ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ‘ಇಷ್ಟು’ ಮಾತ್ರವೇ?

ಅಂಕುರ- 24
Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನನ್ನ ಕತೆ, ಸಣ್ಣ ಕತೆ...
ನನಗಾಗ ಒಂಬತ್ತು ವರ್ಷ. ತುಂಬ ಗೊಂದಲಕ್ಕೆ ಒಳಗಾದ ಮಗು ನಾನಾಗಿದ್ದೆ. ಆಗಾಗ ಹಾಸಿಗೆಯನ್ನೂ ಒದ್ದೆ ಮಾಡಿಕೊಳ್ಳುತ್ತಿದ್ದೆ. ಎಚ್ಚರವಾಗುವುದೂ ಈ ತೇವದಿಂದಲೇ. ಇಡೀ ಹಾಸಿಗೆ ಮೂತ್ರದಿಂದ ತೊಯ್ದು ತೊಪ್ಪೆ ಆಗಿರುತ್ತಿತ್ತು. ಎಲ್ಲವನ್ನೂ ಒಗೆಯಲು ಕೊಡುವುದು, ಹಾಸಿಗೆಯನ್ನು ಬಿಸಿಲಿಗೆ ಹಾಕುವುದು ಸಾಮಾನ್ಯವಾಗಿತ್ತು. ಒಂದು ಸಲ ಒಬ್ಬ ಸ್ನೇಹಿತನ ಮನೆಗೆ ಹೋಗಿದ್ದೆ. ಅಲ್ಲಿಯೂ ಹಾಗೆಯೇ ಆದಾಗ ಅವರಮ್ಮ ಅಪರಾ ತಪರಾ ಬೈದರು. ಅದೇ ಕೊನೆ. ಯಾರ ಮನೆಗೂ ಹೋಗುವ ಧೈರ್ಯ ಆಗಲಿಲ್ಲ.

12 ವರ್ಷದವನಾದಾಗ ಈ ಸಮಸ್ಯೆ ಇರಲಿಲ್ಲ. ಆದರೆ ‘ಭಾರೀ’ ಸಮಸ್ಯೆಯೊಂದು ಇತ್ತು. ನಾನು ಸ್ಥೂಲಕಾಯದವನಾಗಿದ್ದೆ. ಯಾವಾಗಲೂ ಏನಾದರೂ ತಿನ್ನುತ್ತಲೇ ಇರುತ್ತಿದ್ದೆ. ಜಂಕ್‌ ಫುಡ್‌ ಕಬಳಿಸುವುದೆಂದರೆ ಇಷ್ಟದ ಕೆಲಸವಾಗಿತ್ತು. ಆದರೆ ಶಾಲೆಯಲ್ಲಿ ದೈಹಿಕ ಕಸರತ್ತನ್ನು ಕಡ್ಡಾಯ ಮಾಡಿದರು. ದೇಹ ದಂಡಿಸಲೇಬೇಕಾಗಿತ್ತು. ಅಲ್ಲಿ... ನನ್ನ ಬಗ್ಗೆ ನಾನು ಗಮನಸಿಲಾರಂಭಿಸಿದೆ. ಎಲ್ಲ ಹುಡುಗರಿಗಿಂತ ಭಿನ್ನ ಎನಿಸತೊಡಗಿತ್ತು. ನನ್ನ ಸಹಪಾಠಿಗಳಾಗಲೇ ಪ್ರೌಢಾವಸ್ಥೆಯನ್ನು ತಲುಪಿದ್ದರು. ಅಲ್ಲಿ ಬಟ್ಟೆ ಬದಲಿಸುವಾಗಲೆಲ್ಲ ನಾನು ಮುಜುಗರಕ್ಕೆ ಈಡಾಗುತ್ತಿದ್ದೆ. ನನ್ನ ದೇಹ ನನ್ನ ಅಭಿಮಾನವಾಗದೇ ಅಪಮಾನವೆನಿಸತೊಡಗಿತ್ತು. ಉಳಿದ ಹುಡುಗರಿಗೆ ಆಡಿಕೊಳ್ಳುವ, ನಗುವ ವಸ್ತುವಾಗಿದ್ದೆ ನಾನು.

ನಿಮಗೀಗ ಅಂದಾಜು ಆಗಿರಬಹುದಲ್ಲ, ನನ್ನ ಸಮಸ್ಯೆ ಏನೆಂದು..?
ನೀವು ಈ ಸಮಸ್ಯೆಯನ್ನು ಅಂದಾಜಿಸುವ ಮುನ್ನ ಒಂದು ವಿಷಯ ಸ್ಪಷ್ಟ ಪಡಿಸುವೆ. ಬಹುತೇಕ ಪುರುಷರಿಗೆ ತಮ್ಮ ಜನನಾಂಗದ ಗಾತ್ರ ಸಣ್ಣದಿದೆ ಎಂಬ ಆತಂಕವಿರುತ್ತದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ‘ತೃಣ ಶಿಶ್ನ’ (ಮೈಕ್ರೊ ಪೆನ್ನಿಸ್‌) ಎಂಬ ಪರಿಸ್ಥಿತಿಯೂ ಇದೆ. ಈ ಸ್ಥಿತಿಯನ್ನು ಮಗುವಿನ ಜನನವಾದ ಕೂಡಲೇ ಗಮನಿಸಬಹುದಾದ ಪರಿಸ್ಥಿತಿ ಇದು. ಈ ಸ್ಥಿತಿಯಲ್ಲಿ ವೃಷಣ ಕೋಶ, ಮೂಲಾಧಾರಗಳಿದ್ದು, ಜನನಾಂಗದ ಗಾತ್ರ ಮಾತ್ರ ಅತಿ ಚಿಕ್ಕದಾಗಿದ್ದಲ್ಲಿ ಮತ್ತು ಬೆಳವಣಿಗೆ ಕಾಣದಿದ್ದಲ್ಲಿ ಈ ಸ್ಥಿತಿಗೆ ತೃಣ ಶಿಶ್ನದ ಹೆಸರು ಕೊಡಬಹುದು.

ಎಷ್ಟುದ್ದವಿದ್ದರೆ ತೃಣ ಶಿಶ್ನ?
ಶಿಶ್ನವನ್ನು ಹಿಡಿದೆಳೆದು ನೋಡಿದಾಗ ಸರಾಸರಿ ಉದ್ದ 2.5ಇಂಚುಗಳಿಗಿಂತ ಕಡಿಮೆ ಇದ್ದಲ್ಲಿ ತೃಣ ಶಿಶ್ನವೆಂಬ ತೀರ್ಮಾನಕ್ಕೆ ಬರಬಹುದು. ಪ್ರೌಢಾವಸ್ಥೆ ವ್ಯಕ್ತಿಯ ಶಿಶ್ನದ ಉದ್ದವು ಆರೋಗ್ಯವಂತ ಪುರುಷರ ಸರಾಸರಿ ಉದ್ದವನ್ನು 2.5 ಇಂಚು ಎಂದು ನಿರ್ಧರಿಸಲಾಗಿದೆ. ಜನನಾಂಗವು ಇದಕ್ಕಿಂತ ಕಡಿಮೆ ಉದ್ದದ್ದಾಗಿದ್ದರೆ ಸಮಸ್ಯೆ ಇದೆ ಎಂದು ಪರಿಗಣಿಸಬಹುದು. ವಯಸ್ಸನ್ನು ಆಧರಿಸಿ, ಶಿಶ್ನದ ಉದ್ದಳತೆಯನ್ನು ನೋಡಿ, ಸಮಸ್ಯೆಯ ಗಾಂಭೀರ್ಯವನ್ನು ನಿರ್ಧರಿಸಲಾಗುತ್ತದೆ. ಶಿಶುಗಳಲ್ಲಿ ಜನನಾಂಗವು 075ಇಂಚಿಗಿಂತ ಕಡಿಮೆ ಇದ್ದರೆ ಅದನ್ನು ಸಾಮಾನ್ಯ ಮಗುವಿನ ಜನನಾಂಗಕ್ಕಿಂತ ಅತಿ ಚಿಕ್ಕದಾದ ಅಳತೆಯದ್ದು ಎಂದು ಭಾವಿಸಲಾಗುತ್ತದೆ. ಸಾಮಾನ್ಯ ಮಗುವಿನ ಶಿಶ್ನದ ಉದ್ದವನ್ನು ಮೆಲ್ಲನೆ ಹಿಡಿದೆಳೆದಾಗ 1.1ರಿಂದ 1.6 ಇಂಚಿನಷ್ಟಾದರೂ ಕಂಡು ಬರುತ್ತದೆ.

ತೃಣ ಶಿಶ್ನದ ಸಮಸ್ಯೆಗಳೇನು?
ತೃಣ ಶಿಶ್ನವನ್ನು ಹೊಂದಿರುವ ಪುರುಷರು ಸಾಮಾನ್ಯವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಸರಾಗವಾದ ಮೂತ್ರ ವಿಸರ್ಜನೆ ಹಾಗೂ ಸಂಭೋಗದಲ್ಲಿ ತೊಡಗಿಸಿಕೊಳ್ಳಲು ಆಗದೇ ಇರುವುದು ಪ್ರಮುಖವಾದುದು. ಇದರೊಂದಿಗೆ ಅವರ ಫಲವಂತಿಕೆಯ ಮೇಲೆಯೂ ಪರಿಣಾಮ ಬೀರಬಹುದು. ತೃಣ ಶಿಶ್ನ ಇರುವ ಬಹುತೇಕ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಅತಿ ಕಡಿಮೆಯಾಗಿರುತ್ತದೆ. ಫಲವಂತಿಕೆಯ ಪ್ರಮಾಣ ಕಡಿಮೆಯಾಗಲು ಇದೇ ಮೂಲ ಕಾರಣವಾಗಿರುತ್ತದೆ. ಈ ದೈಹಿಕ ತೊಂದರೆಗಳಲ್ಲದೆ ಮಾನಸಿಕವಾಗಿಯೂ ಇಂಥ ಪುರುಷರು ಕುಗ್ಗಿರುತ್ತಾರೆ. ಖಿನ್ನತೆಗೆ ಒಳಗಾಗಿರುತ್ತಾರೆ. ಅವರ ಮಾನಸಿಕ ಆರೋಗ್ಯ ಸ್ಥಿತಿಯ ಮೇಲೆ ತೃಣ ಶಿಶ್ನವು ಪ್ರಭಾವ ಬೀರುವುದು ಸಾಮಾನ್ಯವಾಗಿದೆ.

ತೃಣ ಶಿಶ್ನಕ್ಕೆ ಕಾರಣವೇನು?
ಸಾಮಾನ್ಯವಾಗಿ ಇದು ಹುಟ್ಟಿನಿಂದಲೇ ಬರುವ ಸಮಸ್ಯೆಯಾಗಿರುತ್ತದೆ. ಫಲಿತ ಭ್ರೂಣವು ಮೂರು ತಿಂಗಳು ಕಳೆದ ನಂತರ ಬೆಳೆಯುವಲ್ಲಿ ವಿಫಲವಾದರೆ, ಮುಂದಿನ ಇನ್ನೆರಡು ತ್ರೈಮಾಸಿಕ ಹಂತದಲ್ಲಿಯೂ ಬೆಳೆಯುವುದೇ ಇಲ್ಲ. ಇದಕ್ಕೆ ಹಾರ್ಮೋನುಗಳ ಉತ್ಪತ್ತಿಯೇ ಮೂಲಕಾರಣವೆಂದು ಹೇಳಲಾಗುತ್ತದೆ. ವಿಶೇಷವಾಗಿ ಟೆಸ್ಟೊಸ್ಟೆರೊನ್‌ ಹಾರ್ಮೋನು ಸಾಕಷ್ಟು ಪ್ರಮಾಣದಲ್ಲಿ ಭ್ರೂಣಕ್ಕೆ ಲಭಿಸದಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಸಾಕಷ್ಟು ಪ್ರಮಾಣದ ಟೆಸ್ಟೊಸ್ಟೆರೊನ್‌ ಹಾರ್ಮೋನ್‌ ಲಭ್ಯವಿದ್ದರೂ ಭ್ರೂಣ ಅದನ್ನು ಹೀರಿಕೊಳ್ಳಲು ಶಕ್ತವಿರುವುದಿಲ್ಲ. ಅಥವಾ ಹೀರಿಕೊಳ್ಳುವುದೇ ಇಲ್ಲ. ಭ್ರೂಣವು ಈ ಹಾರ್ಮೋನಿಗೆ ಸ್ಪಂದಿಸುವುದೇ ಇಲ್ಲ. ಆ ಸಂದರ್ಭದಲ್ಲಿಯೂ ತೃಣ ಶಿಶ್ನದ ಸಮಸ್ಯೆಯನ್ನು ಹೊತ್ತೇ ಮಗು ಹುಟ್ಟುತ್ತದೆ.

ಆನುವಂಶಿಕ ಕಾರಣಗಳಿಂದಲೂ ಈ ಸಮಸ್ಯೆ ಬರುತ್ತದೆ ಎಂದು ಕೆಲವು ಸಂಶೋಧನೆಗಳು ಫಲಿತಾಂಶವು ಹೇಳುತ್ತವೆ. ವಂಶವಾಹಿಗಳಲ್ಲಿ ಎಸ್‌ಆರ್‌ಡಿ5ಎ2 (SRD5A2 )ಸರಣಿಯ ವಂಶವಾಹಿಯು 5 ಅಲ್ಫಾದ ಹುಟ್ಟಿಗೆ ಕಾರಣವಾಗಿರುತ್ತದೆ. ಈ ಅಂಶವು ಟೆಸ್ಟೊಸ್ಟೆರೆನ್‌ ಅನ್ನು ನಿರ್ಧರಿಸುತ್ತದೆ. ಈ ವಂಶವಾಹಿಯ ವ್ಯತ್ಯಾಸದಿಂದಲೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದಲ್ಲದೇ ವಂಶವಾಹಿಯಲ್ಲಿ ಈ ಸಮಸ್ಯೆ ಬರಲು ಕೆಲವು ಪರಿಸರ ಸಂಬಂಧಿ ಕಾರಣಗಳನ್ನೂ ಸಂಶೋಧಕರು ಪತ್ತೆ ಮಾಡಿದ್ದಾರೆ. ಒಂದು ವೇಳೆ ಕೀಟನಾಶಕ, ಡೈಆಕ್ಸಿನ್ಸ್‌ಗಳ ಸೇವನೆ ಯಾವುದೇ ರೂಪದಲ್ಲಿ ಆಗುತ್ತಿದ್ದರೆ ಈ ಸಮಸ್ಯೆ ಕಂಡು ಬರುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಇದು ಸಾಮಾನ್ಯ ಸಮಸ್ಯೆಯೇ?
ಗಾತ್ರದಲ್ಲಿ ಚಿಕ್ಕದಾದ ಮಾತ್ರಕ್ಕೆ ಎಲ್ಲವನ್ನೂ ತೃಣ ಶಿಶ್ನವೆಂದು ಪರಿಗಣಿಸಲಾಗದು ಎನ್ನುವುದು ನೆನಪಿಟ್ಟುಕೊಂಡು ಈ ಸಮಸ್ಯೆಯತ್ತ ಗಮನ ಹರಿಸೋಣ. ಸಾಮಾನ್ಯವಾಗಿ 200 ಪುರುಷರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಂಡು ಬರುತ್ತದೆ. ಆದರೆ ಹೆಚ್ಚು ಚರ್ಚಿತವಾಗದ ಸಮಸ್ಯೆ ಇದು. ಕೆಲವರಲ್ಲಿ ಶಿಶ್ನದ ಉದ್ದವನ್ನು ಮರೆಮಾಚುವಷ್ಟು ಕೊಬ್ಬು ಸಂಗ್ರಹವಾಗಿರುತ್ತದೆ. ದೀರ್ಘದೇಹಿಗಳಾಗಿರುವ ಪುರುಷರ ಶಿಶ್ನವು ಅತೀ ಚಿಕ್ಕದೆನಿಸಬಹುದು. ಪ್ರೌಢಾವಸ್ಥೆ ತಲುಪುವಲ್ಲಿ ತಡವಾಗಿದ್ದರೆ ಸಂಪೂರ್ಣವಾಗಿ ಬೆಳೆಯು ವುದನ್ನು ಕಾಲಕ್ರಮೇಣವಾಗಿ ನಿರೀಕ್ಷಿಸಬಹುದಾಗಿದೆ.

ಇದಕ್ಕೆ ಚಿಕಿತ್ಸೆ ಏನು?
ತೃಣ ಶಿಶ್ನದ ಸಮಸ್ಯೆಯನ್ನು ಶೀಘ್ರವಾಗಿ ಪತ್ತೆ ಹಚ್ಚಿದಷ್ಟೂ ಸುಲಭವಾಗಿ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ. ಚಿಕಿತ್ಸಾ ಕ್ರಮವನ್ನು ತೀರ್ಮಾನಿಸುವಲ್ಲಿ ಈ ಹಂತ ಅತಿ ಮಹತ್ವದ್ದಾಗಿರುತ್ತದೆ. ಸಮಸ್ಯೆ ಪತ್ತೆ ಹಚ್ಚಲು ವ್ಯಕ್ತಿಯ ಜನನಾಂಗವನ್ನು ತಪಾಸಣೆ ಮಾಡಲೇಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ತೃಣ ಶಿಶ್ನ ಇರುವ ಮಗುವಿನ ಲಿಂಗವನ್ನೇ ಬದಲಿಸುತ್ತಿದ್ದರು. ಆ ಮಗುವನ್ನು ಹೆಣ್ಣು ಮಗುವಾಗಿ ಪರಿವರ್ತಿಸಲಾಗುತ್ತಿತ್ತು. ಯುಕೆ ಇಂಟರ್‌ಸೆಕ್ಸ್‌ ಅಸೋಸಿಯೇಷನ್‌ (ಯುಕೆಐಎ) ಜನನಾಂಗವನ್ನು ಯೋನಿಯಾಗಿ ಪರಿವರ್ತಿಸುವ ಲಿಂಗ ಬದಲಿ ಚಿಕಿತ್ಸೆಯನ್ನು ಸೂಚಿಸುತ್ತದೆ. ಇದಲ್ಲದೆ ಶೀಘ್ರವಾಗಿ ಪತ್ತೆ ಹಚ್ಚಿದ್ದಲ್ಲಿ ಹಾರ್ಮೋನ್‌ ಥೆರಪಿ ನೀಡಬಹುದಾಗಿದೆ. ಟೆಸ್ಟೊಸ್ಟೆರೊನ್‌ ಹಾರ್ಮೋನ್‌ ಅನ್ನು ಮರುಪೂರಣ ಮಾಡುವ ಚಿಕಿತ್ಸೆ ಇದು. ಇದರಿಂದ ಶಿಶ್ನದ ಉದ್ದ ಸಾಮಾನ್ಯ ಸ್ಥಿತಿಗೆ ಬರಬಹುದಾಗಿದೆ.

ಫಾಲ್ಲೋಪ್ಲಾಸ್ಟಿ ಎಂದು ಕರೆಯಲಾಗುವ ಶಸ್ತ್ರಚಿಕಿತ್ಸೆಯೂ ಇದಕ್ಕೆ ಉತ್ತಮ ಪರಿಹಾರವಾಗಲಿದೆ. ಇಲ್ಲಿ ವ್ಯಕ್ತಿಯ ಮುಂಗೈನ ಚರ್ಮವನ್ನು ತೆಗೆದು ಶಿಶ್ನದ ಸುತ್ತಲೂ ಸುತ್ತಲಾಗುತ್ತದೆ. ಕೃತಕ ಶಿಶ್ನ ರೂಪದ ಅಂಗರಚನೆಯನ್ನು ಮಾಡಲಾಗುತ್ತದೆ. ಇದು ಉದ್ರೇಕದ ಸಮಯದಲ್ಲಿ ಸಾಮಾನ್ಯ ರೂಪದಲ್ಲಿ ಕಾಣಿಸಿಕೊಳ್ಳುವಂತೆ ಮಾಡಲಾಗುತ್ತದೆ. ನಿಯಮಿತವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಈ ಚಿಕಿತ್ಸೆಯು ಫಲಕಾರಿಯಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದು ದೀರ್ಘಕಾಲೀನ ಪರಿಹಾರ ಎನ್ನುವುದನ್ನೂ ಅಲ್ಲಗಳೆಯಲಾಗುವುದಿಲ್ಲ.

ಮಾಹಿತಿಗೆ: info@manipalankur.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT