ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ಪಾಲನೆಯ ಹೊಣೆ

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ನನ್ ಹೆಸರು ಟಿ.ಪ್ರಹ್ಲಾದ್. ಪ್ರಸ್ತುತ ದಕ್ಷಿಣ– ಪಶ್ಚಿಮ ರೈಲ್ವೆ ವಲಯದಲ್ಲಿ ರೈಲು ಚಾಲಕ ಆಗಿ ಕೆಲಸ ಮಾಡ್ತಾ ಇದ್ದೀನಿ. ಹೊಸದುರ್ಗ ತಾಲ್ಲೂಕಿನ ಶಿವನಗರ ನನ್ನ ಮೂಲ ನೆಲೆ. ತಂದೆ ತೋಪಯ್ಯ, ತಾಯಿ ಕೆಂಚಮ್ಮ. ನಾವು ಒಟ್ಟು ಏಳು ಜನ ಮಕ್ಕಳು, ಅವರಲ್ಲಿ ನಾಲ್ವರು ಅಕ್ಕಂದಿರು, ಇಬ್ಬರು ತಮ್ಮಂದಿರು.

ತಾಯಿಯ ತವರೂರಾದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮೇಲನಹಳ್ಳಿಯಲ್ಲಿ ನನ್ನ ಬಾಲ್ಯ ಕಳೆಯಿತು. ಏಳನೇ ತರಗತಿವರೆಗೆ ಅಲ್ಲಿಯೇ ಶಾಲೆಗೆ ಹೋದೆ. ಹೊಸದುರ್ಗ ತಾಲ್ಲೂಕು ಕಿಟ್ಟದಾಳ್‌ನಲ್ಲಿ ಪ್ರೌಢಶಾಲೆಯ ಶಿಕ್ಷಣ ಪಡೆದೆ. ಅದೇ ಗ್ರಾಮದ ಕಲ್ಪತರು ಕಾಲೇಜಿನಲ್ಲಿ ಪಿಯುಸಿ, ಬಿಎ ಮಾಡಿದೆ.

1989ರಲ್ಲಿ ಬೆಳಗಾವಿಯಲ್ಲಿ ರೈಲ್ವೆ ಇಲಾಖೆಯ ಪರೀಕ್ಷೆ ಬರೆದೆ. 1992ರಲ್ಲಿ ಸಹಾಯಕ ಲೋಕೊ ಪೈಲಟ್ ಆಗಿ ಕೆಲಸ ಸಿಕ್ಕಿತು. ತಿರುಚನಾಪಳ್ಳಿಯಲ್ಲಿ 9 ತಿಂಗಳು ಡೀಸೆಲ್ ಎಂಜಿನ್ ಚಾಲನಾ ತರಬೇತಿ ನೀಡಿದರು.

ಅಲ್ಲಿಂದ ನನ್ನ ವೃತ್ತಿ ಬದುಕು ಆರಂಭವಾಯಿತು. ಚೆನ್ನೈನಲ್ಲಿ 4 ತಿಂಗಳು ಎಲೆಕ್ಟ್ರಿಕಲ್ ಎಂಜಿನ್ ಚಾಲನಾ ತರಬೇತಿಯನ್ನೂ ಪಡೆದೆ. ಬೆಂಗಳೂರು, ಮೈಸೂರು, ಅರಸೀಕೆರೆ, ಗುಂತಕಲ್, ಆದೋನಿ, ಈರೋಡ್ ಮಾರ್ಗಗಳಲ್ಲಿ ಸಂಚರಿಸುವ ರೈಲು ಓಡಿಸುತ್ತೇನೆ.

15 ದಿನದಲ್ಲಿ ಒಟ್ಟು 104 ಗಂಟೆ ಕೆಲಸ ಮಾಡಬೇಕು ಎಂಬ ನಿಯಮವಿದೆ. ಕೆಲಸದ ವೇಳೆ ಮತ್ತು ವಿಶ್ರಾಂತಿ ವೇಳೆಯನ್ನು ಮೇಲಧಿಕಾರಿಗಳು ಪಟ್ಟಿ ಮಾಡುತ್ತಾರೆ. ಹಗಲು– ರಾತ್ರಿ, ಚಳಿ– ಗಾಳಿ ಮಳೆಯನ್ನು ಲೆಕ್ಕಿಸದೆ ಕೆಲಸ ಮಾಡಬೇಕು. ‘ಶತಾಬ್ದಿ ಎಕ್ಸ್‌ಪ್ರೆಸ್‌’ನಂಥ ರೈಲುಗಳಿಗೆ ಚಾಲಕನಾಗಿ ಕೆಲಸ ಮಾಡುವಾಗ ಶೌಚಾಲಯದ ಸಮಸ್ಯೆ ಕಾಡುತ್ತದೆ.

ನಮ್ಮನ್ನೇ ನಂಬಿ ಸಾವಿರಾರು ಜನ ಪ್ರಯಾಣಿಸುತ್ತಿರುತ್ತಾರೆ. ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ. ಇದೇ ನಾನು ಮಾಡುವ ದೇಶಸೇವೆ. ಏಷ್ಯಾದ ಅತಿ ದೊಡ್ಡ ಸರ್ಕಾರಿ ಸೇವಾ ವಲಯವಾಗಿರುವ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವುದು ನನಗೆ ಹೆಮ್ಮೆ ತಂದಿದೆ. ಸಂಬಳ ಭತ್ಯೆಗಳು ತೃಪ್ತಿಕರವಾಗಿವೆ. ಇದರಲ್ಲಿ ಹೆಚ್ಚಳವಾದರೆ ಇನ್ನೂ ಸಂತೋಷವೇ.

ನಮಗೆ ದಿನಾಲು ಹೊಸ ಮುಖದ ಜನರು ಎದುರಾಗುತ್ತಾರೆ. ಅನೇಕ ಹೊಸ ಅನುಭವಗಳು ಆಗುತ್ತವೆ. ಒಮ್ಮೆ ಸೇಲಂ ಮಾರ್ಗದಲ್ಲಿ ಚಾಲನೆ ಮಾಡುತ್ತಿದ್ದಾಗ 15ರ ವಯೋಮಾನದ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಗಳ ಮೇಲೆ ಬಂದು ಮಲಗಿದ್ದ. ಆ ಸಮಯದಲ್ಲಿ ರೈಲಿನ ವೇಗ ನಿಯಂತ್ರಣದಲ್ಲಿತ್ತು. ರೈಲು ನಿಲ್ಲಿಸಿ ಅವನಿಗೆ ಬುದ್ಧಿ ಹೇಳಿ ಕಳುಹಿಸಿದೆ. ಮರುದಿನ ಅವನ ತಂದೆ–ತಾಯಿ ಹುಡುಕಿಕೊಂಡು ಬಂದು ಧನ್ಯವಾದ ಹೇಳಿ ಹೋಗಿದ್ದರು.

ನನಗೆ ಕವಿತೆ ಬರವಣಿಗೆ, ಸಂಗೀತದಲ್ಲಿ ಆಸಕ್ತಿ ಇದೆ. ನಾನು ರಚಿಸಿದ ಕೆಲವು ಭಕ್ತಿಗೀತೆಗಳು ಕ್ಯಾಸೆಟ್ ರೂಪದಲ್ಲಿ ಹೊರ ಬಂದಿದೆ. ಕೆಲವೇ ದಿನಗಳಲ್ಲಿ ಚಿತ್ರೀಕರಣಗೊಳ್ಳಲಿರುವ ಸಿನಿಮಾ ಒಂದಕ್ಕೆ ಗೀತೆ ಬರೆದಿದ್ದೇನೆ. ನನ್ನದು ಸುಖಿ ಸಂಸಾರ. ಪತ್ನಿ ಪದ್ಮಾವತಿ ಮನೆ– ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತಿದ್ದಾರೆ. ಮಗ ಬಿ.ಎ.ಎಂ.ಎಸ್‌ ಹಾಗೂ ಮಗಳು ದ್ವಿತೀಯ ಪಿಯು ಓದುತ್ತಿದ್ದಾರೆ.

ರೈಲ್ವೆ ಇಲಾಖೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ ತೃಪ್ತಿ ನೀಡಿದೆ. ಉದ್ಯೋಗಿಗಳನ್ನು ರೈಲ್ವೆ ಇಲಾಖೆ ಚೆನ್ನಾಗಿ ನೋಡಿಕೊಳ್ಳುತ್ತದೆ. ನಮ್ಮ ಇಲಾಖೆಗೆ ಸೇರ ಬಯಸುವ ಯುವಕರನ್ನು ನಾನು ಉತ್ತೇಜಿಸುತ್ತೇನೆ. ಇದು ಕೇವಲ 10 ರಿಂದ 6 ಗಂಟೆವರೆಗೆ ಮಾಡುವ ಕೆಲಸವಲ್ಲ, ಯಾವ ಸಮಯದಲ್ಲಾದರೂ ಸರಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವವರು ಗಡಿಯಾರ ನೋಡದೆ ಕೆಲಸ ಮಾಡಬೇಕು, ಅದೇ ರೀತಿ ಸರಿಯಾದ ಸಮಯಕ್ಕೆ ಸರಿಯಾಗಿ ಪ್ರಯಾಣಿಕರನ್ನು ನಿಲ್ದಾಣಗಳಿಗೆ ತಲುಪಿಸುವ ಹೊಣೆ ಹೊರಲು ಸಿದ್ಧರಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT