ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ವಾಗ್ದಾನ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನ ‘ಸಹಭಾಗಿತ್ವದಿಂದ ಬದಲಾವಣೆ’ ಕಾರ್ಯಕ್ರಮ
Last Updated 10 ಅಕ್ಟೋಬರ್ 2015, 10:43 IST
ಅಕ್ಷರ ಗಾತ್ರ

ಬೆಂಗಳೂರು:  ‘ಸ್ವಾಮಿ, ಪೂರ್ವ ದಿಕ್ಕಿನ ಫ್ಲ್ಯಾಟ್‌ ಎಂದು ಖುಷಿಯಿಂದ ಕೊಂಡೆವು.  ಆದರೆ, ಬಾಗಿಲು ತೆರೆಯಲು ಆಗದಷ್ಟು ಬಯಲು ಮೂತ್ರವಿಸರ್ಜನೆಯ ಅಸಹ್ಯ ದೃಶ್ಯ ನೋಡಬೇಕಾಗಿದೆ. ದಯವಿಟ್ಟು, ಸಮಸ್ಯೆ ಪರಿಹರಿಸಿ’

‘ಟ್ಯಾಗೋರ್‌ ಸರ್ಕಲ್‌, ಅಂಡರ್‌ಪಾಸ್‌ ಅಂದ್ರೆ ಪ್ರಾಬ್ಲಂ. ಅಲ್ಲಿ ಅಪಘಾತವಾಗಿ ಜೀವ ಹೋದ ನಂತರ ಗಮನ ಹರಿಸುವ ಮೊದಲೇ ಅಲ್ಲಿನ ಸಮಸ್ಯೆ ಬಗೆಹರಿಸಿ’

‘ನಮ್ಮ ಏರಿಯಾದಲ್ಲಿರೋ ಮೂರು ಖಾಲಿ ಸೈಟ್‌ ತುಂಬಾ ತ್ಯಾಜ್ಯ ವಸ್ತು ತುಂಬಿ  ಹೋಗಿವೆ. ಸೊಳ್ಳೆ, ನೊಣ ಹೆಚ್ಚಿ ಸಾಂಕ್ರಾಮಿಕ ರೋಗ ಹರಡುತ್ತಿವೆ. ಇದಕ್ಕೆ ಮುಕ್ತಿ ಯಾವಾಗ?’

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ನಿಂದ ಶುಕ್ರವಾರ ವಿದ್ಯಾಪೀಠ ವೃತ್ತದ ಬಳಿಯ ಕುವೆಂಪು ರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ‘ಸಹಭಾಗಿತ್ವದಿಂದ ಬದಲಾವಣೆ’  ಕಾರ್ಯಕ್ರಮದಲ್ಲಿ ಇಂತಹ ಅನೇಕ ಪ್ರಶ್ನೆಗಳು ಜನಪ್ರತಿನಿಧಿಗಳತ್ತ ತೂರಿಬಂದವು.

ವೇದಿಕೆಯ ಮೇಲಿದ್ದ ಶಾಸಕ ರವಿ ಸುಬ್ರಮಣ್ಯ, ಕ್ಷೇತ್ರದ ಎಲ್ಲ ವಾರ್ಡ್‌ಗಳ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ರಸ್ತೆ ಗುಂಡಿಗಳು, ಸಂಚಾರ ದಟ್ಟಣೆ, ತ್ಯಾಜ್ಯ ವಿಲೇವಾರಿ, ಬೀದಿ ನಾಯಿ ಕಾಟ, ಪೋಸ್ಟರ್‌ ಹಾವಳಿ, ಒಳಚರಂಡಿ ಸಮಸ್ಯೆ, ಪಾದಚಾರಿ ಮಾರ್ಗ ಅತಿಕ್ರಮಣ  ಸೇರಿದಂತೆ ಅನೇಕ ವಿಷಯಗಳ ಕುರಿತು ನಾಗರಿಕರು ಕುಂದುಕೊರತೆಗಳನ್ನು ಹೇಳಿಕೊಂಡರು.

ವಾರ್ಡ್‌ವಾರು ಕುಂದು ಕೊರತೆಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಾಗಿ ಭರವಸೆ ನೀಡಿದ ಪಾಲಿಕೆ ಸದಸ್ಯರು, ಸಮಸ್ಯೆಗಳ ಪಟ್ಟಿಗೆ ಸಹಿ ಹಾಕುವ ಮೂಲಕ ಅದನ್ನು ಈಡೇರಿಸುವ ವಾಗ್ದಾನ ಮಾಡಿದರು.

ಬನಶಂಕರಿ ಮೊದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪ್ರೊ.ಬಿ.ಕೆ.ಹನುಮಂತಯ್ಯ ಮಾತನಾಡಿ, ‘ನೆಟ್ಟಕಲ್ಲಪ್ಪ ವೃತ್ತದ ಹತ್ತಿರ ಪಾದಚಾರಿ ಮಾರ್ಗ ಹಾಳಾಗಿ, ಬೀದಿ ವ್ಯಾಪಾರಿಗಳಿಂದ ಅತಿಕ್ರಮಣಕ್ಕೆ ಒಳಗಾಗಿದೆ. ಅಲ್ಲಿರುವ ಬ್ಯಾಂಕಿಗೆ ಬರಲು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಅಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ಶೀಘ್ರದಲ್ಲಿಯೇ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಬಸವನಗುಡಿ ನಿವಾಸಿ ಆನಂದ್‌ ಅವರು, ‘ಮೊದಲೇ ನಾವು ಕಲ್ಯಾಣ ಮಂಟಪಗಳಿಂದ ನರಕ ಯಾತನೆ ಅನುಭವಿಸುತ್ತಿದ್ದೇವೆ. ಇದೀಗ ಬಸವನಗುಡಿ ಕೋ ಆಪರೇಟಿವ್‌ ಸೊಸೈಟಿಯವರು ಎನ್‌.ಆರ್.ಕಾಲೊನಿಯಲ್ಲಿ ಮತ್ತೊಂದು ಕಲ್ಯಾಣ ಮಂಟಪ ನಿರ್ಮಿಸಲು ಹೊರಟಿದ್ದಾರೆ. ಕೈಮುಗಿದು ಬೇಡುತ್ತೇನೆ. ದಯವಿಟ್ಟು ಅದಕ್ಕೆ ಅನುಮತಿ ನೀಡಬೇಡಿ’ ಎಂದು ಮನವಿ ಮಾಡಿಕೊಂಡರು.

ಅದಕ್ಕೆ ಉತ್ತರಿಸಿದ ಬಸವನಗುಡಿ ವಾರ್ಡ್‌ ಸದಸ್ಯ ಬಿ.ಎಸ್.ಸತ್ಯನಾರಾಯಣ, ‘ಅಲ್ಲಿ ಕಲ್ಯಾಣ ಮಂಟಪ ನಿರ್ಮಿಸಲು ನಮ್ಮದು ಸಹ ವಿರೋಧವಿದೆ. ಯಾವುದೇ ಕಾರಣಕ್ಕೂ ಅಲ್ಲಿ ಅದನ್ನು ನಿರ್ಮಿಸಲು ಬಿಡುವುದಿಲ್ಲ’ ಎಂದು ಹೇಳಿದರು.

ಜನಾಭಿಪ್ರಾಯ...
ವೃತ್ತ ಬಸ್‌ ನಿಲ್ದಾಣವಾಗಿದೆ

ಖಾಸಗಿ ಬಸ್‌ಗಳ ಹಾವಳಿ ಹೆಚ್ಚಿ ವಿದ್ಯಾಪೀಠ ವೃತ್ತ ಸಂಜೆಯಾಗುತ್ತಿದ್ದಂತೆ ಸಣ್ಣ ಬಸ್‌ ನಿಲ್ದಾಣವಾಗಿ ಬದಲಾಗುತ್ತಿದೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಸಂಬಂಧಪಟ್ಟರು ಗಮನ ಹರಿಸಲಿ
-ಬಿ.ಎನ್.ಚಂದ್ರಶೇಖರ್,
ಎಂಎನ್‌ಕೆ ಪಾರ್ಕ್‌ ನಡಿಗೆದಾರರ ಬಳಗದ ಅಧ್ಯಕ್ಷ

ವಾರ್ಡ್‌ ಸಮಿತಿ ರಚಿಸಿ
ನೋಂದಾಯಿತ ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳ ಕಾರ್ಯದರ್ಶಿಗಳನ್ನು ಹೊಸದಾಗಿ ಅಸ್ತಿತ್ವಕ್ಕೆ ಬರುವ ವಾರ್ಡ್‌ ಸಮಿತಿಗಳಲ್ಲಿ ಸದಸ್ಯರನ್ನಾಗಿ ನೇಮಕ ಮಾಡಬೇಕು.
-ಪ್ರೊ.ಬಿ.ಕೆ.ಹನುಮಂತಯ್ಯ

ರಸ್ತೆ ಕಿತ್ತು ಹೋಗಿವೆ
ನಮ್ಮ ಬಡಾವಣೆಯಲ್ಲಿ ರಸ್ತೆಗಳು ಕಿತ್ತು ಹೋಗಿವೆ. ಮಳೆ ಸುರಿದರೆ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ ವಾಗುತ್ತವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ.
-ಆರ್.ಶೋಭಾ,
ಕತ್ರಿಗುಪ್ಪೆ ನಿವಾಸಿ

ಮುಖ್ಯಾಂಶಗಳು
* ಶಾಸಕರು, ವಾರ್ಡ್‌ ಸದಸ್ಯರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿ
* ಮೂಲಸೌಕರ್ಯ ಸೇರಿ ಹಲವು ಸಮಸ್ಯೆಗಳ ಬಗ್ಗೆ ದೂರು ಹೇಳಿದ ನಾಗರಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT