ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹಾರಕ್ಕೆ 3 ಸಮಿತಿ

ಚಿತ್ರ ನಿರ್ಮಾಪಕರ ಧರಣಿ ಮುಂದುವರಿಕೆ
Last Updated 3 ಜೂನ್ 2015, 20:13 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನಿರ್ಮಾಪಕರು ನಡೆಸುತ್ತಿರುವ ಧರಣಿ  ಮೂರನೆ ದಿನಕ್ಕೆ ಕಾಲಿಟ್ಟಿದೆ.

ಈ ನಡುವೆ  ಮಂಗಳವಾರ ಪ್ರದರ್ಶಕರು, ವಿತರಕರು ಮತ್ತು ನಿರ್ಮಾಪಕರ ತುರ್ತು ಸಭೆಯನ್ನು ವಾಣಿಜ್ಯ ಮಂಡಳಿ ನಡೆಸಿತು. ನಿರ್ಮಾಪಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಲಾವಿದರ ಜತೆ ಮಾತುಕತೆ ನಡೆಸಲು, ಚಿತ್ರಮಂದಿರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಸ್ಯಾಟಲೈಟ್ ಹಕ್ಕು ಮಾರಾಟ ಗೊಂದಲಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಯಿತು. ನಟರಾದ ಜಗ್ಗೇಶ್ ಮತ್ತು ತಾರಾ ಅನೂರಾಧ ವಿಶೇಷ ಆಹ್ವಾನಿತರಾಗಿ  ಸಭೆಯಲ್ಲಿ ಪಾಲ್ಗೊಂಡಿದ್ದರು.

‘ವಿವಾದಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸೂಚಿಸಿದವರು ಮಾತ್ರ ಮಂಡಳಿಯ ಪ್ರತಿನಿಧಿಯಾಗಿ ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪ್ರತಿನಿಧಿಗಳು ಆಗ್ರಹಿಸಿದ್ದು, ಇದರಂತೆ ನಡೆದುಕೊಳ್ಳಲಾಗುವುದು’ ಎಂದು ಎಂದು ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾ.ಮ. ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್, ಎ. ಗಣೇಶ್, ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ಕಾರ್ಯದರ್ಶಿ ಭಾ.ಮ. ಹರೀಶ್, ಬಿ.ಆರ್. ಕೇಶವ್, ತಾರಾ ಅನೂರಾಧ, ಜಗ್ಗೇಶ್ ಮತ್ತು ಪ್ರವೀಳಾ ಜೋಷಾಯ್ ಅವರನ್ನೊಳಗೊಂಡ ಒಂದು ಸಮಿತಿ ರಚಿಸಲಾಗಿದೆ. ಈ ಸಮಿತಿಯು ಕಲಾವಿದರನ್ನು ಭೇಟಿ ಮಾಡಿ ನಿರ್ಮಾಪಕರ ಸಂಕಷ್ಟಗಳೇನು, ಅವುಗಳಿಗೆ ಯಾವ ರೀತಿ ಸ್ಪಂದಿಸಬೇಕು ಎಂದು ಮನವರಿಕೆ ಮಾಡಿಕೊಡಲಿದೆ. ಕೆ.ಸಿ.ಎನ್. ಚಂದ್ರಶೇಖರ್, ಎನ್‌. ಕುಮಾರ್, ನಾರಾಯಣ ರೆಡ್ಡಿ, ನರಸಿಂಹಲು ಹಾಗೂ ಆನಂದ್ ಅವರನ್ನು ಒಳಗೊಂಡ ಸಮಿತಿಯು ಚಿತ್ರಮಂದಿರಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕಲಿದೆ.

ಸ್ಯಾಟಲೈಟ್‌ ಹಕ್ಕುಗಳ ಮಾರಾಟಕ್ಕೆ ಸಂಬಂಧಿಸಿದಂತೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ಮಾಪಕರಾದ ಕೆ. ಮಂಜು, ಜಯಣ್ಣ, ರಾಮು ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ವಾಹಿನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ, ನಿರ್ಮಾಪಕರು ಸಂಕಷ್ಟದಲ್ಲಿದ್ದು ಚಿತ್ರಗಳ ಯೋಗ್ಯತೆಗೆ ಅನುಸಾರ ಹಕ್ಕುಗಳನ್ನು ತೆಗೆದುಕೊಳ್ಳುವಂತೆ ಮನವೊಲಿಸಲಿದೆ’ ಎಂದು ಹರೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT