ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಯೋಜನಾ ಪ್ರಾಧಿಕಾರ ಸ್ಥಾಪಿಸಿ

ಬೆಂಗಳೂರು ಅಭಿವೃದ್ಧಿ ದಿಕ್ಸೂಚಿ ಸಂವಾದದಲ್ಲಿ ಅಶ್ವಿನ್‌ ಮಹೇಶ್‌ ಒತ್ತಾಯ
Last Updated 8 ಅಕ್ಟೋಬರ್ 2015, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಮೂಲಸೌಕರ್ಯಕ್ಕೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಸಮಗ್ರ ಯೋಜನೆ ರೂಪಿಸುವ ಪ್ರಾಧಿಕಾರವನ್ನು ಸರ್ಕಾರ ರಚಿಸಬೇಕು’ ಎಂದು ನಗರ ಯೋಜನಾ ತಜ್ಞ ಅಶ್ವಿನ್‌ ಮಹೇಶ್ ಹೇಳಿದರು.

ಮೇಯರ್, ಉಪ ಮೇಯರ್‌, ರಾಜಾಜಿನಗರ  ಮತ್ತು ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ಸದಸ್ಯರನ್ನು ಅಭಿನಂದಿಸಲು, ಅಭಿವೃದ್ಧಿ ವೇದಿಕೆ ಮತ್ತು ರಂಗೋತ್ರಿ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ‘ಬೆಂಗಳೂರು ಅಭಿವೃದ್ಧಿ ದಿಕ್ಸೂಚಿ ಸಂವಾದ’ದಲ್ಲಿ ಅವರು ಮಾತನಾಡಿದರು.

‘ಬಿಡಿಎ, ಜಲಮಂಡಳಿ, ಬೆಸ್ಕಾಂ ಹೀಗೆ ಒಂದೊಂದು ಇಲಾಖೆಗಳು ತಮಗೆ ತೋಚಿದಂತೆ ಯೋಜನೆಗಳನ್ನು ರೂಪಿಸುತ್ತಿರುವ ಪರಿಣಾಮ ನಗರದ ಮೂಲಸೌಕರ್ಯಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್‌ ಮಾತನಾಡಿ, ‘ನಗರ  ಬೆಳೆಯುತ್ತಿರುವ ವೇಗದಲ್ಲೇ ಸಮಸ್ಯೆಗಳು ಮತ್ತು ಸವಾಲುಗಳು ಹೆಚ್ಚುತ್ತಿವೆ. ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ’ ಎಂದರು. ‘ಪಾಲಿಕೆಯಲ್ಲಿ ಪಾರದರ್ಶಕತೆಯ ಕೊರತೆ ತುಂಬಾ ಇದೆ. ವಾರ್ಡ್‌ ಸಮಿತಿಗಳು ಪಕ್ಷದ ಕಾರ್ಯಕರ್ತರಿಗೆ ಸೀಮಿತವಾಗಬಾರದು.

ಅವುಗಳಲ್ಲಿ ಶೇ 50 ರಷ್ಟು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿಕೊಳ್ಳಬೇಕು. ಅಭಿವೃದ್ಧಿ ಯೋಜನೆಗಳಲ್ಲಿ ನಾಗರಿಕರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು’ ಎಂದು ಹೇಳಿದರು. ಮೇಯರ್‌ ಬಿ.ಎನ್.ಮಂಜುನಾಥ ರೆಡ್ಡಿ ಮಾತನಾಡಿ, ‘ಸಣ್ಣ ಸರ್ಕಾರದಂತಿರುವ ಪಾಲಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಅನುದಾನದ ಅಗತ್ಯವಿದೆ. ಸಂಘ, ಸಂಸ್ಥೆಗಳು ಕೂಡ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ‘ಈ ಹಿಂದೆ ವಾರ್ಡ್‌ಗಳ ಸಂಖ್ಯೆಗಳನ್ನು ಹೆಚ್ಚಿಸುವಾಗ ವೈಜ್ಞಾನಿಕ ಸಲಹೆಗಳನ್ನು ಪಡೆಯದ ಪರಿಣಾಮ ಇವತ್ತು ತ್ಯಾಜ್ಯ ಮತ್ತು ಕಸದ ಸಮಸ್ಯೆಗಳು ತಲೆದೋರುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಈಗಲೂ ಕಾಲ ಮಿಂಚಿಲ್ಲ’ ಎಂದರು.

‘ಕಸ ಸಂಗ್ರಹಕ್ಕೆ ವಾರ್ಡ್‌ನ ಜನಸಂಖ್ಯೆ ಮತ್ತು ರಸ್ತೆ ಪ್ರಮಾಣಕ್ಕೆ ಅನುಗುಣವಾಗಿ ಪೌರ ಕಾರ್ಮಿಕರು, ಲಾರಿಗಳ ನಿಯೋಜನೆ ಮಾಡುವುದರಿಂದ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸಬಹುದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ, ‘ನಗರದ 25–30 ಲಕ್ಷ ನಾಗರಿಕರು ಮತ್ತು ಪ್ರತಿದಿನ ಹೊರಗಡೆಯಿಂದ ಬರುವ ಸುಮಾರು 10 ಲಕ್ಷ ಜನರು ಕೆಲಸ ನಿಮಿತ್ತ ನಗರದ ರಸ್ತೆಯ ಮೇಲೆ 6–7 ಗಂಟೆ ಸಮಯ ಕಳೆಯುತ್ತಾರೆ.

ಆದ್ದರಿಂದ, ಖಾಸಗಿಯವರ ಸಹಭಾಗಿತ್ವದಲ್ಲಿ ನಗರದಾದ್ಯಂತ ಐದು ಸಾವಿರ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಅಗತ್ಯವಿದೆ’ ಎಂದು ಹೇಳಿದರು.  ನಗರದ ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ.ಎಸ್‌.ಸಿ.ನಾಗೇಂದ್ರ ಸ್ವಾಮಿ ಮಾತನಾಡಿ, ‘ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ.

ದುರಂತವೆಂದರೆ, ಎಲ್ಲಾ ಸರ್ಕಾರಗಳು ಈ ವಿಚಾರದಲ್ಲಿ ವಿಫಲವಾಗಿವೆ. ಹೀಗಾಗಿ ಇವತ್ತು ಜನರು ಶೇ 80 ರಷ್ಟು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ’ ಎಂದು ತಿಳಿಸಿದರು. ರಾಜಾಜಿನಗರ ಮತ್ತು ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ಸದಸ್ಯರನ್ನು ಸನ್ಮಾನಿಸಲಾಯಿತು.

*
ಅಭಿವೃದ್ಧಿ ದೃಷ್ಟಿಯಿಂದ ನೋಡಿದಾಗ ಸದ್ಯ, ಮೇಯರ್‌ಗೆ ನಿಗದಿ ಪಡಿಸಿರುವ ಒಂದು ವರ್ಷದ ಅಧಿಕಾರ ಅವಧಿ ಸಾಲದು. ಅದನ್ನು ಮೂರು ಅಥವಾ ಐದು ವರ್ಷಗಳಿಗೆ ಹೆಚ್ಚಿಸಬೇಕು.
-ಅಶ್ವಿನ್‌ ಮಹೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT