ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ದೊಡ್ಡ ಪಟ್ಟಿ ಬಿಚ್ಚಿಟ್ಟ ನಾಗರಿಕರು

‘ಪ್ರಜಾವಾಣಿ’,‘ಡೆಕ್ಕನ್‌ ಹೆರಾಲ್ಡ್‌’ನ ‘ಸಹಭಾಗಿತ್ವದಿಂದ ಬದಲಾವಣೆ’ ಕಾರ್ಯಕ್ರಮ
Last Updated 3 ಅಕ್ಟೋಬರ್ 2015, 19:28 IST
ಅಕ್ಷರ ಗಾತ್ರ

ಬೆಂಗಳೂರು: ಪಾದಚಾರಿ ಮಾರ್ಗ ಅತಿಕ್ರಮಣ, ಉದ್ಯಾನ ಅಭಿವೃದ್ಧಿಗೆ ನಿರ್ಲಕ್ಷ್ಯ, ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಬೀದಿ ನಾಯಿಗಳು ಹಾಗೂ ಸೊಳ್ಳೆ ಕಾಟ ಸೇರಿದಂತೆ ಹತ್ತಾರು ಸಮಸ್ಯೆಗಳು...

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ನಿಂದ ಶನಿವಾರ ರಾಜಾಜಿನಗರ ಎರಡನೇ ಬ್ಲಾಕ್‌ನ ಡಾ. ರಾಜ್‌ಕುಮಾರ್‌ ಕಲಾಕ್ಷೇತ್ರದಲ್ಲಿ  ಆಯೋಜಿಸಿದ್ದ ‘ಸಹಭಾಗಿತ್ವದಿಂದ ಬದಲಾವಣೆ’  ಕಾರ್ಯಕ್ರಮದಲ್ಲಿ ನಾಗರಿಕರು ಜನಪ್ರತಿನಿಧಿಗಳ ಮುಂದೆ ಇಟ್ಟ ಸಮಸ್ಯೆಗಳ ಪಟ್ಟಿ ಇದು.

ಕ್ಷೇತ್ರದ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸಿದ್ದ ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡು ಸ್ಥಳದಲ್ಲೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಕೆಲವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡಿದ ಉತ್ತರಕ್ಕೆ ತೃಪ್ತರಾದರೆ, ಮತ್ತೆ ಕೆಲವರು ಅದಕ್ಕೆ ಬೇಸರ ವ್ಯಕ್ತಪಡಿಸಿ ತಮ್ಮ ಅಸಮಾಧಾನ ಹೊರಹಾಕಿದರು.

‘ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿರುವುದರಿಂದ ನನ್ನಂತಹ ಹಿರಿಯ ನಾಗರಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಈ ಸಂಬಂಧ ಹಲವು ಸಲ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಶಿವನಗರ ನಿವಾಸಿ ಗೋಪಾಲ್‌ ಕಾಮತ್‌ ಆರೋಪ ಮಾಡಿದರು.

‘ಅನೇಕ ಕಡೆ ಪಾದಚಾರಿ ಮಾರ್ಗಗಳಲ್ಲಿ ಗುಂಡಿ ಬಿದ್ದಿವೆ. ಎಷ್ಟೊ ಜನ ನಿತ್ಯ ಬೀಳುತ್ತಾರೆ. ಆದರೆ ಅದರ ಬಗ್ಗೆ ಸುದ್ದಿಯಾಗುವುದಿಲ್ಲ. ಮೊನ್ನೆ ಸಚಿವರೊಬ್ಬರು ಬಿದ್ದರೆ ದೊಡ್ಡ ಸುದ್ದಿಯಾಯಿತು. ಇದು ಎಂತಹ ನ್ಯಾಯ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಭಾಕರ್‌, ‘ಶೀಘ್ರದಲ್ಲೆ ಅತಿಕ್ರಮಣ ತೆರವು ಮಾಡಲಾಗುವುದು. ಈಗಾಗಲೇ ದುರಸ್ತಿ ಕೆಲಸ ಕೈಗೆತ್ತಿಕೊಂಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಎಲ್ಲೆಡೆ ಕೆಲಸ ಪ್ರಾರಂಭವಾಗಲಿದೆ’ ಎಂದು ಸಮಜಾಯಿಷಿ ನೀಡಿದರು.

‘ಸೊಳ್ಳೆ ಕಾಟ ವಿಪರೀತವಾಗಿದೆ. ಒಮ್ಮೆಯೂ ಔಷಧಿ ಹೊಡೆಯುವುದಿಲ್ಲ.  ಇದರಿಂದ ತೀವ್ರ ತೊಂದರೆಯಾಗುತ್ತಿದೆ’ ಎಂದು ಪ್ರಕಾಶ ನಗರದ ನಿವಾಸಿ ವೇಲಾಯುಧನ್‌ ತಿಳಿಸಿದರು.

‘ಸೊಳ್ಳೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಬಡಾವಣೆಯಲ್ಲಿ ಕಡತ ಇರಿಸಲಾಗುವುದು. ಪ್ರತಿ ವಾರ ಸಿಬ್ಬಂದಿ ಫಾಗಿಂಗ್‌ ಮಾಡಿದ ನಂತರ ಸಹಿ ಮಾಡಿ ಹೋಗುತ್ತಾರೆ’ ಎಂದು ಹಿರಿಯ ಆರೋಗ್ಯ ಅಧಿಕಾರಿ ನರಸಿಂಹಲು ಭರವಸೆ ನೀಡಿದರು.

‘14ನೇ ಮುಖ್ಯರಸ್ತೆಯ ಬದಿಯಲ್ಲಿ ಅನೇಕ ಮರಗಳು ಇವೆ. ಅವುಗಳ ಕೊಂಬೆ ಕತ್ತರಿಸಲು ಹೇಳಿದರೆ ಯಾರೊಬ್ಬರು ತಲೆಗೆ ಹಾಕಿಕೊಂಡಿಲ್ಲ’ ಎಂದು ಶಿವನಗರ ನಿವಾಸಿ ಎನ್‌. ವೆಂಕಟೇಶ್‌ ಹೇಳಿದರು.

‘ಶಿವನಗರ, ಬಸವೇಶ್ವರ ನಗರ ಸೇರಿದಂತೆ ಅನೇಕ ಕಡೆ ಈ ಸಮಸ್ಯೆ ಇದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದ್ದಾರೆ. ಅಪಾಯಕ್ಕೆ ಎಡೆಮಾಡಿಕೊಡುವ ಮರಗಳನ್ನು ಗುರುತಿಸಿ ಅವುಗಳನ್ನು ಕಡಿಯಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಾಸಕ ಸುರೇಶ್‌ ಕುಮಾರ್‌ ಹೇಳಿದರು.

‘ಪ್ರಕಾಶ ನಗರದಲ್ಲಿ ರಸ್ತೆಗಳು ಹಾಳಾಗಿ ಒಂದು ವರ್ಷವಾಗಿದೆ. ಆದರೆ ಅದರ ದುರಸ್ತಿ ಮಾಡುತ್ತಿಲ್ಲ. ಇದರಿಂದ ಬಹಳ ತೊಂದರೆಯಾಗುತ್ತಿದೆ’ ಎಂದು ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ತ್ಯಾಗರಾಜ್‌ ತಿಳಿಸಿದರು.

‘ಪ್ರಕಾಶ ನಗರದಲ್ಲಿ ರಸ್ತೆಗಳ ದುರಸ್ತಿಗೆ ಕಾರ್ಯ ಆದೇಶ ಆಗಿದೆ. ಆದರೆ ಕೆಲವರು ಯಾವುದೋ ಕಾರಣಕ್ಕೆ ದೂರು ಸಲ್ಲಿಸಿದ್ದಾರೆ. ಇದರಿಂದ ಕೆಲಸ ನಿಂತಿದೆ. ಆದರೂ ಒಂದು ವಾರದಲ್ಲಿ ಕೆಲಸ ಪ್ರಾರಂಭಿಸಲಾಗುವುದು’ ಎಂದು ಶ್ರೀರಾಮಮಂದಿರದ ಸಹಾಯಕ ಎಂಜಿನಿಯರ್‌ ನಾಗೇಶ್‌ ರೆಡ್ಡಿ ಹೇಳಿದರು.

‘ಇಎಸ್‌ಐ ಆಸ್ಪತ್ರೆ ಸಮೀಪವಿರುವ ಜಾಗವನ್ನು ಮಿನಿ ಅರಣ್ಯ ಮಾಡುತ್ತೇವೆ ಎಂದು ಹಿಂದೆ ಶಾಸಕ ಸುರೇಶ್‌ ಕುಮಾರ್‌ ಅವರು ಭರವಸೆ ಕೊಟ್ಟಿದ್ದರು. ಆದರೆ ಇಲ್ಲಿಯವರೆಗೆ ಆಗಿಲ್ಲ. ಅದರ ಬಗ್ಗೆ ಏನಂತೀರಿ ಸರ್‌’ ಎಂದು ರಾಜಾಜಿನಗರದ ಗೀತಾ ಅವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಸುರೇಶ್‌ ಕುಮಾರ್‌, ‘ನೀವು ಹೇಳಿರುವ  ಜಾಗದಲ್ಲಿ ಥೀಮ್‌ ಪಾರ್ಕ್‌ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದೆ ಬಂದಿದೆ. ಆ ಕೆಲಸ ಶೀಘ್ರದಲ್ಲೆ ನಡೆಯಲಿದೆ’ ಎಂದರು.

‘ರಾಜಾಜಿನಗರ ಕ್ಷೇತ್ರದಲ್ಲಿರುವ ಬಹುತೇಕ ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದು, ಅವುಗಳನ್ನು ದುರಸ್ತಿ ಮಾಡಬೇಕು. ಶೇ 70ರಷ್ಟು ರಸ್ತೆಗಳು ಹಾಳಾಗಿವೆ. ಕಾಮಗಾರಿ ನಡೆದ ಜಾಗದಲ್ಲಿ ಅದರ ಸಂಪೂರ್ಣ ಮಾಹಿತಿ ಒಳಗೊಂಡ ಫಲಕ ಹಾಕಬೇಕು’ ಎಂದು ದಯಾನಂದ ನಗರದ ಚಂದ್ರಯ್ಯ ಆಗ್ರಹಿಸಿದರು.

‘ಪೈಪ್‌ಲೈನ್‌ ಕಾಮಗಾರಿಗಾಗಿ ಇತ್ತೀಚಿಗೆ ಜಲಮಂಡಳಿ ರಸ್ತೆ ಅಗೆದಿತ್ತು.   ಅವುಗಳ ದುರಸ್ತಿಗೆ ₹24 ಕೋಟಿ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆ ಆ ಕೆಲಸ ಮಾಡಲಿದೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಭಾಕರ್‌ ತಿಳಿಸಿದರು.

ಮಧ್ಯೆ ಪ್ರವೇಶಿಸಿ ಮಾತನಾಡಿದ ಸುರೇಶ್‌ ಕುಮಾರ್‌, ‘ಇತ್ತೀಚಿಗೆ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಾಸಕರ ಅನುದಾನದಿಂದ ಅವುಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಒಂದೂವರೆ ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ’ ಎಂದು ಹೇಳಿದರು.

‘ಸರಗಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಯಸ್ಸಾದವರು ಓಡಾಡಲು ಹೆದರಿಕೆಯಾಗುತ್ತಿದೆ. ಇದನ್ನು ತಪ್ಪಿಸಲು ಏನು ಮಾಡಿದ್ದೀರಿ’ ಎಂದು ಬಸವೇಶ್ವರನಗರ ಕ್ಷೇಮಾಭಿವೃದ್ಧಿ ಸಂಘದ ನಂದೀಶ್‌ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ.ಆರ್‌. ಹರೀಶ್‌, ‘ಕಳೆದ ಮೂರು ತಿಂಗಳಿಂದ ಬೆಳಿಗ್ಗೆ 5ರಿಂದ ರಾತ್ರಿ 8ರ ವರೆಗೆ ವಿಶೇಷ ತಂಡಗಳು ಗಸ್ತು ತಿರುಗುತ್ತಿವೆ. ಎಲ್ಲ ಕಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಈಗಾಗಲೇ ಎರಡು ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಇದಕ್ಕೆ ಸ್ಥಳೀಯರ ಸಹಕಾರ ಕೂಡ ಬೇಕು’ ಎಂದು ಹೇಳಿದರು.

‘ರಾಜಾಜಿನಗರದ ಕಾರ್ಡ್‌ ರಸ್ತೆಯಲ್ಲಿ ಅಂಡರ್‌ಪಾಸ್‌ ಮಾಡುವುದಾಗಿ ಹಲವು ವರ್ಷಗಳಿಂದ ಹೇಳುತ್ತಿದ್ದೀರಿ. ಆದರೆ ಕೆಲಸವೇ ಆಗುತ್ತಿಲ್ಲ. ಈಗಲಾದರೂ ಅದಕ್ಕೆ ಸೂಕ್ತ ಉತ್ತರ ಕೊಡಿ’ ಎಂದು ರಾಜಾಜಿನಗರ ನಿವಾಸಿ ಗಂಗಾಧರ್‌ ಕೇಳಿದರು.

‘ಕೆಲ ತಾಂತ್ರಿಕ ಕಾರಣಗಳಿಂದ ಆ ಕೆಲಸ ನಿಂತಿತ್ತು. ಶೀಘ್ರದಲ್ಲೆ ಮತ್ತೊಮ್ಮೆ ಟೆಂಡರ್‌ ಕರೆದು ಕೆಲಸ ಶುರು ಮಾಡಲಾಗುವುದು’ ಎಂದು ಸುರೇಶ್‌ ಕುಮಾರ್‌ ಹೇಳಿದರು.

‘ಹಲವು ವಿಚಾರಗಳ ಬಗ್ಗೆ ಮುಕ್ತ ಮನಸ್ಸಿನಿಂದ ಹೇಳಿಕೊಂಡಿದ್ದೀರಿ. ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಪಾದಚಾರಿ ಮಾರ್ಗದಿಂದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕು ಎಂದು ಕೆಲವರು ಹೇಳಿದ್ದೀರಿ. ಆದರೆ ಅದಕ್ಕೆ ಕಾನೂನಿನ ತೊಡಕಿದೆ. ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗಾಗಿ ಎಲ್ಲರೂ ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು’ ಎಂದೂ ಹೇಳಿದರು.

ಪ್ರಮುಖ ಮೊಬೈಲ್‌ ಸಂಖ್ಯೆಗಳು
(ಶಾಸಕರು ಮತ್ತು ವಾರ್ಡ್‌ ಸದಸ್ಯರು)
* ಶಾಸಕ ಎಸ್‌. ಸುರೇಶ್‌ ಕುಮಾರ್‌–95918 14041
* ದಯಾನಂದ ನಗರ ವಾರ್ಡ್‌ ಸದಸ್ಯೆ ಕುಮಾರಿ ಪಳನಿಕಾಂತ್‌ – 98450 59006
* ಪ್ರಕಾಶ ನಗರ ವಾರ್ಡ್‌ ಸದಸ್ಯೆ ಜಿ. ಪದ್ಮಾವತಿ–96630 00002
* ರಾಜಾಜಿನಗರ ವಾರ್ಡ್‌ ಸದಸ್ಯ ಜಿ. ಕೃಷ್ಣಮೂರ್ತಿ– 94480 44748
* ಬಸವೇಶ್ವರ ನಗರ ವಾರ್ಡ್‌ ಸದಸ್ಯೆ ಉಮಾವತಿ ಪದ್ಮರಾಜ್‌–96325 55537
* ಕಾಮಾಕ್ಷಿಪಾಳ್ಯ ವಾರ್ಡ್‌ ಸದಸ್ಯೆ ಕೆ.ಎಸ್‌. ಪ್ರತಿಮಾ–72047 83965
* ಶಿವನಗರ ವಾರ್ಡ್‌ ಸದಸ್ಯೆ ಮಂಜುಳಾ ವಿಜಯ್‌ ನಗರ– 98450 55813
* ಶ್ರೀ ರಾಮಮಂದಿರ ವಾರ್ಡ್‌ ಸದಸ್ಯೆ ದೀಪಾ ನಾಗೇಶ್‌–94803 19233(ಅಧಿಕಾರಿಗಳು)
* ಲಕ್ಷ್ಮಿನರಸಯ್ಯ, ಬಿಬಿಎಂಪಿ ಜಂಟಿ ಆಯುಕ್ತರು  –94806 85411
* ಪ್ರಭಾಕರ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಬಿಬಿಎಂಪಿ–94806 85235
* ಸುರೇಶ್‌, ಆರೋಗ್ಯ ಅಧಿಕಾರಿ, ಬಿಬಿಎಂಪಿ–94806 83674
* ಮಾಯಣ್ಣಗೌಡ, ಆರೋಗ್ಯ ಇಲಾಖೆ–99452 23752
* ಬಿಬಿಎಂಪಿ ನಿಯಂತ್ರಣ ಕೊಠಡಿ–080 22660000
* ಬೆಸ್ಕಾಂ ನಿಯಂತ್ರಣ ಕೊಠಡಿ–080–22873333
* ಸೈಮನ್‌ ವಿಕ್ಟರ್‌, ಶ್ರೀರಾಮಪುರ ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌–94808 01924
* ಕಲ್ಪನಾ, ಶಿವನಗರ ಆರೋಗ್ಯ ಅಧಿಕಾರಿ–88673 30887

ಪಾಲಿಕೆ ಸದಸ್ಯರ ಅಭಿಪ್ರಾಯ

ನಮ್ಮ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಹೊಸ ಪೈಪ್‌ಲೈನ್‌ ಮಾಡುತ್ತಿದ್ದೇವೆ. ಅಲ್ಲದೇ ಹಳೆ ಮರಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಮುಂಜಾಗರೂಕತಾ ಕ್ರಮವಾಗಿ ಕೆಲವು ಮರಗಳ ಕೊಂಬೆ ಕತ್ತರಿಸಲಾಗುವುದು.
–ದೀಪಾ ನಾಗೇಶ್‌,
ಸದಸ್ಯೆ, ಶ್ರೀರಾಮಮಂದಿರ ವಾರ್ಡ್‌

***
ವಾರ್ಡ್‌ನಲ್ಲಿ ಒಳಚರಂಡಿ, ನೀರಿನ ಸಮಸ್ಯೆ ಪ್ರಮುಖವಾಗಿದೆ. ಈಗಿರುವ ಆರು ಇಂಚಿನ ಪೈಪ್‌ಗಳನ್ನು ಬದಲಿಸಿ 9 ಇಂಚಿನ ಪೈಪ್‌ ಹಾಕಲಾಗುವುದು. ಉದ್ಯಾನ ನಿರ್ವಹಣೆಗೆ ಒತ್ತು ನೀಡಲಾಗುವುದು.
–ಮಂಜುಳಾ ವಿಜಯ್‌ ಕುಮಾರ್‌,
ಸದಸ್ಯೆ ಶಿವನಗರ ವಾರ್ಡ್‌

***
ತ್ಯಾಜ್ಯದ ಸಮಸ್ಯೆ ಪ್ರಮುಖವಾಗಿದ್ದು, ಅದನ್ನು ಬಗೆಹರಿಸಲು ಮೊದಲ ಆದ್ಯತೆ ನೀಡಲಾಗುವುದು. ಕಾರ್ಪೊರೇಷನ್‌ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುತ್ತೇನೆ.
–ಕುಮಾರಿ ಪಳನಿಕಾಂತ್‌,
ಸದಸ್ಯೆ ದಯಾನಂದ ನಗರ ವಾರ್ಡ್‌

***
ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ಈ ಸಂಬಂಧ ಸ್ಥಳೀಯರಿಂದ ಸಾಕಷ್ಟು ದೂರು ಬಂದಿವೆ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇನೆ.
–ಕೆ.ಎಸ್‌. ಪ್ರತಿಮಾ,
ಸದಸ್ಯೆ ಕಾಮಾಕ್ಷಿಪಾಳ್ಯ ವಾರ್ಡ್‌

***
ಸ್ವಚ್ಛ ಹಾಗೂ ಗುಂಡಿಮುಕ್ತ ಪ್ರಕಾಶ ನಗರ ಮಾಡುವುದು ನನ್ನ ಗುರಿ. ತ್ಯಾಜ್ಯ ಹಾಗೂ ನೀರಿನ ಸಮಸ್ಯೆಯೂ ಬಹಳ ದೊಡ್ಡದಿದೆ.  ಅದನ್ನು ಬಗೆಹರಿಸುವುದು ನನ್ನ ಮೊದಲ ಆದ್ಯತೆಯಾಗಿದೆ.
–ಜಿ. ಪದ್ಮಾವತಿ,
ಸದಸ್ಯೆ ಪ್ರಕಾಶ ನಗರ

***
ಎಲ್ಲರಿಗೂ ಸರಿಯಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ತ್ಯಾಜ್ಯ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾಗುವುದು. ನೇತಾಜಿ ಉದ್ಯಾನದ ಅಭಿವೃದ್ಧಿಗೆ ಕ್ರಮ
–ಉಮಾವತಿ ಪದ್ಮರಾಜ್‌,
ಸದಸ್ಯೆ ಬಸವೇಶ್ವರ ನಗರ ವಾರ್ಡ್‌

***
ಸರಗಳ್ಳತನ ಪ್ರಕರಣ ಹೆಚ್ಚುತ್ತಿರುವ ಕಾರಣ ರಾಜಾಜಿನಗರ ಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿ 100 ಸಿಸಿಟಿವಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದೆ
-ಎಸ್‌. ಸುರೇಶ್‌ ಕುಮಾರ್‌,
ಶಾಸಕ, ರಾಜಾಜಿನಗರ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT