಆಗಿರುವುದು ಉಳ್ಳವರ ‘ಅಭಿವೃದ್ಧಿ’ ಅಷ್ಟೆ. ಇಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಆದರೆ ಮಾಧ್ಯಮ, ಔದ್ಯಮಿಕ ಲೋಕ, ಬಾಲಿವುಡ್ ತಾರೆಯರ ಕಣ್ಣಿಗೆ ಬೀಳುವುದು ಶ್ರೀಮಂತರ ಅಭಿವೃದ್ಧಿ ಮಾತ್ರ.

ಅದೇ ಕಣ್ಣುಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ಬಡತನದಲ್ಲಿಯೇ ನರಳುತ್ತಿರುವ ಕೂಲಿ-ಕಾರ್ಮಿಕರು, ಗ್ರಾಮೀಣ ಪ್ರದೇಶಗಳಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಬಡವರು, ಬೃಹತ್ ಯೋಜನೆಗಳಿಂದ ಬದುಕನ್ನೆ ಕಳೆದುಕೊಂಡಿರುವ ನಿರಾಶ್ರಿತರು ಬೀಳುವುದಿಲ್ಲ.

ಗುಜರಾತ್ ಅಭಿವೃದ್ಧಿಯಾಗಿದೆ ಎಂದ ಕೂಡಲೇ ಇಲ್ಲಿ ಬಡತನದ ಸರ್ವನಾಶವಾಗಿದೆ, ಪ್ರತಿಯೊಬ್ಬರೂ ಸುಃಖ-ಸಂತೋಷದಿಂದ ಬದುಕುತ್ತಿದ್ದಾರೆ ಎನ್ನುವುದು ತಪ್ಪು ಭಾವನೆ. ನಮ್ಮ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಬೇಕು.

ಎಲ್ಲಿಯವರೆಗೆ ಸಮಾಜದ ಸಮಗ್ರ ಅಭಿವೃದ್ಧಿ ಆಗುವುದಿಲ್ಲವೋ, ಅಲ್ಲಿಯವರೆಗೆ ಈ ರಾಜಕೀಯ ಪ್ರೇರಿತ ಅಭಿವೃದ್ಧಿಗಳಿಗೆ ಅರ್ಥವೇ ಇರುವುದಿಲ್ಲ– ಮಲ್ಲಿಕಾ ಮಾತುಗಳು ಎಷ್ಟು ಸ್ಪಷ್ಟವಾಗಿದ್ದವು ಎಂದರೆ, ಅಲ್ಲಿ ಮರುಪ್ರಶ್ನೆಗೆ ಅವಕಾಶವೇ ಇರಲಿಲ್ಲ.

ಅಣ್ಣಾ ಸತ್ಯಾಗ್ರಹ, ಭ್ರಷ್ಟಾಚಾರ ವಿರೋಧಿ ಅಲೆ, ರಾಜಕೀಯ ಬದ್ಧತೆ, ಗ್ರಾಮ ಸ್ವರಾಜ್ಯದ ಕಲ್ಪನೆ... ಮಾತುಗಳು ಒಂದಕ್ಕೊಂದು ತಳುಕು ಹಾಕಿಕೊಂಡವು. ಈವತ್ತು ನಾನು ಅಣ್ಣಾ ಅವರನ್ನು ಬೆಂಬಲಿಸುತ್ತೇನೆ ಎಂದರೆ ಕಣ್ಣು ಮುಚ್ಚಿ ಅವರು ಹೇಳಿದ್ದೆಲ್ಲವನ್ನೂ, ಅವರು ಮಾಡಿದ್ದೆಲ್ಲವನ್ನೂ ಒಪ್ಪುತ್ತೇನೆ ಎಂದಲ್ಲ.

ಜನಲೋಕಪಾಲ್ ಬಗ್ಗೆ ಅವರು ತೆಗೆದುಕೊಂಡ ನಿಲುವಿನ ಬಗ್ಗೆ ನನಗೆ ಒಪ್ಪಿಗೆಯಿದೆ. ಅದೇ ಅಣ್ಣಾ ಭ್ರಷ್ಟರನ್ನು ನೇಣಿಗೇರಿಸಿ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಭ್ರಷ್ಟಾಚಾರ ಎನ್ನುವುದು ಕೇವಲ ಹಣಕ್ಕೆ ಸಂಬಂಧಿಸಿದ್ದಲ್ಲ.

ಅದು ಒಂದು ಸಮಾಜದ ಮಾನಸಿಕ ಸ್ಥಿತಿ. ಅದರಲ್ಲಿಯೂ ಎರಡು ರೀತಿಯಿದೆ. ಒಂದು ಅನಿವಾರ್ಯ ಕಾರಣದಿಂದ, ಉದಾಹರಣೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ರೋಗಗ್ರಸ್ಥ ತಾಯಿಗೆ ಒಂದು ಬೆಡ್ ಸಿಗಲಿ ಎಂದು ನೂರು ರೂಪಾಯಿ ಲಂಚ ನೀಡುವುದು. ಅದನ್ನು ಅಲ್ಲಿಯ ವೈದ್ಯ ತೆಗೆದುಕೊಳ್ಳುವುದು.

ಇನ್ನೊಂದು 2ಜಿ, ಆದರ್ಶ್, ಕಾಮನ್‌ವೆಲ್ತ್ ಕ್ರೀಡಾಕೂಟ, ಗಣಿಗಾರಿಕೆ, ಲವಾಸಾ ಮುಂತಾದ ಸಿರಿವಂತಿಕೆಯ ಹಸಿವಿನಿಂದ ಹುಟ್ಟಿಕೊಂಡಿರುವ ರಾಜಕರಾಣಿ-ಅಧಿಕಾರಿ-ಉದ್ಯಮಿಗಳು ಕೈಜೋಡಿಸಿ ದೋಚುವ ಭ್ರಷ್ಟಾಚಾರ. ಇದು ದೇಶಕ್ಕೆ ಅಪಾಯಕಾರಿ.

ದುರಂತವೆಂದರೆ ನನ್ನ ಮನೆಯಂತಿದ್ದ ಇಸ್ರೋ ಕೂಡ ಇಂದು ಭ್ರಷ್ಟಾಚಾರದ ಭಾಗವಾಗಿ ಹೋಗಿರುವುದು! ಈ ಮನುಷ್ಯನ ಕ್ರೂರ ದಾಹಕ್ಕೆ ಅರ್ಥವಿಲ್ಲ. ಅದಕ್ಕೆ ಕೊನೆ ಹಾಡಲೇಬೇಕು. ಹಾಗಾಗಬೇಕೆಂದರೆ ಸಾಮಾಜಿಕ-ರಾಜಕೀಯ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕು– ಮಲ್ಲಿಕಾ ಎದೆಯಾಳದ ಸಾಮಾಜಿಕ ಕಾರ್ಯಕರ್ತ ಜಾಗೃತಗೊಂಡಿದ್ದ.

ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಕಟ್ಟಾ ವಿರೋಧಿಯಾಗಿದ್ದ ಮಲ್ಲಿಕಾ ಸಂದರ್ಶನದ ವೇಳೆ ಒಂದು ಪ್ರಶ್ನೆಗೆ, ನರೇಂದ್ರ ಮೋದಿ ಒಬ್ಬ ಅತ್ಯುತ್ತಮ ಸಿಇಓ. ಸಂಘಟನಾ ಚತುರ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಮುಂದೊಂದು ದಿನ ಮೋದಿ ಈ ದೇಶದ ಪ್ರಧಾನಿ ಆಗುವ ಎಲ್ಲ ಸಾಧ್ಯತೆಗಳು ಇವೆ.

ಆದರೆ ಸದಾ ತನ್ನ ಹಿಂಬಾಲಕ ಬೃಹತ್ ಉದ್ಯಮಿಗಳ ಒಳಿತನ್ನೇ ಬಯಸುವ, ಬಡವರ ಬಗ್ಗೆ ಮೇಲ್ನೋಟದ ಕಾಳಜಿ ತೋರಿಸುತ್ತಾ ನಾಟಕ ಮಾಡುವ ಸಿಇಓ ಅವರಿಂದ ದೇಶಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬ ಭವಿಷ್ಯ ನುಡಿದಿದ್ದರು.

ಕೇವಲ 3 ವರ್ಷಗಳ ಅವಧಿಯಲ್ಲಿ ಮಲ್ಲಿಕಾ ಭವಿಷ್ಯ ಅರ್ಧ ನಿಜವಾಗಿ ಬಿಟ್ಟಿತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ದೇಶದ ನಾಯಕರಾಗಿ ಹೊರಹೊಮ್ಮಿದರು. ಒಬ್ಬ ಪ್ರಧಾನಿಯಾಗಿ ಮೋದಿ ಎಷ್ಟರ ಮಟ್ಟಿಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ? ಅದು ದೇಶದ ಸಮಗ್ರ ಅಭಿವೃದ್ಧಿಯಾಗಲಿದೆಯೇ? ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರ ಹೇಳಲಿದೆ.

ಅಂದಿನಿಂದ ಇಂದಿನವರೆಗೂ ಸದಾ ಸಂಪರ್ಕದಲ್ಲಿರುವ ಮಲ್ಲಿಕಾ ಆ ದಿನ, ಈ ದೇಶದ ಸಾಕ್ಷಿಪ್ರಜ್ಞೆಯಂತಿರುವ ಲೇಖಕರು, ಕಲಾವಿದರು, ವಿಜ್ಞಾನಿಗಳು ಯಾವತ್ತೂ ಯಾವುದೇ ರಾಜಕೀಯ ಪಕ್ಷಕ್ಕೆ ಮತ್ತು ರಾಜಕಾರಣಿಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬಾರದು. ಸಮಾಜದ ಪರವಾಗಿ ನಿಂತು ಸಮಾಜ ವಿರೋಧಿ ನಿಲುವುಗಳನ್ನು ಖಂಡಿಸಬೇಕು. ಅಂತಹ ರಾಜಕಾರಣಿ ಮತ್ತು ಪಕ್ಷಗಳ ವಿರುದ್ಧ ಎದೆಯೊಡ್ಡಿ ನಿಲ್ಲಬೇಕು.

ದುರಂತವೆಂದರೆ ಈ ಸಾಕ್ಷಿಪ್ರಜ್ಞೆಗಳೇ ಈವತ್ತು ತಮ್ಮನ್ನೇ ತಾವು ಮಾರಿಕೊಂಡಿರುವುದು. ವೈಯಕ್ತಿಕವಾಗಿ ಮೋದಿಯ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ, ಮೋದಿ ಒಬ್ಬ ಸಮಾಜ ವಿರೋಧಿ ಆಡಳಿತಗಾರ. ಅವರ ಆ ನಿಲುವಿಗೆ ನನ್ನ ವಿರೋಧವಿದೆ. ನನ್ನ ಈ ಕಠಿಣ ನಿಲುವಿನಿಂದ ನನಗೆ ಸಾಕಷ್ಟು ಹಾನಿಯಾಗಿದೆ. ಅದರ ಬಗ್ಗೆ ನಾನು ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ ಎಂಬ ಮಾತನ್ನಾಡಿದ್ದರು.

ಆ ರಾತ್ರಿ ದರ್ಪಣಾ ಅಕಾಡೆಮಿ ಆವರಣದಿಂದ ಹೊರಬಂದು ಬೀದಿ ದೀಪದಡಿಯಲ್ಲಿ ಮುಖ್ಯರಸ್ತೆ ಕಡೆ ಹೆಜ್ಜೆ ಇಡುತ್ತಿದ್ದವ, ‘ಈಕೆ ಶಕ್ತಿ ಶಾರದೆ’ ಎಂದುಕೊಂಡಿದ್ದೆ.

ಇದೇ ವರ್ಷದ ಆರಂಭ. ಜನವರಿ 29ರಂದು 97ರ ಹರೆಯದ ಮೃಣಾಲಿನಿ ಸಾರಾಭಾಯ್ ಇಹಲೋಕ ತ್ಯಜಿಸಿದರು. ಸುದ್ದಿ ತಿಳಿದ ಕೂಡಲೇ ಮಲ್ಲಿಕಾ ದಿದಿಗೆ ಸಂತಾಪದ ಸಂದೇಶ ಕಳುಹಿಸಿದ್ದೆ. ನಡುರಾತ್ರಿ ಅದಕ್ಕೆ ಉತ್ತರವೂ ಬಂದಿತ್ತು.

ಆದರೆ! ಮರುದಿನ ಬೆಳಿಗ್ಗೆ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಆ ಚಿತ್ರ! ಅಂದು ದರ್ಪಣಾ ಅಕಾಡೆಮಿಯ ಆವರಣದಲ್ಲಿ ನಾನು ಮಲ್ಲಿಕಾ ಅವರ ಜೊತೆ ಕೂತಿದ್ದ ಅದೇ ಜಾಗದಲ್ಲಿ ಮೃಣಾಲಿನಿ ಅವರ ಪಾರ್ಥಿವ ಶರೀರ ಅಂತಿಮ ಯಾತ್ರೆಗೆ ಸಿದ್ಧವಾಗಿ ಮಲಗಿತ್ತು. ಅದರ ಮುಂದೆ ಮಲ್ಲಿಕಾ ನೃತ್ಯ ಶ್ರದ್ಧಾಂಜಲಿ ಅರ್ಪಿಸಿ ಅಮ್ಮನಿಗೆ ಬೀಳ್ಕೊಡುಗೆ ನೀಡುತ್ತಿದ್ದರು. ಕಣ್ಣು ಮಂಜಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT