ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಸುಧಾರಣಾ ನೀತಿಗೆ ಒತ್ತು: ಹಿಲರಿ

ಅಧ್ಯಕ್ಷೀಯ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದಿಂದ ನಾಮಕರಣ; ಭಾರಿ ಬೆಂಬಲಿಗರ ಎದುರು ಮೊದಲ ಭಾಷಣ
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಫಿಲಡೆಲ್ಫಿಯಾ (ಪಿಟಿಐ): ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದಿಂದ ನಾಮನಿರ್ದೇಶನವನ್ನು ಅಧಿಕೃತವಾಗಿ ಸ್ವೀಕರಿಸಿದ ನಂತರ ಹಿಲರಿ ಕ್ಲಿಂಟನ್ ಅವರು ಮಾಡಿದ ಭಾಷಣದಲ್ಲಿ ಹಲವು ಸುಧಾರಣಾ ನೀತಿಗಳನ್ನು ಪ್ರಸ್ತಾಪಿಸಿದರು.

ಇಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ನಾಮನಿರ್ದೇಶನವನ್ನು ಒಪ್ಪಿಕೊಂಡ ಬಳಿಕ ಪಕ್ಷದ ಮುಖಂಡರನ್ನು ಉದ್ದೇಶಿಸಿ ಸುದೀರ್ಘವಾಗಿ ಮಾತನಾಡಿದ ಅವರು, ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆ ಬಗ್ಗೆ ತಮ್ಮ ಚಿಂತನೆ ಹಾಗೂ ಯೋಜನೆಗಳನ್ನು ಮುಂದಿಟ್ಟರು.

ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ ಒಡೆದು ಆಳುವ ನೀತಿಗಳ ವಿರುದ್ಧ ಅಮೆರಿಕನ್ನರು  ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹಿಲರಿ ಕರೆ ನೀಡಿದರು.

ಎಲ್ಲ ಅಮೆರಿಕನ್ನರಿಗೂ ಉದ್ಯೋಗ ದೊರಕಿಸುವುದು ಹಾಗೂ ದೇಶದ ಆರ್ಥಿಕತೆಗೆ ನೆರವಾಗಿರುವ ದಾಖಲೆ ಯಿಲ್ಲದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಪೌರತ್ವ ಪಡೆಯುವ ಅವಕಾಶ ಕಲ್ಪಿಸುವ ಭರವಸೆಯನ್ನು ಅವರು ನೀಡಿದರು.

‘ವಿನಮ್ರತೆ, ದೃಢ ನಿರ್ಧಾರ ಹಾಗೂ ಅಗಾಧ ವಿಶ್ವಾಸದಿಂದ ಈ ಆಹ್ವಾನವನ್ನು ಒಪ್ಪಿಕೊಳ್ಳುತ್ತಿದ್ದೇನೆ’ ಎಂದು ಹಿಲರಿ ಘೋಷಿಸಿದಾಗ ವೇಲ್ಸ್ ಫರ್ಗೊ ಕೇಂದ್ರದಲ್ಲಿ ನೆರೆರಿದ್ದ ಪಕ್ಷದ ಮುಖಂಡರು, ಬೆಂಬಲಿಗರು ಚೆಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

‘ಟ್ರಂಪ್ ಅವರು ರಿಪಬ್ಲಿಕನ್ ಪಕ್ಷವನ್ನು ಅಮೆರಿಕದಿಂದ ಬಹುದೂರ ಕೊಂಡೊಯ್ದಿದ್ದಾರೆ. ಅವರ ಅನಿಯ ಮಿತ ಭರವಸೆಗಳು ಅಪಾಯ ಒಡ್ಡುವ ಸಾಧ್ಯತೆಗಳೇ ಹೆಚ್ಚು. ಭವಿಷ್ಯವನ್ನು ಭಯದಿಂದ ನೋಡುವುದು, ಪರ ಸ್ಪರರು ಭಯದಿಂದ ಬದುಕುವುದನ್ನು ಅವರು ಬಯಸುತ್ತಿದ್ದಾರೆ’ ಎಂದು ಹಿಲರಿ ವ್ಯಂಗ್ಯವಾಡಿದರು.

ಸಮಗ್ರ ವಲಸೆ ನೀತಿ: ‘ಯಾವುದೇ ಧರ್ಮವನ್ನು ನಾವು ನಿಷೇಧಿಸುವುದಿಲ್ಲ. ಎಲ್ಲ ಅಮೆರಿಕನ್ನರ ಜತೆಯಾಗಿ ಕೆಲಸ ಮಾಡುತ್ತೇವೆ. ಭಯೋತ್ಪಾದನೆ ವಿರುದ್ಧ ಮಾತ್ರವೇ ನಮ್ಮ ಹೋರಾಟ’ ಎಂದು ಹಿಲರಿ ಸ್ಪಷ್ಟಪಡಿಸಿದ್ದಾರೆ.

ದೇಶದ ವಲಸಿಗರನ್ನು ಹೊರದಬ್ಬು ವುದು ಮಾನವೀಯತೆ ಅಲ್ಲ. ಸಮಗ್ರ ವಲಸೆ ಸುಧಾರಣೆ ಜಾರಿಗೊಳಿಸುವ ಮೂಲಕ ಆರ್ಥಿಕತೆ ಬಲಪಡಿಸುವುದು ಮತ್ತು ಅವರ ಕುಟುಂಬ ಜತೆಯಾಗಿರುವಂತೆ ನೋಡಿಕೊಳ್ಳುವ ಭರವಸೆಯನ್ನೂ ಹಿಲರಿ ನೀಡಿದರು. 

ಟ್ರಂಪ್ ಅಮೆರಿಕನ್ ಅಲ್ಲ: ‘ಟ್ರಂಪ್ ಅಮೆರಿಕಕ್ಕೆ ಅರ್ಹ ವ್ಯಕ್ತಿ ಅಲ್ಲ. ಅವರ ಟೈಗಳು ಚೀನಾದಲ್ಲಿ, ಸೂಟ್‌ಗಳು ಮಿಚಿಗನ್ ಬದಲಾಗಿ ಮೆಕ್ಸಿಕೋದಲ್ಲಿ ಹಾಗೂ ಅವರ ಫೋಟೊ ಫ್ರೇಮ್‌ಗಳು ಭಾರತ ತಯಾರಾಗುತ್ತವೆ. ಅಮೆರಿಕಕ್ಕೆ ಆದ್ಯತೆ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿಯೇ ಇಲ್ಲ’ ಎಂದು ಹಿಲರಿ ಟೀಕಿಸಿದರು.

ಟ್ರಂಪ್ ಟೀಕೆ: ಹಿಲರಿ ಕ್ಲಿಂಟನ್ ಅವರ ನಾಮನಿರ್ದೇಶನ ಸ್ವೀಕಾರ ಸಮಾರಂಭದ ಭಾಷಣವನ್ನು ರಿಪಬ್ಲಿಕನ್‌ ಪಕ್ಷದ ನಾಮನಿರ್ದೇಶಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

ಹಿಲರಿ ದೂರದೃಷ್ಟಿಯನ್ನು ಟೀಕಿಸಿದ ಟ್ರಂಪ್,  ಅವರು ಉದ್ಯೋಗ ಹಾಗೂ ಸುರಕ್ಷತೆಯಿಲ್ಲದ, ‘ಗಡಿಗಳಿಲ್ಲದ ಜಗತ್ತನ್ನು’ ಕಲ್ಪಿಸಿಕೊಂಡಿದ್ದಾರೆ ಎಂದಿ ದ್ದಾರೆ.   ಇಸ್ಲಾಂ ಮೂಲಭೂತವಾದದ ಬಗ್ಗೆ ಹಿಲರಿ ಅವರು ಎಲ್ಲಿಯೂ ಪ್ರಸ್ತಾಪಿ ಸಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ.

‘ನಮ್ಮ ಜೀವನವು ಇಸ್ಲಾಂ ಮೂಲಭೂತವಾದದ ಭೀತಿಯಲ್ಲಿ ನಡೆಯುತ್ತಿದೆ. ಈ ಮಧ್ಯೆ ನಿರಾಶ್ರಿತರ ಪ್ರಮಾಣವನ್ನು ಶೇ 550ರಷ್ಟು ಹೆಚ್ಚಿಸುವ ಆಲೋಚನೆ ಹೊಂದಿರುವುದು ದೇಶವನ್ನು ಅಪಾಯಕ್ಕೆ ತಳ್ಳುತ್ತದೆ. ಹಿಲರಿ ನಿಜಕ್ಕೂ ದೇಶವನ್ನು ಮುನ್ನಡೆಸಲು ಅರ್ಹ ವ್ಯಕ್ತಿ ಅಲ್ಲ’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ಹಿಲರಿಯಿಂದ ವಾಲ್‌ಸ್ಟ್ರೀಟ್ ಸುಧಾರಣೆ ಸಾಧ್ಯವಿಲ್ಲ. ಹಿಲರಿಗಿಂತ ಕೆಟ್ಟ ತೀರ್ಪು ಕೈಗೊಳ್ಳುವವರು ಮತ್ಯಾರೂ ಇರಲಿಕ್ಕಿಲ್ಲ. ಅವರು ಎಲ್ಲಿಯೇ ಹೋದರೂ ಭ್ರಷ್ಟಾಚಾರ ಹಾಗೂ ವಿನಾಶಗಳು ಅವರನ್ನು ಹಿಂಬಾಲಿ ಸುತ್ತವೆ’ ಎಂದು ಟ್ರಂಪ್ ನುಡಿದಿದ್ದಾರೆ.

ಹಿಲರಿಗೆ ಸಂಸದೆಯರ ಬೆಂಬಲ: ಒಬಾಮ ಅವರ ಉತ್ತರಾಧಿಕಾರಿಯಾಗಲು ಹಿಲರಿ ಅರ್ಹ ವ್ಯಕ್ತಿ ಎಂದು ಕರೆದಿರುವ ಡೆಮಾಕ್ರಟಿಕ್ ಪಕ್ಷದ ಮಹಿಳಾ ಸಂಸದರು, ಅವರನ್ನು ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲು ಅಮೆರಿಕ ಸಜ್ಜಾಗಿದೆ ಎಂದಿದ್ದಾರೆ.

ಸಂಭ್ರಮದ ಮಧ್ಯೆ ಪ್ರತಿಭಟನೆ
ಹಿಲರಿ ಕ್ಲಿಂಟನ್ ತಮ್ಮ ಭಾಷಣದ ವೇಳೆ ಚಿಕ್ಕ ಪ್ರತಿಭಟನೆಯನ್ನೂ ಎದುರಿಸಬೇಕಾಯಿತು.ಪ್ರತಿಭಟನಾಕಾರ ಮಾತಿಗೆ ಹಿಲರಿ ಕಿವಿಗೊಡಲಿಲ್ಲ.

ಹೀಗಾಗಿ ಸಮಾವೇಶ ಕೇಂದ್ರದಲ್ಲಿ ಘೋಷಣೆ ಕೂಗಲು ಆರಂಭಿಸಿದರ ಪ್ರತಿಭಟನಾಕಾರರಿಗೆ ಪ್ರತಿಯಾಗಿ ಹಿಲರಿ ಬೆಂಬಲಿಗರು ‘ಹಿಲರಿ.. ಹಿಲರಿ..’ ಎಂದು ಘೋಷಣೆ ಕೂಗಿ ವಿರೋಧಿಗಳ ದನಿ ಅಡಗಿಸಿದರು.  ಬರ್ನಿ ಸ್ಯಾಂಡರ್ಸ್ ಅವರ ಬೆಂಬಲಿಗರಾಗಿದ್ದ ಪ್ರತಿಭಟನಾಕಾರರು ‘ಸಾಕೇ ಸಾಕು’ ಎಂಬ ಬರಹ ಇರುವ ಹಸಿರು ಟೀ ಶರ್ಟ್ ಧರಿಸಿದ್ದರು.

ಮುಖ್ಯಾಂಶಗಳು
*ಎಲ್ಲರಿಗೂ ಉದ್ಯೋಗ
* ಸಮಗ್ರ ವಲಸೆ ನೀತಿ
* ವಲಸೆ ಕಾರ್ಮಿಕರಿಗೆ ಪೌರತ್ವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT