ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರಸವೇ ಜೀವನ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ರೂಪ ಸ್ವಪ್ನ ಲೋಕದಲ್ಲಿ ವಿಹರಿಸಲು ಪ್ರಾರಂಭಿಸಿದ್ದಳು. ಅದಕ್ಕೆ ಕಾರಣ ಉನ್ನತ ಹುದ್ದೆಯಲ್ಲಿದ್ದ ಆಕೆಯ ಪತಿಯು ನಿವೃತ್ತಿಯ ನಂತರ ತಮ್ಮ ಸ್ವಂತ ಊರಾದ ಮೈಸೂರಿಗೆ ಹೋಗಿ ನೆಲಸಬೇಕೆಂದು ತೀರ್ಮಾನಿಸಿದರು. ಅನೇಕ ವರ್ಷಗಳಿಂದ ಮುಂಬೈನ ಯಾಂತ್ರಿಕ ಜೀವನದಲ್ಲಿ ಬಳಲಿ ಬೆಂಡಾಗಿದ್ದವಳು, ಇನ್ನು ಮುಂದೆ ಸ್ವಂತ ಊರಾದ ಮೈಸೂರಿನಲ್ಲಿ ಯಾವುದೇ ಸಮಯದ ಬಂಧನಗಳಿಲ್ಲದೇ, ಅಡ್ಡಿ ಆತಂಕಗಳಿಲ್ಲದೇ ನಿರ್ಮಲವಾದ ವಾತಾವರಣದಲ್ಲಿ, ಸ್ವಚ್ಛ ಗಾಳಿಯನ್ನು ಸೇವಿಸುತ್ತಾ ಜೀವನದ ಸಂಧ್ಯೆಯನ್ನು ಕಳೆಯಬಹುದೆನ್ನುವ ಸುಂದರವಾದ ಭಾವನೆಯೇ ಅವಳಲ್ಲಿ ಪುಳಕವನ್ನುಂಟುಮಾಡುತ್ತಿತ್ತು.

ಮುಂಜಾನೆ ಐದು ಗಂಟೆಗೇ ಎದ್ದು ಚಪ್ಪಾತಿ ಸಬ್ಜಿ ಮಾಡಬೇಕಿಲ್ಲ; ಡಬ್ಬಾವಾಲಾನಿಗೂ ಕಾಯಬೇಕಿಲ್ಲ; ರಾತ್ರಿಯಾದರೂ ಕೆಲಸದಿಂದ ಮನೆಗೆ ಬಾರದ ಪತಿಗಾಗಿ ಕಾಯುತ್ತಾ ಕೂರ ಬೇಕಿಲ್ಲ. ಅಬ್ಬ! ಇದೆಂತಹ ಆನಂದ ಎಂದು ರೂಪ ಸಂತಸದಿಂದ ಬೀಗಿದಳು. ಇನ್ನು ಕೆಲಸದ ಒತ್ತಡದ ಕಾರಣದಿಂದಾಗಿ ಯಾವುದೇ ಸಂಭ್ರಮದ ಕಾರ್ಯಕ್ರಮವನ್ನೂ ತಪ್ಪಿಸಿಕೊಳ್ಳುವ ಅಗತ್ಯವಿಲ್ಲ. ಊರಿನಲ್ಲಿ, ನೆಂಟರಿಷ್ಟರ ಮನೆಗಳಲ್ಲಿ ನಡೆಯುವ ಮದುವೆ, ಮುಂಜಿ, ಗೃಹಪ್ರವೇಶ ಮೊದಲಾದ ಸಮಾರಂಬಗಳಿಗೆ ಒಂದಲ್ಲೂ ಬಿಡದೆ ಎಲ್ಲದಕ್ಕೂ ಹಾಜರಾಗಿಬಿಡುವ ಕನಸನ್ನು ಕಂಡಳು.

ಅರಮನೆ ನಗರಿ ಮೈಸೂರಲ್ಲಿ ನೆಲಸಿದ್ದೂ ಆಯಿತು. ಇಬ್ಬರು ಮಕ್ಕಳೂ ವಿದೇಶದಲ್ಲಿ ನೆಲಸಿದ್ದರಿಂದ ಇವರಿಬ್ಬರದೇ ಸಂಸಾರ. ಮಕ್ಕಳೊಡನೆ ಅವರಿಗಿದ್ದ ಕೊಂಡಿಗಳೆಂದರೆ ಆಗಾಗ ಬರುತ್ತಿದ್ದ ದೂರವಾಣಿ ಕರೆಗಳು ಪ್ರತಿ ನಿತ್ಯ ಅವತರಿಸುತ್ತಿದ್ದ ಇ- ಮೇಲ್‌ಗಳು.

ಮೈಸೂರಿನಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ ರೂಪಳಿಗೆ ತಿಳಿದ ಒಂದು ನಗ್ನಸತ್ಯವೇನೆಂದರೆ ವಿಶ್ರಾಂತಿ ಜೀವನ ಎನ್ನುವುದು ಕೇವಲ ಪುರುಷರಿಗೆ ಮಾತ್ರವೇ ಹೊರತು ಮಹಿಳೆಯರಿಗೆ ಅಲ್ಲವೇ ಅಲ್ಲ ಎನ್ನುವ ವಿಷಯ. ಮಹಿಳೆಯರ ಕಾರ್ಯಕ್ಷೇತ್ರವು ಪತಿದೇವರ ವಿಶ್ರ್ರಾಂತಿಯ ನಂತರ ಮತ್ತೂ ವಿಸ್ತಾರವಾಗುತ್ತದೆ. ಇಂತಿಷ್ಟೇ ವೇಳೆ ಎಂದು ಕೆಲಸ ಮಾಡುತ್ತಿದ್ದವಳು ಈಗ ದಿನಕ್ಕೆ 18 ಗಂಟೆಗಳ ಕಾಲವೂ ಕೆಲಸದಲ್ಲಿ ತೊಡಗಬೇಕಾಗ ಬಹುದು ಎಂಬ ವಿಷಯ ಮನವರಿಕೆ ಯಾದಾಗ ರೂಪ ಕಂಗಾಲಾದಳು.

ರೂಪ ಮತ್ತು ಅವಳ ಪತಿದೇವ ಶೇಖರ್, ವಾಯು ವಿಹಾರವನ್ನು ಕಡ್ಡಾಯವಾಗಿ ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರು. ನಸುಕಿನಲ್ಲಿ 6 ಗಂಟೆಗೆ ಮೊದಲೇ ಮನೆ ಬಿಟ್ಟು ಹೊರಡುತ್ತಿದ್ದರು. ವಾಯುವಿಹಾರದ ಸಮಯದಲ್ಲೂ ರೂಪಳಿಗೆ ಮನೆಗೆ ತಕ್ಷಣ ಆಗಬೇಕಾದ ಉಪಹಾರದ ಚಿಂತೆ; ತರಕಾರಿ ಏನಿದೆ ? ಅಡುಗೆ ಏನು ಮಾಡಬೇಕು? ಆ ದಿನ ಮನೆಗೆ ಬರುವವರು ಯಾರು? ಇತ್ಯಾದಿ ಇತ್ಯಾದಿ. ವಾಯುವಿಹಾರ ಮುಗಿಸಿ ಒಳಗೆ ಬಂದ ತಕ್ಷಣ ರೂಪಾಳ ಪತಿ ಶೇಖರ್ ಆರಾಮವಾಗಿ ದಿನ ಪತ್ರಿಕೆ ಹಿಡಿದು ಕೂರುತ್ತಿದರು. ಕಿವಿಗೆ ಇಂಪಾಗಿ ಕೇಳಿ ಬರುವ ರೇಡಿಯೋ ಸಂಗೀತ, ಸ್ವಾರಸ್ಯಕರ ವಿಷಯಗಳಿಂದ ತುಂಬಿರುವ ಪತ್ರಿಕೆ, ಇವೆರಡರಲ್ಲಿ ಅವರು ಸಂಪೂರ್ಣವಾಗಿ ಮುಳುಗಿಹೋಗಿರುತ್ತಿದ್ದರು. ಸ್ವಂತ ಊರಾದ ಮೈಸೂರಿನಲ್ಲಿ ಅವರ ಸಂಬಂಧಿಕರು ಆಗಾಗ್ಗೆ ಬಂದು ಭೇಟಿ ಮಾಡಿ ಹೋಗುವುದು ಇವರಿಬ್ಬರಿಗೂ ಅತ್ಯಂತ ಸಂತೋಷ ನೀಡುತ್ತಿತ್ತು.

ಆದರೆ ದಿನ ಪತ್ರಿಕೆ ಓದುವ ಆ ಸಮಯದಲ್ಲಿ ಅವರಿಗೂ ಬಾಹ್ಯ ಪ್ರಪಂಚಕ್ಕೂ ಏನೂ ಸಂಬಂಧವೇ ಇಲ್ಲವೇನೋ ಎನ್ನುವಂತಿರುತ್ತಿತ್ತು. ವೃತ್ತಿಯಲ್ಲಿರುವಾಗ ಅವರಿಗೆ ಮುಂಜಾನೆಯ ಪತ್ರಿಕೆಯನ್ನು ಮುಂಜಾನೆಯೇ ಓದುವ ಸದವಕಾಶ ಸಿಗುತ್ತಿರಲಿಲ್ಲ. ಆದ್ದರಿಂದ ಬಿಸಿ ಬಿಸಿ ಕಾಫಿಯನ್ನು ಹೀರುತ್ತಾ ಒಂದಕ್ಷರವನ್ನೂ ಬಿಡದೆ ಪತ್ರಿಕೆಯನ್ನು ಆನಂದವಾಗಿ ಓದಿ ಮುಗಿಸುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದ ರೂಪ ಒಳಗೊಳಗೇ ಕೋಪಿಸಿಕೊಳ್ಳುತ್ತಾ ಜೋರಾಗಿಯೇ ಪಾತ್ರೆಗಳ ಶಬ್ದ ಮಾಡುತ್ತಿದ್ದಳು. ಆದರೆ ಇದೆಲ್ಲಾ ಶೇಖರ್ ಕಿವಿಗೆ ಬೀಳುತ್ತಿರಲಿಲ್ಲ. ಒಳಗಡೆ ಜೋರಾಗಿ ತಿಂಡಿ, ಅಡುಗೆಗಳ ತಯಾರಿ ನಡೆಯುತ್ತಿತ್ತು.

ರೂಪ ತನಗೆ ಅಪಾರವಾದ ಬಿಡುವಿನ ವೇಳೆ ಸಿಗಬಹುದೆಂದು ಕನಸು ಕಂಡಿದ್ದಳು. ಎಂದೋ ಬಿಟ್ಟು ಹೋಗಿದ್ದ ಸಂಗೀತವನ್ನು ಮುಂದುವರಿಸುವ ಆಸೆ ಅವಳದ್ದು. ಹೀಗಾಗಿ ಸಂಗೀತ, ಶ್ಲೋಕ, ಚಿತ್ರಕಲೆ, ಯೊಗಾಭ್ಯಾಸ ಮುಂತಾದ ತರಗತಿಗಳಲ್ಲಿ ತನ್ನ ಹೆಸರನ್ನು ನೊಂದಾಯಿಸಿದ್ದಳು. ಆದರೆ ಈ ಪರಿಯ ಕೆಲಸದ ಮದ್ವೆ ಇವಕ್ಕೆಲ್ಲಾ ಸಮಯ ಸಿಗುವುದೇ ಎನ್ನುವ ಅನುಮಾನ ಅವಳನ್ನು ಕಾಡತೊಡಗಿತು. ಪುರುಸೊತ್ತು ಮಾಡಿಕೊಂಡು ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗುವುದು ಅಷ್ಡೇನೂ ಸುಲಭವಲ್ಲ ಎನ್ನುವ ಸತ್ಯ ಅವಳಿಗೆ ಮನವರಿಕೆಯಾಗತೊಡಗಿತು.

ಬೆಳಗಿನ 9 ಗಂಟೆಯಾದರೂ ಶೇಖರ್ ಸ್ನಾನಕ್ಕೇಳುತ್ತಿರಲಿಲ್ಲ. ಪತ್ರಿಕೆ ಓದಿ ಮುಗಿಸಿ, ತೋಟದಲ್ಲಿ ಓಡಾಡಿ, ಪಾತಿಗಳಲ್ಲಿ ಕೈಯಾಡಿಸಿ ತಮಗಿಷ್ಟವಾದ ಏನಾದರೊಂದು ಕೆಲಸ ಹಚ್ಚಿಕೊಂಡಿರುತ್ತಿದ್ದರು. ಅಪ್ಪಿ ತಪ್ಪಿ ಸಹ ಯಾರೂ ಅವರನ್ನು ಸ್ನಾನಕ್ಕೇಳಿ ಎಂದು ಹೇಳುವ ಹಾಗಿರಲಿಲ್ಲ. ‘ಮುಂಬಯಿ ಜೀವನದಲ್ಲಿ ೩೦ ವರುಷಗಳ ಕಾಲ ಬೆಳಗಿನ ಝಾವ ಐದು ಗಂಟೆಗೆದ್ದು ಸ್ನಾನ ಮುಗಿಸಿ, ಎರಡು ಬ್ರೆಡ್ ಚೂರನ್ನು ತಿಂದು, 7.10 ರ ಲೋಕಲ್ ಹಿಡಿಯಲು ಓಡಿದ್ದಾಗಿದೆ.

ಮುಂಬಯಿಯ ಆ ಜೀವನದಲ್ಲಿ ನಾನೂ ಒಂದು ಯಂತ್ರವೇ ಆಗಿದ್ದೆ. ಈಗಲಾದರೂ ನನ್ನನ್ನು ತೊಂದರೆ ಮಾಡಬೇಡ. ನನಗಿಷ್ಟ ಬಂದಾಗ ಸ್ನಾನಕ್ಕೇಳುವೆ.’ ಎನ್ನುತ್ತಾರೆ. ಕಳೆದ ಮೂವತ್ತು ವರ್ಷಗಳಲ್ಲಿ ನೋಡಲಾಗದಿದ್ದ ಮಧ್ಯರಾತ್ರಿಯ ಫುಟ್ ಬಾಲ್ ಪಂದ್ಯಗಳನ್ನು ಇಡೀ ರಾತ್ರಿ ವೀಕ್ಷಿಸಿ,ಮುಂಜಾನೆ 3 ಅಥವ 4 ರ ವೇಳೆಗೆ ಮಲಗುತ್ತಿದ್ದ ಅವರಿಗೆ ಬೇಗನೆ ಸ್ನಾನ ಮುಗಿವ ಉದ್ದೇಶವೇ ಇರುತ್ತಿರಲಿಲ್ಲ.

ಇಷ್ಟೇ ಅಲ್ಲದೆ ತಮ್ಮಪಾಡಿಗೆ ತಾವಿರದೆ  ರೂಪಳ ಅಡಿಗೆಮನೆ ಕೆಲಸಗಳಲ್ಲಿಯೂ ತಲೆ ಹಾಕುತ್ತಿದ್ದುರು. ಇದೇನಿದು? ಉದ್ದಿನಬೇಳೆಯನ್ನು ಇಡ್ಲಿಗಾಗಿ ನೆನೆಹಾಕಿದ್ದೀಯಾ? ಸರಿ, ಆಕಡೆ ಇರುವುದೇನು? ದೋಸೆಗಾಗಿಯೆ? ಎರಡೂ ಒಂದೇದಿವಸ ಏಕೆ? ಹುಳಿ ಬರುವುದಿಲ್ಲವೇ? ಟೊಮೇಟೋ ಏಕೆ ಫ್ರಿಜ್ನಲ್ಲಿ ಇಟ್ಟಿಲ್ಲ? ಫ್ರಿಜ್ ಕ್ಲೀನ್ ಮಾಡಬೇಕು. ಏನೇನೋ ಚೆಲ್ಲಿದೆ. ಇತ್ಯಾದಿ ಇತ್ಯಾದಿ. ಇಷ್ಟು ವರುಷಗಳು ತನ್ನ ಅಡುಗೆಮನೆಯ ಸಾಮ್ರಾಜ್ಞಿಯಾಗಿ ಮೆರೆದಿದ್ದ ರೂಪಳಿಗೆ ಈರೀತಿಯ ಸಲಹೆಗಳು, ಆಕ್ಷೇಪಣೆಗಳು ಹಿಡಿಸುತ್ತಿರಲಿಲ್ಲ. 

ಶೇಖರ್ ಬೆಳಿಗ್ಗೆ 6.30.ಕ್ಕೆ ಉದ್ಯೋಗಕ್ಕೆ ಹೊರಟರೆಂದರೆ ಹಿಂತಿರುಗುತ್ತಿದ್ದುದು ಸಂಜೆ 7 ಗಂಟೆಗೇ. ಮಧ್ಯಾಹ್ನದ ಊಟಕ್ಕೆ ಕಲಸಿದ ಅನ್ನವನ್ನೋ, ಚಪ್ಪಾತಿ ಸಬ್ಜಿಯನ್ನೋ ತೆಗೆದುಕೊಂದು ಹೊರಟರೆ ಮುಗಿಯಿತು. ಹೀಗಿರುವಾಗ ಅಡುಗೆ ಮನೆಯ ಪಾರುಪತ್ಯಕ್ಕೆ ಅವರಿಗೆ ಸಮಯವೆಲ್ಲಿರುತ್ತಿತ್ತು?

ಇಷ್ಟೆ ಅಲ್ಲದೆ ಮನೆಯ ಅಂಗಳಕ್ಕೆ ನೀರು ಸುರಿದು ಸುರಿದು ಗುಡಿಸುವುದೆಂದರೆ ಶೇಖರ್‌ಗೆ ತೀವ್ರ ಅಸಮಾಧಾನ. ಅಪಾರ್ಟ್‌ಮೆಂಟ್‌ಗಳಲ್ಲಿ ಬಾಗಿಲಿಗೆ ನೀರು ಹಾಕುವುದು ಅಭ್ಯಾಸವಿಲ್ಲದ ಇವರಿಗೆ ಇದೇನು ಅಂಗಳಕ್ಕೆ ಹೀಗೆ ನೀರು ಸುರಿಯುತ್ತಾಳೆಂದು ಅಸಮಾಧಾನ. ಹೀಗೇಕೆ ಪ್ರತಿದಿನ ಮಾಡಬೇಕು? ಪೈಪ್ನಲ್ಲಿ ಯಾಕೆ ನೀರು ಹಾಕ ಬೇಕು? ಸುಮ್ಮನೆ ನೀರನ್ನು ವೇಸ್ಟು ಮಾಡುತ್ತಾಳೆ ಎನ್ನುವ ವರಾತ ದಿನವೂ ಇದ್ದದ್ದೇ.

ರೂಪ ಮಧೈ ಸಮಜಾಯಿಷಿ ಮಾಡಿ ಕೆಲಸದವಳು ಕೇವಲ ಒಂದು ಬಕೆಟ್ ನೀರಿನಲ್ಲಿ ಅಂಗಳವನ್ನು ತೊಳೆದು ಮುಗಿಸಬೇಕೆಂದು ಒಪ್ಪಂದ ಮಾಡಿಕೊಂಡಳು. ದಿನಂಪ್ರತಿ ಬಟ್ಟೆ ಒಗೆಯುವ ಬದಲಾಗಿ ವಾರಕ್ಕೆ ಒಂದುಸಲ ಎಲ್ಲ ಬಟ್ಟೆಗಳನ್ನೂ ವಾಷಿಂಗ್ ಮಿಷಿನ್ನಿನಲ್ಲಿ ಹಾಕಿದರೆ ಸಾಲದೇ? ಎನ್ನುತ್ತಿದ್ದರು. ಅವರಿಗೇನು ಗೊತ್ತು ಈ ಮ್ಯಾನೇಜ್‌ಮೆಂಟ್ ಬಗ್ಗೆ! ಈವಿಷಯಗಳನ್ನೆಲ್ಲಾ ಒಂದು ಹದಕ್ಕೆ ತರುವುದರಲ್ಲಿ ರೂಪಳಿಗೆ ಸಾಕು ಸಾಕಾಯಿತು. ಅವಳಿಗೆ ತನ್ನದೇ ಆದ  ಕೆಲಸಗಳಿಗೆ ಸಮಯವೇ ಸಾಲದಾಯಿತು. ಮುಂಬೈ, ಚೆನ್ನೈಮುಂತಾದ ಊರುಗಳಿಂದ ಬರುವ ನೆಂಟರು, ಮಿತ್ರರು. ಹೀಗೆ ಕೆಲಸದ ಒತ್ತಡ ಹೆಚ್ಚಾದಾಗ ರೂಪ ಕೆಲವು ನಿಯಮಗಳನ್ನು ವಿಧಿಸಲು ನಿಶ್ಚಯಿಸಿದಳು.

ಮೊದಲನೆಯ ನಿಯಮವೇ ಉಪಹಾರದ್ದು. ಬೆಳಿಗ್ಗೆ 8.30 ಕ್ಕೆಲ್ಲಾ ಉಪಾಹಾರವನ್ನು ಮುಗಿಸಬೇಕು. ಸ್ನಾನ ಯಾವಾಗ ಬೇಕಾದರೂ ಮಾಡಿಕೊಳ್ಳಿ. ಆಗ ಮಧ್ಯಾಹ್ನದ ಊಟ ಬೇಗನೆ ಮುಗಿದು ತನಗೆ ಬಿಡುವಿನ ವೇಳೆ ಸಿಗಬಹುದೆಂದು. ಏಕೆಂದರೆ ಶೇಖರ್ ತೋಟ, ಗಿಡ ಎಂದು ಓಡಾಡಿ 9 ಗಂಟೆಯ ಮೇಲೆ ಸ್ನಾನಕೇಳುತ್ತಿದ್ದರು. ಅನಂತರ ಪೂಜೆ ಎಲ್ಲ ಮುಗಿಸುವ ಹೊತ್ತಿಗೆ ಗಂಟೆ 10. ಆ ವೇಳೆಗೆ ಇಬ್ಬರಿಗೂ ವಿಪರೀತ ಹಸಿವಾಗಿ ಉಪಹಾರವನ್ನು ಒಂದುಮಿನಿ ಊಟದಂತೆ ಮಾಡಿಬಿಡುತ್ತಿದ್ದರು. ಹೀಗಾಗಿ ಊಟದ ಸಮಯ ಮೂರಕ್ಕೇರಿತ್ತು. ಇದರಿಂದ ಕುಳಿತು ಕಾಯುವುದು ರೂಪಳ ಸರದಿಯಾಗಿತ್ತು.

ಈಗ ರೂಪಹಾಕಿದ ನಿಯಮಗಳ ಪ್ರಕಾರ ಎಲ್ಲವೂ ಬದಲಾಯಿತು. ಮುಂಜಾನೆಯ 8.30 ಕ್ಕೆ ಉಪಾಹರ; ಮದ್ಯಾಹ್ನದ 12.30 ಕ್ಕೆಲ್ಲಾ ಊಟ. ಬೇರೆ ದಾರಿ ಇಲ್ಲದೇ ಶೇಖರ್ ಇದಕ್ಕೆಲ್ಲಾ ಒಪ್ಪಿದರು. ಹೀಗಾಗಿ ರೂಪಳಿಗೆ ಮಧ್ಯಾಹ್ನ ಹೆಚ್ಚು ಹೊತ್ತು ವಿರಾಮ ಸಿಕ್ಕಿತು. ಸಂಗೀತ, ಹೊಲಿಗೆ, ಬರವಣಿಗೆ ಎಲ್ಲದಕ್ಕೂ ಹೆಚ್ಚು ಸಮಯ ಸಿಕ್ಕಿತು. ಉಪಹಾರದ ನಂತರ ರೂಪ ಅಡುಗೆಯ ಕೆಲಸವನ್ನು ಮುಗಿಸುತ್ತಿದ್ದಳು. ಅನಂತರ ಸಂಗೀತದ ತರಗತಿಗಳು. ಅವಳು ಬರುವ ಹೊತ್ತಿಗೆ ಬಿಸಿಯಾಗಿ ಅನ್ನವನ್ನು ಮಾಡುವುದು ಮಾತ್ರ ಶೇಕರ್ ಅವರ ಪಾಲಿನ ಕೆಲಸವಾಯಿತು. ಇದಕ್ಕೆ ಅವರೇನೂ ಕೂಡಲೇ ಒಪ್ಪಿಕೊಳ್ಳಲಿಲ್ಲ. ನಾನು ಅನ್ನ ಮಾಡುವುದೆಂದರೇನು? ಸಾಧ್ಯವೇ ಇಲ್ಲ. ನೀರು, ಅಕ್ಕಿ ಇವುಗಳ ಪ್ರಮಾಣ ನನಗೇನು ಗೊತ್ತು? ಎಂದು ಗೊಣಗಲು ಪ್ರಾರಂಭಿಸಿದರು. ಇದಕ್ಕೂ ರೂಪಳ ಹತ್ತಿರ ಪರಿಹಾರವಿತ್ತು. ಅಕ್ಕಿ ತೊಳೆದು ಸರಿಪ್ರಮಾಣದಲ್ಲಿ ನೀರಿಟ್ಟು ಮೈಕ್ರೋವೇವ್ ನಲ್ಲಿಟ್ಟು, ಟೈಮರ್ ಸೆಟ್ ಮಾಡಿ ಇಡುತ್ತಿದ್ದಳು. ರೂಪ ಹೇಳಿದ ಸಮಯಕ್ಕೆ ಶೇಖರ್ ಸ್ಟಾರ್ಟಿಂಗ್ ಬಟನ್ ಪ್ರೆಸ್ ಮಾಡುತ್ತಿದ್ದರು.

   ಹೀಗೆಯೆ ಅಂಗಡಿಯಿಂದ ಚಿಕ್ಕ ಪುಟ್ಟ ಸಾಮಾನುಗಳನ್ನು ತರಲು ಶೇಖರ್ ಅವರನ್ನು ಒಪ್ಪಿಸಲು ರೂಪ ಬಹಳ ಪ್ರಯಾಸ ಪಡಬೇಕಾಯಿತು. ಮುಂಬೈನಲ್ಲಿ ಅಂಗಡಿಗೆ ಹೋಗಲು ಅವರಿಗೆ ಸಮಯ ಇರಲಿಲ್ಲವಾಗಿ ಆ ಅಭ್ಯಾಸವೇ ಅವರಿಗಿರಲಿಲ್ಲ. ಚೀಲವನ್ನೇ ಹಿಡಿಯದ ವ್ಯಕ್ತಿಯ ಕೈಯಲ್ಲಿ ಚೀಲಕೊಟ್ಟು ಪೇಟೆಗೆ ಕಳುಹಿಸಲು ರೂಪ ತನ್ನ ಬುದ್ಧಿಯನ್ನೆಲ್ಲ  ಖರ್ಚು ಮಾಡಬೇಕಾಯಿತು. ಇದೇನಿದು ಈ ಚೀಲ ಹಿಡಿದು ನಾನು ಹೋಗಬೇಕೇನು? ಎಂಬ ಅಸಮಾಧಾನ!

ಮಧ್ಯಾಹ್ನದ ಚಿತ್ರಕಲೆಯ ತರಗತಿಗಳಿಗೆ 4 ಗಂಟೆಯ ಕಾಫಿ ಅಡ್ಡ ಬರುತ್ತಿತ್ತು. ಶೇಖರ್ ಗೆ ಫ್ಲಾಸ್ಕಿನಲ್ಲಿ ಹಾಕಿಟ್ಟ ಕಾಫಿ ಸುತರಾಂ ಹಿಡಿಸುತ್ತಿರಲಿಲ್ಲ. ಇದಕ್ಕೂ ರೂಪ ಬುದ್ಧಿ ಉಪಯೋಗಿಸಿ ಒಂದು ಮಾರ್ಗ ಕಂಡುಕೊಂದಳು. ಪಿಂಗಾಣಿ ಕಪ್ ನಲ್ಲಿ ಹಾಲು, ಸಕ್ಕರೆ ಮತ್ತು ಡಿಕಾಕ್ಷನ್‌ ಹಾಕಿ ಇಟ್ಟರೆ ಮೈಕ್ರೋವೇವ್ ನಲ್ಲಿ ಅವರಿಗೆ ಬೇಕೆಂದಾಗ ಅರ್ಧ ನಿಮಿಷದಲ್ಲಿ ಹಬೆಯಾಡುವ ಕಾಫಿ ತಯಾರಾಗುತ್ತಿತ್ತು.

ಹೀಗೆ ಶೇಖರ್ ನಿಧಾನವಾಗಿ ಎಲ್ಲದಕ್ಕೂ ಹೊಂದಿಕೊಳ್ಳುತ್ತಾ ಹೋದರು. ಇದೇ ಸಮಯದಲ್ಲಿ ಅವರಿಗೆ ರೂಪಳ ನಿಯಮಗಳಿಂದ ತನಗೆ ಆಗುವ ಹಲವು ಅನುಕೂಲಗಳೂ ಗೋಚರಿಸುತ್ತಾ ಬಂದವು. ಅವೇನೆಂದರೆ ರೂಪ ಹೊರಗಡೆ ಹೋದ ನಂತರ ತಾವು ಆನಂದದಿಂದ ತಮಗೆ ಬೇಕೆನಿಸಿದ್ದನ್ನು ಮಾಡ ಬಹುದು ಎಂಬ ಸತ್ಯ ದರ್ಶನ!! ತೋಟಗಾರಿಕೆ, ದೂರದರ್ಶನ ವೀಕ್ಷಣೆ ನಿರಾತಂಕವಾಗಿ, ನಿರಂತರವಾಗಿ ಸಾಗಿತು. ಅವರಿಗೆ ಒಳಗೊಳಗೆ ಸಂತೋಷ.

ತಮಗಿಷ್ಟ ಬಂದ ರೀತಿಯಲ್ಲಿ ತೋಟವನ್ನು ರೂಪಿಸಿಕೊಂಡರು. ಭಾರ ಎತ್ತಬೇಡಿ, ಅಗೆಯಬೇಡಿ ಎಂದೆಲ್ಲ ಕಾಳಜಿ ವಹಿಸುವವರೂ ಎದುರಲ್ಲಿ ಇರಲಿಲ್ಲ. ಅವರ ಕೆಲಸ ಸುಗಮವಾಯಿತು. ಹೊರಗಡೆಯಿಂದ ಬಂದ ನಂತರ ರೂಪ ತನಿಖೆ ಮಾಡುತ್ತಿದ್ದುದೇನೋ ನಿಜ. ಅದಕ್ಕೆಲ್ಲ ಏನೋ ಸಬೂಬು ಇರುತ್ತಿತ್ತು. ದೂರದರ್ಶನ ವೀಕ್ಷಣೆಯಲ್ಲಿ ಸಹ ಪಾಲುದಾರರಿರುತ್ತಿರಲಿಲ್ಲ. ತಮಗೆ ಬೇಕಾದ ಚಾನಲ್ ಹಾಕಿಕೊಂಡು ಆನಂದಿಸುವುದು ಅಭ್ಯಾಸ ವಾಯಿತು. ಅವರಿಬ್ಬರಿಗೂ ಒಮ್ಮತವಿರುತ್ತಿದ್ದುದು ಸಂಜೆಯವೇಳೆಯ ಸಂಗೀತ ಅಥವಾ ನಾಟಕದ ಕಾರ್ಯಕ್ರಮಗಳಲ್ಲಿ. ಸಂಜೆಯಾಯಿತೆಂದರೆ ಇಬ್ಬರೂ ತಮಗಿಷ್ಟವಾದ ಕಾರ್ಯಕ್ರಮಕ್ಕೆ ಹೋಗಿಬರುವುದೂ ವಾಡಿಕೆಯಾಯಿತು. ಈ ವಿಷಯದಲ್ಲಿ ಅವರ ಅನ್ಯೋನ್ಯತೆ ಮೆಚ್ಚಬೇಕಾದದ್ದೇ!!
 ಈ ರೀತಿ ದಂಪತಿ ಪರಸ್ಪರ ಹವ್ಯಾಸಗಳನ್ನು ಗೌರವಿಸುತ್ತಾ  ಸಮರಸವೇ ಜೀವನ ಎಂದು ಬಾಳ ಸಂಜೆಯ ಸವಿಯನ್ನುಣ್ಣುತ್ತಿದ್ದಾರೆ.
 ಹೌದು ‘ಸಮರಸವೇ ಜೀವನವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT