ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಶೌಚಾಲಯ ಕಡ್ಡಾಯ

ಸಮಾರಂಭ ಸಂಘಟಕರಿಗೆ ಬಿಬಿಎಂಪಿ ಹಲವು ನಿರ್ಬಂಧ
Last Updated 7 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಭದ್ರತಾ ಠೇವಣಿ ಇಟ್ಟರೆ ಮಾತ್ರ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಸಭೆ–ಸಮಾರಂಭ ನಡೆಸಲು ಅನುಮತಿ ನೀಡಲಾಗುತ್ತದೆ.

ಕಾರ್ಯಕ್ರಮದ ಸ್ಥಳದಲ್ಲಿ ನೆರೆದ ಜನರಿಗೆ ಶೌಚಾಲಯದ ವ್ಯವಸ್ಥೆ ಮಾಡುವ ಜತೆಗೆ ಕಸ ಸಂಗ್ರಹಕ್ಕೆ ಡಬ್ಬಿಗಳನ್ನೂ ಇಡಬೇಕು ಎಂಬ ನಿಯಮ ವಿಧಿಸಲಾಗಿದೆ.

ಕೇಂದ್ರ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಸುತ್ತೋಲೆ ಆಧರಿಸಿ ನಿಯಮಾವಳಿ ರೂಪಿಸಿರುವ ಬಿಬಿಎಂಪಿ ಈ ಸಂಬಂಧ ಆದೇಶವನ್ನು ಹೊರಡಿಸಿದೆ. ‘ಕಸ ನಿರ್ವಹಣೆಯಲ್ಲಿ ಗುಣಮಟ್ಟ ಹಾಗೂ ಏಕವಿಧದ ಕಾರ್ಯಾಚರಣೆ ಪದ್ಧತಿ (ಎಸ್‌ಒಪಿ) ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆಯುಕ್ತ ಜಿ. ಕುಮಾರ್‌ ನಾಯಕ್‌ ಹೇಳುತ್ತಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಸಭೆ–ಸಮಾರಂಭಗಳು ನಡೆದಾಗ ಆಹಾರ ತ್ಯಾಜ್ಯ, ನೀರಿನ ಬಾಟಲಿ, ಹೂವಿನ ತ್ಯಾಜ್ಯ, ಪ್ಯಾಕಿಂಗ್‌ಗೆ ಬಳಸಿದ ಸಾಮಗ್ರಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಸಮಾರಂಭ ನಡೆಸಲು ತೋರುವ ಉತ್ಸಾಹವನ್ನು ಸಂಘಟಕರು ಸ್ವಚ್ಛತೆ ಕಾಪಾಡುವಲ್ಲಿ ತೋರುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.

‘ಸ್ವಚ್ಛತೆ ಕಾಪಾಡುವಲ್ಲಿ ಸಂಘಟಕರು ಅನಾದರ ತೋರುತ್ತಿರುವುದನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಸ್ವಾತಂತ್ರ್ಯ ಉದ್ಯಾನ, ಅರಮನೆ ಮೈದಾನ, ನಗರದ ವಿವಿಧ ಕ್ರೀಡಾಂಗಣ ಮತ್ತು ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಭೆ–ಸಮಾರಂಭ ನಡೆಸಲು ಮಾರ್ಗಸೂಚಿ ರೂಪಿಸಲಾಗಿದೆ’ ಎಂದು ತಿಳಿಸುತ್ತಾರೆ.

ಬಿಬಿಎಂಪಿ ವಿಧಿಸಿದ ನಿಯಮಗಳು
*ಸಭೆ–ಸಮಾರಂಭ ಸಂಘಟಕರೇ ಸ್ವಚ್ಛತೆ ವ್ಯವಸ್ಥೆ ನಿರ್ವಹಣೆ ಹೊಣೆ  ಹೊರಬೇಕು.
*ಸಭೆಯಲ್ಲಿ ನೆರೆಯುವ ಜನರ ಸಂಖ್ಯೆಗೆ ಅನುಗುಣವಾಗಿ ಬಿಬಿಎಂಪಿಯಲ್ಲಿ ಭದ್ರತಾ ಠೇವಣಿ ಇಡಬೇಕು.
*ಭದ್ರತಾ ಠೇವಣಿಯಲ್ಲಿ ಶೇ 10ರಷ್ಟು ಮೊತ್ತವನ್ನು ನಿರ್ವಹಣಾ ವೆಚ್ಚವಾಗಿ ಟ್ಟುಕೊಂಡು ಮಿಕ್ಕ ಮೊತ್ತವನ್ನು ಸ್ವಚ್ಛತೆ ನಿರ್ವಹಣೆ ಖಚಿತಪಡಿಸಿಕೊಂಡು ವಾಪಸ್‌ ನೀಡಲಾಗುತ್ತದೆ.
*ಕಾರ್ಯಕ್ರಮ ನಡೆಯುವ 15 ದಿನಗಳ ಮುಂಚೆಯೇ ಸಂಘಟಕರು ಅನುಮತಿ ಕೋರಿ ಸಂಬಂಧಿಸಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿ 7 ದಿನಗಳಲ್ಲಿ ಅನುಮತಿ ನೀಡಲಾಗುತ್ತದೆ. ಒಂದುವೇಳೆ ಅನುಮತಿ ನೀಡದಿದ್ದರೆ ಕಾರಣಸಹಿತ ಅದರ ಮಾಹಿತಿಯನ್ನೂ ಕೊಡಲಾಗುತ್ತದೆ.
*ಕಸ ವಿಂಗಡಣೆ ಮತ್ತು ವಿಲೇವಾರಿ ಬಗ್ಗೆ ಅರ್ಜಿ ಸಲ್ಲಿಸುವಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡಬೇಕು.
*ಕ್ರಿಯಾ ಯೋಜನೆಯಂತೆ ಕಸ ವಿಲೇವಾರಿ ಮಾಡಿದ್ದು ಖಚಿತಪಟ್ಟರೆ ಭದ್ರತಾ ಠೇವಣಿಯನ್ನು ಏಳು  ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ.
*ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಂಘಟಕರು ಕಸ ಸಂಗ್ರಹಣೆಗೆ ಡಬ್ಬಿಗಳನ್ನು ಇಡಬೇಕು. ಅಲ್ಲದೆ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಂಗ್ರಹಿಸಿದ ತ್ಯಾಜ್ಯ ಗಾಳಿಗೆ ಹಾರಿ ಹೋಗದಂತೆ ಡಬ್ಬಿಗಳಿಗೆ ಮೇಲು ಹೊದಿಕೆ ಹಾಕಬೇಕು.
*ಕಾರ್ಯಕ್ರಮ ಮುಗಿದ 2 ಗಂಟೆಗಳೊಳಗೆ ಆ ತ್ಯಾಜ್ಯವನ್ನು ಸಂಘಟಕರೇ ತಮ್ಮ ಖರ್ಚಿನಲ್ಲಿ ಹತ್ತಿರದ ಬಿಬಿಎಂಪಿ ತ್ಯಾಜ್ಯ ಘಟಕಕ್ಕೆ ಸಾಗಿಸಬೇಕು. ಕಾರ್ಯಕ್ರಮ ಮುಗಿದ ಬಳಿಕ ಆ ಸ್ಥಳ ಸ್ವಚ್ಛವಾಗಿರಬೇಕು. ಇಲ್ಲದಿದ್ದರೆ ಸ್ವಚ್ಛತಾ ವೆಚ್ಚವಾಗಿ ಭದ್ರತಾ ಠೇವಣಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
*ಕಾರ್ಯಕ್ರಮ ನಡೆದ ಸ್ಥಳದಲ್ಲಿ ಪ್ರತಿ 500 ಜನರಿಗೆ ಒಂದರಂತೆ ಶೌಚಾಲಯ ಸೌಲಭ್ಯ ಕಲ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT