ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತ್ವ ಸಂಬಂಧ ಸಾರುವ ಗೀತೆ

ಚರ್ಚೆ
Last Updated 19 ಜನವರಿ 2015, 19:30 IST
ಅಕ್ಷರ ಗಾತ್ರ

ಭಗವದ್ಗೀತೆ ಭರತ­ಖಂಡದ (ಏಕೈಕ) ಧರ್ಮ­­ಗ್ರಂಥವಾಗಬೇಕೆಂಬ ಹೇಳಿಕೆ­ಯಲ್ಲಿ ತಪ್ಪೇನಿದೆ? ಹಾಗೆಂ­ದರೆ, ಕುರಾನ್‌, ಬೈಬಲ್‌ ಮುಂತಾದವುಗಳಿಗೂ ಆ ಸ್ಥಾನ ಸಿಗ­ಬೇಕೆಂಬ ವಾದ ಏಳ­ಬಹುದು, ನಿಜ. ಆದರೆ ನಾವು ನೆನ­ಪಿಡಬೇಕು: ಅವು­ಗಳಿಗೆ ಬೇರೆ ಬೇರೆ ದೇಶ­ಗ­ಳಿವೆ, ಗೀತೆಗಿಲ್ಲ! (ಅನ್ಯದೇಶಗಳಿಗೂ ಗೀತಾ ವಿಚಾರ­ಗಳು ಅನುಸರಣೀಯ).

ಆದ್ದ­ರಿಂದ, ಗೀತೆ  ಭಾರತಕ್ಕೆ ಅತ್ಯಗತ್ಯವಾದ, ಶ್ರೇಯ­ಸ್ಕರ­ವಾದ ಗ್ರಂಥ; ಹಿಂದೂಧರ್ಮದ–ವೈದಿಕ ಧರ್ಮವಲ್ಲ– ಪ್ರಮಾಣಗ್ರಂಥ. ‘ಸಮಸ್ತ ವೇದಾರ್ಥ ಸಾರ­ಸಂಗ್ರಹ­ಭೂತಂ’ ಎಂಬುದು ಗೀತೆಯನ್ನು ಕುರಿತ ಶಂಕರಭಗವತ್ಪಾದರ ಉಕ್ತಿ; ಅದಕ್ಕೇ ಪೂರಕವಾಗಿ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಉಪನಿಷತ್ತುಗಳ ವ್ಯಾಖ್ಯಾನ ಗೀತೆ; ಉಪನಿಷತ್ತುಗಳು ಭಾರತದ ಬೈಬಲ್‌’.

ಗೀತೆಯ ಬಗೆಗಿನ ಕೆಲವು ಆರೋಪಗಳನ್ನು ಗಮನಿಸಬಹುದು: ಅದು ಯುದ್ಧವನ್ನು– ಹಿಂಸೆ­ಯನ್ನು– ಬೋಧಿಸುತ್ತದೆ ಎಂಬುದೊಂದು. ವಾಸ್ತವ­ವಾಗಿ, ಯುದ್ಧ ವಿರೋಧಿ ನೆಲೆಯಲ್ಲೆ ಗೀತೆಯ ಅಸ್ತಿತ್ವ; ಪ್ರಥಮಾಧ್ಯಾಯವನ್ನು ಬಿಟ್ಟರೆ ಗೀತೆ­ಯಲ್ಲಿ ಮತ್ತೆಲ್ಲಿಯೂ ಯುದ್ಧ ಪ್ರಸಕ್ತಿಯಿಲ್ಲ! ಗೀತಾ ಪ್ರಾರಂಭವೆ ಕುತೂಹಲಕರ: ‘ಧರ್ಮ­ಕ್ಷೇತ್ರೇ ಕುರುಕ್ಷೇತ್ರೇ...’ ಮಹಾಭಾರತ ಮಧ್ಯ­ದಲ್ಲಿ, ‘ಧರ್ಮಕ್ಷೇತ್ರ’ವೂ ಆದ ‘ಕುರು’ಕ್ಷೇತ್ರದಲ್ಲಿ ಕರ್ತವ್ಯ­ಬೋಧೆ ಮಾಡುವುದು ಗೀತೆಯ ಮುಖ್ಯೋದ್ದೇಶ (‘ಗೀತಾ ಸುಗೀತಾ ಕರ್ತವ್ಯಾ’). ಕುರುಕ್ಷೇತ್ರವೊಂದು ಪ್ರತಿಮೆ; ಯುದ್ಧ, ಜೀವನಸಂಗ್ರಾಮದ ಸಂಕೇತ.

ರಣರಂಗ ಹೊರಗಿ­ನದು ಮಾತ್ರವಲ್ಲ, ಒಳಗಿ­ನದೂ ಹೌದು: ಅಂತರಂಗ ವೈರಿಗಳನ್ನು ಇಂದ್ರಿಯಗಳನ್ನು ನಿರ್ದಯವಾಗಿ ದಮನ ಮಾಡ­ಬೇಕು ಎಂತಲೇ, ‘ಯುದ್ಧಾಯ ಯುಜ್ಯಸ್ವ’ (ಯುದ್ಧಕ್ಕೆ ಸಿದ್ಧ­ನಾಗು), ‘ಜಹಿಶತ್ರುಂ’ (ಶತ್ರುವನ್ನು ಕೊಲ್ಲು) ಎನ್ನುತ್ತಾನೆ ಕೃಷ್ಣ, ಅರ್ಜುನ­ನಿಗೆ. ಮತ್ತೊಂದು ಮುಖ್ಯಾಂಶ: ‘ಕೌರವ­ರನ್ನು ನಾನಾ­ಗಲೆ ಕೊಂದಿ­ದ್ದೇನೆ; ನೀನು ನೆಪ ಮಾತ್ರವಾಗಿರು’ (ನಿಮಿತ್ತ ಮಾತ್ರಂ ಭವ ಸವ್ಯ­ಸಾಚಿನ್‌) ಎಂಬುದೂ ಕೃಷ್ಣನ ಮಾತು. ಎಂದಮೇಲೆ, ಕೊಲೆಯ ಪ್ರಶ್ನೆ ಎಲ್ಲಿ ಬಂತು?

ತನಗೆ ಪ್ರಿಯರಾದವರ ಬಗೆಗೆ ಹೇಳುವಾಗ ಕೃಷ್ಣನ ಬಾಯಲ್ಲಿ ಬರುತ್ತದೆ, ಈ ಕಲ್ಯಾಣ ಗುಣಗಳ ಪಟ್ಟಿ:
ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ
ನಿರ್ಮಮೋ ನಿರಹಂಕಾರಃ ಸಮದುಃಖ ಸುಖಃ ಕ್ಷಮೀ...(12:13)
(ಯಾವ ಜೀವಿಗಳನ್ನೂ ದ್ವೇಷಿಸದವನು, ಮಿತ್ರಭಾವದಿಂದ ಕೂಡಿರುವವನು, ಕರುಣೆ­ಯು­ಳ್ಳವನು, ಮಮಕಾರ ಅಹಂಕಾರ­ಗಳಿಲ್ಲದವನು, ಸುಖ­ದುಃಖಗಳಲ್ಲಿ ಸಮಾನನಾಗಿರುವವನು, ಕ್ಷಮಾಶೀಲನು....). ಈ ಗುಣಗಳು ಯಾರಿಗೆ ಬೇಡ? ಎಲ್ಲ ಧರ್ಮಗಳ ತಿರುಳೂ ಇದೇ ತಾನೆ?
ಇನ್ನು, ವರ್ಣವ್ಯವಸ್ಥೆಯನ್ನು ಕುರಿತ ಗೀತೆಯ ವಿಚಾರ­ಗಳು ಬಹುಮುಖ್ಯ. ಗೀತೆ ಜಾತಿ ವ್ಯವಸ್ಥೆ­ಯನ್ನು ಸಮರ್ಥಿಸುತ್ತದೆ ಎಂಬುದು ದೊಡ್ಡ ಆರೋಪ.

ನಿಜವೆ? ‘ವರ್ಣ’ ಬೇರೆ, ಈಗ ಹುಟ್ಟಿ­ನಿಂದ ನಿರ್ಧರಿತವಾಗುವ ‘ಜಾತಿ’ ಬೇರೆ ಎಂಬು­ದನ್ನು ಲಕ್ಷಿಸಬೇಕು. ಗೀತೆಯ ಈ ಉಕ್ತಿ ಪ್ರಸಿದ್ಧ ಮತ್ತು ಬಹುಚರ್ಚಿತ: ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’ (ಗುಣ, ಕರ್ಮ–ವೃತ್ತಿ–ಗಳಿಗೆ ಅನುಗುಣವಾಗಿ ನಾನು ನಾಲ್ಕು ವರ್ಣಗಳನ್ನು ಸೃಜಿಸಿದೆ). ‘ಜಗ­ದ್ಗುರು’ ಕೃಷ್ಣನ ‘ವರ್ಣ’ ವ್ಯವಸ್ಥೆ ಇಡೀ ಜಗತ್ತಿಗೆ ಅನ್ವಯಿಸು­ವಂಥದು; ಕೇವಲ ಭಾರತ­ಕ್ಕಲ್ಲ ಎಂಬುದನ್ನು ಗಮ­ನಿಸ­ಬೇಕು.

ಇಲ್ಲಿನ ನಾಲ್ಕು ‘ವರ್ಣ’­ಗಳಿಗೆ ಸಂವಾದಿ­ಯಾದ ನಾಲ್ಕು ಸಮು­ದಾಯ­ಗಳು ಪ್ರಪಂಚ­ದಲ್ಲಿ ಎಲ್ಲೆಡೆ ಉಂಟ­ಲ್ಲವೆ? (ಹಾಗೆ ಕೃಷ್ಣನ ಏರ್ಪಾಟು ಭಾರತಕ್ಕೆ ಸೀಮಿತ­ವಾಗಿದ್ದಲ್ಲಿ, ಅವನು, ಕುವೆಂಪು ಒಮ್ಮೆ ನನ್ನೊಡನೆ ಮಾತ­ನಾ­ಡುತ್ತ ಹೇಳಿದಂತೆ, ವಿಶ್ವಮಾನವ­ನಾ­ಗದೆ ಒಬ್ಬ ಕ್ಷುದ್ರ ಜಾತಿ ಮಾನವನಾಗುತ್ತಾನೆ. ವಸ್ತುತಃ ಅವ­ನದು ‘ವಿಶ್ವರೂಪ!’ ಅಂತೂ ಜನ್ಮ ಮೂಲ­ವಾದ ಜಾತಿಪದ್ಧತಿ ಗೀತೆಯ ಆಶಯಕ್ಕೆ ಹೊರಗು!

‘ಸ್ವಧರ್ಮೇ ನಿಧನಂ ಶ್ರೇಯಃ....’ ಎಂಬ ಗೀತೋಕ್ತಿ­­ಯಲ್ಲಿ ಬರುವ ‘ಸ್ವಧರ್ಮ’ ಎಂಬು­ದನ್ನು ‘ಜಾತಿ’ ಎಂದು ಹಲವರು ಅರ್ಥೈಸಿ­ರು­ವುದು ಅನುಚಿತ. ‘ಸ್ವಧರ್ಮ’ ಎಂಬುದು ಆಯಾ ವ್ಯಕ್ತಿಯ ಮನೋಧರ್ಮಕ್ಕೆ, ಸಹಜ ಪ್ರವೃ­ತ್ತಿಗೆ ಸಂಬಂಧಿಸಿದ್ದು. (ನಿದರ್ಶನಕ್ಕೆ, ಬರ­ವಣಿಗೆ ಸಾಹಿತಿಯ ಸ್ವಧರ್ಮ. ಅದನ್ನವನು ಬಿಟ್ಟು, ತರಕಾರಿ ಮಾರಾಟಕ್ಕೆ ಹೊರಟರೆ, ಇತ್ತ ಬರವಣಿಗೆಯೂ ಹಾಳು, ಅತ್ತ ಮಾರಾಟವೂ ಅಧ್ವಾನ!).

‘ಕರ್ಮಣ್ಯೇವಾಧಿಕಾರಸ್ತೆ, ಮಾಫಲೇಷು ಕದಾಚನ’ (ಕರ್ಮದಲ್ಲಿ ನಿನಗೆ ಅಧಿಕಾರ ಎಂದರೆ ಕರ್ತವ್ಯ, ಫಲದಲ್ಲಲ್ಲ) ಎಂಬ ಗೀತಾಬೋಧೆಗೂ ವಿಪ­ರೀತಾರ್ಥ ಕಲ್ಪಿಸಲಾಗಿದೆ. ವ್ಯಕ್ತಿ ನಿರ್ಲಿಪ್ತ­ವಾಗಿ, ಸಮರ್ಪಕವಾಗಿ ಕರ್ಮ­ವೆಸಗಿದರೆ ಫಲ ಸಿಕ್ಕಿಯೇ ಸಿಗುತ್ತದೆ; ಫಲವನ್ನು ದೃಷ್ಟಿಯಲ್ಲಿಟ್ಟು­ಕೊಂಡೆ ಕೆಲಸ ಮಾಡಿದರೆ, ಕೆಲಸವೂ ಕೆಡಬಹುದು, ಫಲವೂ ಸಿಗದಿರಬಹುದು! ‘ಸಮದರ್ಶನ’ (ಸಮರ ದರ್ಶನವಲ್ಲ!) ಗೀತೋ­ಪದೇಶದ ಒಂದು ಮಹಾವೈಶಿಷ್ಟ್ಯ; ಪ್ರಜಾ­­­ಪ್ರಭುತ್ವದ ಒಂದು ಪ್ರಶಸ್ತ ತತ್ತ್ವವಾದ ಸಮಾ­ನತೆ ಇಲ್ಲಿ ಉಕ್ತವಾಗಿರುವುದು ಬಹು ಗಮನಾರ್ಹ:
ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನೀ,
ಶುನಿ ಚೈವ ಶ್ವಪಾಕೇ ಚ ಪಂಡಿತಾಸ್ಸಮದರ್ಶಿನಃ (5:18)
(ವಿದ್ಯಾ ವಿನಯಗಳಿಂದ ಕೂಡಿದವನು, ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿಮಾಂಸವನ್ನು ತಿನ್ನುವ ಚಂಡಾಲ– ಇವರೆ­ಲ್ಲರಲ್ಲಿಯೂ ಜ್ಞಾನಿಗಳು ಸಮದರ್ಶಿಗಳಾಗಿ­ರು­ವರು) ಇಲ್ಲಿ ಅದ್ವೈತದ ನಿಲುವಿದೆ ಮಾತ್ರವಲ್ಲ, ವರ್ಣತಾರತಮ್ಯರಹಿತವಾದ ಸಾಮಾಜಿಕ ಸಮಾನತೆಯ ಪ್ರತಿಪಾದನೆಯೂ ಇದೆ.

‘ಸಮ್ಮೋಹಂ ಸರ್ವಭೂತೇಷು’ (ಎಲ್ಲ ಜೀವಿ­ಗ­ಳಲ್ಲೂ ನಾನು ಸಮದೃಷ್ಟಿಯುಳ್ಳವನು) ಎಂದೂ ಹೇಳುತ್ತಾನೆ, ಗೀತಾಚಾರ್ಯ. ಸಮತ್ವ­ಸಂಬಂಧ­ವಾದ ಇನ್ನೂ ಅನೇಕ ಶ್ಲೋಕಗಳಿವೆ, ಗೀತೆಯಲ್ಲಿ. ಕೃಷ್ಣ ಸ್ತ್ರೀಯರ ಬಗೆಗೆ ಗೀತೆಯಲ್ಲಿ ನೇರವಾಗಿ ಏನನ್ನೂ ಹೇಳದಿದ್ದರೂ, ವೈಯಕ್ತಿಕ ಜೀವನದಲ್ಲಿ ಅವನೊಬ್ಬ ಸ್ತ್ರೀವಾದಿ (ಸ್ತ್ರೀಲೋಲ ಎಂಬುದು ಅಪಪ್ರಥೆ!). ಅವನು ದ್ರೌಪದಿಯ ಮಾನ ಕಾಪಾಡಿ­ದವನು; ನರಕಾಸುರನನ್ನು ವಧಿಸಿ, ಅವನ ಸೆರೆಯಿಂದ ಸಾವಿರಾರು ಸ್ತ್ರೀಯರನ್ನು ಪಾರುಮಾಡಿದವನು.

ಆಧುನಿಕ ಯುಗದಲ್ಲಿ ವಿದ್ಯೆ, ಜ್ಞಾನಗಳು ಎಲ್ಲ­ರಿಗೂ ಅಮೂಲ್ಯ, ಅನಿವಾರ್ಯ. ಅದನ್ನು ಕುರಿತ ಗೀತೋಕ್ತಿ ಸುಪರಿಚಿತ: ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ (ಜ್ಞಾನದಷ್ಟು  ಪವಿತ್ರ­ವಾದುದು ಲೋಕದಲ್ಲಿ ಯಾವುದೂ ಇಲ್ಲ). ಪ್ರಣಿಪಾತ (ನಮಸ್ಕಾರ), ಸೇವೆಗಳ ಜೊತೆಗೆ ‘ಪರಿಪ್ರಶ್ನೆ’ಯನ್ನೂ ವಿಧಿಸಿದೆ, ಗೀತೆ. ಪರಿಪ್ರಶ್ನೆ­ಯಿಂದ ಜ್ಞಾನ ಲಭಿಸುತ್ತದೆ ಮತ್ತು ಬೆಳೆಯು­ತ್ತದೆ. ಇಲ್ಲಿ ವೈಚಾರಿಕತೆಗೆ, ‘ನಿರಂಕುಶಮತಿ’ಗೆ ಗೀತೆ ಕೊಟ್ಟಿರುವ ಪ್ರಾಧಾನ್ಯ ಸುಸ್ಪಷ್ಟ.

ವಿಚಾರ ಸ್ವಾತಂತ್ರ್ಯ, ಕಾರ್ಯಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣಗಳು; ಅವು ಕೃಷ್ಣನ ಈ ಕಡೆಯ ಮಾತಿನಲ್ಲಿ ಸುವಿದಿತ: ‘ಇದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ, ಹೇಗೆ ಇಚ್ಛಿಸುವೆಯೋ ಹಾಗೆ ಮಾಡು’. (ನಾವಿಂದು ಗೌರವಿಸುವ ಕುವೆಂಪು ಕೂಡ ಒಂದೆಡೆ ಹೇಳುವುದು ಇದಕ್ಕೇ ಪೂರಕವಾಗಿದೆ: ‘ತಾಳ್ಮೆ­ಯಿಂದ ಆಲಿಸಿ, ವಿವೇಕದಿಂದ ಭಾವಿಸಿ, ವಿಮರ್ಶ ಬುದ್ಧಿಯಿಂದ ಪರೀಕ್ಷಿಸಿ, ಒಪ್ಪಿಗೆ­ಯಾದನ್ನು ಸ್ವೀಕರಿಸಿ...’). ಇದನ್ನೆಲ್ಲ ‘ವಿಚಾರ­ವಾದಿ’ ಗಳೆನಿಸಿದ ‘ಸಂಶಯಾತ್ಮ’ರು ಮನಗಾಣ ಬೇಕಲ್ಲವೆ?

ಪ್ರಪಂಚದ ಮತ್ತಾವ ಧರ್ಮಗ್ರಂಥದಲ್ಲೂ ವಿಚಾರ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಎಲ್ಲಿಯೂ ಬಲಾತ್ಕಾರ ಸಲ್ಲದು; ಅದು ಭಯೋತ್ಪಾದನೆಯ ಚಿಹ್ನೆ! ಕೃಷ್ಣ ‘ಭಯಂಕರ’ನಲ್ಲ; ದಯಾಕರ. ಹೀಗೆ ಗೀತೋಪದೇಶ ಅನೇಕ ಮುಖಗಳಲ್ಲಿ ಈ ಹೊತ್ತಿಗೂ ಅತ್ಯಂತ ಪ್ರಸ್ತುತವಾಗಿದೆ; ಗ್ರಾಹ್ಯ ಮತ್ತು ತಾರಕವಾಗಿದೆ. ಕಣ್ತೆರೆದು­ನೋಡ­ಬೇಕು; ಕೂದಲು ಸೀಳುವುದು ನಿರರ್ಥಕ. ಗೀತಾ ಸಂದೇಶ­ವನ್ನು ಒಪ್ಪುವುದು ಅಥವಾ ಹಟ ಹಿಡಿದು, ಬಿಡುವುದು ಅವರವರಿಗೆ ಸೇರಿದ್ದು: ಕೃಷ್ಣನ ಆಕ್ಷೇಪವಿಲ್ಲ! ‘ನ ಮೇ ಭಕ್ತಃ ಪ್ರಣಶ್ಯತಿ’ (ನನ್ನ ಭಕ್ತನಿಗೆ ನಾಶವಿಲ್ಲ) ಎಂಬುದು ಭಗವದ್ಗೀತೆಯ ಭರವಸೆ; ಯುಗಯಾತ್ರಿಯಾಗಿ ಮೊಳಗಿರತಕ್ಕದ್ದು. ‘ಕೃಷ್ಣಂ ವಂದೇ ಜಗದ್ಗುರುಂ’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT