ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಲೀಕರಣವೆಂದರೆ...

Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೂಚಿಪುಡಿ ನೃತ್ಯ ಕ್ಷೇತ್ರದಲ್ಲಿ ಗಮನೀಯ ಸಾಧನೆ ಮಾಡಿರುವವರು ವೈಜಯಂತಿ ಕಾಶಿ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಪೂರ್ವಭಾವಿಯಾಗಿ ಚೆನ್ನೈನಲ್ಲಿ ‘ನಾಯಿಕಾ’ ಎಂಬ ವಸ್ತುವಿಷಯವನ್ನಿಟ್ಟುಕೊಂಡು ಕಾರ್ಯಕ್ರಮ ಏರ್ಪಡಿಸಿದ್ದಾರೆ.  ತಮ್ಮ ’ನಾಯಿಕಾ’ ಪಾತ್ರದೊಂದಿಗೆ ಸಬಲೀಕರಣದ ವ್ಯಾಖ್ಯಾನವನ್ನು ತಳಕು ಹಾಕುತ್ತ ಅವರಿಲ್ಲಿ ಮಾತನಾಡಿದ್ದಾರೆ.

‘ಮಹಿಳೆಯ ತ್ಯಾಗದ ಗುಣವನ್ನೇ ಪ್ರಧಾನವಾಗಿಸಿದ ಪಾತ್ರ  ‘ಮಾಧವಿ’. ಯಯಾತಿಯ ಮಗಳು. ತ್ಯಾಗಮಯಿ ಪಾತ್ರವಾದರೂ ಕೇವಲ ಕಥೆಯಾಗಿ ಉಳಿದಳು. ಈ ಪಾತ್ರವನ್ನು ಕಾಲದ ದೃಷ್ಟಿಯಿಂದ ನೋಡಿ... 

ವಿಶ್ವಾಮಿತ್ರನ ಶಿಷ್ಯ ಗಾಲವ. ಗುರುದಕ್ಷಿಣೆ ನೀಡುವುದಾಗಿ ಹಟ ಹಿಡಿದ. ಆಗ ಒಂದು ಕಿವಿಯಲ್ಲಿ ಕಪ್ಪು ಚುಕ್ಕೆ ಇರುವ 800 ಬಿಳಿ ಕುದುರೆ ಬೇಕು ಎಂದು ಕೇಳಿದರು. ಗಾಲವ ಯಯಾತಿಯನ್ನು ಕೇಳಿದ. ‘ನನ್ನ ಹತ್ತಿರ ಕುದುರೆಗಳಿಲ್ಲ. ಮಗಳನ್ನು ಕೊಡುವೆ.

ಪುತ್ರಭಾಗ್ಯ ಇಲ್ಲದಿರುವ ನಾಲ್ವರು ರಾಜರಿಗೆ ಅವಳಿಂದ ಸಂತಾನ ಪಡೆಯಲು ಹೇಳಿ, ರಾಜರಿಂದ ಅಶ್ವ ದಾನ ಪಡೆದುಕೊ’ ಎಂದ.

ಮಾಧವಿ ಮಕ್ಕಳನ್ನು ಪಡೆದರೂ ಕನ್ಯೆಯಾಗಿಯೇ ಉಳಿಯುವ ವರ ಪಡೆದ ಸುಂದರಿ. ಆದರೆ ತಂದೆಯ ಮಾತಿಗೆ ಅವಳು ಇದು ನ್ಯಾಯವೆ? ಎಂದು ಪ್ರಶ್ನಿಸುತ್ತಾಳೆ. ಆದರೆ ಅಪ್ಪನ ವಚನ ಪರಿಪಾಲನೆಗಾಗಿ ಗಾಲವನನ್ನು ಹಿಂಬಾಲಿಸುತ್ತಾಳೆ. ಅವಳಿಂದ ಜನಿಸಿದ ನಾಲ್ವರು ಪುತ್ರರೂ ಬಹು ಮುಖ್ಯ ವ್ಯಕ್ತಿಗಳೇ. ಅವರಲ್ಲೊಬ್ಬ ಶಿಬಿ ಮಹಾರಾಜ. ಗಾಲವ ಮೂವರು ರಾಜರ ಬಳಿ ಅವಳನ್ನು ಕಳಿಸಿ ಅವರಿಂದ ಪ್ರತಿಯಾಗಿ ತಲಾ 200 ಅಶ್ವಗಳನ್ನೇನೊ ಪಡೆಯುತ್ತಾನೆ. ಕಡೆಗೇನೂ ತೋಚದೆ ವಿಶ್ವಾಮಿತ್ರರಿಗೇ ಅವಳನ್ನು ಸ್ವೀಕರಿಸಿ ಸಂತಾನ ಪಡೆಯಲು ವಿನಂತಿಸುತ್ತಾನೆ. 

ನಂತರ ಅವಳು ತಂದೆಯ ಬಳಿ ಬಂದಾಗ ಈಕೆಯ ಸ್ವಯಂವರ ಏರ್ಪಡಿಸಲೆ ಎನ್ನುತ್ತಾನೆ ಯಯಾತಿ. ಮುಂದೆ ಯಯಾತಿ ಸನ್ಯಾಸಿಯಾಗಿ ಭೂಮಿಗೆ ಬಂದಾಗ ತನ್ನ ನಾಲ್ವರು ಮಕ್ಕಳೂ ಅವರವರ ಪುಣ್ಯದ ಪಾಲನ್ನು ತಂದೆಗೆ ನೀಡುವಂತೆ ಮಾಡುತ್ತಾಳೆ ಮಾಧವಿ.

ವಚನ ಪರಿಪಾಲನೆ, ತ್ಯಾಗದ ಗುಣಗಳು ಈಗ ಅಷ್ಟಾಗಿ ಕಂಡುಬರದು. ಪ್ರಶ್ನಿಸುತ್ತಲೇ ಬದುಕನ್ನು ಒಪ್ಪಿಕೊಳ್ಳುವ, ಬಂದದ್ದನ್ನು ಸ್ವೀಕರಿಸುವ ಗಟ್ಟಿ ಪಾತ್ರ ಮಾಧವಿಯದ್ದು. ಅಪ್ಪನನ್ನು ದೂರದೇ ಅಂತಃಕರಣದಿಂದ ಕಾಣಲು ಬೇಕಿರುವ ಗಟ್ಟಿತನ ಸಾಮಾನ್ಯದ್ದಲ್ಲ. ಆದರೆ ಇಂತಹ ಮೌಲ್ಯಗಳು ಮರೆಯಾಗುತ್ತವೆ. ಈ ಗಟ್ಟಿತನವೇ ನಿಜವಾದ ಸಬಲೀಕರಣ ಎಂಬ ಆಶಯ ಹೊತ್ತಿದೆ ‘ನಾಯಿಕಾ’.

ಪುರುಷ ಪ್ರಧಾನವಾದ ಈ ವಿಶೇಷ ನೃತ್ಯ ಪ್ರಕಾರದಲ್ಲಿ ಮಹಿಳೆಯರು ಅಲ್ಲಲ್ಲಿ ಕಂಡುಬಂದರೂ ಅದು ಗುಂಪಿನಲ್ಲಿ ಒಬ್ಬರಾಗಿ ಮಾತ್ರ. ಇದರ ಕುರಿತ ದಾಖಲೆಗಳೂ ಸಿಗುವುದು ದುರ್ಲಭ. ಈ ಅಪರೂಪದ ಕ್ಷೇತ್ರದಲ್ಲೂ ಮಹಿಳೆಯರು   ಸೋಲೊ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ಆಸಕ್ತಿ, ಸಾಧನೆ ಎಲ್ಲವೂ ಒಂದು ಹಂತದವರೆಗೆ. ಕಡೆಗೆ ಪತಿ, ಮಕ್ಕಳು, ಸಂಸಾರ ಎಂಬ ಹಲವು ಕಾರಣಗಳಿಗೆ ಸಮರ್ಥ ಕಲಾವಿದರೆಲ್ಲ ಶಿಕ್ಷಕರಾಗಿ ಉಳಿದವರೇ ಹೆಚ್ಚು. ಹೆಚ್ಚು ಸದ್ದುಗದ್ದಲಗಳಿರದೇ ಸೇವೆ ಸಲ್ಲಿಸುತ್ತಿರುವವರಿಗೆ ‘ನಾಟ್ಯಶಾಸ್ತ್ರ’ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳಾ ಸಬಲೀಕರಣ ವೈಯಕ್ತಿಕ ಮಟ್ಟದಲ್ಲೇ ಆಗುತ್ತದೆ.

ಎಲ್ಲರೂ ಓದು, ಕೆಲಸಗಳ ಮೂಲಕ ಸಬಲರಾಗಬಹುದು. ಸಬಲೀಕರಣದ ಮಾದರಿಗಳೂ ನಮ್ಮ ನಡುವೆಯೇ ಇವೆ, ಅದರ ಕುರಿತ ಜಾಗೃತಿ ಮೂಡಬೇಕು. ಉತ್ತಮವಾದ ಅಂಶಗಳನ್ನು ಓದಿ, ಕೇಳಿ, ಅವುಗಳನ್ನು ಆಚರಣೆಯಲ್ಲಿ ತರುತ್ತ ಮೌಲ್ಯಗಳ ಮೂಲಕ ಸಬಲೀಕರಣ ನಡೆಯಬೇಕು. ತಮ್ಮಂತೆ ಸಾಂಪ್ರದಾಯಿಕ ವಿಚಾರಧಾರೆ ಇರುವವರೂ ತಮ್ಮ ಗುರುತನ್ನು, ವ್ಯಕ್ತಿತ್ವದ ಹೊಳಹನ್ನು ಕಳೆದುಕೊಳ್ಳಬಾರದು. ಮೊದಲು ನಮ್ಮ ಮನೆ, ನಮ್ಮ ಕುಟುಂಬದ ಮಟ್ಟದಲ್ಲಿ ಮೌಲ್ಯಗಳನ್ನು ಅನುಸರಿಸಬೇಕು. ನಂತರ ಮನೆಯಿಂದ ಆಚೆಯೂ ಅದನ್ನು ಪಸರಿಸಲು ಯತ್ನಿಸಬೇಕು ಅದು ಸಬಲೀಕರಣ.’
–ವೈಜಯಂತಿ ಕಾಶಿ, ಕಲಾವಿದೆ

ಮನೋಭಾವದಲ್ಲಿ ಬದಲಾವಣೆಯಾಗಲಿ

ಮಹಿಳೆ ತನಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಸ್ವತಃ ನಿರ್ಣಯ ಕೈಗೊಳ್ಳುವಂತಾಗುವುದೇ ಸಬಲೀಕರಣ. ಆರ್ಥಿಕ, ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಮಹಿಳೆ ಈಗಾಗಲೇ ಸಾಧನೆಯನ್ನೂ ಮಾಡುತ್ತಿರುವ ಕಾಲವಿದು. ಆದರೆ ತನ್ನ ಊಟ ತಿಂಡಿ, ಬಟ್ಟೆ ಬರೆಯಂತಹ ವಿಷಯಗಳಲ್ಲೂ ಬೇರೆಯವರ ಅನುಕೂಲಕ್ಕೆ ತಕ್ಕಂತೆ ಅವಳು ನಡೆಯಬೇಕು ಎಂದು ನಿರೀಕ್ಷಿಸುವುದು ಸಂಪ್ರದಾಯ. ಹೆಣ್ಣುಮಕ್ಕಳೆಂದರೆ ತಗ್ಗಿ ಬಗ್ಗಿ ಇರಬೇಕು. ಯಾವುದೇ ಜಾತಿ ಇರಲಿ, ಯಾವ ವಯಸ್ಸಿನವರೇ ಇರಲಿ, ಮಹಿಳೆಯರ ಬಗ್ಗೆ ಇದೇ ನಿರೀಕ್ಷೆ ಗಾಢವಾಗಿ ಬೇರೂರಿದೆ ನಮ್ಮ ಲ್ಲಿ.

ಸಬಲೀಕರಣ ಎಂದರೆ ಯಾರೆದುರೂ ಅವಳು ತಗ್ಗಬೇಕಾಗಿಲ್ಲ. ಬಗ್ಗಬೇಕಾಗಿಲ್ಲ. ಹಾಗೆಂದು ಅದು ಉದ್ಧಟತನ ಅಲ್ಲ. ನಮ್ರವಾಗಿಯೂ ಅನ್ಯಾಯ, ಶೋಷಣೆ ವಿರುದ್ಧ ಪ್ರತಿಭಟಿಸಲು ಸಾಧ್ಯವಿದೆ. ಸಹಿಸಿದರೆ ಅದು ಅವಳ ಮೇಲಿನ ದೌರ್ಜನ್ಯ ಎನಿಸುತ್ತದೆ. ಕೌಟುಂಬಿಕ, ಸಾಮಾಜಿಕ ಮಟ್ಟದಲ್ಲಿ ಹೀಗೆ ಪ್ರತಿಭಟನೆಯ ಮನೋಭಾವ ಬೆಳೆಸಿದಾಗ ಅದು ಸಬಲೀಕರಣ. ತಾವು ಧೈರ್ಯವಂತ, ಛಲವಂತ ವ್ಯಕ್ತಿ ಎಂಬುದನ್ನು ಚಿಕ್ಕಂದಿನಿಂದಲೇ ಅವರಲ್ಲಿ ಅರಿವು ಮೂಡಿಸಬೇಕು.

ಕಷ್ಟಕೋಟಲೆಗಳಿಗೆ ಎದೆಗುಂದದೆ, ಯಾರ ನೆರವಿಲ್ಲದೆ ಒಬ್ಬಳೇ ಹೇಗೆ ನಿಭಾಯಿಸಲಿ ಎಂದು ಕಂಗೆಡದೆ ಇರಲು; ಪ್ರಯತ್ನದಿಂದ ಎಲ್ಲವನ್ನೂ ಸಾಧಿಸುವೆ ಎಂಬ ವಿಶ್ವಾಸ ಮೂಡಿಸಬೇಕು. ಸೋಲನ್ನು ಆತ್ಮವಿಶ್ವಾಸದಿಂದ, ಧೈರ್ಯದಿಂದ ಎದುರಿಸುವಂತೆ ಮಹಿಳೆಯರ ಮನೋಭಾವದಲ್ಲೇ ಪರಿವರ್ತನೆ ತರಬೇಕು.

-ತಮ್ಮ ಬಗ್ಗೆಯೇ ಅವರಿಗೆ ಪ್ರೀತಿ, ಗೌರವ ಅಭಿಮಾನ ಮೂಡುವಂತಾಗಬೇಕು. ಶಿಕ್ಷಿತ, ಉತ್ತಮ ಸ್ಥಾನದಲ್ಲಿರುವ ಮಹಿಳೆಯರನ್ನೂ ಕೀಳರಿಮೆ ಕಾಡುತ್ತದೆ. ತಾನು ಯಾರಿಗೂ ಕಡಿಮೆ ಇಲ್ಲ ಎಂಬ ಭಾವನೆ ಎಲ್ಲ ಸ್ತರದ, ಎಲ್ಲ ವಯಸ್ಸಿನ ಮಹಿಳೆಯರಲ್ಲಿ  ಮೂಡುವ ಜಾಗೃತಿ ನಿಜವಾದ ಸಬಲೀಕರಣ.

ಸಬಲೆಯರು ಈಗಲೂ ಎಲ್ಲ ಕ್ಷೇತ್ರಗಳಲ್ಲಿ ಇದ್ದಾರೆ. ಮೊನ್ನೆ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಮಹಿಳಾ ಬೆಟಾಲಿಯನ್‌ ಕಂಡು ಹೆಮ್ಮೆ ಮೂಡಿತು. ಆದರೆ ಆ ಮಟ್ಟದಲ್ಲೂ ಶೋಷಣೆ, ದೌರ್ಜನ್ಯ ನಮ್ಮ ವ್ಯವಸ್ಥೆಯಲ್ಲಿದೆ. ಇಂತಹ ಶೋಷಣೆಯನ್ನು ಪ್ರತಿಭಟಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಸಬಲೀಕರಣ ಯಾವುದೇ ಕಾಯ್ದೆ, ಕಾನೂನು, ಎನ್‌ಜಿಓಗಳ ಕೆಲಸವೆಂದುಕೊಳ್ಳದೆ ತಾಯಿ, ತಂದೆ, ಶಿಕ್ಷಕರು, ಸಮಾಜದ ಎಲ್ಲರೂ ಸಬಲೀಕರಣದಲ್ಲಿ ಪಾಲ್ಗೊಳ್ಳಬೇಕು, ಹೆಣ್ಣುಮಕ್ಕಳಲ್ಲಿ ವಿಶ್ವಾಸ ಮೂಡಿಸಲು ಯತ್ನಿಸಬೇಕು. ಸುಧಾ ಮೂರ್ತಿ ಸಬಲೆ. ಹಾಗೆಯೇ ನಮ್ಮ ಸುತ್ತಮುತ್ತಲಿನ ಎಷ್ಟೋ ತಾಯಂದಿರು ಸಂಸಾರ, ಗಂಡ, ಮಕ್ಕಳನ್ನು ಸರಿದಾರಿಗೆ ಹಚ್ಚುತ್ತಿದ್ದಾರೆ. ಇಂತಹ ಸಬಲೆಯರೂ ಸಹಾಯ ಮಾಡಿದರೆ ಸಬಲೀಕರಣ ಅಸಾಧ್ಯ ಏನಲ್ಲ. ಇನ್ನೊಂದಿಷ್ಟು ವರ್ಷಗಳ ನಂತರವಾದರೂ ಈ ಪ್ರಕ್ರಿಯೆ ಯಶಸ್ವಿಯಾಗುತ್ತದೆ.
-ವೀಣಾ ಶಾಂತೇಶ್ವರ, ಹಿರಿಯ ಸಾಹಿತಿ.

ಸಾಮಾನ್ಯ ಮಹಿಳೆಯರೇ ಸ್ಫೂರ್ತಿ

ಮಹಿಳಾ ಸಬಲೀಕರಣ ಎಂದಾಕ್ಷಣ ಎಲ್ಲರಿಗೂ ಕಣ್ಣ ಮುಂದೆ ಬರುವುದು ನಗರದ ಮಹಿಳೆಯರು ಮಾತ್ರ. ಎಷ್ಟೋ ಹಳ್ಳಿಗಳಲ್ಲಿ ಮಹಿಳೆಯರು ಎಷ್ಟೆಷ್ಟೋ ಕಷ್ಟಗಳನ್ನು ದಾಟಿ ಸಾಧನೆ ಮಾಡಿರುತ್ತಾರೆ. ಆದರೆ ಅವರನ್ನು ಯಾರೂ ಗುರುತಿಸುವುದಿಲ್ಲ. ಸಣ್ಣ ತೊಂದರೆಗಳನ್ನೇ ಮುಂದಿಟ್ಟುಕೊಂಡು ಮಹಿಳಾ ಸಮಾನತೆ, ಸಬಲೀಕರಣ ಎಂದು ಹೋರಾಡುವವರಿಗೇ ಬೆಲೆ ಹೆಚ್ಚು. ಹಳ್ಳಿಯ ಹೆಣ್ಣುಮಕ್ಕಳ ಕಷ್ಟಕ್ಕೆ, ಅವರ ಸಾಧನೆಗೆ ಬೆಂಬಲ ಸಿಕ್ಕರೆ ಅದೇ ಮಹಿಳಾ ಸಬಲೀಕರಣ.

ನನಗೆ ಮಾದರಿ ಅಂದರೆ ಇಂದಿರಾಗಾಂಧಿಯವರು. ಅವರು ಎಷ್ಟೋ ಸಮಸ್ಯೆಗಳನ್ನು ಎದುರಿಸಿ ಅಸಾಮಾನ್ಯ ಮಹಿಳೆ ಎನಿಸಿದವರು. ಇದರ ಹೊರತಾಗಿ ಬೆಳಿಗ್ಗೆಯಿಂದ ರಾತ್ರಿವರೆಗೆ ಮನೆ, ಹೊರಗಿನ ಕೆಲಸ ಮಕ್ಕಳ ಜವಾಬ್ದಾರಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಎಲ್ಲ ಮಹಿಳೆಯರೂ ಒಂದಲ್ಲಾ ಒಂದು ರೀತಿ ಸ್ಫೂರ್ತಿ.
–ಡಾ. ಚೂಡಾಮಣಿ ನಂದಗೋಪಾಲ್‌,ಇತಿಹಾಸ ತಜ್ಞೆ

ಅಂದುಕೊಂಡಂತೆ ಅವಕಾಶಗಳಿಲ್ಲ
ಆರ್ಥಿಕ, ಬೌದ್ಧಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸಂಪೂರ್ಣ ಸ್ವತಂತ್ರ ಚಿಂತನೆಗೆ ಅವಕಾಶವಿದ್ದರೆ ಅಲ್ಲಿ ಸಬಲೀಕರಣ ಆಗಿದೆ ಎನ್ನಬಹುದು. ದುರದೃಷ್ಟವಶಾತ್ ಹಾಗೆ ಇನ್ನೂ ಆಗಿಲ್ಲ.

ಅವಕಾಶಗಳು ಅಂದುಕೊಂಡಂತೆ ಸಿಗುತ್ತಿಲ್ಲ. ಬಹಳ ಹಿಂದೆಗೆ ಹೋಲಿಸಿದರೆ ಬದಲಾವಣೆ ಆಗುತ್ತಿದೆ ಆದರೆ ನಿರೀಕ್ಷಿತ ಮಟ್ಟದಲ್ಲಿ ಅಲ್ಲ. ಇದಕ್ಕೆ ಮಹಿಳೆಯರು ಒಗ್ಗಟ್ಟಾದರೆ ಮಾತ್ರ ಉತ್ತರವಾಗಬಲ್ಲದು. ಮದರ್ ತೆರೇಸಾ, ವೈದೇಹಿ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಹಲವು ಮಹಿಳೆಯರು ನನಗೆ ಮಾದರಿ. ಆದರೆ ಎಷ್ಟೋ ಬಾರಿ ತನ್ನ ಕುಟುಂಬಕ್ಕಾಗಿ ನಿರಂತರ ಹೆಣಗಾಡುವ ಸಾಮಾನ್ಯ ಮಹಿಳೆಯೂ ನನ್ನ ಮೇಲೆ ಪ್ರಭಾವ ಬೀರಿದ್ದಾಳೆ.
–ಭಾಗ್ಯಲಕ್ಷ್ಮಿ, ಉಪನಿರ್ದೇಶಕರು,ಖಜಾನೆ ಇಲಾಖೆ ಬೆಂಗಳೂರು ಗ್ರಾಮಾಂತರ.

ಮಹಿಳೆ ದೇಹವಲ್ಲ, ಜೀವ

ಮಹಿಳೆಯರು ಕೀಳರಿಮೆ ತೊರೆದು ಆತ್ಮಗೌರವ ಬೆಳೆಸಿಕೊಳ್ಳುವುದರ ಜೊತೆಗೆ ತನ್ನ ಅನ್ನವನ್ನು ತಾನೇ ದುಡಿದು ತಿನ್ನುವುದು ಮಹಿಳಾ ಸಬಲೀಕರಣದ ಒಂದು ಭಾಗ. ಮಹಿಳೆ ಕೇವಲ ದೇಹವಲ್ಲ. ಆಕೆಯೊಂದು ಜೀವ. ಅದನ್ನು ಇತರರು ಗೌರವಿಸಬೇಕು. ಮಹಿಳೆಗೂ ಈ ಕುರಿತು ಹೆಮ್ಮೆಯಿರಬೇಕು. ತನಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಮಹಿಳೆಯದ್ದಾಗಿರಬೇಕು.

ಸಾಕಷ್ಟು ಮಹಿಳೆಯರು ನನ್ನ ಜೀವನದ ತಿರುವಿಗೆ ಮಾದರಿಯಾಗಿದ್ದಾರೆ. ನನ್ನನ್ನು ಮೊದಲು ಸೆಳೆದದ್ದು ಅಮ್ಮನ ವ್ಯಕ್ತಿತ್ವ. ಆಕೆಯ ನಂತರ ನಾನು ಹೆಚ್ಚು ಬೆರೆತಿದ್ದು ಕೂಲಿ ಮಾಡುವ ಮತ್ತು ಪೌರಕಾರ್ಮಿಕ ಮಹಿಳೆಯರೊಂದಿಗೆ. ಇವರಿಂದಾಗಿ ಜೀವನದಲ್ಲಿ ಸಾಕಷ್ಟು ಕಲಿತಿದ್ದೇನೆ. ಇವರೊಂದಿಗೆ ಬೆರೆತ ನಂತರ ಬದುಕನ್ನು ಪ್ರೀತಿಸಲು ಆರಂಭಿಸುವುದರ ಜೊತೆಗೆ ಬದುಕು ಎಷ್ಟು ದೊಡ್ಡದು ಎಂಬುದನ್ನು ಅರಿತುಕೊಂಡೆ. ಸಹಬಾಳ್ವೆಯಿಂದ ಬದುಕುವುದನ್ನು ಇವರು ತಿಳಿಸಿಕೊಟ್ಟರು. ಕಡಿಮೆ ಸಂಬಳ ಪಡೆದರೂ ಸರಳತೆಯ ಜೊತೆಗೆ ಸಂತೋಷವಾಗಿ ಬದುಕುವ ಇವರು ನನಗೆ ಪ್ರೇರಣೆಯಾದರು.
– ದು.ಸರಸ್ವತಿ, ಲೇಖಕಿ

ಸಬಲೀಕರಣಕ್ಕೆ ಧಾರಾವಾಹಿ ತೊಡಕು

ಮಹಿಳೆಯರು ಶೈಕ್ಷಣಿಕವಾಗಿ ಸಬಲೀಕರಣಗೊಂಡಿದ್ದರೂ, ಕೌಟುಂಬಿಕ ವ್ಯವಸ್ಥೆಯಲ್ಲಿ ಆಕೆಗಿನ್ನೂ ಸ್ವತಂತ್ರ್ಯ ನಿರ್ಧಾರ ತೆಗೆದುಕೊಳ್ಳುವ ಅವಕಾಶ ದೊರಕಿರುವುದು ಕಡಿಮೆ. ಆಕೆ ಇಂದಿಗೂ ಪುರುಷರ ಅಧೀನಳಾಗಿಯೇ ಇದ್ದಾಳೆ.

ಮಹಿಳೆಯರು ವಿದ್ಯಾವಂತರಾದಂತೆ ವೈಚಾರಿಕ ನಿಲುವಿನ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ. ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಪ್ರಭಾವ ಸಮಾಜದ ಮೇಲೆ ಅತಿಯಾಗಿದೆ. ಆದರೆ  ಧಾರಾವಾಹಿಗಳಲ್ಲಿ ಪ್ರಬಲ ಮಹಿಳಾ ಪಾತ್ರಕ್ಕೆ ಬದಲಾಗಿ ಆಕೆಯನ್ನು ಒಂದು ವಸ್ತುವಾಗಿ ಬಳಸಿಕೊಳ್ಳಲಾಗುತ್ತಿರುವುದು ಕೂಡ ಸಬಲೀಕರಣಕ್ಕೆ ತೊಡಕಾಗಿದೆ. 

ಅನುಪಮಾ ನಿರಂಜನ ಮತ್ತು ಲಲಿತಾನಾಯ್ಕ್‌ ಅವರು ನನಗೆ ಮಾದರಿ. ಅವರ ವೈಚಾರಿಕ ನಿಲುವು ಮತ್ತು ಮಹಿಳಾ ಪರ ನಿಲುವುಗಳು ನನ್ನನ್ನು ಸೆಳೆದಿವೆ. ನಾನು ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿದ್ದರೂ, ಇವರ ಚಿಂತನೆಗಳಿಂದ ಪ್ರಭಾವಿತಳಾಗಿ ಸಾಕಷ್ಟು ಮಹಿಳಾ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದೇನೆ.
– ಪ್ರೊ.ಎನ್‌.ವಿ.ಅಂಬಾಮಣಿ ಮೂರ್ತಿ

ನಿರೂಪಣೆ: ಸುಮಲತಾ ಎನ್‌, ವಿದ್ಯಾಶ್ರೀ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT