ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ನೀತಿ ಬೇಕು

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೇಳಿದಂತೆ ವಿದೇಶಿ ಬ್ಯಾಂಕ್‌ಗಳಲ್ಲಿ ಬಚ್ಚಿಡಲಾಗಿರುವ ಕಪ್ಪುಹಣದ ಮೊತ್ತ 25 ಸಾವಿರ ಕೋಟಿ ಡಾಲರುಗಳು (ಸುಮಾರು ₨ 15 ಲಕ್ಷ ಕೋಟಿ). ಆದರೆ ಬುಧವಾರ ಸರ್ಕಾರ ಸುಪ್ರೀಂಕೋರ್ಟ್‌ಗೆ ಒಪ್ಪಿಸಿರುವ ಪಟ್ಟಿಯಲ್ಲಿ­ರುವ ಎಲ್ಲರಿಂದಲೂ ಕಪ್ಪುಹಣವನ್ನು ದಂಡಸಮೇತ ವಸೂಲು ಮಾಡಿದರೂ ಅದರ ಒಟ್ಟು ಮೊತ್ತ ₨  3,000 ಕೋಟಿ  ದಾಟುವುದಿಲ್ಲ ಎಂದು ಮಾಧ್ಯಮ ವರದಿ­ಗಳು ಹೇಳುತ್ತಿವೆ.

ಸದ್ಯ ನ್ಯಾಯಪೀಠಕ್ಕೆ ಒಪ್ಪಿಸಲಾಗಿರುವ ಪಟ್ಟಿ, ಕಪ್ಪು­ಹಣವನ್ನೇ ಚುನಾವಣಾ ವಿಷಯವನ್ನಾಗಿ ಪ್ರತಿಪಾದಿಸಿದ್ದ ಆಡಳಿತಾರೂಢ ಬಿಜೆಪಿಯ ಸಾಧನೆಯೇನೂ ಇಲ್ಲ. ಇದು ಮೂರು ವರ್ಷಗಳಿಂದ ಸರ್ಕಾರದ ಬಳಿಯೇ ಇತ್ತು. ಇದನ್ನು ಕಪ್ಪು ಹಣದ ಕುರಿತು ತನಿಖೆ ನಡೆಸುತ್ತಿರುವ ಎಂ.ಬಿ.­ಷಾ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಈ ಮೊದಲೇ ಕೊಡಲಾಗಿತ್ತು. ಈ ಬೆಳವಣಿಗೆಗಳನ್ನು ಕಂಡಾಗ ಕಪ್ಪುಹಣದ ಬಗ್ಗೆ ಮಾತನಾಡುವುದು ರಾಜ-­ಕೀಯ ಪಕ್ಷಗಳ ಮಟ್ಟಿಗೆ ಒಂದು ಷೋಕಿಯೇ ಹೊರತು ಆರ್ಥಿಕ ಅಪರಾಧ­ಗಳನ್ನು ತಡೆಯುವ ಯಾವ ಉದ್ದೇಶವೂ ಅವಕ್ಕೆ  ಇರುವಂತಿಲ್ಲ ಎನಿಸದಿರದು.

ನ್ಯಾಯಾಲಯಕ್ಕೆ ಒಪ್ಪಿಸಲಾದ ಪಟ್ಟಿಯಲ್ಲಿರುವ ಅನೇಕರು ಈಗಾಗಲೇ ದಂಡ ಪಾವತಿಸಿದ್ದಾರೆ. ಅವರನ್ನು ತನಿಖೆಯ ಪರಿಧಿಯೊಳಕ್ಕೆ ತರುವುದು ಸಾಧ್ಯವಿಲ್ಲ. ಉಳಿದವರು ಕೂಡಿಟ್ಟಿರುವ ಮೊತ್ತ ತಲಾ ₨ 50 ಕೋಟಿಯಿಂದ ₨ 60 ಕೋಟಿ  ಆಸುಪಾಸಿನಲ್ಲಿದೆ. ಈ ಪಟ್ಟಿಯನ್ನು ಎಚ್‌ಎಸ್‌ಬಿಸಿಯಿಂದ ಸರ್ಕಾರ ಅಧಿಕೃತ­ವಾಗಿ ಪಡೆದಿಲ್ಲ. ಈ ಮಾಹಿತಿ ಫ್ರಾನ್ಸ್ ಸರ್ಕಾರದ ಕೈತಲುಪಿತ್ತು. ಅದು ಭಾರತ ಸರ್ಕಾರದೊಂದಿಗೆ ಹಂಚಿಕೊಂಡಿದೆಯಷ್ಟೆ.

ಕಪ್ಪುಹಣದ ಕುರಿತಂತೆ ಬಿಜೆಪಿಯೂ ಸೇರಿದಂತೆ ರಾಜಕೀಯ ಪಕ್ಷಗಳು ಬಹಿ­ರಂಗವಾಗಿ ಆಡುವ ಮಾತಿಗೂ ಅವುಗಳ ನಿಜ ನಿಲುವಿಗೂ ಅಜಗಜಾಂತ­ರ­ವಿದೆ. ಬಿಜೆಪಿಯ ಮಟ್ಟಿಗೆ ವಿದೇಶಗಳಲ್ಲಿರುವ ಕಪ್ಪುಹಣವೇ ದೊಡ್ಡ ವಿಷಯ. ಈ ವಿಷಯಕ್ಕೊಂದು ಹುಸಿ ವರ್ಚಸ್ಸು ಸಹ ಪ್ರಾಪ್ತವಾಗಿದೆ.  ಈ ಬಗ್ಗೆ ಕಳೆದ ಹಲವು ವರ್ಷಗಳಿಂದ ಬಿಸಿಯೇರಿದ ಚರ್ಚೆಗಳು ನಡೆಯುತ್ತಿರುವ ಸಂದರ್ಭ­ದಲ್ಲಿ ಭಾರತಕ್ಕೆ ಭಾರೀ ಪ್ರಮಾಣ ಚಿನ್ನ ಆಮದಾಯಿತು. ಇದು ವಿದೇಶ­ದಲ್ಲಿದ್ದ ಭಾರತೀಯರ ಕಪ್ಪುಹಣ ದೇಶಕ್ಕೆ ಬಂದ ಬಗೆ ಎಂದು ಹಲವು ತಜ್ಞರು ಹೇಳಿದರಾದರೂ ಸರ್ಕಾರವೇನೂ ಎಚ್ಚೆತ್ತುಕೊಂಡಿರಲಿಲ್ಲ.

ಕೃಷಿಯಿಂದ ಆರಂಭಿಸಿ ಭೂಮಿಯ ತನಕ ಭಾರತದಲ್ಲೇ ಆಗಿರುವ ಬೇನಾಮಿ ಹೂಡಿಕೆಗಳ ಕುರಿತು ಯಾವ ರಾಜಕೀಯ ಪಕ್ಷವೂ ಮಾತನಾಡುತ್ತಿಲ್ಲ. ವಿದೇಶಗಳಲ್ಲಿರುವ ಕಪ್ಪುಹಣಕ್ಕಿಂತ ಹಲವು ಪಟ್ಟು ಹೆಚ್ಚಿರುವ ದೇಶಿ ಕಪ್ಪು ಹಣವನ್ನು ಬಯಲಿ­ಗೆಳೆಯಬೇಕಾಗಿರುವುದು ಈ ಹೊತ್ತಿನ ಅಗತ್ಯ. ಕಾನೂನಿನ ತಾಂತ್ರಿಕ ವ್ಯಾಖ್ಯೆಯ ಒಳಗಷ್ಟೇ ಕಪ್ಪುಹಣವಾಗಿರುವ ಮೊತ್ತ ದೇಶದ ಒಳಗೂ ಹೊರಗೂ ಇರಬಹುದು. ಇದನ್ನು ಸರಿಪಡಿಸುವುದಕ್ಕೆ ತೆರಿಗೆ ಸುಧಾರಣೆಗಳ ಅಗತ್ಯ­ವಿದೆ.

ಕಪ್ಪು­ಹಣದ ಬೇಟೆಯೆಂದರೆ ಸಿನಿಮೀಯ ಕಳ್ಳ–ಪೊಲೀಸ್ ಆಟ­ವಲ್ಲ. ಈ ಬಗೆಯ ಮಾತುಗಳು ಚುನಾವಣಾ ಪ್ರಚಾರಗಳ ಸಂದರ್ಭದಲ್ಲಿ ಚೆನ್ನಾಗಿ ಕಾಣಿಸ­ಬಹುದು. ಆದರೆ ಕಪ್ಪುಹಣದ ಸಮಸ್ಯೆಯ ಪರಿಹಾರಕ್ಕೆ ವಿದೇಶಾಂಗ ವ್ಯವಹಾರದಿಂದ ಆರಂಭಿಸಿ ಆಂತರಿಕ ಆರ್ಥಿಕ ಶಿಸ್ತಿನ ತನಕದ ಅನೇಕ ಕ್ರಮಗಳು ಅಗತ್ಯ. ಇವೆಲ್ಲವೂ ಒಳಗೊಂಡಿರುವ ಒಂದು ಸಮಗ್ರ ನೀತಿಯಷ್ಟೇ ಈ ಸಮಸ್ಯೆ­ಯನ್ನು ಪರಿಹರಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT